ಚಿತ್ರ ವರದಿ : ಗುಲಾಬಚಂದ ಆರ್.ಜಾಧವ

ಆಲಮಟ್ಟಿ :(ವಿಜಯಪುರ ಜಿಲ್ಲೆ) ಬೆಳ್ಳಂ ಬೆಳಿಗ್ಗೆ ತಂಪಾಗಿ ಸೂಸಿ ಬರುತ್ತಿದ್ದ ಚುಮ್ ಚುಮ್ ಚಳಿಯಲ್ಲಿ ಡೊಳ್ಳಿನ ನಿನಾದದ ಸದ್ದು ಜೋರಿತ್ತು ! ಈ ಹಲಿಗೆ, ಡೊಳ್ಳು ಕಂಪಿನ ರಾಗತಾಳಕ್ಕೆ ಹೆಜ್ಜೆಗೆಜ್ಜೆ ಬಳೆಗಳ ಗಲ್ಲಗಲ್ಲ ಸಪ್ಪಳದ ಕಂಪನವೂ ಪರಿಮಳಿಸಿತ್ತು ! ಈ ಹಿತಕರ ಕೂಲ್ ತಂಪಿನಲ್ಲಿ ಗಡಗಡ ಸರಸರ ಪಾದಸ್ಪರ್ಶಗಳ ಸಂಚಲನವೂ ಧೂಳೆಬ್ಬಿಸುತ್ತಾ ಝೇಂಕರಿಸಿತ್ತು ! ಸಂಭ್ರಮೋಲ್ಲಾಸದಿಂದ ಮೆಲ್ಲಗೆ ಹೆಜ್ಜೆ ಹಾಕುತ್ತಾ ಸಾಗುತ್ತಿದ್ದ ಸಹಸ್ರಾರು ಮುತ್ತೈದೆ ಸುಮಂಗಲಿಯರ ಮೊಗಭಾವದಲ್ಲಿ ಸಂಪ್ರೀತಿಯ ಭಕ್ತಿ ಕೃತಜ್ಞತೆ ಅರಳಿ ನಿಂತಿತ್ತು ! ತಲೆ ಮೇಲೆ ಕುಂಭ ಹೊತ್ತು ಜಯಘೋಷದ ಸದ್ದು ಮೊಳಗಿಸಿ ಭಕ್ತಿಯ ಉನ್ಮಾನದ ಸೆಲೆಯಲ್ಲಿ ಲೀನರಾಗಿ ಮಿನುಗಿದ್ದರು ಅವರೆಲ್ಲರು ! ಈ ನಾರಿ ಮಣಿಗಳ ಮೊಗದಲ್ಲಿ ಅಂಬೆಯ ಸಂಪನ್ನಭಾವ ಲೇಪಿಸಿದಂತಾಗಿತ್ತು..! ಇಂಥದೊಂದು ವಿಶೇಷ ವೈಭವೋಪೇತ ಅದ್ದೂರಿ ಭವ್ಯ ನೋಟ ಶನಿವಾರ ಕೃಷ್ಣೆಯ ತಟದಲ್ಲಿ ಅನಾವರಣವಾಗಿತ್ತು!


