ದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ಮಾತಾಡಿದ್ದೇನೆ. ಅವರು ಒಳ್ಳೆಯ ಮನಃಸ್ಥಿತಿಯಲ್ಲಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಭಾರತ – ಚೀನಾ ಗಡಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ ಎಂದು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಗಡಿಯಲ್ಲಿ ಸೇನಾ ನಿಯೋಜನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಟ್ರಂಪ್, 1.4 ಬಿಲಿಯನ್ ಜನಸಂಖ್ಯೆ ಮತ್ತು ಶಕ್ತಿಶಾಲಿ ಸೇನೆಗಳಿರುವ ಚೀನಾ ಮತ್ತು ಭಾರತದ ನಡುವೆ ಸಂಘರ್ಷ ನಡೆಯುತ್ತಿದೆ. ಭಾರತ ತೃಪ್ತಿಯಿಂದಿಲ್ಲ ಮತ್ತು ಚೀನಾ ಕೂಡಾ ಪ್ರಾಯಶಃ ತೃಪ್ತಿಯಿಂದಿಲ್ಲ. ನಾನು ಪ್ರಧಾನಿ ಮೋದಿಯವರೊಂದಿಗೆ ಮಾತಾಡಿದ್ದೇನೆ. ಚೀನಾದೊಂದಿಗೆ ನಡೆಯುತ್ತಿರುವ ಘಟನೆಗಳ ಕುರಿತು ಅವರು ಉತ್ತಮ ಮನಃಸ್ಥಿತಿಯಲ್ಲಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.
ಇನ್ನು ಭಾರತ – ಚೀನಾ ನಡುವೆ ಮಧ್ಯಸ್ಥಿಕೆ ವಹಿಸಲು ತಾವು ಸಿದ್ಧ ಎಂದು ಕೂಡ ಟ್ರಂಪ್ ಬುಧವಾರ ಟ್ವೀಟ್ ಮಾಡಿದ್ದರು. ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ಮೂಲಗಳು ಇತ್ತೀಚೆಗೆ ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಯಾವುದೇ ಮಾತುಕತೆ ನಡೆದಿಲ್ಲ. ಏಪ್ರಿಲ್ 4, 2020ರಂದು ಹೈಡ್ರೊಕ್ಸಿಕ್ಲೊರೊಕ್ವಿನ್ ಕುರಿತು ನಡೆದ ಚರ್ಚೆಯೇ ಕಡೆಯದು. ನಿನ್ನೆ ವಿದೇಶಾಂಗ ಸಚಿವಾಲಯ ಕೂಡ ಚೀನಾದೊಂದಿಗೆ ನೇರ ಸಂಪರ್ಕದಲ್ಲಿರುವುದಾಗಿ ಸ್ಪಷ್ಟೀಕರಣ ನೀಡಿದೆ ಎಂದು ಹೇಳಿವೆ.