ಮುಂಬಯಿ: ಲಾಕ್ ಡೌನ್ ನಿಂದಾಗಿ ಹಲವರು ಊರು ತಲುಪಲು ಇನ್ನೂ ಹೆಣಗಾಡುತ್ತಿದ್ದಾರೆ. ಹೀಗೆ ಊರು ತಲುಪಲು ಕಾಲ್ನಡಿಗೆಯಲ್ಲಿಯೇ ತೆರಳಿದ್ದ ಮಹಿಳೆಯೊಬ್ಬರು ಬರೋಬ್ಬರಿ 200 ಕಿ.ಮೀ ನಡೆದು ಸಾವನ್ನಪ್ಪಿದ್ದಾರೆ. ಬಿಸಿಲನ್ನೂ ಲೆಕ್ಕಿಸದೆ ಈ ಮಹಿಳೆ 200 ಕಿ.ಮೀ ಕಾಲ್ನಡಿಗೆಯಲ್ಲಿಯೇ ಕ್ರಮಿಸಿದ್ದರು. ಸಾವನ್ನಪ್ಪಿರುವ ಮಹಿಳೆಯನ್ನು 21 ವರ್ಷದ ಸೋನಾಲಿ ಬುಡಾರೆ ಎಂದು ಗುರುತಿಸಲಾಗಿದೆ.
ಮಹಾರಾಷ್ಟ್ರದಲ್ಲಿರುವ ರತ್ನಗಿರಿಗೆ ತೆರಳಲು ಕುಟುಂಬ ಸದಸ್ಯರೊಂದಿಗೆ ಈ ಮಹಿಳೆ ಕಾಲ್ನಡಿಗೆ ಪ್ರಾರಂಭಿಸಿದ್ದರು. 230 ಕಿ.ಮೀ ಸಂಚರಿಸಿದ ನಂತರ ಕೊಂಕಣದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ರತ್ನಗಿರಿಗೂ ಕೆಲವೇ ಕೆಲವು ಕಿ.ಮೀ ದೂರದಲ್ಲಿ ಸೋನಾಲಿ ಬುಡಾರೆ ಮೃತಪಟ್ಟಿದ್ದಾರೆ. ವಲಸಿಗ ಕಾರ್ಮಿಕರು ಕಾಲ್ನಡಿಗೆಯಲ್ಲಿ ಊರುಗಳಿಗೆ ತೆರಳಲು ಯತ್ನಿಸಿ ಮಾರ್ಗ ಮಧ್ಯೆ ಮೃತಪಟ್ಟಿರುವ ಘಟನೆ ಇದೇ ಮೊದಲೇನಲ್ಲ. ಕರ್ನಾಟಕ, ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶಗಳಲ್ಲಿಯೂ ಇಂತಹ ಘಟನೆಗಳು ವರದಿಯಾಗಿವೆ. ಇನ್ನೂ ಆಗುತ್ತಲೇ ಇವೆ.