ಇಲ್ಲಿನ ಚಿಮ್ಮಲಗಿ ಭಾಗ- 1 ಎ ಗ್ರಾಮದಲ್ಲಿರುವ ಕ್ಷತ್ರಿಯ ಸಮಾಜದ ಅಂಬಾಭವಾನಿ ದೇವಿಯ ಜಾತ್ರಾ ಮಹೋತ್ಸವದಂಗವಾಗಿ ಜರುಗಿದ ಮುತ್ತೈದೆಯರ ಕುಂಭ ಮೆರವಣಿಗೆಯ ದೃಶ್ಯ ವೈಭವ ಎಲ್ಲರ ಚಿತ್ತ ಸೆಳೆಯಿತು !
ಅಂಬಾಭವಾನಿ ದೇವಿ ಜಾತ್ರಾ ನಿಮಿತ್ಯ ಅನೇಕ ಧಾಮಿ೯ಕ ಕೈಂಕರ್ಯಗಳು ವಿಜೃಂಭಣೆಯಿಂದ ಸಾಗಿದವು. ಬೆಳಿಗ್ಗೆ ಜಾಗೃತದೇವಿ ಚಂದ್ರಮ್ಮಾ ದೇವಸ್ಥಾನ ಹತ್ತಿರದ ಕೃಷ್ಣಾ ನದಿಯಿಂದ ಅಂಬಾಭವಾನಿ ದೇವಾಲಯದವರೆಗೆ ಸಾಗಿದ್ದ ಕುಂಭ ಮೆರವಣಿಗೆಯಲ್ಲಿ ಅಸಂಖ್ಯ ಮುತ್ತೈದೆ ಭಕ್ತಗಣ ದಾರಿಯುದ್ದಕ್ಕೂ ಜಯಘೋಷ ಹಾಕುತ್ತಾ ಎಲ್ಲೆಲ್ಲೂ ಭಕ್ತಿರಸದ ಪರಾಕಾಷ್ಠೆಯಲ್ಲಿ ಮಿಂದೆದ್ದರು. ಪುನೀತ್ ಭಾವ ತಾಳಿದರು. ಆರಾಧ್ಯ ದೇವಿಗೆ ವಿಶೇಷ ಧಾಮಿ೯ಕ ಪೂಜೆಗಳನ್ನು ಸಲ್ಲಿಸಿ ನಮ್ಯತೆಯ ಧನ್ಯತೆಯಲ್ಲಿ ತೇಲಿದರು.


ಭಕ್ತಿ ಭಾವರಸ ಸಮಪಿ೯ಸಿ ಪೂಜ್ಯತೆ ಮೆರೆದರು.
ಮಹಾಪೂಜೆ, ಪಂಚಾಮೃತ ಅಭಿಷೇಕ್, ಕಳಾಸಾಭಿಷೇಕ್, ಪ್ರಸನ್ನ ಪೂಜಾ, ಸಾಮೂಹಿಕ ಪ್ರಾರ್ಥನೆ, ಶ್ರೀಗುರು ಪೂಜೆ, ಮಹಾಗಣಪತಿ ಪೂಜೆ, ಪುಣ್ಯಾಹವಾಚನೆ, ನಾಂದಿ, ಮಾತೃಕಾ ಪೂಜೆ, ನವಗ್ರಹ ಹೋಮ ಹವನಗಳು, ನವಕ ಪ್ರಧಾನ ಹೋಮ, ದೇವಿಗೆ ಕಳಸಾಭಿಷೇಕ, ಅಲಂಕಾರಿಕ ಪೂಜೆ, ಲಲಿತಾ ಸಹಸ್ರನಾಮ, ಮಹಾಪೂಜೆ, ಅಷ್ಟಾವಧಾನ, ಪ್ರಾರ್ಥನೆ ಹೀಗೆ ನಾನಾ ಧಾಮಿ೯ಕ ವಿಧಿವಿಧಾನಗಳ ಪೂಜಾ ಕಾರ್ಯಗಳು ಶೃದ್ಧಾಪೂರ್ವಕ ಭಕ್ತಿಯಿಂದ ಜರುಗಿದವು. ಜಾತ್ರೆಯಲ್ಲಿ ಭಾಗಿಯಾಗಿ ದೇವಿ ಕೃಪೆಗೆ ಪಾತ್ರರಾದ ಭಕ್ತರಿಗೆಲ್ಲ ಪ್ರಸಾದ ಅನ್ನ ಸಂತರ್ಪಣೆ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿತ್ತು.


