ಗದಗ: ಜಿಲ್ಲೆಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಕೆರೆಗಳ ಗಡಿ ಗುರುತಿಸಿ, ಅತಿಕ್ರಮಣವಾದ ಕೆರೆಗಳನ್ನು ನವೆಂಬರ್ ತಿಂಗಳ ಅಂತ್ಯದೊಳಗಾಗಿ ತೆರವುಗೊಳಿಸಿ ಉದ್ಯಾನವನ (ಪ್ಲಾಂಟೇಷನ್) ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಪಿಡಿಒಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ತೆರಿಗೆ ಪರಿಷ್ಕರಣೆ ಸಭೆಯಲ್ಲಿ ಅವರು ಮಾತನಾಡಿದರು. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಬಹುತೇಕ ಕೆರೆಗಳ ಒತ್ತುವರಿ ತೆರವು ಕಾರ್ಯ ಪೂರ್ಣಗೊಂಡಿದ್ದು, ಈಗಾಗಲೇ ಕೆರೆಗಳ ಸುತ್ತ ಹಸರೀಕರಣಕ್ಕೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಅದರಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿಯೂ ಅತಿಕ್ರಮಣವಾಗಿರುವ ಕೆರೆಗಳನ್ನು ತೆರವುಗೊಳಿಸಿ ಕೆರೆ ಸಂರಕ್ಷಿಸಬೇಕು. ಕೆರೆಗಳು ಗ್ರಾಮೀಣ ಜನರ ಜೀವನಾಡಿಗಳಗಿವೆ. ಕೆರೆಯ ಸುತ್ತಲೂ ಪ್ಲಾಂಟೇಷನ್ ಮಾಡಲು ಕ್ರಮ ವಹಿಸಬೇಕು ಎಂದರು.
ಮಾದರಿ ನೀತಿ ಸಂಹಿತಿ ಉಲ್ಲಂಘನೆಯಾಗದಂತೆ ಕ್ರಮ
ಈಗಾಗಲೇ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಅ.29 ರಂದು ಚುನಾವಣೆ ಘೋಷಣೆಯಾಗಿದೆ. ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು ಉಲ್ಲಂಘನೆ ಆಗದಂತೆ ಕ್ರಮ ಕೈಗೊಳ್ಳಬೇಕು. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಳವಡಿಸಲಾಗಿರುವ ಬ್ಯಾನರ್, ಪೋಸ್ಟರ್ ಹಾಗೂ ಹೋರ್ಡಿಂಗ್ಸ್ ಗಳನ್ನು ತಕ್ಷಣವೇ ತೆರವುಗೊಳಿಸಬೇಕು. ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜಿಲ್ಲೆಯ ಗ್ರಾಮ ಪಂಚಾಯತಿಗಳಿಗೆ ನೇಮಕಗೊಂಡಿರುವ ಆಡಳಿತಾಧಿಕಾರಿಗಳು ಸಾರ್ವಜನಿಕರಿಗೆ ನಿರಂತರ ಲಭ್ಯವಾಗಿದ್ದು, ಸೇವೆಗಳನ್ನು ಒದಗಿಸಬೇಕು ಎಂದು ಹೇಳಿದರು.
ತೆರಿಗೆ ದರಕ್ಕೆ ಆಕ್ಷೇಪಣೆಗೆ ಅವಕಾಶ
ಜಿಲ್ಲಾ ಪಂಚಾಯತ ಸಿಇಒ ಡಾ.ಆನಂದ ಕೆ. ಮಾತನಾಡಿ, ಗ್ರಾಮ ಪಂಚಾಯತಿಗಳ ಆದಾಯ ಹೆಚ್ಚಿಸಲು ಪ್ರತಿ ಎರಡು ವರ್ಷಗಳಿಗೊಮ್ಮೆ ತೆರಿಗೆ ಪರಿಷ್ಕರಿಸಬೇಕು. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿ, ಮೌಲ್ಯ ನಿಗದಿಗಾಗಿ ಸೂಕ್ತ ಪ್ರಸ್ತಾವನೆ ಸಲ್ಲಿಸಬೇಕು. ಅಲ್ಲದೇ, ಗರಿಷ್ಠ ಮತ್ತು ಕನಿಷ್ಠ ಮೌಲ್ಯದ ನಡುವೆ ಸೂಕ್ತವಾದ ತೆರಿಗೆ ದರ ಅಂಗೀಕರಿಸಿ ಆಕ್ಷೇಪಣೆ ಸಲ್ಲಿಸಲು ಅವಕಾಶ ಕೊಡಬೇಕು ಎಂದರು.
