ಮಾನವೀಯ ಮೌಲ್ಯಗಳೇ ಕುಸಿಯುತ್ತಿವೆ
ಗಜೇಂದ್ರಗಡ: ಜಗತ್ತು ಬೆಳೆದಂತೆ ಸಂಬಂಧಗಳು ವ್ಯಾಪಾರೀಕರಣವಾಗಿ, ಮಾನವೀಯ ಮೌಲ್ಯಗಳೇ ಕುಸಿಯುತ್ತಿವೆ. ಹೀಗಾಗಿ ಸಮಾಜ ವಿನಾಶದೆಡೆಗೆ ಸಾಗುತ್ತಿದೆ ಎಂದು ಪ್ರಗತಿಪರ ಚಿಂತಕ ಹೆಚ್.ಕೆ.ವಿವೇಕಾನಂದ ಹೇಳಿದರು.
ಪಟ್ಟಣದ ಬಸವೇಶ್ವರ ನಗರದ ಸಾಲಿಮಠ ಅವರ ನಿವಾಸ ಆವರಣದಲ್ಲಿ ನಡೆದ ಮಾನವೀಯ ಮೌಲ್ಯಗಳ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಆಧುನಿಕತೆ ವಿಪರೀತ ಬೆಳೆದು ನಿಂತಿದೆ. ವೈದ್ಯಕೀಯ, ವಿಜ್ಞಾನ ಮತ್ತು ತಂತ್ರಜ್ಞಾನ ಲೋಕ ಹೆಚ್ಚು ಬೆಳೆದಿದೆ. ಅಷ್ಟೇ ಪ್ರಮಾಣದಲ್ಲಿ ಆಸ್ಪತ್ರೆಗಳು, ಔಷಧಿಗಳ ಅಂಗಡಿಗಳ ಸಂಖ್ಯೆ ಹೆಚ್ಚಿದೆ. ಅಂದರೆ ಜನರ ಆರೋಗ್ಯದ ಪ್ರಮಾಣವು ಹೆಚ್ಚಾಗುವುದರ ಬದಲು ಕುಸಿದಿದೆ. ಇಂದು ನಾವು ಸೇವಿಸುವ ಆಹಾರದ ಕಲಬೆರಕೆ, ಗಾಳಿಯ ಮಾಲಿನ್ಯತೆ ಮುಂತಾದವುಗಳಿಂದ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದೇವೆ ಎಂದರು.
ಜಗತ್ತಿನಲ್ಲಿ ಹಣಗಳಿಕೆಯೊಂದೆ ಮಾರ್ಗವೆಂದು ಜನರು ನಂಬಿದ್ದಾರೆ. ಆದರೆ ಹಣದಿಂದ ಏನೂ ಗಳಿಸಲು ಸಾಧ್ಯವಿಲ್ಲ. ಮನುಷ್ಯತ್ವ ಮತ್ತು ಮಾನವೀಯ ಮೌಲ್ಯಗಳ ಅಡಿಯಲ್ಲಿ ನಾವು ಬದುಕು ಕಟ್ಟಿಕೊಂಡರೆ ಮಾತ್ರ ಆರೋಗ್ಯಯುತ ಸಮಾಜ ಕಟ್ಟಲು ಸಾಧ್ಯ. ದೇಶದಲ್ಲಿ ಗ್ರಂಥಾಲಯಗಳು ಹೆಚ್ಚು ಸ್ಥಾಪನೆಯಾಗಬೇಕು, ಅದರ ಬದಲಿಗೆ ಮದ್ಯ ಮಾರಾಟದ ಅಂಗಡಿಗಳು ಹೆಚ್ಚಾಗುತ್ತಿವೆ. ಆದಾಯದ ನೆಪವಾಗಿಟ್ಟುಕೊಂಡು ಜನರ ಆರೋಗ್ಯವನ್ನು ಕೆಡಿಸುತ್ತಿದ್ದೇವೆ ಮಾನವೀಯ ಕಳಕಳಿ ಮಾಯವಾಗಿದೆ ಎಂದುರು.
ಚಿಂತಕ ರವೀಂದ್ರ ಹೊನವಾಡ ಮಾತನಾಡಿ, ವಿವೇಕಾನಂದವರು ಕಳೆದ ವರ್ಷದ ನವೆಂಬರ್ ತಿಂಗಳಿಂದ ಬೀದರನಿಂದ ಆರಂಭಿಸಿದ ಪಾದಯಾತ್ರೆಯು ಕಳೆದ ಐದು ತಿಂಗಳಲ್ಲಿ ರಾಜ್ಯಾದ್ಯಾಂತ ಸಂಚರಿಸಿ ಸುಮಾರು ಸಾವಿರಾರು ಕೀ.ಮೀ ನಡೆದುಕೊಂಡು ಬಂದಿದ್ದಾರೆ. ಅವರ ಪಾದಯಾತ್ರೆಯುದ್ದಕ್ಕೂ ಮಾನವೀಯ ಮೌಲ್ಯಗಳನ್ನು ಬೋಧಿಸುತ್ತಾ ಬಂದಿದ್ದಾರೆ ಎಂದರು.
ಎಂ.ಎಸ್.ಹಡಪದ, ಬಾಲು ರಾಠೋಡ, ಫಯಾಜ್ ತೋಟದ, ಕೆ.ಎಸ್.ಸಾಲಿಮಠ, ಮಂಜು ಹೂಗಾರ, ಎಮ್.ಎಸ್.ಮಕಾನದಾರ, ಬಸವರಾಜ ಕೊಟಗಿ, ಎಸ್.ಐ.ಪತ್ತಾರ ಮುಂತಾದವರಿದ್ದರು.