ನೌಶಾದ್ ಜನ್ನತ್ತ ಮೂಲತಃ ಕೊಡಗಿನವರು. ನೆರೆ ಸಂದರ್ಭದಿಂದ ಈವರೆಗೆ ಕೊಡುಗಿನ ನೋವಿಗೆ ತಮ್ಮ ತಂಡದೊಂದಿದೆ ಧ್ವನಿಯಾಗುತ್ತಿದ್ದಾರೆ. ನಮ್ಮ ಕೊಡಗು ಎನ್ನುವ ತಂಡ ಜೀವಪರ ಕಾರ್ಯದ ಮೂಲಕ ಜಿಲ್ಲೆಯ ಜನರ ನೋವಿಗೆ ಸ್ಪಂದಿಸುತ್ತಿದೆ. ಸಮಾನ ಆಸಕ್ತರ ನಮ್ಮ ಕೊಡಗು ತಂಡ ಜಿಲ್ಲೆಯ ಜನರಿಗಾಗಿ ಪ್ರಾಮಾಣಿಕ ಸೇವೆ ಮಾಡುತ್ತಿದೆ. ಸಂತ್ರಸ್ತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನೌಶಾದ್ ಬರೆದ ಸಂತ್ರಸ್ತರಿಗೆ ನ್ಯಾಯ ದೊರಕುವುದೇ..? ಎನ್ನುವ ಲೇಖನ ನಿಮ್ಮ ಉತ್ತರಪ್ರಭದ ಉತ್ತರ ವಿಶೇಷದಲ್ಲಿ….

ಕಳೆದೆರಡು ದಿನಗಳ ಹಿಂದೆ ನಡೆದ ಘಟನೆಯ ವಿಚಾರವಾಗಿ ಸಾರ್ವಜನಿಕವಾಗಿ ನಾನು ನನ್ನ ನಿಲುವೇನು ಮತ್ತು ಅಭಿಪ್ರಾಯ ಏನು ಎಂಬುದನ್ನು ತಿಳಿಸಬೇಕೆಂದು ಹಲವಾರು ಪತ್ರಕರ್ತರು, ಸಂಘಟನೆಗಳು, ರಾಜಕೀಯ ಪಕ್ಷಗಳ ನೇತಾರರು, ಹಾಗೂ ಪ್ರೀತಿಸುವ ಮನಸ್ಸುಗಳು ಕೇಳುವಾಗ ನಾನು ಮೌನ ವಹಿಸಿದ್ದೆ. ಮೇಲಾಗಿ ಆ ಸಂದರ್ಭದಲ್ಲಿ ನುಣುಚಿಕೊಂಡಿದ್ದೆ. ಆದರೆ ಸತ್ಯ ಎಲ್ಲರಿಗೂ ಗೊತ್ತಾಗಬೇಕೆಂದು ಮನಸು ಹೇಳಿದಾಗ, ಎಲ್ಲರ ಮನಸ್ಸಿನಲ್ಲಿರುವ ಗೊಂದಲ ಮತ್ತು ಸಂಶಯಗಳನ್ನು ಸಾದ್ಯವಾದಷ್ಟರ ಮಟ್ಟಿಗೆ ನಿವಾರಿಸುವ ಸಲುವಾಗಿ ಬರೆಯುತ್ತಿದ್ದೇನೆ.

19ನೇ ತಾರೀಖಿನಂದು ತಂಡದಲ್ಲಿ ಗುರುತಿಸಿಕೊಂಡಿದ್ದ ಕೆಲವು ಸಂತ್ರಸ್ತರ ಕೋರಿಕೆಯ ಮೇರೆಗೆ ತಂಡ ಮತ್ತು ಕೆಲವು ಮಾಧ್ಯಮ ಮಿತ್ರರು ಸ್ಥಳಕ್ಕೆ ಭೇಟಿ ನೀಡಿದ್ದೆವು. ಹೊರನೋಟಕ್ಕೆ ಹಸ್ತಾಂತರಕ್ಕೆ ಸಿದ್ಧವಾಗಿ ಮದುಮಗಳಂತೆ ಸಿದ್ಧವಾಗಿ ನಿಂತಿದ್ದ ಆ ಮನೆಗಳ ಹೊಳ ಹೊಕ್ಕು ನೋಡಿದಾಗ ನಾವಲ್ಲಿ ಕಂಡ ದೃಶ್ಯ ಪ್ರತಿಯೊಬ್ಬರನ್ನು ದಂಗು ಬಡಿಸಿತು.

