ಅಮೇರಿಕಾ: ಮುಂದಿನ ತಿಂಗಳು ನಡೆಯಬೇಕಿದ್ದ ಜಿ7 (ಗ್ರೂಪ್ ಆಫ್ 7) ಶೃಂಗಸಭೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದೂಡಿದ್ದಾರೆ. ಜಿ7 ಶೃಂಗ ರಾಷ್ಟ್ರಗಳೊಂದಿಗೆ ಭಾರತ ಮತ್ತು ಇತರ ಕೆಲವು ದೇಶಗಳನ್ನು ಸೇರಿಸುವಂತೆ ಅವರು ಕೋರಿದ್ದಾರೆ.
ಈ ವರ್ಷದ ಜಿ7 ಶೃಂಗಸಭೆಯ ಆತಿಥ್ಯವನ್ನು ಅಮೆರಿಕ ವಹಿಸಿದೆ. ಸಾಮಾನ್ಯವಾಗಿ ಈ ಶೃಂಗಸಭೆಗೆ ಅಧ್ಯಕ್ಷರು ಪ್ರತಿ ವರ್ಷ ಒಂದು ಅಥವಾ ಎರಡು ರಾಷ್ಟ್ರಗಳ ಮುಖ್ಯಸ್ಥರನ್ನು ವಿಶೇಷ ಆಹ್ವಾನಿತರಾಗಿ ಆಹ್ವಾನಿಸುತ್ತಾರೆ.
ಕಳೆದ ವರ್ಷ ಫ್ರಾನ್ಸ್ ನಲ್ಲಿ ನಡೆದ ಶೃಂಗಸಭೆಗೆ ಪ್ರಧಾನಿ ಮೋದಿಯವರನ್ನು ಆಹ್ವಾನಿಸಲಾಗಿತ್ತು. ಈ ವರ್ಷವೂ ಮೋದಿಯವರನ್ನೇ ಆಹ್ವಾನಿಸಲು ಟ್ರಂಪ್ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಸೆಪ್ಟೆಂಬರ್‌ನಲ್ಲಿ ನಡೆಸುವ ಶೃಂಗಸಭೆಗೆ ಭಾರತ, ರಷ್ಯಾ ಸೇರಿದಂತೆ ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾಗಳನ್ನು ಸಹ ಆಹ್ವಾನಿಸಲು ಯೋಚಿಸಲಾಗುತ್ತಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಜಿ7 ಶೃಂಗರಾಷ್ಟ್ರಗಳ ಒಕ್ಕೂಟದಲ್ಲಿ ವಿಶ್ವದ ಅತ್ಯಂತ ಸುಧಾರಿತ ಮತ್ತು ಆರ್ಥಿಕವಾಗಿ ಪ್ರಬಲವಾಗಿರುವ ದೇಶಗಳಾದ ಅಮೆರಿಕ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಇಂಗ್ಲೆಂಡ್ ಮತ್ತು ಕೆನಡಾ ದೇಶಗಳು ಸದಸ್ಯ ರಾಷ್ಟ್ರಗಳಾಗಿವೆ. ಈ ದೇಶಗಳ ಮುಖ್ಯಸ್ಥರು ವರ್ಷಕ್ಕೊಂದು ಬಾರಿ ಸಭೆ ಸೇರಿ ಅಂತರಾಷ್ಟ್ರೀಯ ಆರ್ಥಿಕತೆ ಮತ್ತು ವಿತ್ತೀಯ ವಿಷಯಗಳ ಬಗ್ಗೆ ಚರ್ಚೆ ನಡೆಸಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.