ಇದು ‘ಸುದ್ದಿ ಕಾಲ’!
ಹಾಗಂದರೆ ಏನೆಂದು ತಿಳಿದಿರಬೇಕಲ್ಲವೆ?
ಹೌದು ಅದೇ ‘ಸುದ್ದಿ’ ವಿಷಯ.
ಕೆಟ್ಟ ಸುದ್ದಿಯ ಸುರಿಮಳೆ.
ಈಗ ತಿಳಿಯಿತಲ್ಲ ಸಾವಿನ ಸುದ್ದಿ ಎಂದು?
ಇತ್ತೀಚೆಗೆ ಸಾಯುವವರ ಸಂಖ್ಯೆ ಹೆಚ್ಚಾಗಿದೆ.
ನಮ್ಮವರು, ತಮ್ಮವರು, ಬಹಳ ಹತ್ತಿರದಿಂದ ಕಂಡವರು, ಸಣ್ಣ ವಯಸ್ಸಿನವರು, ವಯಸ್ಸಾದವರು, ಹೀಗೆ ಒಬ್ಬರಲ್ಲ ಒಬ್ಬರು ನಿತ್ಯ ನಮ್ಮನ್ನಗಲುತ್ತಿದ್ದಾರೆ. ಇದಕ್ಕೆ ಕೊನೆ ಎಂದು? ಎನ್ನುವ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ. ಉತ್ತರವಿಲ್ಲದ ಪ್ರಶ್ನೆಗೆ ‘ಕಾಲ’ವೇ ಉತ್ತರಿಸಬೇಕು.

ಹೀಗೆ ಫೇಸ್‌ಬುಕ್ ಸ್ಕ್ರಾಲ್ ಮಾಡುತ್ತಿದೆ. ಥಟ್ಟಂತ ಸ್ಪುರದ್ರೂಪಿ ಪರಿಚಯದ ವ್ಯಕ್ತಿಯೊಬ್ಬರ ಭಾವಚಿತ್ರ ನೋಡಿದೆ. ಈಗೀಗ ಯಾರದೇ ಫೋಟೊ ಕಂಡರೂ ಶ್ರದ್ಧಾಂಜಲಿ ಇರಬಹುದೆಂಬ ಗುಮಾನಿಯಿಂದ ಎದೆಯೊಳಗೆ ನಡುಕ ಹುಟ್ಟುತ್ತಿದೆ. ಈ ಸದೃಢ ಕಾಯದ ಮೂವತ್ತೈದರ ಹರೆಯದ ಯುವಕನಿಗೆ ಏನಾಯಿತು? ಇವನು ಅವನೇ ಅಲ್ಲವೆ? ಅಯ್ಯೊ ಇವನ ಸಾವೇ!!! ಶರಣಾ… ಬಸವಾ… ಇದು ಹೀಗಾಗ ಬಾರದಿತ್ತು.

ನನ್ನನ್ನು ‘ಅಕ್ಕ’ ಎಂದು ಕರೆದು ಸಂಭ್ರಮಿಸುತ್ತಿದ್ದ ‘ತಂಗಿ’ಯ ಗಂಡನೇ ಇವನು. ಇವನು ಸತ್ತಿದ್ದಕ್ಕೆ ಮನಸು ಕದಡಿ ಕ್ಷೋಭೆಗೊಳಗಾಯಿತು. ಏನೋ ಅರಿವಿಗೆ ಬಾರದ ವೇದನೆ. ಅವಳ ಸುಂದರ ಮುಖ ಕಣ್ಣೆದುರಿಗೆ ಬಂದಿತು. ಅಲ್ಲಿ ಕಣ್ಣೀರು ಕಾಣಲು ನನ್ನ ಮನಸು ತಯಾರಿರಲಿಲ್ಲ.

