ಲಕ್ನೋ: ಕೊರೊನಾದಿಂದಾಗಿ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ದೂರದೂರುಗಳಿಂದ ಬರುವವರಿಗೆ ಕೊರೊನಾ ಕ್ವಾರಂಟೈನ್ ಭಯ ಮನೆ ಮಾಡಿದೆ.
ಈ ಮಧ್ಯೆ ದೂರದೂರುಗಳಿಂದ ಬರುವಂತಹ ಜನ ಕ್ವಾರಂಟೈನ್ ಮಾಡುತ್ತಾರೆಂಬ ಭಯದಿಂದ ಎಸ್ಕೇಪ್ ಆಗುತ್ತಿರುವುದನ್ನು ಕೇಳಿದ್ದೇವೆ. ಆದರೆ ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಕೊರೊನಾದಿಂದ ಮೃತಪಟ್ಟಿರಬಹುದೆಂಬ ಶಂಕೆಯಿಂದ ಶವವನ್ನು ನಡು ರಸ್ತೆಯಲ್ಲಿಯೇ ಬಿಟ್ಟು ಕುಟುಂಬವೊಂದು ಎಸ್ಕೇಪ್ ಆಗಿರುವ ಘಟನೆ ಬೆಳಕಿಗೆ ಬಂದಿದೆ.
ಕಳೆದ ನಾಲ್ಕು ದಿನಗಳ ಹಿಂದೆ 35 ವರ್ಷದ ಕಾರ್ಮಿಕನೊಬ್ಬ ಮುಂಬಯಿನಿಂದ ಉತ್ತರಪ್ರದೇಶದ ಪ್ರತಾಪಘರ್ ಗೆ ಮರಳಿ ಬಂದಿದ್ದ. ಆದರೆ, ಆತ ಅನಾರೋಗ್ಯದಿಂದ ಬಳಲುತ್ತಿದ್ದ. ವೈದ್ಯರು ಆತನನ್ನು ಮನೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಆದರೆ, ದಾರಿ ಮಧ್ಯೆ ಆತ ಸಾವನ್ನಪ್ಪಿದ್ದಾನೆ. ಆದರೆ, ಕುಟುಂಬಸ್ಥರು ಕೊರೊನಾದಿಂದಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಮೃತ ದೇಹವನ್ನು ದಾರಿ ಮಧ್ಯೆಯೇ ಬಿಟ್ಟು ಹೋಗಿದ್ದಾರೆ.
ಇತ್ತ ದಾರಿಯಲ್ಲಿರುವ ಶವಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಹಾಗೂ ಆರೋಗ್ಯಾಧಿಕಾರಿಗಳ ತಂಡ ಸ್ಥಳಕ್ಕೆ ದೌಡಾಯಿಸಿತು. ತನಿಖೆ ನಡೆಸಿದ ಪೊಲೀಸರಿಗೆ ಕೊರೊನಾ ಭಯದಿಂದಲೇ ಶವ ಬಿಸಾಕಿರುವುದು ತಿಳಿದು ಬಂದಿದೆ.