ಹುಬ್ಬಳ್ಳಿ:ಅಬಾಬಾಬಾ..!, ಏನ್ ಅಲಂಕಾರ, ಏನ್ ಸುಣ್ಣ-ಬಣ್ಣ, ದರ್ಶನಕ್ಕಾಗಿ ಸರತಿ ನಿಲ್ಲಾಕ ನಿಲ್ಲಿಸಿದ ಕಂಬಾ..! ಏನ್ ಸಡಗರ, ಏನ್ ಹಿಗ್ಗೂ ಎಂದು ಗೊಣಗುತ್ತ ಮನೆಯೊಳಗ ಹೋದ ಗುಂಡ.

ಗುಂಡನ್ ಗೊಣಗಾಟ ನೋಡಿ ಅವರವ್ವ ಕೇಳಿದ್ಲು ಏನ್ಲಾ ಗುಂಡ, ಒಬ್ನ ಮಾತಾಡಾದಕ್ಕತ್ತಿಯಲ್ಲ ಅಂತ ಕೇಳಿದ್ಲು ಅವರವ್ವ.

ಏನಿಲ್ಲಬೆ ಯವ್ವಾ, ಪ್ಯಾಟಿಗೆ ಹೋಗಿದ್ನಲ್ಲ ಅಲ್ಲಿ ವಾತಾವರಣ ನೋಡಿ ಹಂಡೆ ಹಾಲು ಕುಡಿದಷ್ಟು ಸಮಾಧಾನ ಆತು ನೋಡವಾ. ಲಾಕ್ ಡೌನ್ ನಿಂದ ನಮ್ ಮಂದಿ ಎಷ್ಟು ಬದಲಾಗ್ಯಾರ ಅಂತಿನಿ. ಎಲ್ಲಿ ನೋಡಿದ್ರು ಪ್ಯಾಟ್ಯಾಗ ಬರೀ ಅಲಂಕಾರ ಮಾಡೋರಾ ಕಾಣತಿದ್ರು. ಕೊರೋನಾ ನಮ್ಮ ಮಂದಿಗೆ ಭಕ್ತಿ-ಭಾವ ಮೂಡಿಸೈತಿ ನೋಡವಾ ಎಂದ ಗುಂಡ. ಇನ್ನು ಗುಂಡನ ಮಾತ ಮುಗಿಯೂದ್ರೊಳಗ ಅವರಪ್ಪ ಮನಿಯೊಳಗ ಬಂದ ಹೊಡಿ ಒಂಭತ್ತು ಅಂತು ಆ ದೇವರಿಗೆ ನಮ್ ಮ್ಯಾಲೆ ಕರುಣೆ ಬಂತು. ಅಂತ ಹೇಳ್ತಾ ಹಿಗ್ಗಿನಿಂದ ಒಳಗ ಬಂದ.

ಯಾಕೋ ಯಪ್ಪಾ ಒಂದುವರಿ ತಿಂಗಳಿಂದ ಮಬ್ಬಗವಿದಾರ ಗತಿ ಸುಮ್ನ ಕುಂತಿದ್ದಿ ಈಗೇನಾತು ನಿಂಗ ಒಮ್ಮಿಂದೊಮ್ಮೆಲೆ ಹಿಗ್ಗಿನಿಂದ ಕುಣಿಕತ್ತಿಯಲ್ಲ ಅಂತ ಗುಂಡ ಅವರಪ್ಪಗ ಕೇಳಿದ. ಏನಿಲ್ಲಲೇ ಮಗನ ನಾಳೆ ನಮ್ಮ ದೇವಸ್ಥಾನ ತೆಗ್ಯಾ ಕತ್ಯಾವು. ನಮ್ಮ ಮಂದಿ ಎಲ್ಲ ಪೂಜಾ, ಪುನಸ್ಕಾರ ಮಾಡಾಕತ್ಯಾರ. ದೇವಸ್ಥಾನ ಅಲಂಕಾರ ಮಾಡೋ ಕೆಲಸ ಭಾಳ್ ಜೋರ್ ನಡಸ್ಯಾರ, ಅದಕ್ಕ ನಮ್ಮಸೂಗ್ಯಾ ಫೋನ್ ಮಾಡಿ ಪ್ಯಾಟಿಗೆ ಬರಾಕ್ ಹೇಳ್ಯಾನ, ನಾನು ಅರ್ಜಂಟಾಗಿ ಹೋಗಿ ಅವರ ಮಾಡ್ತಿರೋ ಕೆಲಸದಾಗ ಕೈಗೂಡಬೇಕು. ಇದು ನನ್ನ ಜವಾಬ್ದಾರಿನೂ ಆಗೈತಿ.

