ತೆಲುಗು-ಕನ್ನಡ ಅನುವಾದ ಕ್ಷೇತ್ರದಲ್ಲಿ ಸುಮಾರು ಮೂರು ದಶಕಗಳ ಕಾಲದ ಸದ್ದಿಲ್ಲದ ಕೈಂಕರ್ಯವನ್ನು ಬಿ.ಸುಜ್ಞಾನಮೂರ್ತಿ ನೆರವೇರಿಸಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿರುವ ಇವರು ಪುಸ್ತಕಗಳ ಸೊಗಸು, ವಿನ್ಯಾಸ ಮತ್ತು ಅಚ್ಚುಕಟ್ಟುತನದಿಂದ ಪುಸ್ತಕಲೋಕದಲ್ಲಿ ಹೆಸರಾಗಿದ್ದಾರೆ.

ವೃತ್ತಿಜೀವನದ ಜೊತೆಗೆ ಅನುವಾದದಲ್ಲಿಯೂ ಗಂಭೀರವಾಗಿ ತೊಡಗಿಸಿಕೊಂಡು ಈವರೆಗೆ 40ಕ್ಕೂ ಹೆಚ್ಚು ಕೃತಿಗಳನ್ನು ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.

ಮಹಾಶ್ವೇತಾದೇವಿ ಅವರ ‘ಯಾರದೀ ಕಾಡು’ ಕಾದಂಬರಿಯ ಅನುವಾದಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸೃಜನಶೀಲ ಭಾಷಾಂತರ ವಿಭಾಗದಲ್ಲಿ ಪುಸ್ತಕ ಬಹುಮಾನ (2003) ಹಾಗೂ ಆಂಧ್ರಪ್ರದೇಶದ ಚಾರಿತ್ರಿಕ ರೈತ ಹೋರಾಟವನ್ನು ಆಧರಿಸಿದ ‘ತೆಲಂಗಾಣ ಹೋರಾಟ’ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸೃಜನೇತರ ವಿಭಾಗದ ಪುಸ್ತಕ ಬಹುಮಾನ (2013) ಸಂದಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು 2016ನೇ ಸಾಲಿನ ಗೌರಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದೆ.

ಅಸಮರ್ಥನ ಜೀವನ ಯಾತ್ರೆ, ಬೆಕ್ಕಿನ ಆತ್ಮಕತೆ, ನೇಣುಗಂಬದ ನೆರಳಿನಲ್ಲಿ, ನಮಗೆ ಗೋಡೆಗಳಿಲ್ಲ, ಜಾತಿವಿನಾಶ, ದಲಿತತ್ವ, ಕುಟುಂಬ ವ್ಯವಸ್ಥೆ, ಮಾರ್ಕ್ಸ್ ವಾದ-ಸ್ತ್ರೀವಾದ, ಪುರುಷ ಅಹಂಕಾರಕ್ಕೆ ಸವಾಲು, ದಲಿತ ಹೋರಾಟಗಾರ ಅಯ್ಯನ್ ಕಾಳಿ, ಜಾತಿ ವಿನಾಶ ವರ್ಗ ವಿನಾಶ, ತಮಿಳು ಬೌದ್ಧ ದಲಿತ ಹೋರಾಟಗಾರ ಅಯೋತಿದಾಸ್, ತಾಯಿಕಾಡು, ಪೆರಿಯಾರ್ ಜೀವನ ಚಳವಳಿ, ಮತಾಂಧತೆ ಮತ್ತು ಮಾನವೀಯತೆ, ತೆಲಂಗಾಣ ಹೋರಾಟ, ರಮಾಬಾಯಿ ಅಂಬೇಡ್ಕರ್ ಜೀವನಚಿತ್ರ, ದಲಿತರು ಮತ್ತು ಪ್ರಭುತ್ವ, ಆಂಧ್ರಪ್ರದೇಶದ ಶತಮಾನದ ದಲಿತ ಚಳವಳಿ, ಅಮೆರಿಕನಿಜಂ, ಕತ್ತಲ ನಕ್ಷತ್ರ, ಒಡೆದ ಕನ್ನಡಿ, ಆದಿವಾಸಿ ಹೋರಾಟಗಾರ ಕೊಮುರಂ ಭೀಮು, ಜಾತಿಯ ನೆರಳಲ್ಲಿ ಅಭಿವೃದ್ಧಿ ರಾಜಕೀಯ, ಮನೆ ಕೆಲಸ ಮತ್ತು ಹೊರಗಿನ ಕೆಲಸ, ಇಂಟಲೆಕ್ಚುವಲ್ ಗೂಂಡಾಗಳು, ಗೊಲ್ಲರು ಮತ್ತು ಕುರುಬರು, ಆಧ್ಯಾತ್ಮಿಕ ಫ್ಯಾಸಿಸ್ಟರು ಬ್ರಾಹ್ಮಣರು, ಹೊಲೆಯತತ್ವ, ಹಿಂದೂಧರ್ಮ ಅಂತರ್ಯುದ್ಧ ಲಕ್ಷಣಗಳು ಸುಜ್ಞಾನಮೂರ್ತಿಯವರು ಅನುವಾದಿಸಿರುವ ಕೃತಿಗಳು.

