ವರದಿ: ಗುಲಾಬಚಂದ ಜಾಧವ
ಗದಗ :
ತಾಯಿ ತನ್ನ ಮಕ್ಕಳಿಗೆ ಎಂದೂ ಭೇದಭಾವ ಮಾಡಲ್ಲ.ಹಾಗೆಯೇ ಬೆಂಕಿ,ಗಾಳಿ,ನೀರು ನಿಸರ್ಗದ ಒಡಲಿನಲ್ಲಿ ಎಲ್ಲವೂ ಒಂದೇ. ಪ್ರಕೃತಿಯಲ್ಲಿರುವಂಥ ಒಂದೇ ತಾಯಿಗುಣದಂತೆ ವಿಶಿಷ್ಟ ಗುಣ ತೋಂಟದ ಡಾ ಸಿದ್ದಲಿಂಗ ಮಹಾಸ್ವಾಮಿಗಳವರಲ್ಲಿ ಇತ್ತು ಎಂದು ವಿಮರ್ಶಕಿ ಪ್ರೊ. ಎಮ್.ಎಸ್.ಆಶಾದೇವಿ ಅಭಿಪ್ರಾಯಿಸಿದರು.
ನಗರದ ತೋಂಟದಾರ್ಯ ಮಠದಲ್ಲಿ ಲಿಂಗೈಕ್ಯ ತೋಂಟದ ಡಾ. ಸಿದ್ದಲಿಂಗ ಮಹಾಸ್ವಾಮಿಗಳ 74 ನೇ ಜಯಂತಿ ಅಂಗವಾಗಿ ಜರುಗಿದ ಭಾವೈಕ್ಯತಾ ದಿನಾಚರಣೆ, ಗ್ರಂಥಗಳ ಬಿಡುಗಡೆ ಹಾಗೂ ಸಂಮಾನ ಸಮಾರಂಭದಲ್ಲಿ ಸಿದ್ದಲಿಂಗ ಶ್ರೀಗಳವರ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಿದ್ದ ಅವರು,ಎಲ್ಲ ಧಮಿ೯ಯರನ್ನು ಸಂಪ್ರೀತಿಯಿಂದ ತೋಂಟದ ಶ್ರೀಗಳು ಕಂಡಿದ್ದಾರೆ. ಜಾತಿ,ಧರ್ಮ ಭೇದಭಾವ ಮಾಡದೇ ಅವರು ಲೋಕ ಎತ್ತರದಲ್ಲಿ ಮಿನುಗಿದ್ದಾರೆ. ಸರಳತೆಯ ಸಾಕಾರಮೂತಿ೯ ಸ್ವಾಮೀಜಿ ತೋಂಟದ ಸಿದ್ದಲಿಂಗ ಶ್ರೀಗಳವರ ಶ್ರೇಷ್ಠ ವ್ಯಕ್ತಿತ್ವದ ಮೂಲಧಾತು ತಾಯ್ತನವಾಗಿತ್ತು. ಸಮಾಜದಲ್ಲಿ ಭಾವೈಕ್ಯತಾ ಪ್ರೇಮಭಾವ ಫಸರಿಸಿದ ಮೇರು ಸಂತರಾಗಿದ್ದಾರೆ ಎಂದರು.

ಗದುಗಿನ ತೋಂಟದಾರ್ಯ ಮಠದಲ್ಲಿ ಲಿಂಗೈಕ್ಯ ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ 74 ನೇ ಜಯಂತಿ ಅಂಗವಾಗಿ ಜರುಗಿದ ಭಾವೈಕ್ಯತಾ ದಿನಾಚರಣೆ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಅಪಿ೯ಸಿ ಭಕ್ತಿಪೂರ್ವಕ ಗೌರವ ಸಲ್ಲಿಸಲಾಯಿತು.


