ವರದಿ: ಗುಲಾಬಚಂದ ಜಾಧವ
ಉತ್ತರಪ್ರಭ ಸುದ್ದಿ
ಆಲಮಟ್ಟಿ: ಬ್ರಹತ್ತಾಕಾರದ ರಂಗು ರಂಗಿನ ಗೊಂಬೆಗಳ ನಲಿದಾಟ. ಹಲಿಗೆ ವಾದ್ಯ ಮೇಳದ ನಿನಾದ. ಜಯಘೋಷಗಳ ಝೇಂಕಾರ. ರಸ್ತೆಗಳ ಮೇಲೆ ಯುವಪಡೆಗಳ ಕುಣಿದಾಟ… ಇಂಥದೊಂದು ಸಾಂಸ್ಕೃತಿಕ ದೃಶ್ಯ ಲೋಕ ಆಲಮಟ್ಟಿ ರೈಲ್ವೆ ಸ್ಟೇಷನ್ ಗ್ರಾಮದಲ್ಲಿ ಗುರುವಾರ ಅನಾವರಣಗೊಂಡಿತ್ತು. ಸ್ಥಳೀಯ ರೈಲ್ವೆ ಸ್ಟೇಷನ್ ಬಳಿಯ ಸಂತೆಕಟ್ಟೆ ಹತ್ತಿರ ಶ್ರೀ ಗಜಾನನ ಯುವಕ ಮಂಡಳಿಯವರು ಗಣೇಶೋತ್ಸವ ಅಂಗವಾಗಿ ಪ್ರತಿಷ್ಟಾಪನೆ ಮಾಡಿದ್ದ ಗಣಪತಿ ಮೂತಿ೯ಯ 9 ನೇ ದಿನದ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮ ಈ ಬಾರಿ ಬಲು ವಿಶಿಷ್ಠವಾದ ರೀತಿಯಲ್ಲಿ ವಿಜೃಂಭಣೆಯಿಂದ ಗುರುವಾರ ಜರುಗಿತು. ರಾಜ್ಯದ ನಾನಾ ಕಡೆಯಿಂದ ಆಗಮಿಸಿದ ಕಲಾವಿದರು ಬ್ರಹತ್ತಾಕಾರದ ಗೊಂಬೆ ಮುಖವಾಡಗಳನ್ನು ಧರಿಸಿ ರಸ್ತೆಗಿಳಿದರು. ಅವರನ್ನು ನೋಡಲೆಂದೇ ಅಸಂಖ್ಯಾತ ಜನ ಸೇರಿದ್ದರು.








ಅವರತ್ತ ಜನ ಕಣ್ಣು ಹರಿಸುತ್ತಿದ್ದಂತೆ ಗೊಂಬೆಗಳ ಕಾಲ ಚಳಕ ಆರಂಭಗೊಂಡವು. ಹೆಜ್ಜೆ ಅತ್ತಇತ್ತ ಸುಳಿದಾಡುತ್ತಿದ್ದಂತೆ ಗೆಜ್ಜೆ ಸಪ್ಪಳ ಜೋರಾದವು. ಗೊಂಬೆ ಕುಣಿತದ ರಂಗು ಮೈ ಮನಗಳಲ್ಲಿ ಫಸರಿಸಿ ನವ್ಯ ಸಂಚಲನವನ್ನುಂಟು ಮಾಡಿದವು. ವಿಭಿನ್ನ ಬಗೆಯ ಗಾರುಡಿ ಗೊಂಬೆಗಳ ಮುಖವಾಡವನ್ನು ಹೊತ್ತು ಕುಣಿದು ಕುಪ್ಪಳಿಸಿದ ನೋಟ ಜನತೆಗೆ ಸಖತ್ ಮನರಂಜನೆಯ ರಸಸ್ವಾದ ನೀಡಿ ರಂಜಿಸಿದವು. ಹಲಗೆ ವಾದ್ಯದ ನಾದಕ್ಕೆ ತಕ್ಕಂತೆ ಗೊಂಬೆಗಳು ಕುಣಿದಾಡಿ ನೋಡುಗರ ಕಣ್ಮನ ಸೆಳೆದವು. ಈ ವೈಭವೋಪೇತ ಗೊಂಬೆಗಳ ನೃತ್ಯ ಘಮಲಕ್ಕೆ ಯುವಪಡೆಗಳು ಸಹ ಉತ್ತೇಜಿತರಾಗಿ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು. ಮೆರವಣಿಗೆಗೆ ಮತ್ತಿಷ್ಟು ರಂಗು ತಂದರು.
ಕೊಪ್ಪಳದ ಗೊಂಬೆಗಳ ತಂಡ ಪ್ರಚುರಪಡಿಸಿದ ನೃತ್ಯಕ್ಕೆ ಇಡೀ ಗ್ರಾಮವೇ ನಿಬ್ಬೆರಗುಗೊಂಡಿತು. ಗೊಂಬೆಗಳ ವಿನೋದಾವಳಿ ಕುಣಿತದ ಮಧುರ ಸವಿಕ್ಷಣಗಳನ್ನು ಕಣ್ತುಂಬಿಸಿಕೊಂಡು ಖುಷಿಯಲ್ಲಿ ಜನಸ್ತೋಮ ತೇಲಿದರು. ರಸ್ತೆ ಇಕ್ಕೆಲಗಳಲ್ಲಿ ನೃತ್ಯ, ಹಲಿಗೆ ಸದ್ದು ಮೊಳಗಿದವು. ಮನರಂಜನೆಯ ಸುವಾಸನೆ ಫಸರಿಸಿದವು. ಅಲಂಕೃತ ಟ್ರಾಕ್ಟರ್ ಲ್ಲಿ ಗಣಪತಿಯನ್ನು ಕೂರಿಸಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಸಾಗಿತು. ಬಳಿಕ ಕೃಷ್ಣೆಯ ಹಿನ್ನೀರಿನಲ್ಲಿ ಪೂಜಾ ಕೈಂಕರ್ಯದೊಂದಿಗೆ ವಿಸಜಿ೯ಸಲಾಯಿತು.
ಈ ಭವ್ಯ ಮೆರವಣಿಗೆ ನೇತೃತ್ವ ಗ್ರಾಪಂ.ಅಧ್ಯಕ್ಷ ಮಂಜುನಾಥ್ ಹಿರೇಮಠ, ಗಜಾನನ ಯುವಕ ಮಂಡಳಿ ಪ್ರಮುಖರಾದ ಯಲ್ಲಪ್ಪ ಕೋಳಿ, ಪ್ರಭುಲಿಂಗಯ್ಯ ಹಿರೇಮಠ, ರಮೇಶ ಆಲಮಟ್ಟಿ, ಹಜರತ್ ಯರಗಲ್, ದೇಸಾಯಿ, ರಮೇಶ ಲಮಾಣಿ, ಶಿವಪ್ಪ ಗುಳೇದಗುಡ್ಡ, ಅಶೋಕ ಗೌಡರ,ರವಿ ಕಾಸರ, ಕಿರಣ ಆಲಮಟ್ಟಿ ಮೊದಲಾದವರು ವಹಿಸಿದ್ದರು. ಹಿರಿಯರಾದ ಮಹಾಂತೇಶ ಹಿರೇಮಠ, ಸಂಗಪ್ಪ ಶಿವಣಗಿ,ಮುರಳಿ ಬಡಿಗೇರ ಸೇರಿದಂತೆ ಅನ್ನದಾನೇಶ್ವರ ನಾಟ್ಯ ಸಂಘದ ಯುವಕರ ಪಡೆ, ಶಂಕರನಾಗ್ ಅಟೋ ಸ್ಟ್ಯಾಂಡ್ ಸದಸ್ಯರು, ಗ್ರಾಮದ ಗುರು ಹಿರಿಯರು, ಕಿರಿಯರು ಉತ್ಸಾಹದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡು ಗಣೇಶ ವಿಸರ್ಜನೆ ಮೆರವಣಿಗೆಗೆ ಕಳೆ ತಂದರು.