ಬೆಂಗಳೂರು: ವೈದ್ಯಕೀಯ ಸಾಮಗ್ರಿಗಳ ಖರೀದಿ ಅಕ್ರಮ ದೂರು ಕುರಿತು ತನಿಖೆಗೆ ತಡೆ ನೀಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಕ್ರಮವನ್ನು ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ವಿರೋಧಿಸಿದ್ದಾರೆ.
ವೈದ್ಯಕೀಯ ಸಾಮಗ್ರಿಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ದೂರುಗಳಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಲು ಮುಂದಾಗಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ (PAC) ಕೆಲಸಕ್ಕೆ ತಾವು (ವಿಶ್ವೇಶ್ವರ ಹೆಗಡೆ ಕಾಗೇರಿ) ತಡೆಯಾಜ್ಞೆ ನೀಡಿರುವುದು ಸಂಪೂರ್ಣವಾಗಿ ಕಾನೂನುಬಾಹಿರ; ಇಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವುದಕ್ಕೆ ಈಗ ನಮ್ಮಲ್ಲಿ ಸಂಶಯ ಉಳಿದಿಲ್ಲ ಮತ್ತು ಭ್ರಷ್ಟರನ್ನು ಬಚಾವು ಮಾಡಲೆಂದೇ ತಾವು ತಮ್ಮ ಪದವಿಯನ್ನು ದುರುಪಯೋಗ ಪಡಿಸಿಕೊಂಡಿದ್ದೀರಿ. ಇದು ತಮ್ಮ ಹುದ್ದೆಗೆ ಗೌರವ ತರುವ ನಡವಳಿಕೆಯಲ್ಲ ಎಂದು ಅವರು ಕಿಡಿಕಾರಿದ್ದಾರೆ.
ಕೋವಿಡ್-19 ಸೋಂಕನ್ನು ತಡೆಯುವ ಮತ್ತು ಕಾಯಿಲೆ ಪೀಡಿತರಿಗೆ ಚಿಕಿತ್ಸೆ ನೀಡುವ ವಿಷಯದಲ್ಲಿ ರಾಜ್ಯ ಸರ್ಕಾರ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಹಲವಾರು ಕೆಲಸಗಳನ್ನು ಮಾಡುತ್ತ ಬಂದಿದೆ. ಹಲವು ವಿಷಯಗಳಲ್ಲಿ ಸರ್ಕಾರ ಸಾಕಷ್ಟು ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಿತು ಮತ್ತು ಅದರ ಕೆಲಸ ಪ್ರಶಂಸನೀಯವಾಗಿಯೂ ಇದೆ. ಆದರೆ ಒಂದಷ್ಟು ವಿಚಾರಗಳಲ್ಲಿ ವೈಫಲ್ಯಗಳನ್ನೂ ನಾವು ನೋಡಿದ್ದೇವೆ ಮತ್ತು ಈ ಸಂದರ್ಭವನ್ನು ಕೆಲವು ಭ್ರಷ್ಟರು ಅಕ್ರಮ ಹಣ ಸಂಪಾದನೆಗೆ ಬಳಸಿಕೊಂಡಿರುವುದೂ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.
ಅಕ್ರಮಗಳಲ್ಲಿ ಮುಖ್ಯವಾಗಿರುವುದು, ಕಳೆದ ಮೂರ್ನಾಲ್ಕು ತಿಂಗಳುಗಳಲ್ಲಿ ಕೋವಿಡ್-19 ನಿರ್ವಹಣೆಗೆಂದು ರಾಜ್ಯ ಸರ್ಕಾರದ KSDLWS (ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಅಂಡ್ ವೇರ್ಹೌಸಿಂಗ್ ಸೊಸೈಟಿ) ಸಂಸ್ಥೆಯಿಂದ ಖರೀದಿಸಲ್ಪಟ್ಟ ವೈದ್ಯಕೀಯ ಉಪಕರಣ, ಪರಿಕರ, ಔಷಧಿ ಮತ್ತಿತರ ಖರೀದಿ ವ್ಯವಹಾರದಲ್ಲಿ ಹತ್ತಾರು ಕೋಟಿ ರೂಪಾಯಿಗಳ ವ್ಯಾಪಕ ಭ್ರಷ್ಟಾಚಾರ ನಡೆದಿರುವುದು. ಈ ವಿಚಾರವಾಗಿ ಮಾಧ್ಯಮ ವರದಿಗಳು ಮತ್ತಿತರ ಮೂಲಗಳಿಂದ ನಮಗೆ ದೊರಕಿದ ಖಚಿತ ಮಾಹಿತಿಗಳ ಆಧಾರದ ಮೇಲೆ ನಮ್ಮ “Karnataka Rashtra Samithi” ಪಕ್ಷ ಸುಮಾರು ಎರಡು ತಿಂಗಳಿನಿಂದ ಧ್ವನಿಯೆತ್ತುತ್ತಾ ಬಂದಿದೆ. ಇದೇ ಮೇ 12, 2020 ರಂದು ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿ Deepak Nagaraj ರವರು ರಾಜ್ಯ ಭ್ರಷ್ಟಾಚಾರ ನಿಗ್ರಹ ದಳದಲ್ಲಿಯೂ (ACB) ದೂರು ದಾಖಲಿಸಿದ್ದಾರೆ. ತದನಂತರ ರಾಜ್ಯ ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೂ ನೀಡಿದ್ದಾರೆ ಎಂದು ಅವರು ಅವ್ಯವಹಾರದ ಕುರಿತು ತಮ್ಮ ಪಕ್ಷ ಮಾಡಿರುವ ಕೆಲಸವನ್ನು ಕುರಿತು ಹೇಳಿದ್ದಾರೆ.
