ಶಿರಹಟ್ಟಿ: ಹನ್ನೊಂದು ತಿಂಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರಿಗೆ ಒಂದು ರೂಪಾಯಿ ಸಂಬಳ ಕೊಟ್ಟಿಲ್ಲ. ಈ ಪರಿಸ್ಥಿತಿಯಲ್ಲಿ ದುಡಿದ ಜನ್ರು ಏನು ಮಾಡಬೇಕು? ಹೊಟ್ಟೆಗೇನ್ ಹಿಟ್ಟ ತಿನಬೇಕಾ ಎಂದು ತಾಪಂ ಸದಸ್ಯ ತಿಪ್ಪಣ್ಣ ಕೊಂಚಿಗೇರಿ ಆಕ್ರೋಶ ವ್ಯಕ್ತಪಡಿಸಿದರು.
ಅವರು ಗುರುವಾರ ಇಲ್ಲಿನ ತಾಪಂ ಸಭಾ ಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಸಂಬಳ ಇಲ್ಲ ಅಂದ್ರ ಕೆಲ್ಸ ಮಾಡೋದಾದ್ರೂ ಯಾಕ್ರಿ? 11ತಿಂಗಳಿಂದ ಸಂಬಳ ಕೊಟ್ಟಿಲ್ಲ ಅಂದ್ರ ನೀವು ಏನ್ ಮಾಡ್ತಿದ್ರಿ. ಕಾರ್ಮಿಕ ಇಲಾಖೆ ಅಧಿಕಾರಗಳು ಸರ್ಕಾರಿ ಕಚೇರಿಗಳಲ್ಲಿ ಕೆಲ್ಸ ಮಾಡೋ ಇಂತಹ ಕಾರ್ಮಿಕರಿಗೆ ಸಂಬಳ ನೀಡವಲ್ಲಿ ಪ್ರಾಮಾಣಿಕ ಕೆಲ್ಸಾ ಮಾಡ್ಲಿ. ನೀವು ಇದರ ಬಗ್ಗೆ ಕಾಳಜಿ ತಗೊರಿ ಎಂದು ಇಓ ಅವರಿಗೆ ಖಡಕ್ ಸೂಚನೆ ನೀಡಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯತಯಲ್ಲಿಯೇ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಡಿ ದರ್ಜೆ ನೌಕರರೊಬ್ಬರನ್ನು ಕರೆದು ವೇತನ ಬಗ್ಗೆ ವಿಚಾರಿಸಿದಾಗ 11ತಿಂಗಳಿಂದ ಸಂಬಳ ಆಗಿಲ್ಲ ಎಂಬ ಉತ್ತರ ಪಡೆದ ತಾಪಂ ಸದಸ್ಯರು, ಕಾರ್ಯನಿರ್ವಾಹಕ ಅಧಿಕಾರಿಗೆ ಹಾಗೂ ಕಾರ್ಮಿಕ ಇಲಾಖಾಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಸರಿಯಾಗಿ ವೇತನ ನೀಡುತ್ತಿಲ್ಲಾವಾದರೆ ಗುತ್ತಿಗೆ ಪಡೆದ ಏಜೆನ್ಸಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡು, ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ಡಿ ದರ್ಜೆ ನೌಕರರಿಗೆ ಕೂಡಲೇ ಬಾಕಿ ಇರುವ ಸಂಬಳವನ್ನು ನೀಡಬೇಕೆಂದು ಸಭೆಗೆ ಒತ್ತಾಯಿಸಿದರು.
