ಬಳ್ಳಾರಿ ಜಿಲ್ಲೆಯ ಗರ್ಭಸಂಜಾತ ಶಿಶುವಾಗಿ ಹುಟ್ಟಲು ವಿಜಯನಗರ ಜಿಲ್ಲೆಗೆ ಸರ್ಕಾರದಿಂದ ಅನುಮತಿ ಸಿಕ್ಕಿದೆ. ಇದು ಒಂದೆಡೆ ಸಚಿವ ಆನಂದ ಸಿಂಗ್ ರವರ ಕನಸುಗಳಿಗೆ ರೆಕ್ಕೆ ಬರಿಸಿದ್ದರೆ, ಮತ್ತೊಂದೆಡೆ ರಾಜಕೀಯ ಅಸ್ತಿತ್ವಕ್ಕಾಗಿ ಪರದಾಡುತ್ತಿದ್ದ ಆತ್ಮಗಳ ನಿದ್ದೆಗೆಡಿಸಿದೆ. ಬಳ್ಳಾರಿ ಜಿಲ್ಲೆಯ ವಿಭಜನೆಗೆ ಸಾಂಸ್ಕೃತಿಕ ಚಿಂತಕರ ಮನಸ್ಸು ಕೂಡ ಒಪ್ಪುತ್ತಿಲ್ಲವಾದರೂ, ಜಿಲ್ಲಾ ಕೇಂದ್ರ ‘ದೂರ’ ಅನ್ನುವ ಚಡಪಡಿಕೆ ಅವರ ಧ್ವನಿಯನ್ನು ಹತ್ತಿಕ್ಕಿರುವುದು ಸುಳ್ಳೇನಲ್ಲ…!

ಹಾಗೆ ನೋಡಿದರೆ ಬಳ್ಳಾರಿ ಜಿಲ್ಲೆ ಭಾವನಾತ್ಮಕವಾಗಿ ಪೂರ್ವ ಮತ್ತು ಪಶ್ಚಿಮ ತಾಲ್ಲೂಕುಗಳೆಂದು ಇಭ್ಭಾಗವಾಗಿ ಬಹಳ ದಶಕಗಳೇ ಕಳೆದು ಹೋಗಿದ್ದವು. ಹೊಸಪೇಟೆ ಪಶ್ಚಿಮ ತಾಲ್ಲೂಕುಗಳ ರಾಜಧಾನಿ ಯಂತಿದ್ದರೆ, ಬಳ್ಳಾರಿ ಪೂರ್ವ ತಾಲ್ಲೂಕುಗಳ ರಾಜಧಾನಿಯಾಗಿ ಕಂಗೊಳಿಸುತ್ತಿತ್ತು. ಸಾಂಸ್ಕೃತಿಕವಾಗಿಯೂ ಪೂರ್ವ ಮತ್ತು ಪಶ್ಚಿಮ ತಾಲ್ಲೂಕುಗಳ ನಡುವೆ ಅಷ್ಟೇನು ಸಾಮ್ಯತೆಗಳಿರಲಿಲ್ಲ. ಇದು ಹಂತ ಹಂತವಾಗಿ ಜಿಲ್ಲೆ ವಿಭಜಿಸುವ ಮಟ್ಟಿಗೆ ಬೆಳೆದು ನಿಂತಿದ್ದು ಮಾತ್ರ ಈಗ ಇತಿಹಾಸ. ನೂತನ ವಿಜಯನಗರ ಜಿಲ್ಲೆಯ ಘೋಷಣೆಯಿಂದಾಗಿ ಬಳ್ಳಾರಿ ಜಿಲ್ಲಾ ಕೆಂದ್ರದಿಂದ 180 ಕಿ.ಮಿ ದೂರವಿದ್ದ ತಾಲ್ಲೂಕುಗಳ ಜನ ಒಂದೆಡೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರೆ, ಕಾಲಗರ್ಭದಲ್ಲಿ ಹುದುಗಿಹೋಗಿರುವ ಏಕೀಕರಣದ ಬಾವುಟ ಬೊರಲು ಬಿದ್ದಿದೆ…!

