ಗದಗ: ಕುರಿಗಾರರಿಗೆ ಅನುಕೂಲಕರವಾಗಿದ್ದ ಅನುಗ್ರಹ ಯೋಜನೆಯನ್ನು ಮುಂದುವರೆಸಬೇಕು. ಜೊತೆಗೆ ಯೋಜನೆಯಡಿ ಬಾಕಿ ಇರುವ ಇರುವ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾ ಯುವ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕುರಿಗಾರರು ಕುರಿ, ಮೇಕೆ ಸಾಕಾನಣಿಕೆಯಿಂದ ತಮ್ಮ ಬದುಕನ್ನು ಜಿಲ್ಲೆಯಿಂದ ಜಿಲ್ಲೆಗೆ ತಾಲೂಕಿನಿಂದ ತಾಲೂಕಿಗೆ ಹೀಗೆ ಕುರಿಗಳ ಹಿಂಡನ್ನು ಕಟ್ಟಿಕೊಂಡು ಜೀವನ ನಡೆಸುತ್ತಾರೆ. ಇಂತಹ ಸಂದರ್ಭದಲ್ಲಿ ಕುರಿಗಳು ಯಾವುದೇ ರೋಗಕ್ಕೆ ತುತ್ತಾಗಿ ಮರಣ ಹೊಂದಿದಲ್ಲಿ ಕುರಿಗಾರರಿಗೆ ಪರಿಹಾರ ೊದಗಿಸುವ ನಿಟ್ಟಿನಲ್ಲಿ ಈ ಹಿಂದಿನ ಸರ್ಕಾರ ಅನುಗ್ರಹ ಯೋಜನೆಯನ್ನು ಜಾರಿಗೆ ತಂದಿತ್ತು.
ಯೋಜನೆಯಿಂದ ಸಾವನ್ನಪ್ಪಿದ ಕುರಿಗಳಿಗೆ 5000 ರೂಪಾಯಿ ಸಹಾಯಧನ ನೀಡಿತ್ತು. ಇದರಿಂದ ಇದರಿಂದ ಕುರಿಗಾರರಿಗೆ ಅಲ್ಪಮಟ್ಟಿಗಾದರೂ ಅನುಕೂಲವಾಗಿತ್ತು. ಆದರೆ ಈ ಯೋಜನೆಯಲ್ಲಿ 3 ಕೋಟಿ 62 ಲಕ್ಷ ಅನುದಾನ ನೀಡುವುದು ಬಾಕಿಯಿದೆ. ಈ ಅನುದಾನವನ್ನು ಇತ್ತಿಚಿಗೆ ವಿವಿಧ ರೋಗಗಳಿಂದ ಸಾವನ್ನಪ್ಪಿದ ಕುರಿ ಮತ್ತು ಮೇಕೆಗಳಿಗೆ ಅನುದಾನ ಬಿಡುಗಡೆ ಮಾಡಿಕೊಡಬೇಕು. ಹಾಗೂ ಇತ್ತಿಚಿನ ಅವಧಿಯಲ್ಲಿ ಈ ಅನುಗ್ರಹ ಯೋಜನೆಯನ್ನು ಬಂದ್ ಮಾಡಿ ಕುರಿಗಾರರ ಬದುಕಿನ ಮೇಲೆ ಬರೆ ಎಳೆದಂತಾಗಿದೆ. ಹೀಗಾಗಿ ಕೂಡಲೇ ಯೋಜನೆ ಮುಂದುವರೆಸುವ ಮೂಲಕ ಬಾಕಿ ಇರುವ ಅನುದಾನ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು.
ಈ ವೇಳೆ ಮಂಜುನಾಥ ಜಡಿ, ಎಸ್.ಜಿ.ಹೇಮಂತ್, ರವಿ ಹುಡೇದ್, ಲಕ್ಷ್ಮಣ್ ಜಂತ್ಲಿ, ಕುಮಾರ್ ಮಾರನಬಸರಿ, ರವಿ ಜೋಗಿನ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.