ತಂಗಿ ಇದನ್ನು ಹೇಗೆ ಎದುರಿಸಿರಬಹುದು? ಚಿಕ್ಕ ಚಿಕ್ಕ ಎರಡು ಮಕ್ಕಳನ್ನು ಹೇಗೆ ಸುಧಾರಿಸಿಯಾಳು?
ಈ ದುಃಖ ತಡೆದುಕೊಳ್ಳುವ ಶಕ್ತಿ ಅವಳಿಗೆ ಯಾರು ಕೊಡುತ್ತಾರೆ?
ಈ ದಿನವನ್ನು ಹೇಗೆ ಕಳೆದಾಳು? ಅವಳಿಗೊಂದಿಷ್ಟು ಶಕ್ತಿಯನ್ನು ಈ ಸೋಶಿಯಲ್ ಮೀಡಿಯಾ ಮೂಲಕ ಕಳುಹಿಸುವಂತಿದ್ದರೆ, ಅಯ್ಯೋ ಏನಿದು ಆಸಹಾಯಕತೆ? ಅವಳ ಇಡೀ ಬದುಕು ಪ್ರಶ್ನಾರ್ಥಕವಾಗಿ ನನ್ನೆದುರಿಗೆ ನಿಂತಿತು. ಏನೂ ತೋಚದಾಗಿ ವಿಲವಿಲನೆ ಒದ್ದಾಡಿದೆ. ನನಗೇ ಇಷ್ಟು ಕಷ್ಟವಾಗಿರಬೇಕಾದರೆ ಇನ್ನು ಅನುಭವಿಸುವ ಅವಳ ಸ್ಥಿತಿ ಏನಾಗಿರಬೇಡ?
ಯಾವುದಕ್ಕೂ ಉತ್ತರ ‘ಸಮಯ’ವೇ ಕೊಡಬೇಕು. ಮನುಷ್ಯರಾದ ನಾವು ಎಷ್ಟು ಅಸಹಾಯಕರು! ನಾವು ನಮಗೆ ಕೈಲಾಗುವುದಿಲ್ಲ ಎಂದು ಹೇಳಿ ಒಪ್ಪಿಕೊಳ್ಳುವುದೇ ಇಲ್ಲ. ಕಾಲನ ಮೇಲೆ, ಸಮಯದ ಮೇಲೆ, ಆ ಹೊತ್ತು, ಈ ಹೊತ್ತಿನ ಮೇಲೆ ಹಾಕಿ ನಿಶ್ಚಿಂತರಾಗುತ್ತೇವೆ. ನಾವೂ ಒಂದು ರೀತಿ ಪಲಾಯನವಾದಿಗಳೇ ಎಂದರೂ ತಪ್ಪಿಲ್ಲ.

ಈ ಜೀವ ಜಗತ್ತು ಚಲಿಸುತ್ತಲೇ ಇರಬೇಕು, ಚಲಿಸುತ್ತಲೇ ಇದೆ. ಈ ಚಲನಶೀಲತೆಗೆ ಕಾರಣರು ಅನೇಕರು. ಮನುಷ್ಯ, ಪ್ರಾಣಿ, ಪಕ್ಷಿ ಸಕಲ ಜೀವ ಜಂತುಗಳು ಬರುತ್ತವೆ, ಹಾಗೇ ಹೋಗುತ್ತವೆ. ಈ ಜಗತ್ತೆಂಬ ಬೃಹತ್ ತೇರಿಗೆ ‘ಹೆಣ್ಣು’, ‘ಗಂಡು’ ಎಂಬ ಎರಡು ಚಕ್ರ. ಸಂಸಾರವೆoಬ ಪುಟ್ಟ ದೋಣಿ ಸಾಗಿಸಲು ಪತಿ, ಪತ್ನಿಯರ ಪ್ರೀತಿಯ ಒಟನಾಟ. ಅವರ ಪ್ರೇಮದ ಕುರುಹು ಮಕ್ಕಳು. ಆ ಮಕ್ಕಳು ಬೆಳೆದು ದೊಡ್ಡವರಾಗಿ ಮತ್ತೆ ಅದೇ ಸಂಸಾರವೆoಬ ದೋಣಿಯ ಮುಂದುವರಿಸ ಬೇಕು. ಇದೊಂದು ಚಕ್ರ.

