ಬ್ರಿಸ್ಬೇನ್: ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್(52) ಶುಕ್ರವಾರದಂದು ನಿಧನರಾಗಿದ್ದಾರೆ.ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ವಾರ್ನ್ ಅವರ ಮಾಧ್ಯಮ ವಕ್ತಾರರು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಶೇನ್ ವಾರ್ನ್ ಅವರು ಶಂಕಿತ ಹೃದಯಾಘಾತದಿಂದ ಥೈಲ್ಯಾಂಡ್‌ನ ಕೊಹ್ ಸಮುಯಿಯಲ್ಲಿ ನಿಧನರಾಗಿದ್ದಾರೆ ಎಂದಿದ್ದಾರೆ.
ಅವರು ಶೇನ್ ಅವರ ವಿಲ್ಲಾದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಹೃದಯಾಘಾತಕ್ಕೆ ಒಳಗಾಗಿದ್ದ ಶೇನ್ ಅವರನ್ನು ಬದುಕಿಸಲು ವೈದ್ಯಕೀಯ ಸಿಬ್ಬಂದಿಯ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಮಾಜಿ ಕ್ರಿಕೆಟ್ಗನ ನಿಧನದಿಂದ ಅಭಿಮಾನಿಗಳು ದಿಗ್ಭ್ರಮೆ ಗೊಂಡಿದ್ದಾರೆ.
ಪ್ರೀತಿಯಿಂದ ‘ವಾರ್ನಿ’ ಎಂದು ಕರೆಯಲ್ಪಡುತ್ತಿದ್ದ ಶೇನ್ ವಾರ್ನ್ ಅವರು ಜಗತ್ತಿನಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.
1992ರಲ್ಲಿ ಜಾಗತಿಕ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟ ವಾರ್ನ್ ಸುಮಾರು 15 ವರ್ಷಗಳ ಕಾಲದ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 145 ಟೆಸ್ಟ್ ಪಂದ್ಯಗಳನ್ನಾಡಿ 708 ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದು ದಾಖಲೆ ಬರೆದಿದ್ದಾರೆ. ವಾರ್ನ್ 1999 ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದರು. ಒಟ್ಟಾರೆ 1001 ವಿಕೆಟ್ ಗಳಿಸಿದ ಸ್ಪಿನ್ ಮಾಂತ್ರಿಕ. 194 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 293 ವಿಕೆಟ್ ಕಿತ್ತಿದ್ದಾರೆ.2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿದ ಬಳಿಕ ಕೌಂಟಿ ಕ್ರಿಕೆಟ್, ಇಂಡಿಯನ್ ಪ್ರೀಮಿಯರ್ ಲೀಗ್ ಗಳಲ್ಲಿ ಸಕ್ರಿಯರಾಗಿದ್ದರು. ಜೊತೆಗೆ ಕಾಮೆಂಟ್ರಿ ಕೂಡಾ ಮಾಡುತ್ತಿದ್ದರು. ಐಪಿಎಲ್ ನಲ್ಲಿ ಕ್ಯಾಪ್ಟನ್ ಕಮ್ ಕೋಚ್ ಅಚ್ಚರಿ ಮೂಡಿಸಿದರು. 2008ರ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಕಪ್ ಗೆಲ್ಲುವಂತೆ ಮಾಡಿದರು. 2018ರಲ್ಲಿ ರಾಜಸ್ಥಾನ್ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದರು.
2021ರ ಆಗಸ್ಟ್ ತಿಂಗಳಲ್ಲಿ ಲಂಡನ್ ಸ್ಪಿರಿಟ್ ತಂಡದ ಕೋಚ್ ಆಗಿದ್ದ ಶೇನ್ ವಾರ್ನ್ ಅನಾರೋಗ್ಯಕ್ಕೆ ಒಳಗಾಗಿದ್ದರು. ಕೊರೊನಾ ವೈರಸ್ ಸೋಂಕಿನಿಂದ ಚೇತರಿಸಿಕೊಂಡಿದ್ದರು. ನವೆಂಬರ್ ತಿಂಗಳಲ್ಲಿ ತಮ್ಮ ಮಗ ಜಾಕ್ಸನ್ ಜೊತೆಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಬೈಕ್ ಅಪಘಾತಕ್ಕೆ ಒಳಗಾಗಿದ್ದು ಗಾಯಗೊಂಡಿದ್ದರು. ಆದರೆ, ಯಾವುದೇ ಮಾರಣಾಂತಿಕ ಗಾಯಗಳಾಗಿರಲಿಲ್ಲ. ಇತ್ತೀಚೆಗೆ ಥೈಲ್ಯಾಂಡಿನ ಕೊಯ್ ಸಮುಯಿಯ ವಿಲ್ಲಾದಲ್ಲಿದ್ದ ಶೇನ್ ಅವರು ನಿಧನರಾಗಿರುವ ರೀತಿಯ ಬಗ್ಗೆ ಶಂಕೆ ಮೂಡಿದೆ.ಆಸ್ಟ್ರೇಲಿಯಾದ ವಿಕ್ಟೋರಿಯಾ ಪ್ರಾಂತ್ಯದಲ್ಲಿ ಜನಿಸಿದ ಶೇನ್ ವಾರ್ನ್ ವರ್ಣಮಯ ಬದುಕು ಕಂಡವರು, ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.