ಕೆಲವೊಂದು ಮನೆಗಳು ಒಂದೊಂದು ಕಡೆ ತಗ್ಗಿ ಬಗ್ಗಿ ವಕ್ರವಾಗಿದ್ದವು. ಕಳಪೆ ಮಾದರಿಯ ಮರದ ಬಾಗಿಲುಗಳು, ಕೆಲವೊಂದು ಫೌಂಡೇಶನ್ ಗಳ ಒಳಗೆ ಚೀಲ, ಮರದ ಬೇರುಗಳು ಕೆಲವೊಂದು ಗೋಡೆಗಳು ಮತ್ತು ಮೆಟ್ಟಿಲುಗಳ ಮೇಲೆ ಬಿರುಕು ಹೀಗೆ ಕಂಡು ಬಂದಾಗ ನಾನೊಬ್ಬ ಸಮಾಜ ಸೇವಕನಾಗಿ ಅಥವಾ 2018ರಿಂದ ಸಂತ್ರಸ್ತರ ಪರವಾಗಿ ಧ್ವನಿ ಎತ್ತಿದ ತಂಡದ ನೇತಾರನಾಗಿ ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕೋ, ಆ ರೀತಿಯಾಗಿ ನನ್ನ ಇತಿಮಿತಿಯನ್ನು ಅರಿತು ಪ್ರತಿಕ್ರಿಯಿಸಿರುವುದು.

ಆ ದಿನ ಮಾಧ್ಯಮದಲ್ಲಿ ಬಿತ್ತರವಾದ (ನೀವು ನೋಡಬಹುದು) ನನ್ನ ವಿಡಿಯೋದಲ್ಲಿ ನಾನು ಯಾವುದೇ ಪಕ್ಷದ ಅಥವಾ ಸೀಮಿತ ಪಂಗಡದ ಪರವಾಗಿ ಧ್ವನಿ ಎತ್ತುತ್ತಿಲ್ಲ. ಈ ಅನಾಚಾರವನ್ನು ಯಾರು ಮಾಡಿದ್ದರೂ ಖಂಡಿತವಾಗಿ ವಿರೋಧಿಸುತ್ತಿದ್ದೆವು ಎಂದು 19ರ ತಾರೀಕಿನ ನನ್ನ ಹೇಳಿಕೆಯಲ್ಲಿ ಹೇಳಿದ್ದೆ.

ನಾವುಗಳು ಬಂದು ಹೋದ ನಂತರದ ಮಾರನೆಯ ದಿನ ಅಧಿಕಾರಿಗಳು ಬಂದು ಬೆಳಗ್ಗೆಯಿಂದ ರಾತ್ರಿಯವರೆಗೂ ಕಂಡುಬಂದ ಅಷ್ಟು ತೂತುಗಳಿಗೆ ತೇಪೆ ಹಚ್ಚಿದ್ದು ಮತ್ತು ಸಣ್ಣ ಪುಟ್ಟ ಲೋಪಗಳನ್ನು ಸರಿಪಡಿಸಿಕೊಳ್ಳುತ್ತೇವೆ (ಸಂತೋಷದ ವಿಚಾರ )ಎಂಬ ಹೇಳಿಕೆಗಳು ರಿಯಾಲಿಟಿ ಚೆಕ್ ಗೆ ಬಂದಿದ್ದ ಮಾಧ್ಯಮಕ್ಕೆ ಹೇಳಿಕ್ಕೆ ನೀಡಿದ್ದರು. ಅದು ಮಾಧ್ಯಮದಲ್ಲಿ ಬಿತ್ತರವಾಗಿತ್ತು.