ಹೌದಲ್ಲವೇ ಈ ಚಕ್ರದ ಸುಳಿಯಲ್ಲಿ ಸಿಲುಕಿ ಮನುಷ್ಯ ಅದೆಷ್ಟು ಒದ್ದಾಡುತ್ತಾನೆ! ಹುಟ್ಟು, ಸಾವು, ಅವೆರಡರ ನಡುವಿನ ಬದುಕೇ ಈ ಜೀವನ ಎನ್ನುವುದನ್ನು ಮರೆತೇ ಬಿಡುತ್ತೇವೆ. ಅಲೌಕಿಕವಾದ ಅನೇಕ ವಿಷಯಗಳು ಮನದಲ್ಲಿ ಸುಳಿದು ಹೋದವು. ತಂಗಿಯ ಮುಖ ಒಂದು ಕಡೆ, ಫೇಸ್‌ಬುಕ್‌ನ ಭಾವಚಿತ್ರ ಇನ್ನೊಂದು ಕಡೆ, ಮಕ್ಕಳ ಮುಖಗಳು ಅವರಿಬ್ಬರ ಸುತ್ತ ಸುತ್ತಿದಂತೆ, ಹೀಗೆ ಏನೆಲ್ಲಾ ವಿಚಾರಗಳು, ಬರೀ ಅವಳ ಸುತ್ತಲೇ ಸುತ್ತುತ್ತಿತ್ತು.

ಅವನು ನಮ್ಮನ್ನಗಲಿ ಮೂರು ದಿನಗಳಾದ ನಂತರ ಒಮ್ಮೆ ಸಾಂತ್ವನದ ಮಾತನಾಡಬೇಕೆಂದು ನಿರ್ಧರಿಸಿದೆ. ಯಾಕೊ ಧೈರ್ಯವೇ ಸಾಲದಂತಾಯಿತು. ಅವಳು ಕಳೆದುಕೊಂಡಿರುವುದಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಇಡೀ ಜೀವನದ ಅರ್ಧ ಭಾಗವೂ ಸವೆದಿಲ್ಲ. ನಟ್ಟ ನಡು ಬಿಸಿಲಿನಲ್ಲಿ ಕೈ ಬಿಟ್ಟು ಹೋಗಿದ್ದ. ಈಗ ಬಿಸಿಲಾಗ ನಿಂತವಳ ಗೋಳಿನ ಕತೆಗೆ ಕಿವಿಯಾಗುವವರು ಯಾರೂ ಇಲ್ಲ. ಹಾಗಾದರೆ ಅವಳಿಗೆ ಸಾಂತ್ವನ ನೀಡುವುದು ಹೇಗೆ? ಅವಳಿಗೆ ಅವಳೇ ಸಾಂತ್ವನಿಸಿಕೊಳ್ಳಬೇಕು.