ಮುಗಿಯದ ಒಂದು ಮೊಟ್ಟೆ ಕತೆ
ತಾಲೂಕಿನ ವ್ಯಾಪ್ತಿಯಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಆಹಾರ ವಿತರಣೆ ಆಗುತ್ತಿಲ್ಲ. ಗರ್ಭಿಣಿ ಬಾಣಂತಿಯರಿಗೆ ವಾರಕ್ಕೆ ಕೇವಲ 4 ಮೊಟ್ಟೆಗಳನ್ನು ವಿತರಣೆ ಮಾಡಿದರೆ, ಉಳಿದ ಮೊಟ್ಟೆಗಳನ್ನು ಅಂಗನವಾಡಿ ಟೀಚರ್ ತೆಗೆದುಕೊಂಡು ಹೋಗುತ್ತಾರೆಯೇ? ಕಳೆದ ಹಲವಾರು ಸಭೆಗಳಲ್ಲಿ ಮೊಟ್ಟೆ ವಿತರಣೆ ಕುರಿತು ಸಾಕಷ್ಟು ಚರ್ಚೆ ಆಗಿತ್ತು. ಅಂಗನವಾಡಿ ಕೇಂದ್ರಗಳಲ್ಲಿ ಆಹಾರ ಸರಿಯಾಗಿ ವಿತರಣೆಯಾಗದೆ ಮಕ್ಕಳಲ್ಲಿ ಅಪೌಷ್ಠಿಕತೆ ಹೆಚ್ಚುತ್ತಿದೆ. ಅಪೌಷ್ಠಿಕ ಮಕ್ಕಳನ್ನು ಗುರುತಿಸಿ ಅವರಿಗೆ ಸರಿಯಾದ ಚಿಕಿತ್ಸೆ ನೀಡಿ ಎಂದು ತಾಪಂ ಉಪಾಧ್ಯಕ್ಷೆ ಪವಿತ್ರಾ ಶಂಕಿನದಾಸರ ಸೂಚಿಸಿದರು.
ಕಾರ್ಮಿಕ ಇಲಾಖೆಯ ಸ್ಥಳಾಂತರದ ಅವಾಂತರ
ಕಳೆದ ಸಭೆಗಳಲ್ಲಿ ಕಾರ್ಮಿಕ ಇಲಾಖೆಯ ಕಚೇರಿಯನ್ನು ತಾಲ್ಲೂಕು ಪಂಚಾಯ್ತಿಯಲ್ಲಿರುವ ಖಾಲಿ ಕೊಠಡಿಗೆ ಸ್ಥಳಾಂತರಿಸಬೇಕು ಎಂದು ಹೇಳಲಾಗಿತ್ತು. ಕಾರ್ಮಿಕ ಇಲಾಖಾ ಅಧಿಕಾರಿಗಳು ಈ ಕುರಿತು ಯಾವುದೇ ಸ್ಪಂದನೆ ನೀಡುತ್ತಿಲ್ಲ. ಬಾಡಿಗೆ ಕಟ್ಟಡದಲ್ಲಿ ಕಚೇರಿ ನಡೆಸಿ ಸರ್ಕಾರಕ್ಕೆ ಬಾಡಿಗೆ ಹಣ ಹೊರೆ ಮಾಡುವುದು ಬೇಡ. ಕೂಡಲೆ ಅದನ್ನು ಸ್ಥಳಾಂತರಿಸಿ ಕಾರ್ಮಿಕರಿಗೆ ಅನುಕೂಲ ಮಾಡಬೇಕು. ಅಲ್ಲದೆ ಇಲಾಖೆಯ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಿಳಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ರೈತರಿಗೆ ಬೆಳೆಹಾನಿ ಒದಗಿಸಿ
ಮುಂಗಾರಿನಲ್ಲಾದ ಅತೀವೃಷ್ಠಿಗೆ ತಾಲೂಕಿನ ಬಹುತೇಕ ರೈತರು ನಷ್ಟಕ್ಕಿಡಾಗಿದ್ದು, ಅದನ್ನು ಕುರಿತು ಸರ್ವೆ ಮಾಡಿದ ಸರ್ಕಾರ ಇದುವರೆಗೂ ಒಬ್ಬ ರೈತರಿಗೆ ಬೆಳೆಹಾನಿ ಜಮಾ ಮಾಡಿಲ್ಲ. ಹಿಂಗಾರು ಇರಲಿ ಮುಂಗಾರಿನ ಬೆಳೆಹಾನಿಯನ್ನು ರೈತರಿಗೆ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಕ್ರಮ ಕೈಗೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಸದಸ್ಯ ದೇವಪ್ಪ ಲಮಾಣಿ ಹೇಳಿದರು.
ತಾಪಂ ಅಧ್ಯಕ್ಷ ಈಶಪ್ಪ ಲಮಾಣಿ, ಉಪಾಧ್ಯಕ್ಷೆ ಪವಿತ್ರಾ ಶಂಕಿನದಾಸರ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ಜೋಗಿ, ಕಾರ್ಯನಿರ್ವಾಹಕ ಅಧಿಕಾರಿ ನಿಂಗಪ್ಪ ಓಲೇಕಾರ, ತಾಪಂ ಸದಸ್ಯರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.