ಏ ಇಕಿನಾ..!, ನನ್ ಅಂಗಿ ಎಲ್ಲೈತಿ ಕೊಡು ಸ್ವಲ್ಪ ಪ್ಯಾಟಿಗೆ ಹೋಗಿ ಬರತೀನಿ ಅಂದ.

ಒಂದ ಕಡೆ ಮಗ ಪ್ಯಾಟ್ಯಾಗಿನ ಮಂದಿ ಬದಲಾವಣೆ ಬಗ್ಗೆ ಮಾತಾಡತಾನ, ಇನ್ನ ತನ್ನ ಗಂಡ ನೋಡಿದ್ರ ಪ್ಯಾಟಿಗೊಕ್ಕೀನಿ ಅಂತಾನ ಏನಿದರ ಹಕೀಕತ್ತು ಅಂತ ಗುಂಡನ ಅವ್ವಗ ಅಡ್ಡ ಗ್ವಾಡಿ ಮ್ಯಾಲೆ ದೀಪಾ ಇಟ್ಟಂಗಾತು. ನಿಮ್ಮಿಬ್ಬರ ಮಾತು ನಂಗ ಒಂಚೂರು ಅರ್ಥ ಆಗ್ವಲ್ದು ಏನ್ ಕಥಿ ಅಂತಾ ನೀನಾದ್ರು ತಿಳಿಸಿ ಹೇಳೊ ಮಾರಾಯಾ ಅಂತ ಗಂಡಗ ಕೇಳಿದ್ಲು.

ಅಯ್ಯೋ ಏನಿಲ್ಲ ಈಗ ನಿನ್ ಮುಂದ ಕಥಿ ಹೇಳ್ಕೊತಾ ಕುಂದ್ರಾಕ ನಂಗ್ ಟೈಮಿಲ್ಲ, ಅಂಗಿ ಜೊತಿಗೆ ಹಾಸಿಗಿ ದಿಂಬು ಕೊಟ್ಟು ಬಿಡಿ ಇವತ್ತು ಪ್ಯಾಟ್ಯಾಗ ನಮ್ ಟೆಂಟು..!, ಬೆಳಿಗ್ಗೆ ಎದ್ದು ದೇವರ ದರ್ಶನ ಮಾಡ್ಕೊಂಡು ಬರಬೇಕು ಅಂದ. ಪಾಪಾ ಏನು.. ತಿಳಿದ ಗುಂಡ, ಅಬ್ಬಾ ಪ್ಯಾಟಿ ಮಂದಿ ಏನಾರಾ ಆಗ್ಲಿ ನಮ್ಮಪ್ಪರ ಇಷ್ಟು ಬದಲಾದ್ನಲ್ಲ ದೇವರ ನಿಂಗ ಪುಣ್ಯಾ ಬರ್ಲಿ ಅಂತ ಹೇಳಿದ. ಅಪ್ಪನ ಮಾತು ಮುಗಿವಷ್ಟರೊಳಗ ತಾನಾ ಹೋಗಿ ಅಪ್ಪಗ ಅಂಗಿ ಹಾಸಿಗಿ ತಂದು ಕಿಸಿದಾಗ ನೂರರ ನೋಟಿಟ್ಟು ನೀನು ಹೋಗಿ ಬಾ ಅಪ್ಪಾ ಅಂತ ಕಳಿಸಿದ.

ಇನ್ನೇನು ಅಪ್ಪಾ ಹೊಗ್ತಿದ್ದಂಗ ಮನಿ ಮುಂದು ಹಾದ ಹೋಗ್ತಿದ್ದ ಕಂಟೆಪ್ಪ ಮಾಸ್ತರ್, ಏನಪಾ ಗುಂಡ ಭಾಳ್ ಖುಷಿಯೊಳಗ ಅದಿಯಲ್ಲ ಏನ್ ಸಮಾಚಾರ ಅಂದ್ರ. ಏನಿಲ್ರಿ ಮಾಸ್ತರ್ ನಮ್ಮಪ್ಪಗ ಈಗರ ಪ್ಯಾಟಿಗೆ ಕಳಿಸಿದೆ. ನಮ್ಮಪ್ಪ ಬಾಳ್ ಬದಲಾಗ್ಯಾನ್ ನೋಡ್ರಿ ದೇವರ ದರ್ಶನಕ್ಕೆ ಹೋಗಿ ಬರ್ತಿನಿ ಅಂತ ಪ್ಯಾಟಿಗೆ ಹೋದ ಅಂದ. ಗುಂಡ ಮತ್ತು ಮಾಸ್ತರ್ ಸಂಭಾಷಣೆ ನಡೆದಾಗ್ಲೆ ಅವರವ್ವನೂ ಬಾಗಿಲ ಹತ್ರಾ ಬಂದು ನಿಂತಿದ್ಲು.

