ಆತ್ಮಿಯರೆ
ಇವತ್ತಿನ ಕೊರೋನಾ ಕಾವ್ಯ ಸರಣಿಗೆ ಕವನ ಕಳುಹಿಸಿದವರು ಸಾಹಿತಿ ಎ.ಎಸ್.ಮಕಾನದಾರ್ ಕರಕಲಾದ ಕಾನನದಲ್ಲಿಯೂ ಕೊಸ ಗರಿಕೆಯನ್ನು ಕಾಣುವ ಕನಸುಗಾರನ ಭಾವ ಈ ಕಾವ್ಯದಲ್ಲಿ ಮೂಡಿದೆ.

ಹೊಸ ಹೆಜ್ಜೆ ಹಾಕುತ ಬಾ
ಕರಕಲಾದ ಕಾನನದಲಿ ಹೊರ ಗರಿಕೆಯಾಗಿ ಬಾ
ಒಣಗಿದ ಮರದಲಿ ಚಿಗುರೊಡೆದು ಬಾ
ಬಾಡಿದ ಬಳ್ಳಿಯಲಿ ಮೊಗ್ಗಾಗಿ ಬಾ
ಕಾಡು ಮಲ್ಲಿಗೆಯೆ ಸುಗಂಧ ಸೂಸುತ ಬಾ
ಮಿಂಚಾಗಿ ಬಾ
ಕಾಮನ ಬಿಲ್ಲಾಗಿ ಬಾ
ಇಳೆಗೆ ಮುಂಗಾರು ಮಳೆಯಾಗಿ ಬಾ
ತಂಗಾಳಿ ಸೂಸುತ ಬಾ
ತುಂತುರು ಮಳೆಯಂತಾದರೂ ಬಾ
ಜಡಿಮಳೆಯಂತಾದರೂ ಬಾ
ಕಾದ ಮನ ಸಿಂಚನಗೊಳಿಸು ಬಾ
ಇಂಪಾದ ಸಂಗೀತದಂತೆ ಬಾ
ಅಹಮಿಕೆಯ ಕೋಟೆ ಒಡೆದು ಬಾ
ಬಿಸಿಲ ಬದುಕಿಗೆ ನೆರಳಾಗಿ ಬಾ
ಕಣ್ಮಿಂಚಿನ ಆಸೆಯಾಗಿ ಬಾ
ಎದೆಯೊಳಗಿನ ಗೂಡೊಳಗೆ ಬೆಚ್ಚಗೆ ಕುಳಿತುಕೋ ಬಾ
ಹಂಸ ಕ್ಷೀರದಂತಾಗಿಯಾದರೂ ಬಾ
ಕೇಡಿಲ್ಲದ ನುಡಿಯಾಗಿಯಾದರೂ ಬಾ
ಕಣ್ಣೀರು ಒರೆಸುವ ಕೈಯಾಗಿಯಾದರೂ ಬಾ
ಕೈತುತ್ತು ತಿನಿಸುವ ಮಾತೆಯಾಗಿಯಾದರೂ ಬಾ
ಕವನವಾಗಿಯಾದರೂ ಬಾ
ಸಖಿಯಾಗಿ ಸಾಕಿಯಾಗಿಯಾದರೂ ಬಾ
ಹಂಗಿಲ್ಲದ ಬದುಕು ಕಟ್ಟಲು ಹಪಹಪಿಸುತ ಬಾ
ಜೊತೆಗೆ ಹೊಸ ಹೆಜ್ಜೆ ಹಾಕುತ ಬಾ
ಎ.ಎಸ್.ಮಕಾನದಾರ್, ಸಾಹಿತಿ ಗದಗ