ಈ ಮೇಲಿನ ಎಲ್ಲಾ ಬೆಳವಣಿಗೆಗಳನ್ನು ಮಾನ್ಯ ಉಸ್ತುವಾರಿ ಸಚಿವರ ಗಮನಕ್ಕೆ ತರುವ ಉದ್ದೇಶದಿಂದ ಆ ಮೊದಲ ಕಳಪೆ ಕಾಮಗಾರಿಯ ಕೆಲವು ಫೋಟೋಗಳೊಂದಿಗೆ ಒಂದು ಮನವಿ ಕೊಟ್ಟು, ಸಂತ್ರಸ್ತರಿಗೆ ಉತ್ತಮ ಗುಣಮಟ್ಟದ ಮನೆಯನ್ನು ಕೊಡಲು ಅಧಿಕಾರಿಗಳಿಗೆ ಸೂಚಿಸಿ ಎಂದು ಮನವಿ ಮಾಡಿಕೊಳ್ಳುವ ಸಲುವಾಗಿ ನಾನು ಮತ್ತು ತಂಡದ ಕೆಲವು ಸದಸ್ಯರು ಭೇಟಿ ಕೊಟ್ಟಿದ್ದೆವು.

ಆದರೆ ಈ ಎಲ್ಲಾ ವಿಚಾರಗಳ ಪೂರ್ಣ ಮಾಹಿತಿಯನ್ನು ಹೊಂದಿದ್ದ ಜಿಲ್ಲಾಡಳಿತ ಮತ್ತು ಶಾಸರು, ಸಚಿವರು, ನನ್ನಲ್ಲಿ ನಾನು ಯಾವುದೇ ಫೋಟೋ ಮತ್ತು ವಿಡಿಯೋ ಗಳನ್ನು ನೋಡುವುದಿಲ್ಲ, ಐ ಆಮ್ ಎ ಪ್ರಾಕ್ಟಿಕಲ್ ಮ್ಯಾನ್. ನನಗೆ ನೇರ ತೋರಿಸು ಎಂದು ರಾತ್ರೋ ರಾತ್ರಿ ತೇಪೆ ಹಚ್ಚಿದ್ದ ಜಾಗಕ್ಕೆ ಕರೆದುಕೊಂಡು ಹೋದರು. ತದನಂತರದಲ್ಲಿ ಅಲ್ಲಿ ನಡೆದ ಸನ್ನಿವೇಶದ ವಿಡಿಯೋ ಇಡೀ ರಾಜ್ಯವೇ ನೋಡಿದೆ.

ನೀನು ಯಾರು? ಫಲಾನುಭವಿಯೇ? ಊರು ಯಾವುದು? ಸಂತ್ರಸ್ತರ ಏಜೆಂಟಾ? ಇದನ್ನು ನೋಡಿಕೊಳ್ಳಲು ಶಾಸಕರಿದ್ದಾರೆ. ಮೇಲಾಗಿ ಜವಾಬ್ದಾರಿ ಸ್ಥಾನದಲ್ಲಿರುವ ಜನರಿಂದ ಆಯ್ಕೆಯಾದ ಒಬ್ಬ ವ್ಯಕ್ತಿ ಒಂದು ಸೀಮಿತ ಪಂಗಡಕ್ಕೆ ಸೇರಿದವನು ಎಂದು ನನ್ನನ್ನು ಅವಮಾನ ಮಾಡಿದ್ದು ನನ್ನೊಳಗಿನ ಸಾಮಾಜಿಕ ಕಳಕಳಿ, ಮತ್ತು ನೊಂದವರ ಪರವಾಗಿ ಧ್ವನಿಯಾಗುವ ನನ್ನ ಮನಸ್ಸನ್ನೇ ಕೊಂದು ಹಾಕಿತು.