ಮೌಢ್ಯತೆವುಳ್ಳ ಅಂಧಾಕಾರ,ಕಂದಾಚಾರದ ಭಿನ್ನತೆ, ಖಿನ್ನತೆ ಗೋಡೆಗಳನ್ನು ನಿದಾ೯ಕ್ಷೀಣಿವಾಗಿ ಒಡೆದು ಹಾಕಿದ್ದಾರೆ. ಕೆಟ್ಟ ಸಂಪ್ರದಾಯಗಳಿಗೆ ತೀಲಾಂಜಲಿ ಹೇಳಿ ಯಾರ ಮುಲಾಜಿಲ್ಲದೇ ವಿರೋಧಿಸುತ್ತಿದ್ದ ತೋಂಟದ ಸಿದ್ದಲಿಂಗ ಶ್ರೀಗಳು ಮೌಲ್ಯ ವ್ಯವಸ್ಥೆಯ ಕಿರಣ. ಈ ಆದರ್ಶ ರತ್ನ ಜಾತಿ ಪದ್ದತಿ ಅಳಿಸಿ ಹೋಗಬೇಕೆವ್ನುವ ನೇರ,ನಿಷ್ಟುರ ನುಡಿಮಾತುಗಳಿಗೆ ಹೆಸರಾಗಿದ್ದರು.ಅವರು ಗೈದ ಕೃಷಿ ಸರ್ವಶ್ರೇಷ್ಠ. ಬಸವಣ್ಣನ ವೈಚಾರಿಕ ಚಿಂತನೆಗಳನ್ನು ಮನದಟ್ಟು ಮಾಡಿಕೊಂಡಿದ್ದ ಶ್ರೀಗಳು ಭಾವೈಕ್ಯತಾ ಭಾವನೆಯಿಂದ ಎಲ್ಲರನ್ನೂ ಕಂಡಿದ್ದಾರೆ. ಸಹಿಷ್ಣುತೆ, ಸಮಾನತೆ ತತ್ವಗಳ ಪ್ರಬಲ ಪ್ರತಿಪಾದಕರಾಗಿದ್ದಾರೆ. ಸತ್ವಭರಿತ ಕಾಯಕ ಜ್ಞಾನದಿಂದ ವೈಚಾರಿಕತೆ ಭಾವ ಅವರಲ್ಲಿ ಮೇಳೈಸಿವೆ. ಸಿದ್ದಲಿಂಗ ಶ್ರೀಗಳವರ ಪರಿಕಲ್ಪನೆ, ವಿಚಾರ ಎಂದೂ ಮರೆಯಲಾಗದು. ಸಮಾಜಕ್ಕೆ ದಿವ್ಯ ಶಕ್ತಿಯಾಗಿ ಮರೆಯಾಗಿದ್ದಾರೆ. ಸಾತ್ವಿಕ ಭಾವದಿಂದ ಸಮಾಜಮುಖಿ ಪರ ಕಾಯಕ ಮಾಡಿರುವ ಶ್ರೀಗಳ ಮಾತೃ ಹೃದಯಿ ಈ ಸರಳತೆಯ ಸ್ವಭಾವಕ್ಕೆ ತಾವು ಪ್ರಭಾವಿತಳಾಗಿದ್ದೆ ಎಂದರು.

ಗದುಗಿನ ತೋಂಟದಾರ್ಯ ಮಠದಲ್ಲಿ ಲಿಂ.ತೋಂಟದ ಡಾ.ಸಿದ್ದಲಿಂಗ ಮಹಾಸ್ವಾಮಿಗಳ 74 ನೇ ಜಯಂತಿ ಅಂದವಾಗಿ ಜರುಗಿದ ಭಾವೈಕ್ಯತಾ ದಿನಾಚರಣೆ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿಮರ್ಶಕಿ ಪ್ರೊ.ಎಂ.ಎಸ್.ಆಶಾದೇವಿ ತೋಂಟದ ಶ್ರೀಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.


