ಶಿರಹಟ್ಟಿ: ಪಟ್ಟಣವು ತಾಲ್ಲೂಕು ಕೇಂದ್ರವಾಗಿದ್ದು, ಸ್ಥಳೀಯವಾಗಿ ಎಪಿಎಂಸಿ ಸ್ಥಾಪನೆ ಮಾಡಬೇಕೆಂದು ಮಂಗಳವಾರ ತಹಶಿಲ್ದಾರ ಮೂಲಕ ಕರ್ನಾಟಕ ಪ್ರಜಾಪರ ವೇದಿಕೆ ತಾಲೂಕ ಘಟಕದ ವತಿಯಿಂದ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಪ್ರವೇ ತಾಲೂಕಾಧ್ಯಕ್ಷ ಹಸನ ತಹಶಿಲ್ದಾರ, ತಾಲೂಕಿನಲ್ಲಿ ಸಾವಿರಾರು ರೈತರು ವ್ಯವಸಾಯದಿಂದಲೇ ಬದುಕು ಕಟ್ಟಿಕೊಂಡಿದ್ದು, ಇಂತಹ ರೈತರಿಗೆ ಮುಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಪರಾದಾಡುವ ಪರಸ್ಥಿತಿ ನಿರ್ಮಾಣವಾಗಿದೆ ಎಂದರು.
ಈ ಕೊರನಾ ಹಾಗೂ ಅತೀ ಹೆಚ್ಚು ಮಳೆಯಿಂದಾಗಿ ಅಲ್ಪ ಸ್ವಲ್ಪ ಬೆಳೆ ಬೆಳೆದ ತಾಲೂಕಿನ ರೈತರಿಗೆ ಸ್ಥಳೀಯವಾಗಿ ಮಾರುಕಟ್ಟೆ ಇಲ್ಲದೆ ದೂರದ ಗದಗ ಇಲ್ಲವೆ ಲಕ್ಷ್ಮೇಶ್ವರ ಹೋಗುವ ದುಸ್ಥಿತಿ ಎದುರಾಗಿದೆ. ಪಟ್ಟಣದಲ್ಲಿ ಎ.ಪಿ.ಎಂ.ಸಿ ಮಾರುಕಟ್ಟೆಗೆ ಸ್ಥಳವಿದ್ದರೂ ಸಂಬಂಧಪಟ್ಟ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳ ಕೊರತೆಯಿಂದ ಅದು ಈಗ ಹಂದಿಗಳ ತಾಣವಾಗಿ ಮಾರ್ಪಾಡಾಗಿದೆ. ಈ ಖಾಲಿ ಜಾಗವನ್ನು ಪ್ರತಿ ವರ್ಷಸ್ವಚ್ಛತೆಗೆ ಮಾತ್ರ ಬಿಲ್ ತೆಗೆಯುವುದರ ಮೂಲಕ ಸರಕಾರದ ಹಣವನ್ನು ಪೋಲು ಮಾಡುತ್ತಿರುವುದು ವಿಷಾಧಕರ ಸಂಗತಿ.
ಶೀಘ್ರದಲ್ಲೆ ಪಟ್ಟಣದ ಎ.ಪಿ.ಎಂ.ಸಿ ಜಾಗವನ್ನು ಅಭಿವೃದ್ದಿಗೂಳಿಸಿ, ಬಡ ರೈತರಿಗೆ ಕೂಲಿ ಕಾರ್ಮಿಕರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಹಶೀಲ್ದಾರ ಕಛೇರಿ ಎದರುಗಡೇ ಕರ್ನಾಟಕ ಪ್ರಜಾಪರ ವೇದಿಕೆ ಹಾಗೂ ತಾಲ್ಲೂಕಿನ ಎಲ್ಲ ರೈತ ವರ್ಗದಿಂದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶಶಿಧರ ಬ ದೇಗಾವಿ, ಖಲಂದರ ಇ ಕಬಾಡಿ, ಮಂಜು ಲಮಾಣಿ, ಮಂಜುನಾಥ ಬಳಿಗಾರ, ಸುನೀಲ ತಳವಾರ, ಸಮೀರ ಕಾರಬೂದಿ, ಪ್ರವೀಣ ಹಡಪದ ಮುಂತಾದವರು ಉಪಸ್ಥಿತರಿದ್ದರು.