ಕೋಮುವಾದ ಈಗ ಇದೊಂದು ವಿಚಿತ್ರ ಶಬ್ದ. ಸೌಹಾರ್ದತೆಯ ಹುಡುಕಾಟ ಅನಿವಾರ್ಯವಾದ ಕಾಲ.ಇಂತಹ ಪ್ರಕ್ಷುಬ್ಧ ಸಮಯದಲ್ಲಿ ಪೂಜ್ಯ ಜಗದ್ಗುರು ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಮತ್ತೆ ಮತ್ತೆ ನೆನಪಾಗುತ್ತಾರೆ.

ಅವರು ಕೇವಲ ನೆನಪಾಗಿ ಇರುವುದೇ ಸೂಕ್ತ ಎನಿಸುತ್ತದೆ, ಕಾರಣ ಅವರ ನಿಷ್ಟುರ ಸ್ವಭಾವ ಇಂದು ಅನೇಕರಿಗೆ ಇರುಸು ಮುರುಸು ಉಂಟು ಮಾಡಬಹುದೇನೋ ಎಂಬ ಗುಮಾನಿ. ಸತ್ಯ ಪ್ರತಿಪಾದನೆ, ನಿಷ್ಟುರ ಮಾತುಗಳು, ಪ್ರತಿಭಾ ಶೋಧನೆ, ಹುರಿದುಂಬಿಸುವ ಜೀವಚೈತನ್ಯ ಸದಾ ಹಚ್ಚ ಹಸಿರು. ತೋಂಟದಾರ್ಯ ಮಠದ ಶಿವಾನುಭವಗಳ ಮೂಲಕ ಸಾವಿರಾರು ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸಿ ದನಿಯಾದರು. ಲಿಂಗಾಯತ ಮಠಗಳು ಮಡಿವಂತಿಕೆ ಹೊಂದಿದ್ದ ಕಾಲದಲ್ಲಿ ಪೀಠವೇರಿದ ಶ್ರೀಗಳು ಲಿಂಗಾಯತ ಮಠಗಳ ಚಿತ್ರಣ ಬದಲಿಸಿದರು. ಬಸವಾದಿ ಶರಣರ ಜಾತ್ಯಾತೀತ ಮೌಲ್ಯಗಳು ಕೇವಲ ಭಾಷಣಕ್ಕೆ ಸೀಮಿತವಾದ ಕಾಲದಲ್ಲಿ ಲಿಂಗಾಯತ ಮಠಗಳ ನಿಜಾಚರಣೆಯನ್ನು ಕಾರ್ಯಗತಗೊಳಿಸಿದರು.

ಅನ್ಯ ಜಾತಿಯವರಿಗೆ ಮಠಗಳಲ್ಲಿ ಪ್ರವೇಶ ಅಷ್ಟೊಂದು ಮುಕ್ತವಾಗಿ ಇರಲಿಲ್ಲ, ಕೇವಲ ಬಾಯಿ ಮಾತಿನ ಸಿದ್ಧಾಂತವಾಗಿತ್ತು. ಆದರೆ, ತೋಂಟದಾರ್ಯ ಶ್ರೀಗಳು ಮುಕ್ತ ಮನಸಿನಿಂದ ಸಮಾಜದ ಅಲಕ್ಷಿತ ಸಮುದಾಯದ ಜನರಿಗೆ ತಮ್ಮ ಮಠದಲ್ಲಿ ಮುಕ್ತ ಅವಕಾಶ ಕಲ್ಪಿಸುವುದಲ್ಲದೆ, ಜಾತೀಯತೆಯ ಅಪಾಯದ ಬಗ್ಗೆ ಲಿಂಗಾಯತರಿಗೆ ಅರಿವು ಮೂಡಿಸಿದರು. ಲಿಂಗಾಯತ ಧರ್ಮದ ಮೂಲ ಆಶಯಗಳನ್ನು ಲಿಂಗಾಯತ ಮಠಗಳು ಆಚರಣೆಗೆ ತರುವಲ್ಲಿ ಏನೋ ಸಂಕೋಚವಿತ್ತು.