ಮುಂಡರಗಿ ತೋಂಟದಾರ್ಯ ಶಾಖಾ ಮಠದ ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮೀಜಿ ಮಾತನಾಡಿ, ಬಸವಣ್ಣನವರ ಆಶಯಗಳು ನೇಪಥ್ಯಕ್ಕೆ ಹೊರಳುತ್ತಿದ್ದ ಸಮಯದಲ್ಲಿ ಗದುಗಿನ ಶ್ರೀಮಠದ ಪೀಠ ಅಲಂಕರಿಸಿದ ಸಿದ್ದಲಿಂಗ ಶ್ರೀಗಳು ತಮ್ಮ ಕಾಯಕ ತತ್ಪರತೆಯಿಂದ ಬಸವನ ಆಶಯಗಳಿಗೆ ಪುನಃ ಸೆಲೆ ಒದಗಿಸಿದರು.ಆಯಾಮದ ಸ್ಪರ್ಶ ನೀಡಿದರು ಎಂದರು. ಅಂದು ಕಪ್ಪತಗುಡ್ಡದ ಉಳವಿಗೆ ಶ್ರೀಗಳು ಧುಮಿಕಿದರು.ಅವರು ಅವಿರತ ಶ್ರಮದ ಹೋರಾಟದ ಕಹಳೆ ಮೊಳಗಿಸಿದರಿಂದ ಇಂದು ದೇಶದಲ್ಲೇ ಗುಣ ಮಟ್ಟದ ಶುದ್ಧ ಗಾಳಿ ಗದುಗಿನ ಜನತೆಗೆ ಲಭಿಸುತ್ತಿದೆ ಎಂದರು.
ಅತ್ಯೋನ್ನತ ಜ್ಞಾನ ಭಂಡಾರ ಹೊಂದಿರುವ ಸಿದ್ದಲಿಂಗ ಶ್ರೀಗಳು ಪುಣ್ಯ ಪುರುಷರಾಗಿದ್ದಾರೆ. ಅಪಾರ ಇತಿಹಾಸದ ಪ್ರಜ್ಞೆ ಅವರಲ್ಲಿತ್ತು. ಪುಸ್ತಕ ಪ್ರೀತಿ, ಪತ್ರಿಕೆ ಓದುವ ಹವ್ಯಾಸ ಹೇರಳವಾಗಿತ್ತು.ಜೊತೆಗೆ ಕುಟುಂಬದ ಪ್ರಜ್ಞೆ, ರಾಷ್ಟ್ರ,ಕೃಷಿ, ಶಿಕ್ಷಣ, ಶೈಕ್ಷಣಿಕ ಪ್ರಜ್ಞೆ ನಿತ್ಯ ಅನವರಣಗೊಳ್ಳುತ್ತಿತ್ತು. ಇವುಗಳೆಲ್ಲ ಸಮಾಜಕ್ಕೆ ಬಳಿಸಿಕೊಂಡಿದ್ದಾರೆ. ಸಮಾಜಕ್ಕೆ ಮಾರ್ಗದರ್ಶನದ ಧಾರೆ ಎರೆದಿದ್ದಾರೆ. ನಮಗೂ ಹಾಗೂ ನಾಡಿಗೂ ಬೆಳಕು ಹರಿಸಿದ್ದಾರೆ. ನಮ್ಮ ದೇಶ ಪ್ರಭುತ್ವದ ದೇಶ ಎಂದು ಸಾರಿಸಾರಿ ತೋಂಟದ ಶ್ರೀಗಳು ಹಲಬಾರಿ ಹೇಳಿದ್ದಾರೆ. ಹೀಗೆ ಸವೋ೯ತ್ತಮ ಬೆಳವಣಿಗೆಯ ಮುಖ ಶ್ರೀಗಳವರದ್ದು ಎಂದರು.