ಮುಖ್ಯಾಂಶೆಗಳು
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಕೆರೆಗಳ ಗಡಿ ಗುರುತಿಸಿ
ಕೆರೆಗಳನ್ನು ನವೆಂಬರ್ ತಿಂಗಳ ಅಂತ್ಯದೊಳಗಾಗಿ ತೆರವುಗೊಳಿಸಿ
ಕೆರೆಗಳ ಸುತ್ತ ಹಸರೀಕರಣಕ್ಕೆ ಕ್ರಮ
ನೆರೆಗೆ ತುತ್ತಾಗುವ ಗ್ರಾಮಗಳಿಗೆ ಶಾಶ್ವತವಾಗಿ ಪರಿಹಾರ ಒದಗಿಸಬೇಕು.
ಬೂದಿಹಾಳ ಗ್ರಾಮದ ಮನೆಗಳಿಗೆ ನೀರು ನುಗ್ಗುತ್ತಿದ್ದು, ಹಳ್ಳ ಅಗಲೀಕರಣ ಮಾಡಬೇಕು.
ಮನೆಗಳನ್ನು ಕಟ್ಟದ ಫಲಾನುಭವಿಗಳಿಗೆ ನೋಟೀಸ್ ನೀಡಬೇಕು.
ತೆರಿಗೆ ಸಂಗ್ರಹ ಉತ್ತಮ ಪಡಿಸಲು ಪ್ರತಿ ವರ್ಗಕ್ಕೂ ಗರಿಷ್ಠ ಹಾಗೂ ಕನಿಷ್ಠ ವಾರ್ಷಿಕ ಬಾಡಿಗೆ ಮೌಲ್ಯ ನಿಗಧಿಪಡಿಸಬೇಕು. ಭೂಮಿ ಹಾಗೂ ಕಟ್ಟಡಗಳ ವರ್ಗೀಕರಣ ಮಾಡಿ ನಿಯಮಾನುಸಾರ ಎಲ್ಲ ಕಟ್ಟಡಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕು. ಸಾರ್ವಜನಿಕರು ನಿಯಮಿತವಾಗಿ ತೆರಿಗೆ ಪಾವತಿಸದಿದ್ದಲ್ಲಿ ತಗಾದೆ ಬಿಲ್ ಹೊರಡಿಸಬೇಕು.
ತೆರಿಗೆ ವಸೂಲಿ ಮಾಡಲು ಸೂಚನೆ
ನವೀಕರಿಸಬಹುದಾದ ಇಂಧನ ವಿದ್ಯುತ್ ಘಟಕಗಳಿಗೆ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಆಧರಿಸಿ ತೆರಿಗೆ ವಿಧಿಸಬೇಕು. ತೆರಿಗೆಯು ಗ್ರಾಮ ಪಂಚಾಯತಿಗಳ ಸಂಪನ್ಮೂಲ ಕ್ರೋಢಿಕರಣಕ್ಕೆ ನೀಡಿರುವ ಕಾಯ್ದೆ ಬದ್ಧ ಅಧಿಕಾರವಾಗಿದೆ. ತೆರಿಗೆ ವಿಧಿಸುವ ವಿಧಿಸಿದ ತೆರಿಗೆ ವಸೂಲು ಮಾಡುವ ಜವಾಬ್ದಾರಿ ಗ್ರಾಮ ಪಂಚಾಯತಿಗಳ ಮೇಲಿದ್ದು, ಕರ ವಸೂಲಿಗಾರರು ಸಾರ್ವಜನಿಕರಿಂದ ನಿಯಮಿತವಾಗಿ ತೆರಿಗೆ ವಸೂಲಿ ಮಾಡಬೇಕು.
ಜಿಲ್ಲೆಯಲ್ಲಿ ಅನುಮೋದನೆಗೊಂಡು ಜಾಗದ ಸಮಸ್ಯೆಗಳಿಂದ ಪ್ರಾರಂಭವಾಗದ ಕಾಮಗಾರಿಗಳ ಪಟ್ಟಿ ಮಾಡಿದ್ದು, ಸಂಬಂಧಿಸಿದ ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಕಳುಹಿಸಲಾಗಿದ್ದು ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಬಗೆಹರಿಸಬೇಕು. ಕುಡಿಯುವ ನೀರಿಗಾಗಿ ಅಳವಡಿಸುವ ಪೈಪಲೈನ್ ಗುಣಮಟ್ಟದಿಂದ ಕೂಡಿರಬೇಕು. ನೀರು ವಿನಾಕಾರಣ ಅಪವ್ಯಯ ಆಗದಂತೆ ನೋಡಿಕೊಳ್ಳಬೇಕು.
