ಶಿರಹಟ್ಟಿ: ಪಟ್ಟಣದ ಗ್ರಾಮದೇವತೆ ದ್ಯಾಮವ್ವ ದೇವಿಯ ಜಾತ್ರೆಯು ಕಳೆದ 3 ದಿನಗಳಿಂದ ಅತ್ಯಂತ ವೈಭವದಿಂದ ಜರುಗಿದ್ದು, ಗುರುವಾರ ಸಲಕ ವಾದ್ಯ ಮೇಳಗಳೊಂದಿಗೆ ದ್ಯಾಮವ್ವ ದೇವಿಯನ್ನು ಗುಡಿ ದುಂಬಿಸುವದರ ಮೂಲಕ ಜಾತ್ರೆಗೆ ಸಂಭ್ರಮದ ತೆರೆ ಎಳೆಯಲಾಯಿತು.
ಭಾವೈಕ್ಯೆತೆಗೆ ಹೆಸರಾದ ನಾಡಿದ ಐತಿಹಾಸ ಪ್ರಸಿದ್ಧ ಶ್ರೀ ಜ.ಫಕ್ಕೀರೇಶ್ವರ ಮಠದ ಖ್ಯಾತಿಯಂತೆ ತಾಯಿ ದ್ಯಾಮವ್ವನ ಮೂರ್ತಿ ಮೆರವಣಿಗೆಯಲ್ಲಿ ಜಾತಿ, ಮತ, ಪಂಥಗಳೆನ್ನದೇ ಪ್ರತಿಯೊಬ್ಬರು ಉಡಿ ತುಂಬಿ ಕೃಥಾರ್ತರಾಗುವ ದೃಶ್ಯಗಳು ಕಳೆದ 3 ದಿನಗಳಿಂದ ಸಾಮಾನ್ಯವಾಗಿತ್ತು.
ವಿವಿಧ ಬಗೆಯ ಪುಷ್ಪಗಳೊಂದಿಗೆ ಅಲಂಕರಿಸಿದ ಪಾಲಕಿಯಲ್ಲಿ ದೇವಿಯ ಪ್ರತಿಷ್ಠಾಪನೆ ಮಾಡಿ ಪಟ್ಟಣದ ಪ್ರತಿಯೊಂದು ಬೀದಿಗಳಲ್ಲಿ ಭವ್ಯ ಮೆರವಣಿಗೆ ಸಾಗಿತ್ತು. ಊರಿನ ಪ್ರತಿಯೊಂದು ಮನೆಯವರು ವಿವಿಧ ತರನಾದ ಸಿಹಿ ಪದಾರ್ಥಗಳನ್ನು ಮಾಡಿ ಭಕ್ತಿಯಿಂದ ದೇವಿಗೆ ನೈವೇದ್ಯ ಅರ್ಪಿಸಿ ಭಕ್ತಿ ಮೆರೆಯುವ ಮೂಲಕ ಪಟ್ಟಣದ ಜನತೆ ಸೌಹಾರ್ದದ ನೆಲೆ ತೋರಿಸಿಕೊಟ್ಟರು. ಗ್ರಾಮ ದೇವಿ ದ್ಯಾಮವ್ವನ ದರ್ಶನಕ್ಕೆ ಉರಿ ಬಿಸಿಲು ಲೆಕ್ಕಿಸದೇ ಉತ್ಸಾಹದಿಂದ ತಂಡೋಪತಂಡವಾಗಿ ಜನ ಆಗಮಿಸುತ್ತಿರುವುದು ದೃಶ್ಯಗಳು ಕಂಡು ಬಂದಿತು.
ಜಾತ್ರೆಯ ಕೊನೆ ದಿನವಾದ ಗುರುವಾರ ಪಟ್ಟಣದ ಸಮಸ್ತ ಜನತೆ ದೇವಿಯನ್ನು ಬಡಿಗೇರ ಓಣಿಯಿಂದ ಮಧ್ಯಾಹ್ನ 12 ಘಂಟೆಗೆ ಕೋಟೆ ಓಣಿಯಯಲ್ಲಿರುವ ದೇವಿಯ ದೇವಸ್ಥಾನಕ್ಕೆ ಕರೆತಂದು ಸಾಯಂಕಾಲದವರಗೂ ಸಾರ್ವಜನಿಕ ದರ್ಶನ ಭಾಗ್ಯ ಕಲ್ಪಿಸಲಾಗಿತ್ತು, ದೇವಿಯ ದರ್ಶನಕ್ಕೆ ಬಂದ ಜನರು ಪ್ರಸಾದವನ್ನು ಸ್ವೀಕರಿಸಿ ಸಂಭ್ರಮಿಸಿದರು.