ಈಗ ಆ ದೂರಿನ ಆಧಾರದ ಮೇಲೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಪರಿಶೀಲನೆಗೆ ಮುಂದಾದಾಗ, ತಾವು ಈಗ ಅದಕ್ಕೆ ತಡೆಯಾಜ್ಞೆ ನೀಡಿರುವುದು ಹಲವು ಸಂಶಯಗಳನ್ನು ಹುಟ್ಟುಹಾಕುತ್ತಿದೆ. ರಾಜ್ಯ ಸರ್ಕಾರದ ಹಲವು ಖರೀದಿ ವ್ಯವಹಾರಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎನ್ನುವ ವಿಚಾರದಲ್ಲಿ ಈಗ ನಮಗೆ ಯಾವುದೇ ಸಂಶಯ ಉಳಿದಿಲ್ಲ. ಮತ್ತು ಆ ಅಕ್ರಮಗಳನ್ನು ಮುಚ್ಚಿಹಾಕಲೆಂದೇ ಕೆಲವರು ತಮ್ಮ ಮೇಲೆ ತಂದ ಒತ್ತಡಕ್ಕೆ ತಾವು ಬಗ್ಗಿದ್ದೀರಿ ಅಥವಾ ಆ ಭ್ರಷ್ಟರನ್ನು ರಕ್ಷಿಸಲೆಂದು ಸ್ವತಃ ತಾವೇ ಸ್ವಯಂಪ್ರೇರಿತವಾಗಿ ಈ ನಿರ್ಧಾರ ತೆಗೆದುಕೊಂಡಿದ್ದೀರಿ ಎಂಬ ಸಂಶಯ ಬಂದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗಾಗಲೆ PACಯ ಅಧ್ಯಕ್ಷ ಎಚ್.ಕೆ.ಪಾಟೀಲರು ತಮ್ಮ ಈ ಕೃತ್ಯವನ್ನು “ಭ್ರಷ್ಟಾಚಾರದ ಕುರಿತು ತನಿಖೆ ನಡೆಸಲು ವಿಧಾನಸಭಾಧ್ಯಕ್ಷರು ತಡೆ ನೀಡಿರುವುದು ಸಂವಿಧಾನ ಮತ್ತು ಕಾನೂನು ವ್ಯವಸ್ಥೆಯ ಬುಡಮೇಲು ಕೃತ್ಯ” ಎಂದು ಕಠಿಣ ಮಾತುಗಳಲ್ಲಿ ಖಂಡಿಸಿದ್ದಾರೆ. ಮಾನ್ಯ ಪಾಟೀಲರ ಈ ದಿಟ್ಟ ನಿಲುವು ಮತ್ತು ಹೇಳಿಕೆಯನ್ನು ನಮ್ಮ ಪಕ್ಷ ಸ್ವಾಗತಿಸುತ್ತದೆ ಮತ್ತು ಪ್ರಶಂಸಿಸುತ್ತದೆ ಎಂದು ಅವರು ಹೇಳಿದ್ದಾರೆ.
