ಗದಗ: ಶಿರಹಟ್ಟಿ ಪಟ್ಟಣದ ಕಟ್ಟಿಗೆ ಅಡ್ಡೆಗಳ ಕಹಾನಿಯನ್ನು ಕೆದಕುತ್ತಾ ಹೋದರೆ ಅವರನ್ ಬಿಟ್ಟ್, ಇವರು ಯಾರು..? ಎನ್ನುವಂತಿದೆ. ಒಂದೆಡೆ ಪಟ್ಟಣ ಪಂಚಾಯತಿ ಆದೇಶಕ್ಕೂ ಕಿಮ್ಮತ್ತು ನೀಡದೇ ಅಡ್ಡೆಗಳ ಮಾಲಿಕರು ವರ್ತಿಸುತ್ತಿದ್ದರೇ ಇದಕ್ಕೆ ಶಿರಹಟ್ಟಿ ತಹಶೀಲ್ದಾರ ಯಲ್ಲಪ್ಪ ಗೋಣೆನ್ನವರ್ ಅವರ ಕೃಪಾಪೋಷಣೆಯೇ ಮುಖ್ಯ ಕಾರಣವಾ? ಎಂದು ಜನ ಮಾತಾಡಿಕೊಳ್ಳುವಂತಾಗಿದೆ.
ಈಗಾಗಲೇ ಕಂದಾಯ ಇಲಾಖೆ ಕಟ್ಟಿಗೆ ಅಡ್ಡಗಳ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ವರದಿ ಕೊಟ್ಟಾಗಲೂ ಕೂಡ ತಹಶೀಲ್ದಾರರು ಮಾತ್ರ ಇನ್ನು ಪರಿಶೀಲನೆ ಮಾಡುತ್ತೇನೆ ಎಂದು ಹೇಳುವುದರಲ್ಲೆ ಇದ್ದಾರೆ.
ಇಲ್ಲಿನ ಕಟ್ಟಿಗೆ ಅಡ್ಡೆಗಳ ಆರಂಭಕ್ಕೆ ಅನುಮತಿ ನೀಡುವಂತೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗೆ 12-05-2020ರಂದು ಸ್ವತಃ ತಹಶೀಲ್ದಾರ್ ಅವರೇ ಪರಿಶೀಲನೆಗೆ ಆದೇಶಿಸುತ್ತಾರೆ. ಇದಾದ ನಂತರ ಮತ್ತೆ ಒಂದು ವಾರದ ಬಳಿಕ ಹೆಸ್ಕಾಂಗೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಕಟ್ಟಿಗೆ ಅಡ್ಡಗಳಿಗೆ ನೀಡಿರುವ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಸೂಚನೆ ನೀಡುತ್ತಾರೆ. ಅಂದರೆ ತಹಶೀಲ್ದಾರ್ ಯಾವ ಲೆಕ್ಕದಲ್ಲಿ ಅನುಮತಿ ನೀಡಲು ಸೂಚಿಸಿದರು ಎನ್ನುವುದು ಸಂಶಯಕ್ಕೆ ಕಾರಣವಾಗಿದೆ. ಅಥವಾ ಒಂದು ಕೈಗಾರಿಕೆಗೆ ಅನುಮತಿ ನೀಡಬೇಕಾದವರು ಯಾರು ಎನ್ನುವ ಪ್ರಾಥಮಿಕ ಮಾಹಿತಿಯೂ ತಹಶೀಲ್ದಾರರಿಗೆ ಇಲ್ಲವೇ? ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಈ ಬಗ್ಗೆ ಉತ್ತರಪ್ರಭಕ್ಕೆ ಪ್ರತಿಕ್ರಿಯಿಸಿದ ಶಿರಹಟ್ಟಿ ತಹಶೀಲ್ದಾರ್ ಯಲ್ಲಪ್ಪ ಗೋಣೆನ್ನವರ್, ಇಲ್ಲಿನ ಕಟ್ಟಿಗೆ ಅಡ್ಡೆಗಳ ಬಗ್ಗೆ ನನ್ನ ಗಮನಕ್ಕೂ ಬಂದಿದೆ. ಕೂಡಲೇ ದಾಖಲೇ ಹಾಗೂ ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದರು.
