ಗದಗ: ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ಕೋವಿಡ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಹಾಗೂ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಸೂಚಿಸಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜರುಗಿದ ಜಿಲ್ಲಾಸ್ಪತ್ರೆ, ಜಿಮ್ಸ್ ಅಧಿಕಾರಿಗಳ ಕೋವಿಡ್ ನಿಯಂತ್ರಣ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿಗಳು ಮಾತನಾಡಿದರು.
ಜಿಲ್ಲಾಸ್ಪತ್ರೆ, ಆಯುಷ್ ಆಸ್ಪತ್ರೆ ಹಾಗೂ ಜಿಮ್ಸ್ ಒಳಗೊಂಡಂತೆ ಜಿಲ್ಲಾ ಕೇಂದ್ರದಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಸಾಮರ್ಥ್ಯದ ಬಗ್ಗೆ ವಿವರಣೆ ಪಡೆದ ಜಿಲ್ಲಾಧಿಕಾರಿಗಳು ಸೋಂಕಿತರು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಆಗಮಿಸಿದ ಆಸ್ಪತ್ರೆ ಸಿಬ್ಬಂದಿ ಸೋಂಕಿತರಿಗೆ ಸರಿಯಾದ ಮಾಹಿತಿ ಒದಗಿಸುವುದರೊಂದಿಗೆ ತಕ್ಷಣ ಚಿಕಿತ್ಸೆ ನೀಡಬೇಕು.
ಆಸ್ಪತ್ರೆಗೆ ಬರುವ ಸೋಂಕಿತರು ಹಾಗೂ ಅವರ ಕುಟುಂಬದವರಿಗೆ ಅಗತ್ಯ ಮಾಹಿತಿ ನೀಡುವುದರೊಂದಿಗೆ ಚಿಕಿತ್ಸೆ ಆರಂಭಿಸಬೇಕು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ನಿಯಮಾನುಸಾರ ಉತ್ತಮ ಆಹಾರ ಪೂರೈಕೆ ಮಾಡಬೇಕು. ಜೊತೆಗೆ ಕಾಲಕಾಲಕ್ಕೆ ವೈದ್ಯರು ತಪಾಸಣೆ ನಡೆಸುವ ಮೂಲಕ ಕುಟುಂಬಸ್ಥರಿಗೆ ಸೋಂಕಿತರ ಆರೋಗ್ಯದ ಕುರಿತು ಮಾಹಿತಿ ಒದಗಿಸಬೇಕು.
ಆಸ್ಪತ್ರೆಯನ್ನು ಶುಚಿತ್ವದಿಂದ ಕೂಡಿರುವಂತೆ ನಿಗಾವಹಿಸುವುದರೊಂದಿಗೆ ಮೂಲ ಭೂತ ಸೌಲಭ್ಯಗಳಾದ ಶುದ್ಧ ಕುಡಿಯುವ ನೀರು, ಹಾಸಿಗೆ ಒದಗಿಸಬೇಕು. ಸೋಂಕಿತರಿಗೆ ಅಗತ್ಯಕ್ಕನುಸಾರ ಚಿಕಿತ್ಸೆ ನೀಡಲು ರೆಮಿಡಿಸಿವರ್ ಚುಚ್ಚುಮದ್ದು ಹಾಗೂ ಆಕ್ಸಿಜನ್, ಐ.ಸಿ.ಯು ವ್ಯವಸ್ಥಿತವಾಗಿಟ್ಟುಕೊಂಡು ಚಿಕಿತ್ಸೆ ನೀಡಬೇಕು. ಗುಣಮುಖರಾದವರನ್ನು ನಿಯಮಾನುಸಾರ ಡಿಸ್ ಚಾರ್ಜಮಾಡಿ ಮನೆಯಲ್ಲಿ ಔಷಧೋಪಚಾರ ಪಡೆಯಲು ಸರಿಯಾಗಿ ಮಾಹಿತಿ ನೀಡಬೇಕು. ಸೋಂಕಿನಿಂದ ಮೃತಪಟ್ಟಲ್ಲಿ ಎಸ್.ಓ.ಪಿ ಪ್ರಕಾರ ಅಂತ್ಯಕ್ರಿಯೆ ಜರುಗಿಸಬೇಕು.
ಜಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ವಾರ್ ರೂಂ ತೆರೆಯುವ ಮೂಲಕ ಬೆಡ್ ಗಳ ಲಭ್ಯತೆಯನ್ನು ಒದಗಿಸಬೇಕು. ಈ ಕಾರ್ಯವು ನಿರಂತರವಾಗಿ ನಡೆಯುವಂತ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಸೂಚಿಸಿದರು.
ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ.ಪಿ.ಎಸ್. ಭೂಸರೆಡ್ಡಿ ಮಾತನಾಡಿ ಸದ್ಯ ಆಯುಷ್ ಆಸ್ಪತ್ರೆಯಲ್ಲಿ 100 ಬೆಡ್, ಜಿಲ್ಲಾಸ್ಪತ್ರೆಯಲ್ಲಿ 100 ಬೆಡ್ ಲಭ್ಯವಿದೆ. ಅಗತ್ಯವಿದ್ದಲ್ಲಿ ಜಿಮ್ಸ್ ಪಕ್ಕದಲ್ಲಿರುವ ಹಿಂದುಳಿದ ವರ್ಗದ ವಸತಿ ನಿಲಯವನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬಳಸಿಕೊಳ್ಳಲಾಗುವುದು.
ಸಹಾಯಕ ಔಷಧಿ ನಿಯಂತ್ರಕ ಸಂಗಣ್ಣ ಶಿಳ್ಳೆ ಮಾತನಾಡಿ ಜಿಲ್ಲಾಸ್ಪತ್ರೆಯಲ್ಲಿ 53 ಐಸಿಯು ಮತ್ತು ವೆಂಟಿಲೇಟರ್ ಬೆಡ್‌ಗಳ ಸೌಲಭ್ಯ ಇದೆ. 13 ಕೆ .ಎಲ್. ಆಕ್ಸಿಜನ್ ಟ್ಯಾಂಕ್ ಸಾಮರ್ಥ್ಯ ಹೊಂದಿದ್ದು ಸೋಂಕಿತರ ಚಿಕಿತ್ಸೆಗೆ ಬಳಕೆ ಮಾಡಲಾಗುವುದು ಎಂದರು. ಜಿಲ್ಲೆಯಲ್ಲಿ ಸೋಂಕಿತರ ಚಿಕಿತ್ಸೆಗೆ ರೆಮಿಡಿಸಿವರ್ ಚುಚ್ಚುಮದ್ದಿನ ಕೊರತೆಯಿಲ್ಲ.
ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಎಂ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಲ್ಲೇದ ಮುಂತಾದವರು ಉಪಸ್ಥಿತರಿದ್ದರು.