ಬೆಂಗಳೂರು: ಸಾಮಾಜಿಕ ನ್ಯಾಯದ ಪರವಾಗಿದ್ದೇವೆ ಎಂದು ಬಾಯಿಮಾತಿನಲ್ಲಿ ಹೇಳಿದರೆ ಸಾಲದು, ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಲ್ಲಿಸಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಅವರನ್ನು ಒತ್ತಾಯಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಸಭೆಯಲ್ಲಿ ಭಾಗವಹಿಸಿ ಮಾತಾಡಿದದ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ ಕಾಂತರಾಜ್ ನೇತೃತ್ವದ ಆಯೋಗಕ್ಕೆ ಸಮೀಕ್ಷೆ ನಡೆಸುವ ಜವಾಬ್ದಾರಿ ವಹಿಸಿದ್ದೆ. ನಮ್ಮ ಅಧಿಕಾರಾವಧಿ ಮುಗಿಯುವುದರೊಳಗೆ ವರದಿ ಸಿದ್ಧಗೊಂಡಿರದ ಕಾರಣ ಅದರ ಬಿಡುಗಡೆ ಸಾಧ್ಯವಾಗಿಲ್ಲ. ಈಗ ವರದಿ ರಾಜ್ಯ ಸರ್ಕಾರದ ಮುಂದಿದೆ. ಇನ್ನಷ್ಟು ವಿಳಂಬ ಮಾಡದೆ ವರದಿಯನ್ನು ಬಿಡುಗಡೆ ಮಾಡಿ ಅದರ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದರು.

ಸಮ್ಮಿಶ್ರ ಸರ್ಕಾರದ ಕಾಲದಲ್ಲಿಯೇ ಶಾಶ್ವತ ಆಯೋಗ ವರದಿಯನ್ನು ಸಲ್ಲಿಸುವ ಪ್ರಯತ್ನ ಮಾಡಿದರೂ ಸರ್ಕಾರ ಆಸಕ್ತಿ ತೋರಿರಲಿಲ್ಲ. ಬಿ.ಎಸ್.ಯಡಿಯೂರಪ್ಪನವರು ಅಧಿಕಾರಕ್ಕೆ ಬಂದ ಕೂಡಲೇ ಆಯೋಗವನ್ನು ವಜಾಗೊಳಿಸಿದರು. ಈ ಕಾರಣದಿಂದಾಗಿ ಆಯೋಗದ ಅಧ್ಯಕ್ಷರು ಆಯುಕ್ತರಿಗೆ ವರದಿ ಸಲ್ಲಿಸಿದ್ದರು ಎಂದರು.
ದೇಶದಲ್ಲಿ ಪ್ರತಿ 10 ವರ್ಷಗಳಿಗೊಮ್ಮೆ ಜನಗಣತಿ ನಡೆದರೂ 1931ರ ನಂತರ ಜಾತಿಗಣತಿ ನಡೆದಿಲ್ಲ. ಇಂದಿರಾ ಸ್ಹಾನಿ ಪ್ರಕರಣದಲ್ಲಿ ಸುಪ್ರೀಮ್ ಕೋರ್ಟ್ ಎಲ್ಲ ರಾಜ್ಯಗಳಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ರಚನೆಗೆ ಆದೇಶ ನೀಡಿತ್ತು. ನಾನು ಉಪಮುಖ್ಯಮಂತ್ರಿಯಾಗಿದ್ದಾಗ ದೇಶದಲ್ಲಿ ಪ್ರಥಮವಾಗಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ರಚಿಸಿದ್ದೆ ಎಂದು ಅವರು ಹೇಳಿದರು.

ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ರೂ.162 ಕೋಟಿ ಖರ್ಚಿನಲ್ಲಿ ಸುಮಾರು 1.78 ಲಕ್ಷ ಸರ್ಕಾರಿ ಸಿಬ್ಬಂದಿಯನ್ನು ಬಳಸಿಕೊಂಡು ಮನೆಮನೆಗೆ ಭೇಟಿ ನೀಡಿ 55 ವಿಷಯಗಳ ಮೇಲೆ ಪ್ರಶ್ನೆಗಳಿಗೆ ಉತ್ತರ ಪಡೆದು ಅತ್ಯಂತ ವೈಜ್ಞಾನಿಕವಾಗಿ ಈ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿದೆ ಎಂದರು.
ಇದು ಕೇವಲ ಜಾತಿಗಳ ಸಮೀಕ್ಷೆಯೂ ಅಲ್ಲ, ಹಿಂದುಳಿದ ಜಾತಿಗಳ ಸಮೀಕ್ಷೆ ಅಲ್ಲ, ಇದು ರಾಜ್ಯದ ಪ್ರತಿಯೊಂದು ಕುಟುಂಬದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯಾಗಿದೆ. ಸರ್ಕಾರವು ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಯೋಜನೆಗಳನ್ನು ರೂಪಿಸಲು ಇದರಿಂದ ನೆರವಾಗುತ್ತದೆ ಎಂದರು.

ಭಾರತೀಯ ಜನತಾ ಪಕ್ಷ ಮೂಲಭೂತವಾಗಿ ಸಾಮಾಜಿಕ ನ್ಯಾಯ ಮತ್ತು ಅದರ ಭಾಗವಾದ ಮೀಸಲಾತಿಯನ್ನು ವಿರೋಧಿಸುತ್ತಾ ಬಂದಿದೆ. ಮಂಡಲ ಆಯೋಗದ ವರದಿ ಜಾರಿಯನ್ನು ವಿರೋಧಿಸಿ ದೇಶಕ್ಕೆ ಬೆಂಕಿ ಹಚ್ಚಿದ ಪಕ್ಷ ಇದು. ಈ ಕಳಂಕವನ್ನು ತೊಡೆದುಹಾಕಲಿಕ್ಕಾದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಯೋಗದ ವರದಿಯನ್ನು ಒಪ್ಪಿಕೊಂಡು ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

Leave a Reply

Your email address will not be published. Required fields are marked *

You May Also Like

ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಯುವವರೆಗೂ ಲಾಕ್ ಡೌನ್ ಇಲ್ಲ!

ಬೆಂಗಳೂರು : ಲಾಕ್ ಡೌನ್ ತೆರವುಗೊಂಡ ನಂತರ ರಾಜ್ಯ ಸೇರಿದಂತೆ ದೇಶದಲ್ಲಿ ಕೊರೊನಾ ಸ್ಪೋಟಗೊಂಡಿದೆ. ಹೀಗಾಗಿ…

ಶಿರಹಟ್ಟಿ ಕಂಪ್ಯೂಟರ್ ಆಪರೇಟರ್ ಎಸಿಬಿ ಬಲೆಗೆ

ಖಾತೆ ಬದಲಾವಣೆಗೆ ಲಂಚದ ಬೇಡಿಕೆ ಇಟ್ಟಿದ್ದ ಕಂಪ್ಯೂಟರ್ ಆಪರೇಟರ್ ಎಸಿಬಿ ಬಲೆಗೆ ಬಿದ್ದ ಘಟನೆ ಶಿರಹಟ್ಟಿ ಪಟ್ಟಣದಲ್ಲಿ ನಡೆದಿದೆ. ಶಿರಹಟ್ಟಿಯ ಪಟ್ಟಣ ಪಂಚಾಯತಿ ಕಂಪ್ಯೂಟರ್ ಆಪರೇಟರ್ ಶರಣಪ್ಪ ಗೌಳಿ 3,500 ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದನಂತೆ.

ದಿನದಿಂದ ದಿನಕ್ಕೆ ದೇಶದಲ್ಲಿ ಹೆಚ್ಚಾಗುತ್ತಿದೆ ಕೊರೊನಾ ಆತಂಕ!

ಬೆಂಗಳೂರು: ದೇಶದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಹಲವು ದೇಶಗಳಲ್ಲಂತೂ ಇದರ ನಾಗಾಲೋಟ…

ಸೀಲ್ ಡೌನ್ ಹೆಸರಿನಲ್ಲಿ ನಡೆಯಿತೇ ಕೋಟಿ ಕೋಟಿ ಅವ್ಯವಹಾರ?

ಕೊರೊನಾ ಸೋಂಕಿತರ ಮನೆಯ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗುತ್ತಿದೆ. ಈ ಹಿಂದೆ ಇದರ ಪ್ರಮಾಣ ತುಸು ಹೆಚ್ಚಾಗಿತ್ತು. ಆದರೆ, ಈ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.