ಕೂಡಲೆ ಕಾಲ್ ಮಾಡಿದೆ. ಅವಳ ‘ಹಲೊ ಅಕ್ಕ’ ದನಿಗೆ ನಾ ಕುಸಿದು ಹೋದೆ. ಅತ್ತು ಅತ್ತು ಅದು ಒಣಗಿ, ಗೊಗ್ಗರಾಗಿ ಹೋಗಿತ್ತು. ಒಡಕು ದನಿಯಲ್ಲೇ ಹೇಳಿದಳು, ‘ಎಲ್ಲಾ ಮುಗೀತಕ್ಕ’.
ಅವಳ ಅವಳುವಿನ ಬಿಕ್ಕಳಿಗೆ ನಾ ಕರಗಿ ಹೋದೆ. ‘ತಂಗಿ ಅಳಬೇಡವ್ವ. ನಿನ್ನ ಅಳಿಸಲೆಂದೇ ಕಾಲ್ ಮಾಡಿದಂತಾಗಿದೆ. ಈಗ ಸಾಕು. ನೀ ಅಳಬಾರದು. ಮೂರು ದಿನಕ್ಕೆ ಮುಗಿಸಿ ಬಿಡು. ಮಕ್ಕಳ ಮುಖ ನೋಡಿ ನೋವು ಮರೆಯುವ ಪ್ರಯತ್ನ ಮಾಡು. ಸ್ವಲ್ಪ ದಿನ ಕಳೆಯಲಿ ತಾನಾಗಿಯೇ ಎಲ್ಲವೂ ಸರಿಹೋಗುತ್ತದೆ. ಲೌಕಿಕದಲ್ಲಿ ಪಟ್ಟ ದುಃಖಕ್ಕೆ ಅಲೌಕಿಕದಲ್ಲಿ ಸಾಂತ್ವನ ಸಿಗುತ್ತದೆ. ಮುಂದೆ ನಿನ್ನ ದಾರೆ ನೀ ಕಂಡುಕೊಳ್ಳುತ್ತಿ. ಸಧ್ಯಕ್ಕೆ ಧೈರ್ಯದಿಂದ ಇರು.’ ಮೇಲಿನ ನನ್ನ ಮಾತುಗಳು ಖಂಡಿತ ಅವಳಿಗೆ ಹೊಸ ದಾರಿಯನ್ನು ತೋರಿಸುತ್ತದೆ ಎನ್ನುವ ಭರವಸೆ ಮೂಡಿತು. ಕೆಲವು ದಿನಗಳ ನಂತರ ಮತ್ತೆ ಅವಳಿಗೆ ಕಾಲ್ ಮಾಡಿದೆ. ಆ ದನಿಯಲ್ಲಿ ಉತ್ಸಾಹವಿತ್ತು, ಭರವಸೆ ಇತ್ತು, ಜೀವನೋತ್ಸಾಹ ಅಲ್ಲದಿದ್ದರೂ ಜೀವನ ಸಾಗಿಸುವ ಶ್ರದ್ಧೆ ಇತ್ತು. ‘ಏನ್ ನಡ್ಸಿದಿ ತಂಗೆಮ್ಮ?’ ಅಂದೆ. ‘ಅವರ ನೌಕ್ರಿ ನನಗೇ ಕೊಟ್ರಕ್ಕ. ಮಕ್ಕಳು ಆನ್‌ಲೈನ್ ಕ್ಲಾಸ್ ಚಾಲೂ ಮಾಡ್ಯಾರ. ಬಿಡುವಿನ ವೇಳೆಯಲ್ಲಿ ಅಕ್ಕನ ವಚನ ಅಧ್ಯಯನ ಮಾಡಕತ್ತೀನಿ’

ಅವಳ ಮಾತು ಕೇಳಿ ಮನಸಿಗೆ ರೆಕ್ಕೆ ಮೂಡಿದ ಭಾವ ಮೂಡಿತು. ಹೌದಲ್ಲವೆ ಸತ್ತವರೊಂದಿಗೆ ಸಾಯಲು ಬರುವುದಿಲ್ಲ. ಇದ್ದವರೊಂದಿಗೆ ಬದುಕುವುದ ಕಲಿಯಬೇಕಷ್ಟೆ. ಅದೇ ಜೀವನ. ಬಿಸ್ಲಾಗ ನಿಂತಕಿಯ ನೆರಳಿನಾಟದಲ್ಲಿ ನರಳಾಟವಿಲ್ಲ ಎನ್ನುವ ಸಮಾಧಾನಕ್ಕಿಂತ ದೊಡ್ಡದು ಮತ್ತೇನಿದೆ?

-ಸಿಕಾ, ಕಲಬುರಗಿ

Leave a Reply

Your email address will not be published. Required fields are marked *

You May Also Like

ಅಪ್ಪಾ ಹೇಳಿದ ಹೊಡಿ ಒಂಭತ್ತಿನ ಕಥಿ ಏನು ಗೊತ್ತಾ…?

