ಗದಗ: ಸಾಮಾನ್ಯವಾಗಿ ಆಸ್ಪತ್ರೆಗೆ ಬರುವವರು ಆಸ್ಪತ್ರೆಯನ್ನೆ ಸಂಜೀವಿನಿ ಎಂದು ನಂಬಿರುತ್ತಾರೆ. ಆದರೆ, ಗದಗ ನಗರದಲ್ಲಿರುವ ಹೆರಿಗೆ ಆಸ್ಪತ್ರೆ ಇದಕ್ಕೆ ತದ್ವಿರುದ್ಧ ಎಂದು ಜನ ಮಾತಾಡಿಕೊಳ್ಳುವಂತಾಗಿದೆ. ಇನ್ನು ರೋಗಿಗಳು ಹಾಗು ರೋಗಿಗಳ ಸಂಬಂಧಿಕರು ಆಸ್ಪತ್ರೆಯಲ್ಲಿ ದಿನಕಳೆಯುವುದೆಂದರೆ ಹರಸಾಹಸವೇ ಸರಿ.
ಇದು ಸರ್ಕಾರಿ ಆಸ್ಪತ್ರೆಯಾಗಿರುವುದರಿಂದ ಬಡ ರೋಗಿಗಳ ಪಾಲಿಗಂತೂ ಇದೆ ಆಧಾರ. ಆದರೆ, ಬಡರೋಗಿಗಳ ಬವಣೆ ನೀಗಿಸಬೇಕಿದ್ದ ಆಸ್ಪತ್ರೆಯೇ ಸ್ವಚ್ಛ ಪರಿಸರ ಹೊಂದದೆ ಇರುವುದು ದುರಂತವೇ ಸರಿ. ಗದಗ ನಗರದ ಕೆ.ಸಿ. ರಾಣಿ ರಸ್ತೆಯಲ್ಲಿರುವ ಹೆಸರಿಗೆ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಹಾಗು ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಇನ್ನು ಬಾಣಂತಿಯರು ಹಾಗು ಮಕ್ಕಳೆಂದರೆ ಹೇಳಿಕೇಳಿ ಸೂಕ್ಷ್ಮ ಆರೋಗ್ಯ. ಆದರೆ, ಆಸ್ಪತ್ರೆಯ ವಾತಾವರಣ ನೋಡಿದರೆ ಸಂಬಂಧ ಪಟ್ಟ ಇಲಾಖೆ ಹಾಗೂ ಅಧಿಕಾರಿಗಳಿಗೆ ಯಾವುದು ಪರಿವೇ ಇಲ್ಲದಂತೆ ಕಾಣುತ್ತಿದೆ. ಕಣ್ಣೆದುರಿಗೆ ಗಬ್ಬು ನಾರುತ್ತಿದ್ದರೂ, ಕಣ್ತೆರೆದು ನೋಡುವ ಗೋಜಿಗೆ ಹೋಗುತ್ತಿಲ್ಲ ಎನ್ನುವ ಅಸಮಾಧಾನ ರೋಗಿಗಳದ್ದು.

ಸರ್ಕಾರ ನಮ್ಮಂಥ ಬಡಬಗ್ಗರಿಗೆ ಅನುಕೂಲ ಆಗ್ಲಿ ಅಂಥ ಕೋಟಿಗಟ್ಟಲೇ ರೊಕ್ಕಾ ಖರ್ಚು ಮಾಡಿ ದವಾಖಾನಿ. ಕಟ್ಟಿಸೈತಿ. ಆದ್ರ ಇಲ್ಲಿ ವಾತಾವಣ ನೋಡಿದ್ರ ವಾಕರಿಕೆ ಬಂದಂಗಾಕ್ಕೈತಿ. ಐಸಿಯು ಘಟಕದ್ ಸುತ್ತಮುತ್ತ ಗಬ್ಬೆದ್ದು ನಾರಾಕತ್ತೈತಿ. ರೋಗದಿಂದ ಆರಾಮಾದ್ರು ಸಾಕು ಅಂತ ದವಾಖಾನಿಗೆ ಬಂದ್ರ, ಈ ವಾತಾವರಣದಿಂದ ತೊಂದರಿ ಇನ್ನು ಹೆಚ್ಚಾಗುವಂಗೈತಿ.