ಸರ್ಕಾರಿ ಶಾಲೆಗಳಲ್ಲಿ ಸ್ವಚ್ಚತೆ ಕಾಪಾಡಬೇಕು. ಶಾಲಾ ಮೈದಾನದಲ್ಲಿ ಬೆಳೆದಿರುವ ಗಿಡ ಗಂಟಿಗಳನ್ನು ಕಟಾವು ಮಾಡಿಸಬೇಕು. ನರೇಗಾ ಮತ್ತು ಸ್ವಚ್ಛ ಭಾರತ ಮಿಷನ್ ಯೋಜನೆಗಳಡಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಅವಕಾಶವಿದ್ದು, ಜಿಲ್ಲೆಯ ಎಲ್ಲ ಗ್ರಾಪಂಗಳು ನಿವೇಶನ ಗುರುತಿಸಿ ಕ್ರಮ ವಹಿಸಬೇಕು. ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡಗಳಲ್ಲಿ ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಸಿಇಒ ಡಾ.ಆನಂದ ಕೆ. ಸೂಚನೆ ನೀಡಿದರು.

ಮನೆ ಕಟ್ಟದ ಫಲಾನುಭವಿಗಳಿಗೆ ನೋಟೀಸ್ ನೀಡಿ ..!
ಜಿಲ್ಲೆಯಲ್ಲಿ ಪ್ರವಾಹ ಉಂಟಾಗುತ್ತಿದ್ದು, ನೆರೆಗೆ ತುತ್ತಾಗುವ ಗ್ರಾಮಗಳಿಗೆ ಶಾಶ್ವತವಾಗಿ ಪರಿಹಾರ ಒದಗಿಸಬೇಕು. ಬಾಕಿ ಉಳಿದಿರುವ ಫಲಾನುಭವಿಗಳಿಗೆ ಮನೆಯ ಹಕ್ಕು ಪತ್ರ ನೀಡಬೇಕು. ಬೂದಿಹಾಳ ಗ್ರಾಮದ ಮನೆಗಳಿಗೆ ನೀರು ನುಗ್ಗುತ್ತಿದ್ದು, ಗ್ರಾಮದ ಪಕ್ಕದಲ್ಲಿರುವ ಹಳ್ಳ ಅಗಲೀಕರಣ ಮಾಡಬೇಕು. ಪ್ರವಾಹಕ್ಕೀಡಾಗಿ ಮನೆ ಕಳೆದುಕೊಂಡಿರುವ ಕುಟುಂಬಗಳಿಗೆ ಸರ್ಕಾರ ಮನೆ ಮಂಜೂರು ಮಾಡಿದ್ದರೂ ಇನ್ನೂವರೆಗೂ ಮನೆಗಳನ್ನು ಕಟ್ಟದ ಫಲಾನುಭವಿಗಳಿಗೆ ನೋಟೀಸ್ ನೀಡಬೇಕು. ಕಟ್ಟದಿದ್ದಲ್ಲಿ ಕೆಳಹಂತದ ಸಿ ಗ್ರೇಡ್ ಗೆ ಇಳಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಬಿ.ಕಲ್ಲೇಶ ಮಾತನಾಡಿ, ಸರ್ಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದಲ್ಲಿ ಗ್ರಾಪಂ ಪ್ರಮುಖ ಪಾತ್ರ ವಹಿಸುತ್ತದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಬಿಡುಗಡೆಯಾಗಿರುವ ಅನುದಾನ ಸಮರ್ಪಕವಾಗಿ ಬಳಕೆ ಆಗಬೇಕು ಎಂದರು.
ಜಿ.ಪಂ.ಯೋಜನಾ ನಿರ್ದೇಶಕ ಸಿ.ಆರ್.ಮುಂಡರಗಿ ಸೇರಿದಂತೆ ಜಿಲ್ಲೆಯ ಎಲ್ಲ ಗ್ರಾಪಂ ಪಿಡಿಒಗಳು, ಗ್ರಾಪಂ ಆಡಳಿತಾಧಿಕಾರಿಗಳು ಸಭೆಯಲ್ಲಿ ಇದ್ದರು.