ಈ ಬಾರಿ ಸಡಗರ ಸಂಭ್ರಮದಿಂದ ಜರುಗಿದ ಅಂಬಾಭವಾನಿ ದೇವಿ ಜಾತ್ರೆಯ ಆರಾಧನಾ ಮಹೋತ್ಸವದಲ್ಲಿ ಅಪಾರ ಭಕ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಕಳೆದೆರಡು ವರ್ಷದಿಂದ ಜಾತ್ರಾ ಕಳೆ ಇದ್ದಿರಲಿಲ್ಲ.ಬೆಂಬಿಡದೇ ಕಾಡುತ್ತಿರುವ ಕರೋನಾ ಕಾಟದಿಂದ ಉತ್ಸವಕ್ಕೆ ಕಡಿವಾಣ ಹಾಕಲಾಗಿತ್ತು. ಈ ಬಾರಿ ಸೂಕ್ಷ್ಮತೆ ಪಾಲಿಸಿ ಮುಂಜಾಗ್ರತೆ ವಹಿಸಿ ದೇವಿಯ ಆರಾಧನಾ ಉತ್ಸವದಲ್ಲಿ ಭಾಗಿಯಾಗಿ ಕರೋನಾ ಕಂಟಕ ಎಲ್ಲಡೆ ನಿನಾ೯ಮವಾಗಲಿ ಎಂದು ಭಕ್ತರು ಆಶಿಸಿದರು.


ಚಿಮ್ಮಲಗಿ ತಪೋಮಂದಿರದ ಹರಿಶ್ವರ ಹಿರೇಮಠ ಮಾರ್ಗದರ್ಶನದಲ್ಲಿ ನಡೆದ ಜಾತ್ರಾ ಮಹೋತ್ಸವದ ಸಂಪನ್ನತೆಗೆ ಭಾವಸಾರ ಕ್ಷತ್ರಿಯ ಸಮಾಜದ ಮುಖಂಡರಾದ ಕಾಶೀನಾಥ್ ಮಹೇಂದ್ರಕರ, ನಾಗೇಶ್ ಮಹೇಂದ್ರಕರ, ನರಸಿಂಹ ಮಹೇಂದ್ರಕರ, ತಿಪ್ಪಣ್ಣ ಮಹೇಂದ್ರಕರ, ಬಸಪ್ಪ ಮಹೇಂದ್ರಕರ, ಲಕ್ಷ್ಮಿಕಾಂತ ಮಹೇಂದ್ರಕರ, ರಾಜೇಂದ್ರ ಬೊಮ್ಮಲೇಕರ, ಶಶಿಕಲಾ ಮಹೇಂದ್ರಕರ ಸೇರಿದಂತೆ ಗ್ರಾಮದ ಪ್ರಮುಖರಾದ ಶಿವಾಜಿ ಕಟ್ಟಿಮನಿ, ರವಿ ಕೋತಿನ, ಪ್ರಭು ಕಂಬಾರ, ವಸಂತ ಕಂದಕೂರ,ಗಂಗಾಧರ ಘೋರ್ಪಡೆ ಮೊದಲಾದವರು ಶ್ರಮಿಸಿದರು.

Leave a Reply

Your email address will not be published. Required fields are marked *

You May Also Like

ಗುರುವಂದನೆ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮ

ಗದಗ: ಶ್ರೀ ವೆಂಕಟೇಶ್ವರ ಪ್ರೌಡ್ ಶಾಲೆ ಬೇಳಧಡಿ ಯಲ್ಲಿ ಸನ್ 1995-1996 ನೇ ಸಾಲಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಂದ…

ಗದಗ ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಮೂರು ದಿನ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಗದಗ ಜಿಲ್ಲೆಯಲ್ಲಿಂದು 9 ಕೊರೊನಾ ಪಾಸಿಟಿವ್!

ಗದಗ: ಜಿಲ್ಲೆಯಲ್ಲಿಂದು 9 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 88…

ಮನೆಯವರ ಕಿರುಕುಳಕ್ಕೆ ನೊಂದ ಸೊಸೆ ಮಾಡಿದ್ದೇನು?

ಮಂಡ್ಯ : ಮನೆಯವರ ನಿರಂತರ ದೌರ್ಜನ್ಯಕ್ಕೆ ಬೇಸತ್ತ ಸೊಸೆಯೊಬ್ಬರು ಪತಿ, ಮಾವ ಹಾಗೂ ಅತ್ತೆಯನ್ನು ರಾಡ್ ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ.