ಉತ್ತರಪ್ರಭ ಸುದ್ದಿ
ನಿಡಗುಂದಿ: ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಬಿಜೆಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಹಾಗೂ ಬಿಜೆಪಿ ಬಸವನಬಾಗೇವಾಡಿ ಮಂಡಲ ವತಿಯಿಂದ ಉಚಿತ ಆರೋಗ್ಯ ಶಿಬಿರ,ಉಚಿತ ಔಷಧ ವಿತರಣೆ ಹಾಗೂ ರಕ್ತದಾನ ಶಿಬಿರ ನಿಡಗುಂದಿ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಕುರಿತು ಬುಧವಾರ ಪತ್ರಕರ್ತರಿಗೆ ಮಾಹಿತಿ ನೀಡಿದ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸದಸ್ಯ, ಪಟ್ಟಣ ಪಂಚಾಯ್ತಿ ನಾಮನಿರ್ದೇಶನ ಸದಸ್ಯ ಡಾ ಸಂಗಮೇಶ ಗೂಗಿಹಾಳ, ಇದೇ 23 ಶುಕ್ರವಾರ, ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಆರೋಗ್ಯ ಶಿಬಿರ ನಡೆಯಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಅಂಗವಾಗಿ ಸೆ 17 ರಿಂದ ಅ 2 ರವರೆಗೆ ಬಿಜೆಪಿ ವತಿಯಿಂದ ಜಿಲ್ಲೆಯ ನಾನಾ ಕಡೆ ಸೇವಾ ಪಾಕ್ಷಿಕ ಅಂಗವಾಗಿ ವಿವಿಧ ಆರೋಗ್ಯ ಶಿಬಿರಗಳು ನಡೆಯುತ್ತಿವೆ. ಅದರ ಅಂಗವಾಗಿ ಪಟ್ಟಣದಲ್ಲಿ ಹಮ್ಮಿಕೊಂಡಿರುವ ಆರೋಗ್ಯ ಶಿಬಿರದಲ್ಲಿ ಮಧುಮೇಹ ತಜ್ಞರು, ನೇತ್ರ ತಜ್ಞರು, ಮೆಡಿಸಿನ್ ತಜ್ಞರು, ಸರ್ಜನ್, ಶ್ವಾಸಕೋಶ ತಜ್ಞರು, ಮೂಲವ್ಯಾಧಿ ತಜ್ಞರು, ಉದರ ರೋಗ ಶಸ್ತ್ರಚಿಕಿತ್ಸಕರು, ಮೂಳೆರೋಗ ತಜ್ಞರು, ದಂತ ವೈದ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ವಿಜಯಪುರ, ಬಾಗಲಕೋಟೆ ತಜ್ಞರ ಜತೆಗೆ ನಿಡಗುಂದಿಯ ಎಲ್ಲಾ ವೈದ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು. ತಜ್ಞ ವೈದ್ಯರು ಬರೆದಿರುವ ಔಷಧಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ ಎಂದರು.