ಮಡಿವAತ ಮನಸಿನ ಮಠಾಧೀಶರು ಹಿಂದುಳಿದ, ದೀನ ದಲಿತರಿಗೆ ಮುಕ್ತ ಪ್ರವೇಶ ಕಲ್ಪಿಸುವ ಧೈರ್ಯ ಮಾಡಿರಲಿಲ್ಲ. ತೋಂಟದಾರ್ಯ ಪೂಜ್ಯರು ತುಂಬಾ ಮುಕ್ತವಾಗಿ ತಮ್ಮ ಶಿವಾನುಭವದ ಆಶೀರ್ವಚನಗಳ ಮೂಲಕ ಜನರನ್ನು ಜಾಗೃತಗೊಳಿಸಿದರು. ತೋಂಟದಾರ್ಯ ಮಠದಲ್ಲಿ ದಲಿತರಿಗೆ ಮುಕ್ತ ಅವಕಾಶ ದೊರಕುವುದರ ಜೊತೆಗೆ ಅಲ್ಪ ಸಂಖ್ಯಾತರಿಗೂ ಅಷ್ಟೇ ಮಹತ್ವ ನೀಡಲಾಯಿತು. ಒಂದು ಹಂತದಲ್ಲಿ ಜಾತ್ರಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸುವಾಗ ಶ್ರೀಗಳ ಗಟ್ಟಿ ನಿಲುವು ಗೋಚರವಾಯಿತು. ಶಿವಾನುಭವ ವೇದಿಕೆ ಆಧುನಿಕ ಅನುಭವ ಮಂಟಪದ ಸ್ವರೂಪ ಪಡೆಯಿತು.

ಸಮಾಜ ಮುಖಿಯಾಗಿರುವ ಪ್ರತಿಯೊಂದು ವಿಷಯಗಳ ಮೇಲೆ ಉಪನ್ಯಾಸ, ಸಂವಾದಗಳು ಜರುಗುತ್ತಿದ್ದವು, ಕಾರ್ಯಕ್ರಮದ ಕೊನೆಯ ಶ್ರೀಗಳ ಆಶೀರ್ವಚನದ ನುಡಿಗಳು ಅನುಭವ ಮಂಟಪದ ಅಲ್ಲಮನ ನಿರ್ಣಯದಂತೆ ನ್ಯಾಯ ಸಮ್ಮತವಾಗಿರುತ್ತಿದ್ದವು. ರಾಜ್ಯ, ದೇಶದಲ್ಲಿ ನಡೆಯುತ್ತಿದ್ದ ವರ್ತಮಾನ ವಿಷಯಗಳ ಮೇಲೆ ತಮ್ಮ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ವಿವಾದಾತ್ಮಕ ಹೇಳಿಕೆ ನೀಡುವ ಯಾವುದೇ ಉದ್ದೇಶ ಅವರದಾಗಿರುತ್ತಿದ್ದಿಲ್ಲ. ಆದರೆ ಅವರು ಹೇಳುವ ಸತ್ಯದಲ್ಲಿ ಕೆಲವರು ಅನಾವಶ್ಯಕ ವಿವಾದ ಹುಟ್ಟಿಸುತ್ತಿದ್ದರು.

ಡಾ.ಎಂ.ಎA. ಕಲಬುರ್ಗಿಯವರು ಪೂಜ್ಯರ ಸಾಹಿತ್ಯಿಕ ಮತ್ತು ಧಾರ್ಮಿಕ ಚಟುವಟಿಗಳಿಗೆ ಪ್ರೇರಕ ಶಕ್ತಿಯಾಗಿದ್ದರು. ಅವರು ತೆಗೆದುಕೊಳ್ಳುವ ಸಂಶೋಧಾತ್ಮಕ ನಿರ್ಣಯಗಳನ್ನು ಪೂಜ್ಯರು ಪಾಲಿಸುತ್ತಿದ್ದರು.

ಲಿಂಗಾಯತ ಅಧ್ಯಯನ ಸಂಸ್ಥೆಯ ಪುಸ್ತಕ ಪ್ರಕಟಣೆ ಪೂಜ್ಯರ ಬಹುದೊಡ್ಡ ಕಾಣಿಕೆ. ಪುಣ್ಯ ಪುರುಷರ ಮಾಲಿಕೆಯ ಪುಟ್ಟ ಪುಸ್ತಿಕೆಗಳು ಲಕ್ಷಾಂತರ ಯುವಕರಿಗೆ ಪ್ರೇರಣೆ ನೀಡಿದ್ದು ಸದಾ ಸ್ಮರಣೀಯ. ಓದು, ಅಧ್ಯಯನ ಮತ್ತು ಪ್ರಕಟಣೆ ಅವರ ನಿತ್ಯ ಕಾಯಕ. ತಾವೇ ಖುದ್ದಾಗಿ ಪುಸ್ತಕಗಳ ಪ್ರೂಫ್ ನೋಡಿ ಅಂತಿಮಗೊಳಿಸುತ್ತಿದ್ದರು. ಅವರು ದೇಹ ಬಿಡುವ ಹಿಂದಿನ ರಾತ್ರಿ ಪ್ರೂಫ್ ನೋಡಿ ಕೆಲವು ಟಿಪ್ಪಣಿಗಳನ್ನು ಕಾರ್ಯದರ್ಶಿಯವರಿಗೆ ಹಾಕಿ ಮಲಗಿದ್ದಾರೆ. ಸೋಗಲಾಡಿ ಜಾತ್ಯಾತೀತ ಸ್ವಭಾವ ಅವರದಾಗಿರಲಿಲ್ಲ, ಅದು ಅಪ್ಪಟ ಮಾತೃ ಪ್ರೇಮದ ಕಕ್ಕುಲತೆ.

