ಬೆಂಗಳೂರು : ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ನಿರೂಪಕಿ ಅನುಶ್ರೀ ವಿರುದ್ಧ ಸಿಸಿಬಿ ಅಧಿಕಾರಿಗಳು ಗರಂ ಆಗಿದ್ದಾರೆ.
ವಿಚಾರಣೆಗೆ ಹಾಜರಾಗುವಂತೆ ಕಿರುತೆರೆ ನಿರೂಪಕಿ, ನಟಿ ಅನುಶ್ರೀ ಅವರಿಗೆ ಮಂಗಳೂರು ಸಿಸಿಬಿ ಪೊಲೀಸರು ನೊಟೀಸ್ ನೀಡಿದ್ದರು. ಅವರು ಶುಕ್ರವಾರ ಬೆಳಿಗ್ಗೆಯೇ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದ್ದರು. ಆದರೆ, ವಿಚಾರಣೆಗೆ ಹಾಜರಾಗಿಲ್ಲ. ಇದರಿಂದಾಗಿ ಪೊಲೀಸರು ಅಸಮಾಧಾನಗೊಂಡಿದ್ದಾರೆ. ಅಲ್ಲದೇ, ಶನಿವಾರ ಬೆಳಿಗ್ಗೆ 11ಕ್ಕೆ ವಿಚಾರಣೆಗೆ ಹಾಜರಾಗುವಂತ ಖಡಕ್ ಆಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಡಿಸಿಪಿ ವಿನಯ್ ಗಾಂವ್ಕರ್ ನೇತೃತ್ವದ ತಂಡ ಪಾಂಡೇಶ್ವರ ಠಾಣೆಯಲ್ಲಿ ಶುಕ್ರವಾರ ಅನುಶ್ರೀ ವಿಚಾರಣೆ ನಡೆಸಲು ಸಿದ್ಧವಾಗಿತ್ತು. ಆದರೆ ಅನುಶ್ರೀ ಸಂಜೆಯ ಹೊತ್ತು ಅಲ್ಲಿಗೆ ತಲುಪಿದ್ದಾರೆ ಎಂದು ತಿಳಿದು ಬಂದಿದ್ದು, ಆ ಸಂದರ್ಭದಲ್ಲಿ ವಿಚಾರಣೆಯ ತಂಡ ಅಲ್ಲಿಂದ ತೆರಳಿದ್ದು. ಹೀಗಾಗಿ ಇಂದು ಬೆಳಿಗ್ಗೆ 11ಕ್ಕೆ ಹಾಜರಾಗುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.
ವಿಚಾರಣೆಗೂ ಮುನ್ನ ಅನುಶ್ರೀ, ಕಾನೂನು ಸಲಹೆ ಪಡೆಯಲು ವಕೀಲರನ್ನು ಸಂಪರ್ಕಿಸಿದ್ದರು ಎನ್ನಲಾಗಿದೆ. ಹೀಗಾಗಿ ಇಂದು ಬೆಳಿಗ್ಗೆ ಅವರು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ಇನ್ನಿತರ ಆರೋಪಿಗಳಾದ ಕಿಶೋರ್ ಶೆಟ್ಟಿ, ಅಕೀಲ್ ನೌಶೀಲ್ ಅವರನ್ನು ಪೊಲೀಸರು ವೆನ್ ಲಾಕ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು.