ನರೆಗಲ್ಲ: ಪಟ್ಟಣದ 3ನೇ ವಾರ್ಡಿನ ಜಕ್ಕಲಿ ರೋಡ್ ಆಶ್ರಯ ಕಾಲೋನಿಯಲ್ಲಿ ಹಿಂದೂ, ಮುಸ್ಲಿಂ ಧರ್ಮದ ಜನರು ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಭಾವೈಕ್ಯತೆ ಸಾರಿದರು. ಅದರಲ್ಲೂ ರೈಮಾನಸಾಬ್ ನದಾಫ್, ಸದ್ದಾಂ ನಶೇಖಾನ್, ಹಸನಸಾಬ್ ಕೊಪ್ಪಳ, ರಾಜಾ ಮುದಗಲ್ ಸೇರಿದಂತೆ 20ಕ್ಕೂ ಹೆಚ್ಚು ಮುಸ್ಲಿಂ ಯುವಕರು ಮುಂಚೂಣಿಯಲ್ಲಿ ನಿಂತು ಗಣಪತಿ ಪ್ರತಿಷ್ಠಾಪಿಸಿ ಪೂಜಿಸುವ ಮೂಲಕ ಭಾವೈಕ್ಯ ಮೆರೆದಿದ್ದಾರೆ.

ಜಾತಿ ಹಾಗೂ ಧರ್ಮದ ವಿಷ ಬೀಜ ಕಿತ್ತೂಗೆಯಲು ಮುಂದಾಗಿರುವ ಯುವಕರು ಪ್ರತಿದಿನ ತಾವೇ ಮುಂದೆ ನಿಂತು ಕರ್ಪೂರ, ಕಾಯಿ ಹಿಡಿದು, ಅಗರಬತ್ತಿ ಹಚ್ಚಿ ಗಣಪತಿ ಮೂರ್ತಿಗೆ ಆರತಿ ಬೆಳಗಿ ಕೋಮು ಸೌಹಾರ್ದಕ್ಕೆ ಸಾಕ್ಷಿಯಾಗಿದ್ದಾರೆ. ಹೋಬಳಿಯ ಅನೇಕರು ಗಣೇಶ ಮೂರ್ತಿ ಕಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಸಾಮರಸ್ಯಕ್ಕೆ ಹೆಸರಾದ ನರೇಗಲ್ ಯುವಕರು, ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹೇಳುತ್ತಿದ್ಧಾರೆ.

ಎಲ್ಲಾ ಜಾತಿಯ ಜನರು ವಾಸಿಸುವ ಈ ವಾರ್ಡಿನಲ್ಲಿ ಯಾವುದೇ ಹಬ್ಬಗಳು ನಡೆದರು ಎಲ್ಲರೂ ಒಗ್ಗಟ್ಟಿನಿಂದ ಆಚರಣೆ ಮಾಡುತ್ತಾರೆ. ಹಿಂದೂ, ಮುಸ್ಲಿಂ ಜನರು ಒಬ್ಬರಿಗೆ ಒಬ್ಬರೂ ಕಾಕಾ, ದೊಡ್ಡಪ್ಪ, ಅಕ್ಕ, ತಂಗಿ, ಅಣ್ಣ, ತಮ್ಮ ಎಂದು ನಡುವಳಿಕೆಯ ಸಂಬಂಧಗಳಿಂದ ಕರೆಯುತ್ತಾರೆ. ಯಾರಿಗೆ ಕಷ್ಟವಾದರು ಎಲ್ಲರೂ ಸ್ಪಂದಿಸುತ್ತಾರೆ ಹಾಗೂ ಅನ್ನೋನ್ಯವಾಗಿ ಬದುಕುತ್ತಿದ್ದಾರೆ. ಆದ್ದರಿಂದ ಇಲ್ಲಿ ಎಲ್ಲಾ ಧರ್ಮದ ಹಾಗೂ ಎಲ್ಲಾ ಜನಾಂಗದ ಹಬ್ಬಗಳು, ಜಯಂತಿಗಳು ಸಂಭ್ರಮದಿಂದ ನಡೆಯುತ್ತವೆ ಎಂದು ಗಣೇಶೋತ್ಸವದ ಮುಂದಾಳ್ವತ ವಹಿಸಿರುವ ನಾರಾಯಣಪ್ಪ ಯಂಕಪ್ಪ ಮಾಳೋತ್ತರ ತಿಳಿಸಿದರು.
ನಾವು ಅಲ್ಲಾಹನೊಂದಿಗೆ ಗಣೇಶನನ್ನು ಆರಾಧನೆ ಮಾಡುತ್ತೇವೆ. ಇದರಿಂದ ನಮ್ಮ ಮನಸ್ಸಿಗೆ ಸಂತಸ ಸಿಕ್ಕಿದೆ. ಸಹೋದರತ್ವ ಭಾವನೆಯಿಂದ ಎಲ್ಲರೂ ಅನೋನ್ಯವಾಗಿದ್ದೇವೆ. ಇದನ್ನು ಮುಂದುವರಿಸಿಕೊಂಡು ಹೋಗುತ್ತೇನವೆ ಎಂದು ಓಣಿಯ ಯುವಕರಾದ
ಸದ್ದಾಂ ನಶೇಖಾನ್, ಹುಚ್ಚುಸಾಬ್ ಕೊಪ್ಪಳ, ರಾಜಾ ಮುದಗಲ್ ಅಭಿಪ್ರಾಯ ವ್ಯಕ್ತಪಡಿಸಿದರು