ಪ್ರತಿಯೊಂದು ಜಾತಿ, ಧರ್ಮದ ಗುಣ ವಿಶೇಷಗಳನ್ನು ಧೈರ್ಯವಾಗಿ ಪರಾಮರ್ಶೆ ಮಾಡುತ್ತಿದ್ದರು.

ಜಾತಿ, ಧರ್ಮಗಳ ಕುರಿತು ಮುಕ್ತವಾಗಿ ಮಾತನಾಡುವ ಎದೆಗಾರಿಕೆ ಕೇವಲ ಅವರಿಗೆ ಮಾತ್ರ ಸಾಧ್ಯವಿತ್ತು.

ಒಳಗೊಂದು, ಬಹೊರಗೊಂದು ಎಂಬ ಗೊಂದಲ ಇರುತ್ತಿರಲಿಲ್ಲ. ಮುಚ್ಚು ಮರೆಯಿಲ್ಲದ ಗುಣ ಸ್ವಭಾವ. ಹೊಗಳಿಕೆ, ತೆಗಳಿಕೆ ಏನಿದ್ದರೂ ಮುಖದೆದುರು. ಅವರ ನೇರ ನಿಷ್ಟುರ ಮಾತುಗಳನ್ನು ಸಮಾಜ ಸಹಿಸಿಕೊಳ್ಳುವ ತಾಕತ್ತನ್ನು ತಂದುಕೊಟ್ಟರು. ಮಠಾಧೀಶರು ಸಮಾಜ ಸುಧಾರಣೆಗಾಗಿ ನಿಷ್ಟುರ ಮಾತುಗಳನ್ನು ಹೇಳುವುದು ಅನಿವಾರ್ಯ ಎಂಬುದನ್ನು ಪದೇ ಪದೇ ನಿರೂಪಿಸಿದರು.

ಬಸವಾದಿ ಶರಣರ ವಿಚಾರಧಾರೆಗಳಲ್ಲಿ ಅಡಗಿದ್ದ ಎಡಪಂಥೀಯ ಮಾರ್ಗದ ಮೇಲೆ ಬೆಳಕು ಚೆಲ್ಲಿದರು.

ಅವರ ಸದರು, ಪೂಜಾ ಖೋಲಿ, ವೇದಿಕೆಯ ಮೇಲೆ ಮತ್ತು ಅವರ ಪಕ್ಕದಲ್ಲಿ ಸಮಾಜದ ಅತ್ಯಂತ ಕಟ್ಟ ಕಡೆಯ ಸಮುದಾಯವರು ಪ್ರವೇಶ ಪಡೆಯುವ ಅವಕಾಶ ಕಲ್ಪಿಸಿ ಕೊಟ್ಟರು. ಅವರ ಮಾತೃ ಪ್ರೇಮದ ಮಾತುಗಳನ್ನು ಅನೇಕರು ಈಗಲೂ ಸ್ಮರಿಸುತ್ತಾರೆ. ಆಶು ಕವಿ ರಾಮಣ್ಣ ಬ್ಯಾಟಿ ಅವರ ಆರೋಗ್ಯ ಹದಗೆಟ್ಟಾಗ ಕೇಜಿಗಟ್ಟಲೇ ಖರ್ಜೂರ ಮತ್ತು ಡಬ್ಬಿ ತುಪ್ಪ ಕಳಿಸಿದ್ದರಂತೆ. ಕಡು ಬಡವ ರಾಮಣ್ಣ ಅವರಿಗೆ ಕಟಗ ರೊಟ್ಟಿ ಕನಸಿನ ಮಾತಾದಾಗ ರಾಮಣ್ಣ ತಾವು ತಿಂದ ಶ್ರೀಮಂತ ಆಹಾರ ಖರ್ಜೂರ ಮತ್ತು ತುಪ್ಪವನ್ನು ಮರೆಯಲಾರರು. ಇದು ಕೇವಲ ಒಂದು ಉದಾಹರಣೆಗೆ ಮಾತ್ರ!