ತಮ್ಮ ನಡೆಯನ್ನು ಸದನದ ಸದಸ್ಯರೇ ಇಷ್ಟು ತೀವ್ರವಾಗಿ ಖಂಡಿಸಿರುವುದು ತಾವು ತಮ್ಮ ಹುದ್ದೆಗೆ ಯಾವ ತರಹದ ಗೌರವವನ್ನು ತರುತ್ತಿದ್ದೀರಿ ಎನ್ನುವುದನ್ನು ಎತ್ತಿ ತೋರಿಸುತ್ತಿದೆ. ಸಭಾಧ್ಯಕ್ಷರ ಸ್ಥಾನದ ಘನತೆ, ಪಾವಿತ್ರ್ಯ, ಮತ್ತು ಅದರ ಸ್ವಾಯತ್ತತೆಯನ್ನು ಏನೊಂದೂ ಅರಿಯದ ಮತ್ತು ಅವುಗಳೆಲ್ಲವನ್ನೂ ಹಾಳು ಮಾಡುವಂತಹ ವ್ಯಕ್ತಿತ್ವದ ವ್ಯಕ್ತಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಭಾಧ್ಯಕ್ಷರಾಗುತ್ತಿರುವುದು ರಾಜ್ಯದ ದುರಂತ ಮತ್ತು ಅಂತಹ ವ್ಯಕ್ತಿಗಳ ಗುಂಪಿಗೆ ತಾವೂ ಸೇರುತ್ತಿರುವುದು ತೀರಾ ವಿಷಾದನೀಯವಾಗಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.
ಈ ಪ್ರಕರಣದಲ್ಲಿ ಭ್ರಷ್ಟಾಚಾರವನ್ನು ಮುಚ್ಚಿ
ಹಾಕಲು ಭ್ರಷ್ಟರೆಲ್ಲರೂ ಕೂಡಿ ಪ್ರಯತ್ನಿಸುತ್ತಿರುವುದು ಕಂಡುಬರುತ್ತಿದ್ದರೂ, ನಮ್ಮ ಪಕ್ಷ ನಮಗೆ ಕಾನೂನುಬದ್ಧವಾಗಿ ಲಭ್ಯ ಇರುವ ಎಲ್ಲಾ ಮಾರ್ಗಗಳನ್ನು ಬಳಸಿ ಅವರಿಗೆ ಶಿಕ್ಷೆ ಆಗುವ ಹಾಗೆ ಹೋರಾಟ ಮಾಡಿಯೇ ತೀರುತ್ತೇವೆ ಎಂದು ಈ ಮೂಲಕ ಎಲ್ಲರಿಗೂ ತಿಳಿಸುತ್ತಿದ್ದೇವೆ. ಭ್ರಷ್ಟರನ್ನು ರಕ್ಷಿಸಲು ಪ್ರಯತ್ನಪಟ್ಟ ಎಲ್ಲರಿಗೂ ಆಗ ಆಗುವ ಮುಖಭಂಗ ಅಷ್ಟಿಷ್ಟಾಗಿರುವುದಿಲ್ಲ ಎನ್ನುವುದೂ ಅವರಿಗೆ ಈಗಲೇ ತಿಳಿದಿರುವುದು ಒಳ್ಳೆಯದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತಿರುವ ತಾವು ಸತ್ಯ, ನ್ಯಾಯ, ಮತ್ತು ಧರ್ಮದ ಹಾದಿಯಲ್ಲಿ ನಡೆಯಲು ಶಿರಸಿಯ ಮಾರಿಕಾಂಬೆ ತಮಗೆ ಪ್ರೇರಣೆ ನೀಡಲಿ ಎಂದು ಈ ಸಂದರ್ಭದಲ್ಲಿ ಅವಳಲ್ಲಿ ಬೇಡುತ್ತೇನೆ. ಮುಂದಿನ ಸಲ ತಾವು ಊರಿಗೆ ಹೋಗಿ ಆ ತಾಯಿಯ ಮುಂದೆ ನಿಂತಾಗ ತಮ್ಮನ್ನು ಯಾವುದೇ ಪಾಪಪ್ರಜ್ಞೆ ಕಾಡದಿರಲಿ ಎಂದು ಆಶಿಸುತ್ತೇನೆ. ಹಾಗಾಗಿ, ತಾವು ಈ ಕೂಡಲೇ PACಗೆ ನೀಡಿರುವ ತಡೆಯಾಜ್ಞೆಯನ್ನು ತೆರವು ಮಾಡಿ, ಆಗಿರುವ ಪ್ರಮಾದವನ್ನು ಸರಿಪಡಿಸಬೇಕು ಎಂದು ವಿನಮ್ರವಾಗಿ ಕೋರುತ್ತೇನೆ ಎಂದು ಅವರು ಭಾವನಾತ್ಮಕವಾಗಿ ಕಾಗೇರಿಯವರನ್ನು ಎಚ್ಚರಿಸಲು ಯತ್ನಿಸಿದ್ದಾರೆ.