– ಉಷಾದೇವಿ, ರೋಗಿ ಸಂಬಂಧಿ
ಸರ್ಕಾರ ಕೋಟ್ಯಾಂತರ ಹಣ ಖರ್ಚು ಮಾಡಿ ಆಸ್ಪತ್ರೆ ನಿರ್ಮಿಸಿದೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿದೆ. ಆದರೆ, ಇಷ್ಟೆಲ್ಲ ವ್ಯವಸ್ಥೆ ಇದ್ದಾಗಲೂ ಸ್ವಚ್ಛತೆ ಮಾತ್ರ ಮರೀಚಿಕೆಯಾಗಿದೆ. ಇಲ್ಲಿನ ಮಕ್ಕಳ ವಿಭಾಗದ ಐಸಿಯು ಘಟಕದ ಎದುರಿಗೆ ಗಬ್ಬ ನಾರುತ್ತಿದೆ. ರೋಗಿಗಳು ಅಲ್ಲಿಯೇ ಬಟ್ಟೆ ಹಾಗು ಪಾತ್ರೆ ತೊಳೆಯುವುದು ಮಕ್ಕಳು, ಮಲಮೂತ್ರ ವಿಸರ್ಜನೆಯೂ ಅಲ್ಲಿಯೇ ಮಾಡುವುದರಿಂದ ಆಸ್ಪತ್ರೆಯಲ್ಲಿ ಮಕ್ಕಳ ಐಸಿಯು ಘಟಕದ ಬಳಿ ಗಬ್ಬೆದ್ದು ನಾರುತ್ತಿದೆ. ಇನ್ನು ತೊಳೆದ ಬಟ್ಟೆ ಅಲ್ಲಿಯೇ ಒಣ ಹಾಕಲಾಗುತ್ತದೆ. ಈ ಕಾರಣದಿಂದ ನಿಂತ ನೀರು ಸೊಳ್ಳೆಗಳ ಆವಾಸ ಸ್ಥಾನದಂತಾಗಿದೆ.
ಈಗಾಗಲೇ ಗದಗ ಜಿಮ್ಸ್ ವೈದ್ಯರು ಕೇವಲ ಗದಗ ಜಿಲ್ಲೆಯಲ್ಲಷ್ಟೆ ಅಲ್ಲದೇ ಬೇರೆ ಜಿಲ್ಲೆಯಲ್ಲಿಯೂ ಮನೆ ಮಾತಾಗಿದ್ದಾರೆ. ಒಳ್ಳೆಯ ಅನುಭವಿ ಹಾಗು ಕಾಳಜಿಯುಳ್ಳ ವೈದ್ಯರ ತಂಡ ಗದಗ ಜಿಮ್ಸ್ ನಲ್ಲಿದೆ ಎಂದು ಜನ ಮಾತಾಡಿಕೊಳ್ಳುತ್ತಾರೆ. ಆದರೆ ಅಂಥ ಅನುಭವಿ ವೈದ್ಯರಿಂದ ಇಲಾಖೆಗೆ ಇನ್ನಷ್ಟು ಘನತೆ ಹಾಗು ಗೌರವ ಹೆಚ್ಚಬೇಕಾದರೆ ಅವರ ಅನುಭವ ಹಾಗು ಪರಿಶ್ರಮಕ್ಕೆ ತಕ್ಕಂತ ಪೂರಕ ವಾತಾವರಣ ನಿರ್ಮಿಸುವುದು ಕೂಡ ಸಂಬಂಧ ಪಟ್ಟವರ ಆದ್ಯ ಕರ್ತವ್ಯವಾಗಿದೆ.
ರೋಗಿಗಳಿಗೆ ಹಾಗು ಸಂಬಂಧಿಕರಿಗೆ ಬಟ್ಟೆ ಹಾಗು ಪಾತ್ರೆ ತೊಳೆಯುವ ಬಗ್ಗೆ ಸರಿಯಾದ ವ್ಯವಸ್ಥೆ ಮಾಡುವ ಮೂಲಕ ಆಸ್ಪತ್ರೆಯ ಒಳಗಿನ ಪರಿಸರವನ್ನು ಸ್ವಚ್ಛಂಧವಾಗಿಡಲು ಸಂಬಂಧಪಟ್ಟವರು ಪ್ರಯತ್ನಿಸಬೇಕಿದೆ. ಐಸಿಯು ಘಟಕದ ಬಳಿಯೇ ಈ ವಾತಾವರಣವಿದ್ರೆ ಮಕ್ಕಳ ಆರೋಗ್ಯದ ಮೇಲೆ ಇನ್ನು ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯೇ ಹೆಚ್ಚು. ಈ ಬಗೆಗಿನ ಸಣ್ಣ ಪರಿಜ್ಞಾನವೂ ಸಂಬಂಧ ಪಟ್ಟ ಇಲಾಖೆಗಿಲ್ಲವೆ? ಎಂದು ಜನ ಪ್ರಶ್ನಿಸುತ್ತಿದ್ದಾರೆ.