ಏಕೀಕರಣದ ಸಂಧರ್ಭಗಳ ಮೇಲೆ ಕಣ್ಣಾಡಿಸೋಣ

ನೂತನ ವಿಜಯನಗರ ಜಿಲ್ಲೆಯ ಸಾಧಕ ಬಾಧಕಗಳ ಚರ್ಚೆಗಳ ಮಂಚಿತವಾಗಿ ನಾವೆಲ್ಲ ಒಮ್ಮೆ ಏಕೀಕರಣದ ಸಂಧರ್ಭಗಳ ಮೇಲೆ ಕಣ್ಣಾಡಿಸುವುದು ಸೂಕ್ತವೆನಿಸುತ್ತದೆ‌. 1953 ರಲ್ಲಿ ಭಾಷಾವಾರು ಪ್ರಾಂತ ರಚನೆಯ ಮಸೂದೆ ಅಂಗಿಕಾರದ ಫಲವಾಗಿ ಕನ್ನಡ ಮಾತನಾಡುವ ನಾಲ್ಕು ಭಾಗಗಳನ್ನು ಸೇರಿಸಿಕೊಂಡು ಮೈಸೂರು ರಾಜ್ಯ ಉದಯವಾಗಿದ್ದು ಎಲ್ಲರಿಗೂ ಗೊತ್ತಿರುವಂಥದ್ದೆ. ಆದರೆ ಮೈಸೂರು ರಾಜ್ಯಕ್ಕೆ ಬಳ್ಳಾರಿ ಜಿಲ್ಲೆ ಸೇರ್ಪಡೆಯಾದ ಇತಿಹಾಸವೇ ರಣ ರೋಚಕವಾಗಿದೆ‌. ವಾಂಛೂ ಸಮೀತಿ, ಮಿಶ್ರಾ ಆಯೋಗ, ಕೇಳಕರ ಶಿಫಾರಸ್ಸುಗಳನ್ನು ಎಡತಾಕಿ, ನಿಜಲಿಂಗಪ್ಪ, ಟೇಕೂರು ಸುಭ್ರಮಣ್ಯಂ, ಎನ್.ರಾಚಯ್ಯ ನವರಂತಹ ಮಹನಿಯರ ಶ್ರಮದ ಫಲವಾಗಿ ಮೈಸೂರು ರಾಜ್ಯದ ಸುಪರ್ದಿಗೆ ಬಳ್ಳಾರಿ ಜಿಲ್ಲೆ ಒಳಪಟ್ಟಿರುವುದು ಗುಟ್ಟಿನ ಸಂಗತಿಯಲ್ಲ.

ಈಗಿನ ಬಳ್ಳಾರಿ ಜಿಲ್ಲೆ ಬ್ರಿಟಿಷ್ ಆಳ್ವಿಕೆಯ ಸಂಧರ್ಭದಲ್ಲಿ ಅನಂತಪೂರ ಜಿಲ್ಲೆಯ ಭಾಗವಾಗಿ ಮದ್ರಾಸ್ ಪ್ರಾಂತಕ್ಕೊಳಪಟ್ಟಿತ್ತು. ದೇಶಾದ್ಯಂತ ಸಾರ್ವತ್ರಿಕ ಚುನಾವಣೆಯ ಚರ್ಚೆ ಜೋರಾಗಿ ಭಾಷಾವಾರು ಪ್ರಾಂತಗಳ ರಚನೆಯ ಕೂಗುಗಳು ಆರ್ಭಟಿಸುತ್ತಿದ್ದವು. ಅತ್ತ ಸ್ವತಂತ್ರ ಆಂದ್ರ ಪ್ರಾಂತ ರಚನೆಗಾಗಿ 1951ರಲ್ಲಿ ಸ್ವಾಮಿ ಸೀತಾರಾಮರು ತಿರುಪತಿಯಲ್ಲಿ ಅಮರಣಾಂತ ಉಪವಾಸ ಆರಂಭಿಸಿದ್ದರು. ಇದು ತೆಲುಗು ಭಾಷಿಕರಿಗೆ ನೈತಿಕ ಸ್ಥೈರ್ಯ ಒದಗಿಸಿತು. 1952ರ ಸಾರ್ವತ್ರಿಕ ಚುನಾವಣೆಯ ನಂತರ ಲೋಕಸಭೆಯಲ್ಲಿ ಭಾಷಾವಾರು ಪ್ರಾಂತಗಳ ರಚನೆಯ ಗೊತ್ತುವಳಿಯನ್ನು ಮಂಡಿಸಲಾಯಿತು.

