ಗದಗ: ಜನರ ಆರೋಗ್ಯದ ದೃಷ್ಟಿಯಿಂದ ಸ್ಥಳೀಯ ಸಂಸ್ಥೆಗಳಲ್ಲಿ ಉದ್ಯಾನವನ ನಿರ್ಮಾಣಕ್ಕೆ ಲಕ್ಷಾಂತರ ಹಣ ಖರ್ಚು ಮಾಡುತ್ತಾರೆ. ಆದರೆ ಗದಗ ಜಿಲ್ಲೆಯ ನರೇಗಲ್ಲ ನಲ್ಲಿ ಅಧಿಕಾರಿಗಳ ಆತುರದ ನಿರ್ಧಾರದಿಂದ ಉದ್ಯಾನವನ ಇದ್ದು ಇಲ್ಲದಂತಾಗಿದೆ.
ಇಲ್ಲಿನ 3ನೇ ವಾರ್ಡಿನ ಬುಲ್ಡೋಜರ್ ನಗರದಲ್ಲಿ ಕಳೆದ 5 ವರ್ಷದ ಹಿಂದೆಯೇ 18 ಲಕ್ಷ ಎಸ್.ಎಫ್.ಸಿ ಅನುದಾನದಲ್ಲಿ ಉದ್ಯಾನವನ ನಿರ್ಮಾಣ ಮಾಡಲಾಗಿತ್ತು. ಈ 18 ಲಕ್ಷ ಅನುದಾನದ ಜೊತೆಗೆ ಉದ್ಯಾನವನದಲ್ಲಿ ಕೆಲ ಸಾಮಾಗ್ರಿ ಖರೀದಿ ಹಾಗೂ ಅಳವಡಿಗೆ ಹೆಚ್ಚುವರಿ 5 ಲಕ್ಷ ಅನುದಾನ ಕೂಡ ಮಂಜೂರಾಗಿತ್ತು. ಇನ್ನೇನು ಗಾರ್ಡನ್ ಉದ್ಘಾಟನೆಯಾಗಬೇಕು ಎನ್ನುವುದರಲ್ಲಿಯೇ ಸ್ಥಳೀಯರೊಬ್ಬರು ತಮ್ಮ ಮಾಲ್ಕಿ ಜಾಗೆಯಲ್ಲಿ ಪಟ್ಟಣ ಪಂಚಾಯತಿ ಉದ್ಯಾನವನ ನಿರ್ಮಿಸಿದೆ ಎಂದು ಕೋರ್ಟ ಮೆಟ್ಟಿಲೇರಿದರು. ಇದರಿಂದ ಈ ವ್ಯಾಜ್ಯ ಇನ್ನು ಕೋರ್ಟನಲ್ಲಿದೆ. ಆದರೆ ಅಧಿಕಾರಿಗಳು ಆರಂಭದಲ್ಲಿಯೇ ಇದು ಮಾಲ್ಕಿ ಜಾಗೆಯೋ ಅಥವಾ ಪಟ್ಟಣ ಪಂಚಾಯತಿಗೆ ಸೇರಿದ್ದೋ ಅಥವಾ ವಿವಾದಿತ ಸ್ಥಳವೋ ಎನ್ನುವುದನ್ನು ಖಚಿತ ಪಡಿಸಿಕೊಂಡು ಉದ್ಯಾನವನ ನಿರ್ಮಾಣಕ್ಕೆ ಮುಂದಾಗಬೇಕಿತ್ತು. ಆದರೆ ಈ ಕೆಲಸ ಮಾಡದೇ ಏಕಾಏಕಿ ಆತುರದಲ್ಲಿ ಗಾರ್ಡನ್ ನಿರ್ಮಾಣಕ್ಕೆ ಮುಂದಾದ ಫಲವೇ ಇದೀಗ ಲಕ್ಷಾಂತರ ಹಣ ಖರ್ಚು ಮಾಡಿ ನಿರ್ಮಿಸಿದ ಗಾರ್ಡನ್ ನಲ್ಲಿ ಮುಳ್ಳು-ಕಂಟಿಗಳು ಬೆಳೆಯುವಂತಾಗಿವೆ.