ಇಷ್ಟು ವಿಶಾಲವಾದ ಅನುವಾದ ಕಾರ್ಯವನ್ನು ಕೈಗೊಂಡಿರುವ ನಮ್ಮ ನಡುವಿನ ಸಹೃದಯಿ, ವಿಶಾಲ ಹೃದಯಿ, ಮಾನವಪ್ರೇಮಿ, ತತ್ವ ಬದ್ಧ ವ್ಯಕ್ತಿತ್ವದ ಬಿ.ಸುಜ್ಞಾನಮೂರ್ತಿಯವರು ಇದೇ ವರ್ಷ ವೃತ್ತಿಯಿಂದ ನಿವೃತ್ತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಒಡನಾಡಿಗಳು ಒಂದು ಅಭಿನಂದನಾ ಗ್ರಂಥವನ್ನು ಸಂಪಾದಿಸಲು ತೀರ್ಮಾನಿಸಿದ್ದಾರೆ. ಮೂರು ದಶಕಗಳಿಂದ ನಿರಂತರವಾಗಿ ತೆಲುಗಿನಿಂದ ಕನ್ನಡಕ್ಕೆ ಮಹತ್ವದ ಕೃತಿಗಳನ್ನು ಅನುವಾದಿಸಿರುವ ಅವರಿಗೆ ಈ ಮೂಲಕ ಕೃತಜ್ಞತಾಪೂರ್ವಕ ಗೌರವವನ್ನು ಸಲ್ಲಿಸುವುದು ಕನ್ನಡಿಗರ ಕರ್ತವ್ಯವಾಗಿದೆ.

ಕೃತಿಯನ್ನು ಮೂರು ಭಾಗಗಳಾಗಿ ವಿಂಗಡಿಸಲು ಉದ್ದೇಶಿಸಲಾಗಿದೆ. ಮೊದಲನೆ ಭಾಗದಲ್ಲಿ ಅನುವಾದ ವಿಷಯಕ್ಕೆ ಸಂಬಂಧಿಸಿದ ಸೈದ್ಧಾಂತಿಕ ಲೇಖನಗಳನ್ನು ಮುದ್ರಿಸಲು ಯೋಜನೆ ರೂಪಿಸಲಾಗಿದೆ. ಇದರಲ್ಲಿ ಇತ್ತೀಚಿನ ಅನುವಾದ ಕ್ಷೇತ್ರ, ಅನುವಾದದ ಸಮಸ್ಯೆಗಳು ಮತ್ತು ಸವಾಲುಗಳು, ಅನುವಾದ ಕ್ಷೇತ್ರದಲ್ಲಿರುವ ಸಾಧ್ಯತೆಗಳು, ಸರಳ ಅನುವಾದದ ಸಾಧ್ಯಾಸಾಧ್ಯತೆ ಮೊದಲಾದ ಅಂಶಗಳಿರುವ ಲೇಖನಗಳಿಗೆ ಆದ್ಯತೆ ನೀಡಲಾಗುವುದು.

ಎರಡನೇ ಭಾಗದಲ್ಲಿ ಇಷ್ಟು ದಿನಗಳ ಕಾಲ ಅವರ ಒಡನಾಟದಲ್ಲಿರುವ ಅವರ ಸಹೋದ್ಯೋಗಿಗಳು, ಸಹಪಾಠಿಗಳು, ಕೃತಿಗಳ ಮೂಲಕ ಅವರ ಕೆಲಸವನ್ನು ಬಲ್ಲವರು, ಅವರ ನಂತರದ ತಲೆಮಾರಿನ ಯುವ ಬರಹಗಾರರು, ಪ್ರಕಾಶಕರು ತಮ್ಮ ಒಡನಾಟದ ಕ್ಷಣಗಳನ್ನು ಕುರಿತು ಲೇಖನಗಳನ್ನು ಪ್ರಕಟಿಸಲಾಗುವುದು.

ಮೂರನೇ ಭಾಗದಲ್ಲಿ ಅವರು ಅನುವಾದಿಸಿರುವ ಕೃತಿಗಳ ಕುರಿತು ಲೇಖನಗಳನ್ನು ಮುದ್ರಿಸಲು ಚಿಂತನೆ ನಡೆಸಲಾಗಿದೆ. ತಮ್ಮ ಬಿಡುವಿರದ ಸಮಯದಲ್ಲಿ ಆದಷ್ಟು ಶೀಘ್ರವಾಗಿ ಮೇಲಿನ ಯಾವುದೇ ವಿಭಾಗಕ್ಕೆ ಸಂಬಂಧಿಸಿದಂತೆ ಒಂದು ಲೇಖನವನ್ನು ಕಳುಹಿಸಿ ಕೊಟ್ಟರೆ, ಅನುವಾದ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ವ್ಯಕ್ತಿಗೆ ಕೃತಜ್ಞತೆ ಸಲ್ಲಿಸಿದಂತಾಗುತ್ತದೆ.