ಮೊದಲಿಗೆ ಈ ಬಗ್ಗೆ ಸ್ಪಷ್ಟ ನಿಲುವು ಹೊಂದಿರದಿದ್ದ ಕಾಂಗ್ರೆಸ್ ಪಕ್ಷವು ತನ್ನೆಲ್ಲ ಸದಸ್ಯರಿಗೆ ಈ ಗೊತ್ತುವಳಿಯ ಕುರಿತು ತಟಸ್ಥ ನಿಲುವು ಹೊಂದಲು ಆದೇಶಿಸಿತ್ತು. ಆದರೆ ಇದರ ಗಂಭೀರತೆ ಅರಿತಿದ್ದ ಎಸ್.ನಿಜಲಿಂಗಪ್ಪ ನವರು ಭಾಷಾವಾರು ಪ್ರಾಂತ ರಚನೆಯ ಪರವಾಗಿಯೇ ತಮ್ಮ ವಾದ ಮಂಡಿಸಿದರು. ಬಹುಮತ ಪಡೆಯದ ಕಾರಣಕ್ಕೆ ಸದರಿ ಗೊತ್ತುವಳಿಯು ಲೋಕಸಭೆಯಲ್ಲಿ ಬಿದ್ದು ಹೋಯಿತು. ಇದರಿಂದ ಆಂಧ್ರ ಮತ್ತು ಮೈಸೂರು ಪ್ರಾಂತ ರಚನೆಯ ಮನಸ್ಸುಗಳು ಕ್ಷುದ್ರಗೊಂಡವು. ಎರಡೂ ಪ್ರಾಂತಗಳಲ್ಲಿ ಈ ಗೊತ್ತುವಳಿ ಕುರಿತಾಗಿ ಚರ್ಚೆಗಳು ವೇಗ ಪಡೆದುಕೊಂಡವು.

ಪೊಟ್ಟಿ ಶ್ರೀರಾಮುಲು

ಪರಿಣಾಮವಾಗಿ ಆಂಧ್ರ ಪ್ರಾಂತ ರಚನೆ ಮಾಡಲೇಬೇಕೆಂಬ ಹಠ ಹಿಡಿದ ಪೊಟ್ಟಿ ಶ್ರೀರಾಮುಲು ರವರು 58 ದಿನಗಳಕಾಲ ಉಪವಾಸ ಕೈಗೊಂಡು ಹೋರಾಟ ನಿರತರಾಗಿಯೇ 15-12-1952 ರಂದು ನಿಧನರಾದರು. ಆಗ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ 19-12-1952 ರಂದು ಭಾಷಾವಾರು ಪ್ರಾಂತ ರಚನಾ ಗೊತ್ತುವಳಿಗೆ ಮತ್ತೊಮ್ಮೆ ಅವಕಾಶ ನೀಡಿ ಅದಕ್ಕೆ ಸರ್ವಾನುಮತದ ಒಪ್ಪಿಗೆ ಪಡೆದು ಆಂಧ್ರ ಪ್ರಾಂತ ರಚನೆಗಾಗಿ ಆಗಿನ ರಾಜಸ್ಥಾನದ ಮುಖ್ಯನ್ಯಾಯಮೂರ್ತಿ ಕೆ.ಎನ್.ವಾಂಛೂ ರವರ ನೇತೃತ್ವದ ಸಮೀತಿ ನೇಮಿಸಿತು.

