ಶಿರಹಟ್ಟಿ: ಪ್ರಸ್ತುತ ನಡೆಯುತ್ತಿರುವ ಗ್ರಾಪಂ ಚುನಾವಣೆ ಕುರಿತಂತೆ ಪಿ.ಆರ್.ಓ(ಮತಗಟ್ಟೆ ಅಧಿಕಾರಿ) ಹಾಗೂ ಎ.ಪಿ.ಆರ್.ಓ( ಸಹಾಯಕ ಮತಗಟ್ಟೆ ಅಧಿಕಾರಿ)ಗಳಿಗೆ ಬುಧವಾರ ಸ್ಥಳೀಯ ಎಫ್ ಎಂ.ಡಬಾಲಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ತರಬೇತಿ ಕಾರ್ಯಕ್ರಮ ನಡೆಯಿತು.
ಈ ಕುರಿತು ಉತ್ತರಪ್ರಭದೊಂದಿಗೆ ಮಾತನಾಡಿದ ತಹಶೀಲ್ದಾರ ಯಲ್ಲಪ್ಪ ಗೊಣೆಣ್ಣವರ ಕೊವಿಡ್ ನಿಯಮಾನುಸಾರ ಮತಗಟ್ಟೆಗಳನ್ನು ಸ್ಯಾನಿಟೈಸ್ ಮಾಡುವುದು, ಮತಗಟ್ಟೆ ಅಧಿಕಾರಿಗಳು ಕಡ್ಡಾಯವಾಗಿ ಮಾಸ್ಕ್ ಹಾಗೂ ಕೈಗಬಸು ಧರಿಸಬೇಕು. ಥರ್ಮಲ್ ಗನ್ ಸಹಾಯದಿಂದ ಮತದಾರರ ದೇಹದ ಉಷ್ಣತೆಯನ್ನು ಪರೀಕ್ಷಿಸಬೇಕು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳವಂತೆ ಸೂಚನೆ ನೀಡಬೇಕು.
ಚುನಾವಣೆಯ ಪೂರ್ವ ದಿನದಂದು ಮತಗಟ್ಟೆಗಳಲ್ಲಿ ಮತದಾನಕ್ಕೆ ಬೇಕಾಗುವ ಸಾಮಗ್ರಿಗಳ ಬಗ್ಗೆ ಗಮನ ಹರಿಸಬೇಕು. ಶಾಂತಿಯುತ, ಸುಗಮ ಮತ್ತು ನಿಷ್ಪಕ್ಷಪಾತ ಮತದಾನಕ್ಕೆ ಅವಕಾಶ ನೀಡಬೇಕು. ಅಲ್ಲದೆ ಮಾದರಿ ಮತಗಟ್ಟೆ ಮುಖಾಂತರ ಮತಗಟ್ಟೆಗಳ ಸಿದ್ದತೆಯ ಬಗ್ಗೆ ವಿವರಣೆ ನೀಡಲಾಯಿತು.
ಮತದಾನ ಮುಗಿದ ನಂತರ ಮತಪೆಟ್ಟಿಗೆಗಳನ್ನು ನಿಯಮಾನುಸಾರ ಮೊಹರು ಮಾಡಿ ಅಡ್ರೆಸ್ ಟ್ಯಾಗ್ ಭದ್ರವಾಗಿ ಅಳವಡಿಸುವುದರ ಜೊತೆಗೆ ಅಚ್ಚುಕಟ್ಟಾಗಿ ಮತದಾನ ನಡೆಸುವುದರ ಬಗ್ಗೆ ತರಬೇತಿ ನೀಡಲಾಯಿತು ಎಂದು ಹೇಳಿದರು.