ಉತ್ತರಪ್ರಭ ಸುದ್ದಿ
ಆಲಮಟ್ಟಿ: ಕೃಷ್ಣಾ ಭಾಗ್ಯ ಜಲ ನಿಗಮದ ವತಿಯಿಂದ ಹಲವಾರು ಕಾಮಗಾರಿಗಳನ್ನು ಏಕತ್ರಗೊಳಿಸಿ ಪ್ಯಾಕೇಜ್ ಟೆಂಡರ್ ಕರೆಯುತ್ತಿದ್ದು, ನಿಯಮವನ್ನು ಗಾಳಿಗೆ ತೂರಿ ಅಲ್ಪಾವಧಿ ಟೆಂಡರ್ ಕರೆಯುತ್ತಿದ್ದು, ಇದು ಸಣ್ಣ ಗುತ್ತಿಗೆದಾರರಿಗೆ ಮಾರಕ ಎಂದು ಅಸ್ಕಿ ಫೌಂಡೇಶನ್ ಅಧ್ಯಕ್ಷ, ಗುತ್ತಿಗೆದಾರ ಸಿ.ಬಿ. ಅಸ್ಕಿ ಆರೋಪಿಸಿದರು. ಆಲಮಟ್ಟಿಯಲ್ಲಿ ಮಂಗಳವಾರ, ಆಲಮಟ್ಟಿಯ ಕೃಷ್ಣಾ ತೀರ ಗುತ್ತಿಗೆದಾರರ ಸಂಘ ಪ್ರತಿಭಟನೆ ನಡೆಸಿ ಕೆಬಿಜೆಎನ್ ಎಲ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ಆಲಮಟ್ಟಿ ಅಣೆಕಟ್ಟು ವಲಯದಲ್ಲಿ ಟೆಂಡರ್ ನಿಯಮಗಳನ್ನು ಗಾಳಿಗೆ ತೂರಿ, ಸಿಸಿ ರಸ್ತೆ, ವಿತರಣಾ ಕಾಲುವೆ ಮತ್ತು ಅಚ್ಚುಕಟ್ಟು ರಸ್ತೆಮುಂತಾದ ಕಾಮಗಾರಿಗಳನ್ನು ಒಟ್ಟುಗೂಡಿಸಿ ಸುಮಾರು 30 ರಿಂದ 40 ಕೋಟಿ ರೂ ಗಳ ಒಂದೇ ಕಾಮಗಾರಿ ಮಾಡಿ ಟೆಂಡರ್ ಕರೆಯಲಾಗಿದೆ. ಇದರಿಂದ ನೂರಾರು ಗುತ್ತಿಗೆದಾರರಿಗೆ ತೊಂದರೆಯಾಗಿದೆ. ಇದರಿಂದ ಕೇವಲ ಕೆಲವೇ ಕೆಲವು ಗುತ್ತಿಗೆದಾರರಿಗೆ ಕಾಮಗಾರಿ ವಹಿಸಿಕೊಡುವ ಉದ್ದೇಶ ಇದರ ಹಿಂದಿದೆ ಎಂದು ಅವರು ಆರೋಪಿಸಿದರು.