ಹಿಗ್ಗಿನಿಂದ ಕುಣಿದಾಡಿದ ಅಪ್ಪನ ಮಾತು ನಂಬಿ ಪಾಪ ಗುಂಡ ಮುಗಿಲು ನೋಡಿಕೊಂಡ ಮಲಗಿದ. ಗುಂಡನ ಅಪ್ಪನ ಹಿಗ್ಗಿಗೆ ಕಾರಣ ಏನು ಗೊತ್ತಾ..? ಹಾಗಾದ್ರೆ ಈ ಕಥೆ ಓದಿ

ಮಕ್ಕಳ ಕಲಿಕಾ ಮೇಳ ಸಂಭ್ರಮ…ವೈವಿಧ್ಯ ಪರಿಕಲ್ಪನೆ ಕೌಶಲ್ಯ ಅನಾವರಣ..!

ಆಲಮಟ್ಟಿ: ಅಲ್ಲಿ ಗಣಿತ, ಭಾಷೆ ಸೇರಿ ನಾನಾ ವಿಷಯಗಳ ಕಠಿಣ ಪರಿಕಲ್ಪನೆಗಳನ್ನು ನಾನಾ ಹೊಸ ಹೊಸ…

ಕಲಾವಿದರಿಗೆ ಆರ್ಥಿಕ ಧನ ಸಹಾಯಕ್ಕಾಗಿ ಅರ್ಜಿ ಆಹ್ವಾನ

ಗದಗ: ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕರೋನಾ ವೈರಸ್‌ನ ಎರಡನೇ ಅಲೆಯ ತೀವ್ರತೆಯನ್ನು ನಿಯಂತ್ರಿಸಲು ರಾಜ್ಯದ ಎಲ್ಲ ರೀತಿಯ ಚಟುವಟಿಕೆಗಳನ್ನು ನಿರ್ಭಂದಿಸಿ ಲಾಕಡೌನ್ ಘೋಷಿಸಲಾಗಿದ್ದು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಲಾವಿದರು ಮತ್ತು ಕಲಾತಂಡಗಳ ಪ್ರತಿ ಫಲಾನುಭವಿಗಳಿಗೆ ತಲಾ 3,000 ರೂ.ಗಳಂತೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಲಾಗಿದೆ.

ಡಾ.ಆನಂದ್ ಪಾಟೀಲ್ ಸಂದರ್ಶನ : ಮಧು ಮೇಹ ರಕ್ತದೊತ್ತಡ, ಹೃದಯ ಕಾಯಿಲೆ, ಎಚ್‌ಐವಿ ಇರುವವರು ಕೊರೊನಾ ಬಗ್ಗೆ ವಹಿಸಬೇಕಾದ ಮುಂಜಾಗೃತೆಗಳೇನು?

ಮೇಹ ರಕ್ತದೊತ್ತಡ, ಹೃದಯ ಕಾಯಿಲೆ, ಎಚ್‌ಐವಿ ಇರುವವರು ಕೊರೊನಾ ಬಗ್ಗೆ ವಹಿಸಬೇಕಾದ ಮುಂಜಾಗೃತೆಗಳು ಹಾಗೂ ಕ್ವಾರಂಟೈನ್ ಅವಧಿ ಮುಗಿದ ಮೇಲಿನ ನಮ್ಮ ಜೀವನ ಶೈಲಿ ಹೇಗಿರಬೇಕು. ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ ತಜ್ಞ ವೈದ್ಯ ಡಾ.ಆನಂದ್ ಪಾಟೀಲ್(ಮೊ.8073475549) ಇವರೊಂದಿಗೆ ಡಾ. ಬಸವರಾಜ್ ಡಿ ತಳವಾರ (ಮೊ.9148874739) ಅವರು ನಡೆಸಿದ ಸಂದರ್ಶನ ಇಲ್ಲಿದೆ…