ಇಂತಹ ಸಾವಿರಾರು ಉದಾಹರಣೆಗಳು ಅನೇಕರ ಬದುಕಿಗಿವೆ. ನಾನು ಬಾಲ್ಯದಿಂದಲೇ ಅವರ ಭಾಷಣಗಳಿಂದ ಪ್ರೇರಿತನಾಗಿ ಜಾತ್ಯಾತೀತ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪ್ರೇರಕರಾದರು. ಓದುವ, ಬರೆಯುವ ಮತ್ತು ನೇರವಾಗಿ ಬದುಕುವ ಆತ್ಮವಿಶ್ವಾಸ ಬೆಳೆಸಿದರು. ಇತ್ತೀಚೆಗೆ ಔರಾದ ಸಾಹಿತ್ಯ ಸಮ್ಮೇಳನದಲ್ಲಿನ ನನ್ನ ಮಾತುಗಳನ್ನು ಕೇಳಿದ ಭಾಲ್ಕಿ ಮಠದ ಡಾ.ಬಸವಲಿಂಗ ಪಟ್ಟದೇವರು ಪೂಜ್ಯರ ದಟ್ಟ ಪ್ರಭಾವವನ್ನು ಸ್ಮರಿಸಿಕೊಂಡಾಗ ಕೆಲ ಕ್ಷಣ ಭಾವುಕನಾದೆ. ಸಾವಿರಾರು ಸಜ್ಜನರ ಬರಹ, ಮಾತು ಮತ್ತು ವರ್ತನೆಯಲ್ಲಿ ಪೂಜ್ಯರ ಜಾತ್ಯಾತೀತ ಕೋಮು ಸೌಹಾರ್ದ ಭಾವ ನೆಲೆಗೊಂಡಿದೆ. ಪೂಜ್ಯರು ಕೇವಲ ದೈಹಿಕವಾಗಿ ನಮ್ಮ ಜೊತೆಗಿಲ್ಲವಾದರೂ ಅವರ ಜಂಗಮ ಮೌಲ್ಯಗಳು ಜೀವಸೆಲೆಯಾಗಿ ಸ್ಥಾಪಿತಗೊಂಡಿವೆ.

ಪ್ರೊ.ಸಿದ್ದು ಯಾಪಲಪರವಿ, ಕಾರಟಗಿ
Leave a Reply

Your email address will not be published. Required fields are marked *

You May Also Like

ಕೊರೊನಾ ಎಫೆಕ್ಟ್ – ಪೊಲೀಸರ ಸಂಖ್ಯೆಯಲ್ಲಿ ಕ್ಷೀಣ!

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಾರಿಯರ್ಸ್ ನ್ನು ಇದು ಬಿಡುತ್ತಿಲ್ಲ. ಸದ್ಯ…

ಗದಗನಲ್ಲಿಂದು ಇಬ್ಬರಿಗೆ ಪಾಸಿಟಿವ್

ಗದಗ: ಜಿಲ್ಲೆಯಲ್ಲಿ ಇಂದು ಮತ್ತೆ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ…

ಕೊರೊನಾ ಹಿನ್ನೆಲೆ : ಬೆಳಗಾವಿ ಜಿಲ್ಲೆಯಲ್ಲಿ ರೇಣುಕಾ ಯಲ್ಲಮ್ಮ ಸೇರಿ ಹಲವು ದೇವಸ್ಥಾನಗಳ ದರ್ಶನ ನಿಷೇಧ

ಕೋವಿಡ್-19 (ಕರೋನಾ)ರೂಪಾಂತರಿ ವೈರಾಣುವಿನ ಹರಡುವಿಕೆಯು ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಇನ್ನಿತರೆ ರಾಜ್ಯಗಳಲ್ಲಿ ತೀವ್ರತರವಾಗಿ ಹರಡುತ್ತಿರುವುದರಿಂದೆ.

ಕೆಲೂರ : ಸಚಿವ ಶ್ರೀರಾಮುಲು ಅವರಿಂದ ಮೃತರ ಕುಟುಂಬಕ್ಕೆ ವೈಯಕ್ತಿಕ 2ಲಕ್ಷ ಪರಿಹಾರ

ಉತ್ತರಪ್ರಭ ಗದಗ: ಮುಂಡರಗಿ ತಾಲೂಕ ಕೆಲೂರು ಗ್ರಾಮದ ನಿರ್ಮಲಾ ಪಾಟೀಲ ವಾರದ ಹಿಂದೆ ಅರಣ್ಯಾಧಿಕಾರಿಗಳ ಕಿರುಕುಳದಿಂದ…