ಒಂದು ಮೂಲದ ಪ್ರಕಾರ ಈ ಹಿಂದೆ ಇಲ್ಲಿನ ಕೆಲ ವಾರ್ಡಗಳ ನಿವಾಸಿಗಳು ಕಟ್ಟಿಗೆ ಅಡ್ಡೆಗಳಿಂದ ಆಗುತ್ತಿರುವ ತೊಂದರೆ ಬಗ್ಗೆ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದರಂತೆ. ತದನಂತರ ಅಡ್ಡೆಗಳ ಮಾಲಿಕರು ತಡೆಗೋಡೆ ನಿರ್ಮಿಸಿ ಕಟ್ಟಿಗೆಯ ಧೂಳು ಹೊರಹೋಗದಂತೆ ಕ್ರಮ ಕೈಗೊಂಡಿಂದ್ದಾರೆ ಎಂದು ಒಪ್ಪಿಗೆ ಪತ್ರ ನೀಡಿದ್ದಾರಂತೆ. ಈ ಒಪ್ಪಿಗೆ ಪತ್ರದ ಆಧಾರದ ಮೇಲೆ ತಹಶೀಲ್ದಾರ ಮುಖ್ಯಾಧಿಕಾರಿಗಳಿಗೆ ಕಟ್ಟಿಗೆ ಅಡ್ಡೆಗಳ ತಕರಾರು ಹಿಂಪಡೆದಿರುವ ಬಗ್ಗೆ ಪರಿಶೀಲನೆಗೆ ಆದೇಶಿಸುತ್ತಾರೆ. ಇದರ ಜೊತೆಗೆ ತಕರಾರು ಅರ್ಜಿ ಸಲ್ಲಿಸಿದವರ ಕಡೆಯಿಂದಲೂ 100 ರೂ ಬಾಂಡ್ ಮೇಲೆ ತಹಶೀಲ್ದಾರರೇ ಒಪ್ಪಿಗೆ ಪತ್ರ ಬರೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ. ಅಂದರೆ ಬಾಂಡ್ ಮೇಲೆ ಒಪ್ಪಿಗೆ ಪತ್ರ ಬರೆಸಿಕೊಳ್ಳಲು ತಹಶೀಲ್ದಾರರಿಗೆ ಅವಕಾಶವಿದೆಯೇ? ಒಬ್ಬ ತಾಲೂಕು ದಂಡಾಧಿಕಾರಿ ಕಣ್ಣೆದುರಿಗೆ ಕಾಣುವ ಅವ್ಯವಸ್ಥೆಯನ್ನು ನೋಡಿಕೊಂಡು ಕೂಡ ಮೌನ ವಹಿಸಿದ್ದೇಕೆ? ಸ್ವತಃ ಕಂದಾಯ ನಿರೀಕ್ಷಕರು ಈ ಬಗ್ಗೆ ವರದಿ ನೀಡಿದಾಗಲೂ ಇನ್ನು ಕ್ರಮಕ್ಕೆ ಮುಂದಾಗದೇ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳ ಕೈಕಟ್ಟಿ ಹಾಕುವ ಯತ್ನವನ್ನು ತಹಶೀಲ್ದಾರ್ ಯಲ್ಲಪ್ಪ ಗೋಣೆನ್ನವರ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಈ ಬಗ್ಗೆ ಕಂದಾಯ ನಿರೀಕ್ಷಕರು ವರದಿ ನೀಡಿದ್ದಾರೆ. ಇನ್ನು ಮುಖ್ಯಾಧಿಕಾರಿಗಳು ಅನುಮತಿಯನ್ನು ರದ್ದು ಪಡಿಸಿದ್ದಾರೆ. ಜನವಸತಿ ಪ್ರದೇಶದಲ್ಲಿ ಕಟ್ಟಿಗೆ ಅಡ್ಡೆಗಳಂತಹ ಕೈಗಾರಿಕೆ ನಡೆಸಲು ಅನುಮತಿ ಇಲ್ಲದಿದ್ದಾಗಲೂ ತಹಶೀಲ್ದಾರರು ಇನ್ನು ಸ್ಥಳ ಹಾಗೂ ದಾಖಲೆ ಪರಿಶೀಲನೆ ಮಾಡುವ ಬಗ್ಗೆ ಹೇಳುತ್ತಿರುವುದು ಕೋಳಿ ಕೇಳಿ ಮಸಾಲಿ ಅರೆದಂತೆ ಎಂದು ಶಿರಹಟ್ಟಿ ಜನ ಮಾತಾಡಿಕೊಳ್ಳುತ್ತಿದ್ದಾರೆ.
ಇನ್ನಾದರೂ ತಾಲೂಕು ದಂಡಾಧಿಕಾರಿಗಳು ಯಾರೇ ತಪ್ಪು ಮಾಡಿದರು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ಆಡಳಿತ ವ್ಯವಸ್ಥೆಯ ಮೇಲೆ ಜನರಿಟ್ಟುಕೊಂಡಿರುವ ನಂಬಿಕೆಯನ್ನು ಹುಸಿಗೊಳಿಸಿದಂತಾಗುತ್ತದೆ.