ಇಂದು ಪರಿಸರ,ಶಿಕ್ಷಣ,ರಾಜಕಾರಣ ಮೌಲ್ಯ ಕಳೆದುಕೊಳ್ಳುತ್ತಿವೆ. ಅಧಿಕಾರಗೊಸ್ಕರ ತಿಕ್ಕಾಟ,ಜಗ್ಗಾಟ,ಹೊಡೆದಾಟ ನಡೆಯುತ್ತಿವೆ. ಜಾತಿ ಸಂಕೋಲನೆಗಳ ವಿಷ ಬೀಜ ಒಂದೆಡೆ ಬಿತ್ತುತ್ತಿದ್ದರೆ ಮತ್ತೊಂದೆಡೆ ಹಲ ಕಾವಿಧಾರಿಗಳು ಜಾತಿಗಳನ್ನು ಎಳೆದುಕೊಂಡು ಬರುತ್ತಿದ್ದಾರೆ. ಸ್ವಾಮೀಜಿಗಳಾದವರು ಧರ್ಮ ರಕ್ಷಣಗೆ ಮುಂದಾಗಬೇಕೇ ವಿನಹ ರಾಜಕಾರಣಿಗಳ ಕೈಗೊಂಬೆಗಳಾಗಿ ನಡೆದುಕೊಳ್ಳಬಾರದು. ಇಂಥ ಸಂಪ್ರದಾಯ ಸಮಾಜದ ಸ್ವಾಸ್ಥ್ಯಕ್ಕೆ ಮಾರಕವಾಗಿ ಪರಿಣಮಿಸುತ್ತದೆ ಅಲ್ಲದೇ ಭಾವೈಕ್ಯ,ಸಾಮರಸ್ಯ ಮರೆಮಾಚಿಸುತ್ತದೆ ಎಂದರು.
ಕೆಟ್ಟ ವ್ಯವಸ್ಥೆಗಳಿಗೆ ತೋಂಟದ ಸಿದ್ದಲಿಂಗ ಶ್ರೀಗಳು ಎಂದೂ ತಮ್ಮ ಜೀವಿತಾವಧಿಯಲ್ಲಿ ಹೊಂದುಕೊಳ್ಳಲಿಲ್ಲ. ತಮ್ಮ ಅಂತರಂಗದ ಬುದ್ದಿಯನ್ನು ನೇರಾ ನೇರ ಹೇಳುತ್ತಿದ್ದ ಗಟ್ಟಿ ಛಾತಿಯ ದಿಟ್ಟ ಸ್ವಾಮೀಜಿಗಳಾಗಿ ಜನತೆಯ ಮನದಲ್ಲಿದ್ದಾರೆ ಎಂದು ನಿಜಗುಣಪ್ರಭು ಸ್ವಾಮೀಜಿ ಬಣ್ಣಿಸಿದರು.
ಬಸವಾದಿ ಪ್ರಮಥರ ವಿಚಾರಧಾರೆ ಸರ್ವಚಿಂತನೆಗೆ ತೋಂಟದ ಸಿದ್ದಲಿಂಗ ಶ್ರೀಗಳು ಅನುವುಮಾಡಿದ್ದಾರೆ.ಪ್ರಸ್ತುತ ದಿನಗಳಲ್ಲಿ ಶ್ರೀಗಳ ವಿಚಾರ ಚಿಂತನೆ ನೆನಪು,ಭಾವೈಕ್ಯ ಭಾವ ಅಗತ್ಯ. ಬಸವಣ್ಣನವರ ದೃಷ್ಟಿಕೋನದಲ್ಲಿ ಅವು ಸಾಗಿವೆ. ಶರಣರ ಪರಂಪರೆ ನಾಡಿನಲ್ಲಿ ಸತ್ಯ ವಿಷಯಗಳು ಗೌಣ ವಾಗುತ್ತಿವೆ.ಅಧಿಕಾರಕ್ಕಾಗಿ ಮಾನವೀಯ ಮೌಲ್ಯಗಳು ದೌರ್ಬಲ್ಯಗೊಳ್ಳುತ್ತಿವೆ. ತತ್ವಗಳು ಸಾಯುತ್ತಿವೆ.ವ್ಯಕ್ತಿ ಪ್ರತಿಷ್ಠೆ ಬೆಳೆಯುತ್ತಿವೆ. ಹೀಗಾದರೆ ಮುಂದೆ ಗತಿ ಏನು ? ಎಂದು ಪ್ರಶ್ನಿಸಿದರು. ಬಸವಣ್ಣನವರ ತತ್ವಕ್ಕಾಗಿ ಬದುಕಿದ ತೋಂಟದ ಸಿದ್ದಲಿಂಗ ಶ್ರೀಗಳು ಸಾರ್ಥಕತೆ ಬದುಕು ಕಂಡಿದ್ದಾರೆ. ಅವರ ಚಿಂತನೆ ಸಮಾಜದಲ್ಲಿ ಮರುಕಳಿಸಲಿ ಎಂದು ನಿಜಗುಣಪ್ರಭು ಸ್ವಾಮೀಜಿ ಆಶಿಸಿದರು.