ಆಗ ಮಾಸ್ತರ್ರು ಥೂ ದಡ್ಡಾ ದೇವಸ್ಥಾನ ಅಂದ್ರ ನಿಂಗ್ ಗೊತ್ತಿಲ್ಲೇನು? ನೀನು ಪ್ಯಾಟ್ಯಾಗ್ ನೋಡಿರೋ ಅಲಂಕಾರ ನೀನು ನಂಬಿರೋ ದೇವಸ್ಥಾನದ್ದಲ್ಲ, ಅದು ನಿಮ್ಮಪ್ಪನಂತ ಭಕ್ತರ ಗುಡಿ. ನಾಳೆ ಮುಂಜಾನೆದ್ದು ಎಲ್ಲ ಸರಾಯಿ ಅಂಗಡಿ ಚಾಲೂ ಅಕ್ಕಾವ ಅದಕ್ ನಿಮ್ಮಪ್ಪನೂ ಹಾಸಿಗೀ ಸಮೇತ ಶಂಕ್ರಿಗಾಗಿ ಪಾಳೆ ಹಚ್ಚಾಕ್ ಹೋಗ್ಯಾನು. ಮಬ್ಬಗವಿದ ಕುಂತ ಮಂದಿಗೆ ಈ ವಿಷಯ ಕೇಳಿ ಒಮ್ಮಿಂದೊಮ್ಮೆಲೆ ಕುಣದಾಡುವಂಗಾಗೈತಿ. ಏನ್ ಮಾಡೋದಪಾ ಕೊರೋನಾ ಬಂದು ಹೋದ್ರು ನಮ್ ಮಂದಿಗೆ ಬುದ್ದಿ ಬರ್ವಲ್ದು ಯಾರ್ಕ್ಯಾರ ಬಾರ್ ಅಲಂಕಾರ ಮಾಡಾಕತ್ಯಾರ. ಇನ್ನೊಂದು ವಿಷಯ ನಿಂಗ್ ಗೊತ್ತೇನು? ಕೆಲವರು ಬಾಗಿಲ ತೆರೆಯೋ ಮೊದ್ಲ ಬಾರ್ ಗಳಿಗೆ ಕಾಯಿ ಒಡೆದು ಪೂಜಾ ಮಾಡಾಕತ್ಯಾರ. ಇಂಥ ಮಂದಿಗೆ ಏನ್ ಹೇಳಬೇಕಾಪಾ. ಇದು ದೇವಸ್ಥಾನದ ಒಳಗುಟ್ಟು ನೋಡಪಾ. ಇರಲಿ ನೀನು ನಿಮ್ಮವ್ವನ ಕರ್ಕೊಂಡು ಊಟ ಮಾಡಿ ಮಲಗ ಹೋಗು. ರೊಕ್ಕ ಇರಾ ಮಟಾ ಕುಡಿದು ನಿಮ್ಮಪ್ಪ ನಾಳಿ ಮನಿಗೆ ಬರ್ತಾನ ಅಂದ್ರು ಮಾಸ್ತರ್ರು.

ಅಯ್ಯೋ ಇದರ ಹಕೀಕತ್ತು ಹೀಂಗೈತೇನು ಅಂತ ಗುಂಡಾ ಮತ್ ಅವರವ್ವ ಒಳಗೊಳಗ ಗೊಣಗಿದ್ರು. ಅನಾಸ್ತಿ ನಾನು ನೂರರ ನೋಟು ಅಪ್ಪನ ಕಿಸೇದಾಗಿಟ್ನಲ್ಲ ಅಂತ ಗುಂಡಗಂತೂ ಕುಡಿದಿದ್ರೂ ನಿಶೆ ಆದಂಗಾಗಿತ್ತು.