ಆಡಳಿತ ನಡೆಸುವವರು ಮತ್ತು ಅಧಿಕಾರಿಗಳಲ್ಲಿ ತಪ್ಪು ಕಂಡುಬಂದರೆ ಯಾರೂ ಪ್ರಶ್ನಿಸಬಾರದೆಂಬ ನಿಮ್ಮ ನಿಲುವನ್ನು ಕಂಡು ರಾಜ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ, ತನ್ನ ಕ್ಷೇತ್ರದ ಪ್ರತಿ ಮತದಾರರನ್ನು ಹೆಸರಿಡಿದು ಕರೆಯುವ ನೀವೇನಾ ಎಂದು ಚಿಂತಾಕ್ರಾಂತನಾದೆ.

ಮೇಲಾಗಿ ನೀವೆಲ್ಲಾ ಒಬ್ಬರ ಮೇಲೊಬ್ಬರು ನನ್ನ ಮೇಲೆ ಮುಗಿ ಬಿದ್ದು, ನನ್ನ ಧ್ವನಿಯನ್ನು ವ್ಯವಸ್ಥಿತವಾಗಿ ಅಡಗಿಸಿದಿರಿ ಎಂಬುದನ್ನು ಮಾರನೆಯ ದಿನ ಆ ವಿಡಿಯೋ ನೋಡಿದಾಗ ನನಗೆ ಮನವರಿಕೆಯಾಯಿತು.

ಅದಲ್ಲದೇ ಮಾಧ್ಯಮದವರು ನಿಮ್ಮ ಬಳಿ ನಾವುಗಳೇ ಮಾಡಿದ ವಿಡಿಯೋ ಎಂದು ನಿಮ್ಮ ಗಮನ ಸೆಳೆಯುವ ಪ್ರಯತ್ನ ಮಾಡಿದಾಗ, ನೀವು ಈವಾಗ ಸರಿ ಆಯ್ತಲ್ಲಮ್ಮ, ಸುಮ್ನಿರು! ಯಾವನೋ ಒಬ್ಬ ಕುಶಾಲನಗರದ ವ್ಯಕ್ತಿ ವಿಧಾನಸೌಧ ಡೊಂಕಾಗಿದೆ ಎಂದು ವಿಡಿಯೋ ತಂದು ತೋರಿಸಿದರೆ, ಅದನ್ನು ನಂಬುವುದಾ? ಎಂದು ನೀವು ವಿಷಯಾಂತರ ಮಾಡಿದ ರೀತಿ ನೀವು ಉದ್ದೇಶ ಪೂರ್ವಕವಾಗಿ ಯಾರನ್ನೋ ಅಥವಾ ಕಳಪೆಯನ್ನೋ ಮುಚ್ಚಿ ಹಾಕುವ ಪ್ರಯತ್ನ ಮಾಡಿದಿರಿ ಎಂಬುದು ಮೇಲ್ನೋಟಕ್ಕೆ ಎದ್ದು ಕಾಣುತಿತ್ತು. ಮೇಲಾಗಿ ಪ್ರಜಾಪ್ರಭುತ್ವದಲ್ಲಿ ಯಾರನ್ನು ಪ್ರಶ್ನಿಸುವ ಹಕ್ಕೆ ಇಲ್ಲವಾ ಎಂದು ಬೇಸರವಾಯಿತು.

ಹಗರಣ ನಡೆಸಿದ ಮಹಾನ್ ವ್ಯಕ್ತಿಗಳನ್ನು ಸಂರಕ್ಷಿಸುವ ಸಲುವಾಗಿ, ಸಂತ್ರಸ್ತರ ಸೋಗಿನಲ್ಲಿರುವ ಕಳ್ಳ ಬಣ್ಣ ಬದಲಿಸುವ ಗೂಸುಂಬೆಗಳ ಪರವಾಗಿ ಒಂದು ದಿನದ ಮೊದಲು ಗೋಡೆ ಮತ್ತು ಫೌಂಡೇಶನ್ ನಡುವೆ ಹಾಕಿಸಿದ ಹೊಸ ಗಾರೆಯನ್ನು ನೀವು ತೋರಿಸಿ, ಕೆರೆಸಿ. ಅದು ಹಳೆಯ ವಿಡಿಯೋ ಎಂದಿರಲ್ಲಾ…

ನೀವು ಹೋದ ನಂತರದಲ್ಲಿ ಪ್ರತಿಯೊಬ್ಬರು ವಾಸ್ತವವನ್ನು, ಸತ್ಯವನ್ನು ಅರಿತು ಆತ್ಮಾವಲೋಕನ ಮಾಡಿಕೊಂಡಿದ್ದಾರೆ. ಕೊಡಗಿನ ಪ್ರತಿಯೊಬ್ಬರಿಗೂ ಸತ್ಯ ಗೊತ್ತಾಗಿದೆ. ಅದರ ಫಲಶೃತಿಯೇ ಮರುದಿನ ಮಾಧ್ಯಮ ಮತ್ತು ಪತ್ರಿಕೆಯವರು ಆ ಸನ್ನಿವೇಶ ಮತ್ತು ನನ್ನ ಪರವಾಗಿ ಬರೆಯಲು ಕಾರಣ… ಸಂತ್ರಸ್ತರಿಗೆ ನ್ಯಾಯ ದೊರಕುವುದೇ…?

  • ನೌಶಾದ್ ಜನ್ನತ್ತ್, ನಮ್ಮ ಕೊಡಗು ತಂಡ

–   

Leave a Reply

Your email address will not be published. Required fields are marked *

You May Also Like

ಹಿಮಾಚಲ ಪ್ರದೇಶದಲ್ಲಿ ಜೂನ್ ಅಂತ್ಯದವರೆಗೂ ಲಾಕ್ ಡೌನ್ ವಿಸ್ತರಣೆ

ಶಿಮ್ಲಾ: ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಹಿಮಾಚಲ ಪ್ರದೇಶದಲ್ಲಿ ಜೂನ್ ಅಂತ್ಯದವರೆಗೂ ಲಾಕ್ ಡೌನ್ ನ್ನು ವಿಸ್ತರಿಸಲಾಗಿದೆ.ಈ…

ಹಡಗಿಗೆ ದೀಪಾಲಂಕಾರ: ಕೋವಿಡ್19 ವಾರಿಯರ್ಸ್ಗೆ ಗೌರವ

ಹಡಗುಗಳನ್ನು ದೀಪಗಳಿಂದ ಅಲಂಕರಿಸುವ ಮೂಲಕ ಕೊರೋನಾ ವಾರಿಯರ್ಸ್ ಗೆ ವಿಶಿಷ್ಟ ರೀತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

ಆಲಮಟ್ಟಿ: 75 ರ ಉತ್ಸವ ಚಿಣ್ಣರ ಸಂಭ್ರಮ..!

ಆಲಮಟ್ಟಿ: ಈಗ ದೇಶಭಕ್ತಿಯ ಪ್ರೇಮಾಂಕುರದಲ್ಲಿ ಪುಟಾಣಿ ಚಿಣ್ಣರು ಸಹ ಮಿಂದೆದ್ದು ಉಲ್ಲಾಸದಿಂದ ಸಂಭ್ರಮಿಸುತ್ತಿದ್ದಾರೆ. 75 ನೇ…

ಶಿರಹಟ್ಟಿ ಕಟ್ಟಿಗೆ ಅಡ್ಡೆ ಪ್ರಕರಣ: ಡಿಸಿ ಆದೇಶಕ್ಕೂ ಕಿಮ್ಮತ್ತು ಕೊಡದ ಶಿರಹಟ್ಟಿ ತಹಶೀಲ್ದಾರ್..!

ಈಗಾಗಲೇ ನಿಮ್ಮ ಉತ್ತರಪ್ರಭ ಶಿರಹಟ್ಟಿಯಲ್ಲಿನ ಕಟ್ಟಿಗೆ ಅಡ್ಡಗಳ ಕುರಿತು ಹಾಗೂ ಅಧಿಕಾರಿಗಳ ನಡೆ ಕುರಿತು 6 ಸರಣಿ ಲೇಖನವನ್ನು ಪ್ರಕಟಿಸಿದೆ.