ಗ್ರಂಥಗಳನ್ನು ಬಿಡುಗಡೆಗೊಳಸಿ ಮಾತನಾಡಿದ ಮಾಜಿ ಲೋಕಸಭಾ ಸದಸ್ಯ ಐ.ಜಿ.ಸನದಿ, ತೋಂಟದ ಸಿದ್ದಲಿಂಗ ಶ್ರೀ ನಾಡುಕಂಡ ಅಪರೂಪದ ಸ್ವಾಮೀಜಿ. ಚೈತನ್ಯದ ಪೂಜ್ಯರು ಸೌಜನ್ಯದ ಸಂತರು.ಸರ್ವರನ್ನು ಅಕ್ಕರೆಯಿಂದ ಪ್ರೀತಿಸುವ ಗುಣ ಹೊಂದಿರುವ ಕನ್ನಡದ ಜಗದ್ಗುರುಗಳ ಯಾತ್ರಾ ಪಯಣ ಅನುಪಮವಾಗಿವೆ. ಪುಸ್ತಕ ಸಂಸ್ಕೃತಿ ಆತ್ಮಾನಂದ ನೀಡುತ್ತದೆ. ಪುಸ್ತಕಗಳು ಪುಷ್ಪಗಳಿದ್ದಂತೆ. ಇವುಗಳ ಸುಗಂಧ ಪರಿಮಳ ಓದುಗರು ಹೀರಬೇಕು. ಮೊಬೈಲ್ ಸಂಸ್ಕೃತಿ ಯುಗದಲ್ಲಿ ಯುವ ಜನತೆ ಮುಳಗಬಾರದು. ಆದಷ್ಟೂ ದೂರಯಿದ್ದು ಪುಸ್ತಕ ಪ್ರೇಮ ಬೆಳೆಸಿಕೊಳ್ಳಲು ಮನಸ್ಸು ಮಾಡಬೇಕು. ಪುಸ್ತಕಗಳು ಮಸ್ತಕದೊಳಗಿನ ದೀಪವನ್ನು ಉದ್ವಿಪ್ನ್ ಗೊಳಿಸುತ್ತದೆ. ಪುಸ್ತಕ ಓದುವ ಅಭಿರುಚಿಯನ್ನು ಕಡೆಗಣಿಸಬಾರದು. ಸರ್ವಧರ್ಮ ಸಮಭಾವ ಕಂಡ ತೋಂಟದ ಪೂಜ್ಯರು ವಿಶಾಲಭಾವ ಗುಣವುಳ್ಳವರಾಗಿದ್ದರು. ಸರ್ವಧರ್ಮ ಸಮನ್ವಯತೆ ಸೂತ್ರದ ಪರಿಪಾಲಕರಾಗಿದ್ದ ಶ್ರೀಗಳು ಕೋಮುಸೌಹಾರ್ದತೆ ಹರಿಕಾರರು. ಪುಸ್ತಕ, ಗ್ರಂಥಗಳ ಸಂಸ್ಕೃತಿ, ಪರಂಪರೆಗೆ ಶ್ರೀಮಠದಲ್ಲಿ ನೆಲೆಯೊದಗಿಸಿ ಶ್ರೇಷ್ಠತೆಯ ನಾಂದಿ ಹಾಡಿದ್ದಾರೆ ಎಂದರು.


ಗ್ರಂಥಗಳು ಬಿಡುಗಡೆ : ಇದೇ ಸಂದರ್ಭದಲ್ಲಿ ಗ್ರಂಥಗಳನ್ನು ಬಿಡುಗಡೆ ಮಾಡಲಾಯಿತು. ಶಶಿಧರ ತೋಡಕರ ಸಂಪಾದಿಸಿದ ಸಮಾಜಮುಖಿ ಸಂಪುಟ- 2 ,ಡಿ.ರಾಮನಮಲಿ ಸಂಪಾದಿತ ಮೌನ ಸಾಧಕ, ಡಾ,ಪಾರ್ವತಿ ಹಾಲಭಾವಿ ರಚಿತ ಡಿ.ವ್ಹಿ. ಹಾಲಭಾವಿ, ಡಾ.ವೀರಣ್ಣ ದಂಡೆ ಬರೆದ ಸ್ಥಾವರ ಜಂಗಮ, ಡಾ. ಮಹೇಶ ಗುರುನಗೌಡರ ಬರೆದ ಸಿದ್ದಣ್ಣ ಮಸಳಿ, ಡಾ.ಎಸ್.ವಿ.ಪಾಲೇಕರ ವಿರಚಿತ Basaveshwara’s concept of Humanism and Human Rights ಎಂಬ ಗ್ರಂಥಗಳು ಬಿಡುಗಡೆಗೊಂಡವು.
ಹಂದಿಗುಂದ ಸಿದ್ದೇಶ್ವರ ಮಠದ ಶಿವಾನಂದ ಮಹಾಸ್ವಾಮಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅವರು ಮಾತನಾಡಿ, ತೋಂಟದ ಸಿದ್ದಲಿಂಗ ಶ್ರೀಗಳು ಕರುನಾಡಿಗೆ ದೊಡ್ಡ ಶಕ್ತಿಯಾಗಿದ್ದರು.ಇಲ್ಲಿನ ತೋಂಟದಾರ್ಯ ಮಠವನ್ನು ಆಧ್ಯಾತ್ಮದ ಗ್ರಂಥಾಲಯವನ್ನಾಗಿ ಬೆಳೆಸಿದ್ದಾರೆ. ಭಾವೈಕ್ಯತೆ ಬೇರಿಗೆ ಪ್ರೀತಿ ಸಿಂಚನದ ನೀರೆರೆದಿದ್ದಾರೆ ಎಂದರು.