ಲೇಖನವನ್ನು ಜೂನ್ 30, 2020ರ ಒಳಗೆ ಕಳಿಸಬೇಕು ಎಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ.

ಧನ್ಯವಾದಗಳು

ಇಂತಿ

ಬಿ.ಸುಜ್ಞಾನಮೂರ್ತಿ ಅಭಿನಂದನಾ ಸಮಿತಿ

ವಿಶೇಷ ಸೂಚನೆ: ಲೇಖನಗಳನ್ನು ಕಳುಹಿಸಬೇಕಾದ ಈಮೇಯ್ಲ್ ವಿಳಾಸ – pradeeplmalgudi@gmail.com ಅಥವಾ 9844086993 ಸಂಖ್ಯೆಗೆ ವಾಟ್ಸ್ ಅಪ್ ಮೂಲಕ ಕೂಡ ಕಳುಹಿಸಬಹುದು.

Leave a Reply

Your email address will not be published. Required fields are marked *

You May Also Like

ಇಂಧನ ಬೆಲೆ ಮತ್ತು ಹಣದ ಮೌಲ್ಯ ಒಂದೇ ನಾಣ್ಯದ ಮುಖಗಳು

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಘೋಷಣೆಯಾದ ಬೆನ್ನಲ್ಲೇ ಇಂಧನ ದರ ಏರಿಕೆ ಆರಂಭಗೊAಡಿದೆ. ಯಾವುದೇ ಚುನಾವಣೆ ನಂತರ ಇಂಧನ ಬೆಲೆ ಏರಿಸುವದು ಸಾಮಾನ್ಯ. ಈ ಸಂಪ್ರದಾಯ ಇಂದು-ನಿನ್ನೆಯದಲ್ಲ, ಹಲವು ದಶಕಗಳ ಸಂಪ್ರದಾಯ ಈಗಲೂ ಅಷ್ಟೇ ಅಚ್ಚು ಕಟ್ಟಾಗಿ ಎಲ್ಲಾ ಸರ್ಕಾರಗಳು ಪಾಲಿಸುತ್ತಿವೆ.

ಕೊರೋನಾ ಸೋಂಕಿತ ಮಹಿಳೆ ಸಾವು

ಕೊರೋನಾ ಸೋಂಕಿತ ಮಹಿಳೆ ಸಾವುವಿಜಯಪುರ : ಕೊರೊನಾ ಪೀಡಿತ ಮಹಿಳೆ ಸಾವನ್ನಪ್ಪಿದ ಘಟನೆ ಇಜಯಪುರ ಜಿಲ್ಲೆಯಲ್ಲಿ…

ಕೊರೋನಾ ಕಾವ್ಯ-4

ಇವತ್ತಿನ ಕೊರೋನಾ ಕಾವ್ಯ ಸರಿಣಿಗೆ ಕವನ ಕಳುಹಿಸಿದವರು ಮಂಗಳಗೌರಿ ಹಿರೇಮಠ, ಮಂಗಳಗೌರಿ ಹಿರೇಮಠ ಇವರು ಗದಗನ ಬಸವೇಶ್ವರ ನಗರದವರು, ಸಾಹಿತ್ತಿಕವಾಗಿ ಅಭಿರುಚಿ ಉಳ್ಳ ಮಂಗಳಗೌರಿ ಅವರು ಸಾಕಷ್ಟು ಕವತೆಗಳನ್ನು ರಚಿಸಿದ್ದಾರೆ. ಊಹಿಸದೇ ಬಂದ ಘಳಿಗೆಯನ್ನು ಕೊರೋನಾದ ಈ ಸಂಕಷ್ಟ ಕಾಲದಲ್ಲಿ ಹದವಾಗಿ ಕಟ್ಟಿಕೊಟ್ಟಿದ್ದಾರೆ.

ಸಂವಿಧಾನಕ್ಕೆ ತೆಲೆ ಬಾಗಿ ನಡೆದರೆ ಬದುಕು ಪಾವನ ಮಕ್ಕಳು ಶೈಕ್ಷಣಿಕ ಪ್ರಭಲತೆ ಸಾಧಿಸಬೇಕು – ಜಿ.ಎಂ.ಕೋಟ್ಯಾಳ

ಆಲಮಟ್ಟಿ : ಸರಕಾರ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಹಾಗು ಮಕ್ಕಳ ಕಲಿಕೆಯ ಪ್ರಗತಿಗಾಗಿ ನಾನಾ ಬಗೆಯ…