ಬೆಂಗಳೂರು: ದೇಶ ಕೊರೋನಾ ಸೋಂಕಿನಿಂದ ನಲಗುತ್ತಿದ್ದು, ದೇಶಕ್ಕೆ ಅಗತ್ಯ ನೆರವು ನೀಡುವುದಾಗಿ ಅಮೆರಿಕ ಸರ್ಕಾರ ಪ್ರಕಟಿಸಿದೆ ಎಂದು ಚೆನ್ನೈನಲ್ಲಿರುವ ಅಮೆರಿಕ ಕಾನ್ಸುಲೇಟ್ ಕಚೇರಿಯ ಕನ್ನಡಲ್ಲೂ ಸಂದೇಶ ಪ್ರಕಟಿಸಿದೆ.
ಅಮೆರಿಕದ ಭದ್ರತಾ ಸಲಹೆಗಾರ ಜೇಕ್ ಸಲ್ಲಿವಾನ್, ಭಾರತದಲ್ಲಿ ಕೋವಿಡ್ ಸಾಂಕ್ರಾಮಿಕ ತೀವ್ರವಾಗಿರುವ ಬಗ್ಗೆ ಅಮೆರಿಕ ಕಳಕಳಿ ಹೊಂದಿದೆ. ಸಾಂಕ್ರಾಮಿಕದ ವಿರುದ್ಧ ಹೋರಾಡುವಾಗ ಭಾರತದ ನಮ್ಮ ಸ್ನೇಹಿತರು ಮತ್ತು ಸಹಭಾಗಿಗಳಿಗೆ ಹೆಚ್ಚಿನ ಸಾಮಗ್ರಿಗಳು ಮತ್ತು ಅಗತ್ಯ ಬೆಂಬಲ ನೀಡಲು ಶ್ರಮಿಸುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ. ಅಮೆರಿಕ ಕಾನ್ಸುಲೇಟ್ ಕಚೇರಿಯು ಇದನ್ನು ಕನ್ನಡ, ತಮಿಳು ಹಾಗೂ ಮಲಯಾಳಂನಲ್ಲಿ ಪ್ರಕಟಿಸಿದೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಸಹ ಭಾರತದ ಕೋವಿಡ್ ಸ್ಥಿತಿಯ ಬಗ್ಗೆ ಟ್ವೀಟಿಸಿದ್ದು, ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಭಾರತ ರ‍್ಕಾರದೊಂದಿಗೆ ಕೈಜೋಡಿಸಿ ನಿಕಟ ಬೆಂಬಲ ನೀಡುತ್ತಿದ್ದೇವೆ. ಭಾರತದ ನಾಗರಿಕರು ಮತ್ತು ಆರೋಗ್ಯ ಕ್ಷೇತ್ರದ ಹೋರಾಟಗಾರರಿಗೆ ಹೆಚ್ಚುವರಿ ಬೆಂಬಲವನ್ನು ಕ್ಷಿಪ್ರವಾಗಿ ನಿಯೋಜಿಸುತ್ತೇವೆ’ ಎಂದಿದ್ದಾರೆ.