ಪ್ಯಾಕೇಜ್ ಜತೆ ಅಲ್ಪಾವಧಿ ಟೆಂಡರ್ ಕೂಡಾ ಮಾಡಲಾಗಿದೆ. ಇದು ಸಂಪೂರ್ಣ ನಿಯಮ ಬಾಹಿರ ಎಂದು ಆರೋಪಿಸಿದರು. ಟೆಂಡರ್ ಗುತ್ತಿಗೆ ಹಾಕಲು ಕೇವಲ ಒಂದು ವಾರ ಕಾಲ ಮಾತ್ರ ಕಾಲಾವಧಿ ನೀಡಲಾಗಿದೆ ಎಂದು ಆರೋಪಿಸಿದರು. ಆಲಮಟ್ಟಿ ಎಡದಂಡೆ ಕಾಲುವೆಯ ವಿಭಾಗದಲ್ಲಿ ಕರೆಯಲಾಗಿರುವ ಟೆಂಡರ್ ಗಳು ಹಳೆಯ ದರವನ್ನು ಹೊಂದಿದ್ದು, ಹೊಸ ದರಗಳಿಗೆ ಅನ್ವಯಿಸಿ ಮರು ಟೆಂಡರ್ ಕರೆಯಬೇಕು ಎಂದರು. ಬೇರೆ ಬೇರೆ ವಿತರಣಾ ಕಾಲುವೆ ಹಾಗೂ ಬೇರೆ ಬೇರೆ ಕಿ.ಮೀಗಳನ್ನು ಒಟ್ಟಾಗಿ ಸೇರಿಸಿ ಪ್ಯಾಕೇಜ್ ಮಾಡಿ ಕರೆಯಲಾದ ಟೆಂಡರ್ ಗಳನ್ನು ರದ್ದುಪಡಿಸಬೇಕು ಎಂದರು.
ಗುತ್ತಿಗೆದಾರ ಸಿ.ಜಿ. ವಿಜಯಕರ ಮಾತನಾಡಿ, ಆಲಮಟ್ಟಿ ಜಲಾಶಯದಿಂದ ಮುಳುಗಡೆಗೊಂಡ ಸಂತ್ರಸ್ತರು ತಮ್ಮ ಬದುಕಿಗಾಗಿ ಸಣ್ಣ ಪುಟ್ಟ ಗುತ್ತಿಗೆ ಪಡೆದು ಕಾರ್ಯನಿರ್ವಹಿಸುತ್ತಿದ್ದಾರೆ. ಮೊದಲೆಲ್ಲಾ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ಮೂಲದ ದೊಡ್ಡ ದೊಡ್ಡ ಗುತ್ತಿಗೆದಾರರು ಯುಕೆಪಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಈಗ ಚಿಕ್ಕ ಚಿಕ್ಕ ಕೆಲಸಗಳನ್ನೆಲ್ಲಾ ಒಟ್ಟು ಮಾಡಿ ಪ್ಯಾಕೇಜ್ ಮಾಡುವುದರ ಹಿಂದಿನ ಅರ್ಥವಾದರೂ ಏನು ಎಂದು ಪ್ರಶ್ನಿಸಿದರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಂ.ಎ. ಮೇಟಿ ಮಾತನಾಡಿ, ಪ್ಯಾಕೇಜ್ ಟೆಂಡರ್ ರದ್ದುಗೊಳಿಸಬೇಕು, ಅಲ್ಪಾವಧಿ ಟೆಂಡರ್ ರದ್ದುಗೊಳಿಸಬೇಕು, ಇಲ್ಲದ್ದಿದ್ದರೇ ಮುಖ್ಯ ಎಂಜಿನಿಯರ್ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.
ಉಪ ಮುಖ್ಯ ಎಂಜಿನಿಯರ್ ಡಿ. ಸುರೇಶ ಮನವಿ ಸ್ವೀಕರಿಸಿದರು. ರಾಯನಗೌಡ ದಾಸರೆಡ್ಡಿ, ಬಿ.ಪಿ. ರಾಠೋಡ, ಪಿ.ಎಸ್. ಅಫಜಲಪುರ, ಬಿ.ವೈ. ಮೈಲೇಶ್ವರ, ರುದ್ರಗೌಡ ಅಂಗಡಗೇರಿ, ಬಿ.ಎಸ್. ಬಯ್ಯಾಪುರ, ಸಂತೋಷ ಲಮಾಣಿ, ವೆಂಕಟೇಶ ನಾಯಕ, ಬಸವರಾಜ ದಂಡಿನ, ಚನ್ನಪ್ಪ ವಿಜಯಕರ, ವೈ.ವೈ. ಚಲವಾದಿ, ವೈ.ವೈ. ಬಿರಾದಾರ, ಮಹಾಂತೇಶ ಡೆಂಗಿ ಇನ್ನೀತರರು ಇದ್ದರು.