ಸ್ಥಳೀಯರು ಏನಂತಾರೆ…
ಉದ್ಯಾನವನ ನಿರ್ಮಾಣದ ಬಗ್ಗೆ ಈಗಾಗಲೇ ವ್ಯಾಜ್ಯ ನ್ಯಾಯಾಲಯದಲ್ಲಿದೆ. ಅಧಿಕಾರಿಗಳ ನಿರ್ಲಕ್ಷ ಧೋಣೆಯೇ ಈ ಅವ್ಯವಸ್ಥೆಗೆ ಕಾರಣವಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಜೊತೆಗೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. – ಖಾದರಬಾಷಾ ಹೂಲಗೇರಿ, ಮಾಜಿ ಪ.ಪಂ ಸದಸ್ಯ
*******
ಅಧಿಕಾರಿಗಳ ವಿಫಲತೆಯಿಂದ ಉದ್ಯಾನವನ ಈ ದುಸ್ಥಿತಿಗೆ ಬರಲು ಸಾಧ್ಯವಾಗಿದೆ. ಲಕ್ಷಾಂತರ ಹಣ ಖರ್ಚು ಆಯಿತು. ಇನ್ನು ಬಳಕೆಗೆ ಲಭಿಸದಿರುವುದು ವಿಪರ್ಯಾಸ. – ಶೇಖಪ್ಪ ಕೆಂಗಾರ, ಸ್ಥಳೀಯ ನಿವಾಸಿ
*************
ಲಕ್ಷಾಂತರ ಹಣ ಖರ್ಚು ಮಾಡಿ ಜನರ ಉಪಯೋಗಕ್ಕಾಗಿ ನಿರ್ಮಿಸಿದ ಉದ್ಯಾನವನ ಇನ್ನು ಜನರ ಉಪಯೋಗಕ್ಕೆ ಸಿಕ್ಕಿಲ್ಲ. ಅಧಿಕಾರಿಗಳ ಈ ಬಗ್ಗೆ ಪರಿಹಾರ ಕಂಡುಕೊಳ್ಳಬೇಕಿದೆ. – ಹಸನ್ ಕೊಪ್ಪಳ್, ಸ್ಥಳೀಯ ನಿವಾಸಿ.
ಈ ಬಗ್ಗೆ ಎಂಜನೀಯರ್ ಅಥವಾ ಅಧಿಕಾರಿಗಳು ಯಾವ ಆಧಾರದ ಮೇಲೆ ಇಲ್ಲಿ ಉದ್ಯಾನವನ ನಿರ್ಮಾಣಕ್ಕೆ ಮುಂದಾದರೂ ಈಗಾಲೇ ಲಕ್ಷಾಂತರ ಹಣ ಖರ್ಚು ಮಾಡಿ ನಿರ್ಮಿಸಿದ ಉದ್ಯಾನವನು ಪಾಳು ಬಿದ್ದಿದೆ. ಇನ್ನೇನು ಉದ್ಘಾಟನೆಯಾಗಬೇಕಿದ್ದ ಗಾರ್ಡನ್ ನಲ್ಲಿ ಮತ್ತೆ ಮುಳ್ಳು ಕಂಟಿಗಳು ಬೆಳೆದು ಕುಡುಕರಿಗೆ ಅಡ್ಡವಾಗಿದೆ ಎಂದು ಜನ ಆರೋಪಿಸುತ್ತಿದ್ದಾರೆ. ಉದ್ಯಾನವನ ನಿರ್ಮಾಣದ ಕಾಮಗಾರಿಯ ಟೆಂಡರ್ ಕೂಡ ತರಾತುರಿಯಲ್ಲಿ ಮಾಡಲಾಗಿದೆ. ಏನೇ ಆಗಲಿ ಆರಂಭದಲ್ಲಿ ಪಟ್ಟಣ ಪಂಚಾಯತಿ ತೋರಿದ ನಿಷ್ಕಾಳಜಿಯಿಂದ ಇಂದಿಗೂ ಕೂಡ ಇಲ್ಲಿನ ಗಾರ್ಡನ್ ಜನ ಬಳಕೆಗೆ ಲಭ್ಯವಾಗದಂತಾಗಿದೆ. ಒಂದೆಡೆ ಹಣವೂ ಹೋಯಿತು..? ಇನ್ನೊಂದೆಡೆ ಉದ್ಯಾನವನದ ಉಪಯೋಗವೂ ಕೈಗೆಟುಕದಂತಾಗಿದೆ. ಇದರಿಂದ ಪಟ್ಟಣ ಪಂಚಾಯತಿಯ ಅಂದಿನ ಯಡವಟ್ಟನ್ನು ಇಂದಿಗೂ ಜನ ಶಪಿಸುವಂತಾಗಿದೆ.