ನ್ಯಾಯಮೂರ್ತಿ ಕೆ.ಎನ್.ವಾಂಛೂ ರವರ ಸಮೀತಿ ಚುನಾಯಿತ ಜನಪ್ರತಿನಿಧಿಗಳ, ಕಲಾವಿದರ, ಮುಖ್ಯವಾಗಿ ಗಾಂಧಿವಾದಿಗಳ ಅಭಿಪ್ರಾಯ ಸಂಗ್ರಹಿಸತೊಡಗಿತು‌. ಈ ಹಂತದಲ್ಲಿಯೇ ಅಂದಿನ ಮೈಸೂರು ಕಾಂಗ್ರೆಸ್ ಅಧ್ಯಕ್ಷರಾದ ಎಸ್.ನಿಜಲಿಂಗಪ್ಪನವರನ್ನು ಸದರಿ ಸಮೀತಿ ಸಂಧಿಸಿ ಮಾಹಿತಿ ವಿನಿಮಯ ಮಾಡಿಕೊಂಡಿತು. ನಿಗದಿತ ಅವಧಿಯಂತೆ ಕೇವಲ 26 ದಿನಗಳಲ್ಲಿ ವರದಿ ಸಿಧ್ಧವಾಯಿತು. ಬಳ್ಳಾರಿ ಜಿಲ್ಲೆಯನ್ನು ಆಂಧ್ರದೊಡನೆ ಸೇರಿಸಲು ಹಲವು ಪ್ರಮುಖ ತೊಂದರೆಗಳನ್ನು ಮನಗಂಡು, ಬಳ್ಳಾರಿ ಜಿಲ್ಲೆಯನ್ನು ಹೊರಗಿಟ್ಟು, ಹೈದ್ರಬಾದ್ ಮತ್ತು ಮದ್ರಾಸ್ ಪ್ರಾಂತಗಳಲ್ಲಿ ಸೇರಿರುವ,ತೆಲುಗು ಭಾಷೆಯನ್ನೇ ಮಾತೃಭಾಷೆಯನ್ನಾಗಿ ಮಾಡಿಕೊಂಡಿರುವ ಹನ್ನೊಂದು ಜಿಲ್ಲೆಗಳನ್ನು ಸೇರಿಸಿಕೊಂಡು ಆಂಧ್ರ ರಾಜ್ಯ ಸ್ಥಾಪಿಸಲು ಸಮೀತಿ ಲೋಕಸಭೆಗೆ ತನ್ನ ವರದಿ ಸಲ್ಲಿಸಿತು.

ವಾಂಛೂ ಸಮೀತಿ ನೇಮಕವಾದಾಗಲೇ ಕರ್ನಾಟಕ ಪ್ರಾಂತ ರಚನೆಗೆ ಕೇಂದ್ರ ಅಸಡ್ಡೆ ತೋರುತ್ತಿದೆ ಎಂಬ ಮನಃಸ್ಥಿತಿ ಕರ್ನಾಟಕದ ಏಕೀಕರಣ ಚಳುವಳಿಗೆ ಬುನಾದಿ ಹಾಕಿತು‌. ಸಮಾಜವಾದಿ ಮತ್ತು ಕಮ್ಯೂನಿಸ್ಟ್ ಪಕ್ಷಗಳು ಏಕೀಕರಣದ ಕೂಗನ್ನು ತಮ್ಮ ಪ್ರಮುಖ ಬೇಡಿಕೆ ಮಾಡಿಕೊಂಡವು. ಬಳ್ಳಾರಿ ಜಿಲ್ಲೆ ಮೈಸೂರು ಪ್ರಾಂತದ ವ್ಯಾಪ್ತಿಗೆ ಸೇರಿಸುವ ಬಗ್ಗೆ ನ್ಯಾಯಮೂರ್ತಿ ವಾಂಛೂ ರವರ ವರದಿಯಲ್ಲಿ ಸ್ಪಷ್ಟತೆಗಳಿರಲಿಲ್ಲ. ಈ ಬಗ್ಗೆ ಹಲವು ಗೊಂದಲಗಳು ಏರ್ಪಟ್ಟವು. ಚರ್ಚೆಗಳು ವಿಷಯಾಂತರವಾಗತೊಡಗಿದವು.