ಸಾಧಕರಿಗೆ ಸಂಮಾನ…ಭಾವೈಕ್ಯತೆಯ ವರಮಾನ…


ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಡಾ.ತೋಂಟದ ಸಿದ್ದರಾಮ ಮಹಾಸ್ವಾಮಿಗಳು, ತೋಂಟದ ಡಾ ಸಿದ್ದಲಿಂಗ ಶ್ರೀಗಳು ಗೈದಿರುವ ಒಂದೊಂದು ಕಾಯಕಗಳು ಅಮೂಲ್ಯ, ಪವಿತ್ರ.ಅವು ಭಕ್ತ ಜನತೆಯ ಮನದಲ್ಲಿ ನೆಲೆಗೊಂಡಿವೆ. ಅವರ ತತ್ವಾದರ್ಶದ ಭೋದನೆಗಳು ಶರಣ,ಕಾಯಕ ಸಂಸ್ಕೃತಿ ತಳಹದಿ ಮೇಲೆ ಮೂಡಿವೆ. ಮೇರು ಪರ್ವತದ ಪೂಜ್ಯರು ಪ್ರತಿಪಾದಿಸಿದ ತತ್ವ, ಚಿಂತನೆಗಳು ಸಾರ್ವಕಾಲಿಕ ಪ್ರಸ್ತುತ. ಸದಾ ಆಜರಾಮರ ಎಂದರು.
ಬೈರನಹಟ್ಟಿ ಶಾಂತಲಿಂಗ ಶ್ರೀ, ಆರಸಿಕೆರೆ ಶಾಂತಲಿಂಗ ದೇಶಿಕೇಂದ್ರ ಶ್ರೀ, ಶಿರೋಳದ ಗುರುಬಸವ ಶ್ರೀ, ಮಾಜಿ ಸಚಿವರಾದ ಎಸ್.ಎಸ್.ಪಾಟೀಲ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ದಾನಯ್ಯ ಗಣಾಚಾರಿ, ಕಳೆದ ಬಾರಿಯ ಜಾತ್ರಾ ಸಮಿತಿ ಅಧ್ಯಕ್ಷ ಅಮರೇಶ ಅಂಗಡಿ, ಲಿಂ,ತೋಂಟದ ಸಿದ್ದಲಿಂಗ ಶ್ರೀಗಳವರ ಹಿರಿಯ ಸಹೋದರ ಸಿಂದಗಿಯ ಮಲ್ಲಿಕಾರ್ಜುನಯ್ಯ ಹಿರೇಮಠ ಇತರರಿದ್ದರು. ಸಮಾಜ ಸೇವಕರಾದ ತಂಬ್ರಹಳ್ಳಿಯ ಅಕ್ಕಿ ಕೊಟ್ರಪ್ಪ ದಂಪತಿಗಳನ್ನು ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು.
ತೋಂಟದಾರ್ಯ ಮಠದ ಆಡಳಿತಾಧಿಕಾರಿ ಪ್ರೊ.ಎಸ್.ಎಸ್.ಪಟ್ಟಣಶೆಟ್ಟರ ಪ್ರಾಸ್ತಾವಿಕ ಮಾತನಾಡಿ, ತೋಂಟದ ಸಿದ್ದಲಿಂಗ ಶ್ರೀಗಳವರ ಸಾಧನೆಗಳನ್ನು ಮೆಲುಕು ಹಾಕಿದರು. ಕೊಟ್ರೇಶ ಮೆಣಸಿನಕಾಯಿ, ವೀರನಗೈಡರ ಮರಿಗೌಡ್ರ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಬಸವೇಶ್ವರ ಪುತ್ಥಳಿಯಿಂದ ತೋಂಟದಾರ್ಯ ಮಠದವರೆಗೂ ಭಾವೈಕ್ಯತಾ ಯಾತ್ರೆ ಮೆರವಣಿಗೆ ನಡೆಯಿತು. ಸಿದ್ದಲಿಂಗ ಶ್ರೀಗಳವರ ಭಾವೈಕ್ಯ ಆರಾಧನಾ ಮಹೋತ್ಸವದಲ್ಲಿ ಅಪಾರ ಭಕ್ತಗಣ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

