ಚಾಮರಾಜನಗರ – ತಾಲೂಕಿನ ಜ್ಯೋತಿಗೌಡನಪುರ ಗ್ರಾಪಂನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳು ಕಾಂಗ್ರೆಸ್ ಬೆಂಬಲಿಗರಿಗೆ ಲಾಟರಿ ಮೂಲಕ ಒಲಿದು ಬಂದಿದೆ.
ಹೀಗಾಗಿ ಗ್ರಾಪಂನ ಅಧ್ಯಕ್ಷರಾಗಿ ಜಯಮ್ಮ ಹಾಗೂ ಉಪಾಧ್ಯಕ್ಷೆಯಾಗಿ ಚಂದ್ರಕಲಾ ಆಯ್ಕೆಯಾಗಿದ್ದಾರೆ. ಈ ಹಿಂದೆಯೂ ನಂಜನಗೂಡಿನಲ್ಲಿ ಕೂಡ ಲಾಟರಿ ಮೂಲಕ ಕಾಂಗ್ರೆಸ್ ಬೆಂಬಲಿತರಿಗೆ ಅಧಿಕಾರದ ಚುಕ್ಕಾಣಿ ಸಿಕ್ಕಿತ್ತು. ಬಿಜೆಪಿ ಬೆಂಬಲಿತ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೇ ತಮ್ಮ ಮತವನ್ನು ಖೊಟ್ಟಿ ಮಾಡಿಕೊಳ್ಳುವುದರ ಮೂಲಕ ಅಧಿಕಾರ ಕಳೆದುಕೊಂಡಿದ್ದರು.
ಆದರೆ, ಜ್ಯೋತಿಗೌಡನಪುರ ಗ್ರಾಪಂನಲ್ಲಿ 20 ಜನ ಸದಸ್ಯರಿದ್ದಾರೆ. ಆದರೆ, ಇಲ್ಲಿ ಕಾಂಗ್ರೆಸ್ ಬೆಂಬಲಿತ ಹಾಗೂ ಬಿಜೆಪಿ ಬೆಂಬಲಿತ ತಲಾ 10 ಜನ ಸದಸ್ಯರು ಆಯ್ಕೆಯಾಗಿದ್ದಾರೆ. ಹೀಗಾಗಿ ಸಮಾನ ಮತಗಳು ಬಿದ್ದಿವೆ. ಹೀಗಾಗಿ ಲಾಟರಿ ಹಾಕುವುದು ಅನಿವಾರ್ಯವಾಯಿತು. ಲಾಟರಿಯಲ್ಲಿ ಕಾಂಗ್ರೆಸ್ ಬೆಂಬಲಿತರಿಗೆ ಜಯ ಸಿಕ್ಕಿದೆ. ಆನಂತರ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಗ್ರಾಮದ ತುಂಬೆಲ್ಲ ಮೆರವಣಿಗೆ ಮಾಡಲಾಯಿತು.