ಕೊನೆಗೆ ವಾಂಛೂ ಸಮೀತಿ ವರದಿ ಆಧರಿಸಿಯೇ 25-03-1953 ರಂದು ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ” ಬಳ್ಳಾರಿ ಜಿಲ್ಲೆಯನ್ನು ಒಂದೇ ಘಟಕವೆಂದು ಪರಿಗಣಿಸಲು ಸಾಧ್ಯವಿಲ್ಲದಿರುವ ಹಿನ್ನೆಲೆಯಲ್ಲಿ, ಆಲೂರು, ಆದವಾನಿ ಮತ್ತು ರಾಯದುರ್ಗ ತಾಲ್ಲೂಕುಗಳನ್ನು ಆಂಧ್ರ ಪ್ರದೇಶಕ್ಕೆ ಸೇರಿಸಿ, ಹರಪನಹಳ್ಳಿ, ಹಡಗಲಿ, ಕೂಡ್ಲಿಗಿ, ಸಂಡೂರು ಮತ್ತು ಸಿರಗುಪ್ಪ ತಾಲ್ಲೂಕುಗಳನ್ನು ಮೈಸೂರು ರಾಜ್ಯಕ್ಜೆ ಸೇರಿಸಬಹುದಾದರೂ ಮಿಶ್ರ ಭಾಷೆಯ ಬಳ್ಳಾರಿ ತಾಲ್ಲೂಕಿನ ಸಮಸ್ಯಯು ಕೇವಲ ಭಾಷೆಗೆ ಸೀಮಿತವಾಗಿರದೇ, ತಂಗಭದ್ರೆ ಅಣೆಕಟ್ಟೆಯ ಕಾರಣದಿಂದ ಸಾಮಾಜಿಕ ಮತ್ತು ಆರ್ಥಿಕ ವಿಚಾರಗಳನ್ನು ಒಳಗೊಂಡಿರುವುದರಿಂದ ಅದನ್ನು ಬಗೆಹರಿಸಲು ಭಾರತದ ಮಾನ್ಯ ರಾಷ್ಟ್ರಪತಿಗಳು, ಹೈದ್ರಬಾದ್ ಮುಖ್ಯನ್ಯಾಯಮೂರ್ತಿ ಎಲ್.ಎನ್.ಮಿಶ್ರ ನೇತೃತ್ವದ ಆಯೋಗ ರಚಿಸಿದ್ದಾರೆ” ಎಂದು ಸ್ಪಷ್ಟನೆ ನೀಡಿತು.

ನಿಗದಿತ ವೇಳೆಗೆ ಮಿಶ್ರ ವರದಿ ಲೋಕಸಭೆಗೆ ಸಲ್ಲಿಕೆಯಾಯಿತು. 13-08-1953 ರಿಂದ 19-08-1953 ರ ವರೆಗೆ ಲೋಕಸಭೆಯಲ್ಲಿ ಮಿಶ್ರ ಆಯೋಗದ ವರದಿ ಕುರಿತು ಚರ್ಚೆಗಳಾದವು. ಚರ್ಚೆಯಲ್ಲಿ ಪ್ರಮುಖವಾಗಿ ಎಸ್.ನಿಜಲಿಂಗಪ್ಪ, ಅಳವಂಡಿ ಶಿವಮೂರ್ತಿಸ್ವಾಮಿ, ಟೇಕೂರು ಸುಭ್ರಮಣ್ಯಂ, ಸ್ಚಾಮಿ ರಮಾನಂದ ತೀರ್ಥ, ಎಂ.ಎನ್.ಗುರುಪಾದಸ್ವಾಮಿ, ಎನ್.ರಾಚಯ್ಯ ನವರಂತಹ ಮಹನಿಯರೆಲ್ಲ ಬಳ್ಳಾರಿಯನ್ನು ಮೈಸೂರು ಸಂಸ್ಥಾನಕ್ಕೆ ವಿಲಿನಗೊಳಿಸುವುದರ ಪರವಾಗಿ ವಾದ ಮಂಡಿಸಿದರು. ಅಂತಿಮವಾಗಿ “ಬಳ್ಳಾರಿ ಯಂತೆಯೇ ಮದ್ರಾಸ್ ಪ್ರಾಂತಕ್ಕೆ ಸೇರಿದ್ದ ದಕ್ಷಿಣ ಕನ್ನಡ, ನೀಲಗಿರಿ, ಕೊಳ್ಳೇಗಾಲ ಭಾಗಗಳು ಮೈಸೂರು ಸಂಸ್ಥಾನಕ್ಕೆ ಸೇರಿಸುವುದು ಸೂಕ್ತ” ಎಂಬ ಅಭಿಪ್ರಾಯ ಹೊಂದಿದ್ದ ಮಿಶ್ರ ಆಯೋಗದ ವರದಿಯನ್ನು ಅಂಗೀಕರಿಸಲಾಯಿತು. ಇಷ್ಟೆಲ್ಲ ರಾಮಾಯಣ ಸದನದ ಒಳಗೆ ನಡೆದಿದ್ದಾದರೆ, ಸದನದ ಹೊರಗಡೆ ನಡೆದ ಚಳುವಳಿಯು ಮತ್ತೊಂದು ಚರಿತ್ರೆ ಸೃಷ್ಟಿಸುತ್ತದೆ‌.