ಅವರವರ ಚಟ ಅವರವರದ್ದು. ಅವರ ರೊಕ್ಕ ಅವ್ರ ಮಾತು. ಆದ್ರು ದೇಶ, ನಮ್ ರಾಜ್ಯದ ಆರ್ಥಿಕ ಪರಿಸ್ಥಿತಿ ನೆನಸ್ಕೊಂಡ್ರ ರಾತ್ರಿ ನಿದ್ದಿ ಹತ್ತವಲ್ದಾಗೈತಿ. ಕೊರೋನಾ ಕಾಟ ನಮಗ್ ತಪ್ಪಿದ್ರು ಬರೋ ದಿನದಾಗ ರೊಕ್ಕದ ಕಾಟ ಎಂಥವರಿಗೂ ಬಿಡಂಗಿಲ್ಲ. ಇದನ್ನ ಎಲ್ಲರೂ ಯೋಚನೆ ಮಾಡಬೇಕಪಾ ಅಂತ ಹೇಳಿ ಮಾಸ್ತರ್ ಹೋದರು.

ಹ್ಯಾಪ್ ಮಾರಿ ಹಾಕ್ಕೊಂಡ ನಮ್ ಗುಂಡ ಓಹೋ.. ಹೊಂಡಿ ಒಂಭತ್ತು ಅಂದ ನಮ್ಮಪ್ಪನ ಹಕೀಕತ್ತು ಹಿಂಗೈತೇನು..! ಅಂತ ಮುಗಿಲು ನೋಡಕೊಂತ ಮಲಗಿದ.

Leave a Reply

Your email address will not be published. Required fields are marked *

You May Also Like

ನಾನು ಎಸ್ಕಾರ್ಟ್ ನಲ್ಲಿ ಓಡಾಡುವುದು ಕೆಲವರಿಗೆ ಬೇಸರ ತಂದಿರಬಹುದು: ಸಚಿವ ಡಾ. ನಾರಾಯಣಗೌಡ

ನಾನು ತಳಮಟ್ಟದಿಂದ ಬಂದವನು. ಯಾರ ಬಗ್ಗೆಯೂ ಲಘುವಾಗಿ ಮಾತಾಡಲ್ಲ. ನಾಗಮಂಗಲ ಶಾಸಕ ಸುರೇಶ್ ಗೌಡ ಅವರ ಬಗ್ಗೆ ನಾನು ಸಿಡಿ ವಿಚಾರ ಏನು ಹೇಳಿಲ್ಲ. ಅವರು ಏಕೆ ಹಾಗೆ ಮಾತಾಡಿದ್ರೊ ನನಗೆ ಗೊತ್ತಿಲ್ಲ.

ತಿರುಪತಿ ತಿಮ್ಮಪ್ಪನ ದರ್ಶನ ಯಾವಾಗ?

ಕೇಂದ್ರ ಸರ್ಕಾರ ಜೂ. 30ರ ವರೆಗೂ ಲಾಕ್ ಡೌನ್ ಘೋಷಣೆ ಮಾಡಿದೆ. ಅಲ್ಲದೇ, ಈ ಬಾರಿ ದೇವಸ್ಥಾನಗಳನ್ನು ತೆರೆಯಲು ಅನುಮತಿ ನೀಡಿದ್ದು, ಅದಕ್ಕಾಗಿ ಈ ವಾರವೇ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಲಿದೆ.

ಸಾರಿಗೆ ಸಂಸ್ಥೆಯಿಂದ ಪ್ರಯಾಣಿಕರಿಗೆ ಗುಡ್ ನ್ಯೂಸ್!

ಲಾಕ್‌ಡೌನ್‌ ತೆರವಾದ ನಂತರ, ಬಸ್ ಸಂಚಾರ ಆರಂಭಗೊಂಡಿದ್ದರೂ ಪ್ರಯಾಣಿಕರ ಸಂಖ್ಯೆ ನಿರೀಕ್ಷೆಯಂತೆ ಹೆಚ್ಚುತ್ತಿಲ್ಲ. ಅದಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರಯಾಣಿಕರನ್ನು ಸೆಳೆಯಲು, ದೈನಂದಿನ ಹಾಗೂ ಮಾಸಿಕ ಪಾಸ್‌ಗಳನ್ನು ರಿಯಾಯಿತಿ ದರದಲ್ಲಿ ನೀಡುವ ಯೋಜನೆ ಹಮ್ಮಿಕೊಂಡಿದೆ.

ಸರ್ಕಾರಿ ನೌಕರರಿಗೆ ಹೊಸ ನಿಯಮ ಜಾರಿ

ಬೆಂಗಳೂರು : ಕೊರೊನಾ ಮಹಾಮಾರಿ ನಿಯಂತ್ರಣಕ್ಕೆ ಸಿಗದ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ಹೊಸ ನಿಯಮ ಜಾರಿಗೊಳಿಸಲು…