You May Also Like

ರೈತರ ಉತ್ಪನ್ನುಗಳಿಗೆ ಲಾಭದಾಯಕ ಬೆಲೆ ಘೋಷಿಸಿ: ನೆಲಗುಡ್ಡದ

ಉತ್ತರಪ್ರಭ ಸುದ್ದಿಶಿರಹಟ್ಟಿ : ರೈತರ ಉತ್ಪನ್ನುಗಳಿಗೆ ಲಾಭದಾಯಕ ಬೆಲೆ ಘೋಷಿಸಬೇಕೆಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ…

ನಿಧಿ ನೀಡದ ಮನೆಗಳು ಗುರುತಿಸುವ ಸಂಸ್ಕೃತಿ ನಮ್ಮದಲ್ಲ

ರಾಮ ಮಂದಿರ ನಿರ್ಮಾಣಕ್ಕೆ ನಿಧಿ ನೀಡದ ಮನೆಗಳನ್ನು ಗುರುತಿಸುವ ಸಂಸ್ಕೃತಿ ನಮ್ಮದಲ್ಲ ಎಂದು ಮಾಜಿ ಸಿಎಂ ಎಚ್ ಡಿ ಕೆ ಹೇಳಿಕೆಗೆ ಆರೆಸ್ಸೆಸ್ ಸರ ಸಂಘ ಚಾಲಕ ಡಾ.ಮೋಹನ್ ಭಾಗವತ್ ಅವರು ತುರುಗೇಟು ನೀಡಿದ್ದಾರೆ.

ದುಡ್ಡಿದ್ದವರು ಮಾತ್ರ ಕುಡಿತಾರೆ ಅಂದ್ರು ಅಬಕಾರಿ ಸಚಿವರು

ನಮ್ಮವು ಖರ್ಚು ವೆಚ್ಚ ಇರುತ್ತದೆ. ಈಗಾಗಲೇ ಬೇರೆ ರಾಜ್ಯಗಳಲ್ಲಿ ಟ್ಯಾಕ್ಸ್ ಹೆಚ್ಚಳ ಮಾಡಲಾಗಿದೆ. ಈ ಮಾದರಿಯನ್ನು ಅನುಸರಿಸಿಯೇ ನಮ್ಮ ರಾಜ್ಯದಲ್ಲೂ ಟ್ಯಾಕ್ಸ್ ಹೆಚ್ಚಿಸಲಾಗಿದೆ ಅಂತಾರೆ ಅಬಕಾರಿ ಮಿನಿಸ್ಟರ್.

ಜ್ಯೂಬಿಲಿಯೆಂಟ್ ಮೀರಿಸಿ ಜನರನ್ನು ಭಯಕ್ಕೆ ತಳ್ಳಿದ ಜಿಂದಾಲ್!

ಬಳ್ಳಾರಿ : ದಿನದಿಂದ ದಿನಕ್ಕೆ ಜಿಂದಾಲ್ನಲಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮೈಸೂರಿನ ಜ್ಯೂಬಿಲಿಯೆಂಟ್ ಕಾರ್ಖಾನೆಯನ್ನು…