ಲೇಖನ: ಇರ್ಫಾನ್ ಮುದಗಲ್

ಮುಂದೆ 1-10-1953 ರಂದು ಬಳ್ಳಾರಿ ಮೈಸೂರು ಪ್ರಾಂತಕ್ಕೆ ಸೇರಿಕೊಂಡು ವಿಲೀನವಾಯಿತು‌. ಇಂತಹ ಚರಿತ್ರೆಯುಳ್ಳ ಬಳ್ಳಾರಿ ಈಗ ಇಭ್ಭಾಗವಾಗಿ ನೂತನ ವಿಜಯನಗರ ಜಿಲ್ಲೆಗೆ ನಾಂದಿ ಹಾಡಲು ತಯಾರಾಗಿದೆ. ಇದರ ಮುಂದಿನ ರಾಜಕೀಯ, ವ್ಯವಹಾರಿಕ, ಸಾಮಾಜಿಕ, ಸಾಂಸ್ಕೃತಿಕಲೋಕದ ಸಾಧಕ ಬಾಧಕಗಳ ಕುರಿತು ಮುಂದಿನ ಅಂಕಣದಲ್ಲಿ ಚರ್ಚಿಸೋಣ..

Leave a Reply

Your email address will not be published. Required fields are marked *

You May Also Like

ಅಬ್ಬಾ…! ಮಹಾರಾಷ್ಟ್ರದಲ್ಲಿ ಎಷ್ಟು ಜನ ಪೊಲೀಸರಿಗೆ ಕೊರೊನಾ ಬಂದಿದೆ ಗೊತ್ತಾ?

ಮುಂಬಯಿ: ಮಹಾರಾಷ್ಟ್ರ ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ಹಾವಳಿ ಮಿತಿ ಮೀರುತ್ತಿದೆ. ಕೊರೊನಾ ವಾರಿಯರ್ಸ್ ನ್ನು ಅದು…

ಸೇವಾಭಾವದ ಅದಮ್ಯ ಚೇತನ ಶಿವಾನಂದ ಪಟ್ಟಣಶೆಟ್ಚರ

ಬರಹ : ಗುಲಾಬಚಂದ ಆರ್. ಜಾಧವ, ಚಿತ್ರಕಲಾ ಶಿಕ್ಷಕ, ಆಲಮಟ್ಟಿಆಲಮಟ್ಟಿ : ಊಟ,ನಿದಿರೆಯ ಪರಿವಿಲ್ಲ. ಕೆಲಸಗಳನ್ನು…

ಕೊರೋನಾ ಕಾವ್ಯ-1

ಕೊರೋನಾ ಕಾವ್ಯ ಸರಣಿಗೆ ಕವನ ಬರೆದವರು ಮುತ್ತು.ಹೆಚ್.ಬಿ(ಶಿಕ್ಷಕರು), ಪ್ರಸ್ತುತ ಕೊಪ್ಪಳ ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುತ್ತು, ಭವಿಷ್ಯದ ಭರವಸೆಯ ಶಿಕ್ಷಕ ಮತ್ತು ಬರಹಗಾರ. ಅವರಲ್ಲಿನ ಜನಪರ ಮತ್ತು ಜೀವಪರ ಕಾಳಜಿಯೇ ಈ ಕಾವ್ಯದಲ್ಲಿ ಅಕ್ಷರ ರೂಪದಲ್ಲಿ ಹೊರಹೊಮ್ಮಿದೆ.

ನಗರಸಭೆ ಚುನಾವಣೆ: ಕಾಂಗ್ರೆಸ್ ಪಕ್ಷದಿಂದ 35 ವಾರ್ಡಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮ

ಉತ್ತರಪ್ರಭಗದಗ: ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ 35 ವಾರ್ಡಗಳಿಗೆ  ಅಭ್ಯರ್ಥಿಗಳ ಹೆಸರು ಅಂತಿಮ 35 ವಾರ್ಡಗಳ…