ನವದೆಹಲಿ: ಲಾಕ್ ಡೌನ್ ನಲ್ಲಿ ಸಡಿಲಿಕೆ ಮಾಡಿರುವ ಸರ್ಕಾರ, ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ಆದರೆ, ಸದ್ಯ ಮದ್ಯ ಮಾರಾಟದ ಸ್ಥಳಗಳಲ್ಲಿ ಜನ ಸಂದಣಿ ಹೆಚ್ಚಾಗುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಹೋಮ್ ಡೆಲಿವರಿ ಕೈಗೊಳ್ಳಲು ಸಲಹೆ ನೀಡಿದೆ.
ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದನ್ನು ಪ್ರಶ್ನಿಸಿ ಕೆಲವು ರಾಜ್ಯಗಳು ಸುಪ್ರೀಂ ಕೋರ್ಟಿಗೆ ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ) ಸಲ್ಲಿಸಿದ್ದವು. ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಸಂಜಯ್ ಕಿಶನ್ ಕೌಲ್ ಮತ್ತು ಬಿ.ಆರ್.ಗವಾಯಿ ಅವರ ನೇತೃತ್ವದ ನ್ಯಾಯ ಪೀಠವು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಕರಣ ಆಲಿಸಿದೆ.
ಮದ್ಯದಂಗಡಿ ಬಂದ್ ಮಾಡುವ ಕುರಿತು ನಾವು ಯಾವುದೇ ಆದೇಶ ನೀಡುವುದಿಲ್ಲ. ಆದರೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ರಾಜ್ಯ ಸರ್ಕಾರಗಳು ಮದ್ಯವನ್ನು ಹೋಮ್ ಡೆಲಿವರಿ ಮೂಲಕ ಗ್ರಾಹಕರಿಗೆ ತಲುಪಿಸಬಹುದು ಎಂದು ನ್ಯಾಯಪೀಠ ಹೇಳಿದೆ.
ಮದ್ಯ ಮಾರಾಟ ಬಂದ್ ಮಾಡುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಜಾಗೊಳಿಸಿದ ನ್ಯಾಯ ಪೀಠ, ಮದ್ಯ ಮಾರಾಟಕ್ಕೆ ತಡೆ ನೀಡಲು ಸಾಧ್ಯವೇ ಇಲ್ಲ. ಹೀಗಾಗಿ ರಾಜ್ಯ ಸರ್ಕಾರಗಳು ಮದ್ಯದಂಗಡಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಗೂ ಜನಸಂದಣಿ ಕಡಿಮೆಗೊಳಿಸಲು ಹೋಮ್ ಡೆಲಿವರಿ ಅಳವಡಿಸಿಕೊಳ್ಳಬಹುದು ಎಂದು ಸಲಹೆ ನೀಡಿದೆ.