ಭುವನೇಶ್ವರ: ಕಪ್ಪು, ದಟ್ಟ ಕಂದು ಬಣ್ಣದ ಆಮೆಗಳನ್ನು ನೋಡಿದ್ದೇವೆ. ಆದರೆ ಒರಿಸ್ಸಾದಲ್ಲೊಂದು ಅಪರೂಪದ ಆಮೆ ಸಿಕ್ಕಿದೆ. ಅದರ ಬಣ್ಣ ಹಳದಿ. ಇಡೀ ದೇಹ, ಚಿಪ್ಪು ಎಲ್ಲವೂ ಸಂಪೂರ್ಣ ಹಳದಿ. ವಾರಗಳ ಹಿಂದೆ ಇದೇ ರಾಜ್ಯದಲ್ಲಿ ಮೃದುವಾದ ಚಿಪ್ಪು ಹೊಂದಿರುವ ಇನ್ನೊಂದು ಅಪರೂಪದ ಆಮೆಯೂ ಪತ್ತೆಯಾಗಿತ್ತು.
ಹಳದಿ ಮೈಬಣ್ಣ, ಗುಲಾಬಿ ಕಣ್ಣು
ಒರಿಸ್ಸಾ ರಾಜ್ಯದ ಬಾಲಾಸೋರ್ ಜಿಲ್ಲೆಯ ಸುಜನಾಪುರ ಗ್ರಾಮಸ್ಥರು ಭಾನುವಾರ ಇಂತಹ ಅಪರೂಪದ ಹಳದಿ ಆಮೆ ಕಂಡು ಚಕಿತರಾಗಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸದ್ಯ ಅರಣ್ಯ ಇಲಾಖೆ ಇದನ್ನು ಸಂರಕ್ಷಿಸಿದೆ. ಇದು ತೀರಾ ವಿರಳ ಸಂಖ್ಯೆಯಲ್ಲಿರುವ ಆಮೆ ಪ್ರಭೇದ. ನಾನಂತೂ ಒಮ್ಮೆಯೂ ನೋಡಿರಲಿಲ್ಲ’ ಎಂದು ಅಲ್ಲಿನ ವನ್ಯಜೀವಿ ವಾರ್ಡನ್ ಭಾನುಮಿತ್ರ ಆಚಾರ್ಯ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹಿರಿಯ ಐ.ಎಫ್.ಎಸ್ ಅಧಿಕಾರಿ ಸುಶಾಂತ್ ನಂದಾ ಟ್ವೀಟ್ ಮಾಡಿ, ‘ಇದು ತುಂಬ ಅಪರೂಪದ ಆಮೆ. ಕೆಲವು ತಿಂಗಳು ಹಿಂದೆ ಸಿಂಧ್ ಪ್ರಾಂತ್ಯದಲ್ಲಿ ಕಂಡುಬಂದಿತ್ತು. ಇವನ್ನು ‘ಅಲ್ಬಿನಿ’ ವರ್ಗದ ಆಮೆ ಎನ್ನುತ್ತಾರೆ. ಇದರ ಕಣ್ಣುಗಳು ಗುಲಾಬಿ ಬಣ್ಣ ಹೊಂದಿವೆ’ ಎಂದಿದ್ದಾರೆ.

ಮೃದು ಚಿಪ್ಪಿನ ಆಮೆ
ಕೆಲ ವಾರಗಳ ಹಿಂದೆ ಇದೇ ಒರಿಸ್ಸಾ ರಾಜ್ಯದ ಮಯೂರ್ ಬಾಂಜ್ ಜಿಲ್ಲೆಯ ಡ್ಯೂಲಿ ಡ್ಯಾಮಿನಲ್ಲಿ ಮೀನುಗಾರರಿಗೆ ಸಿಕ್ಕ ಆಮೆ ಕೂಡ ಅಪರೂಪದ ತಳಿಯೇ. ಆಮೆ ಎಂದರೇನೇ ಮೊದಲಿಗೆ ಹೊಳೆಯುವುದು ಅದರ ಗಡುಸಾದ ಚಿಪ್ಪು ಅಥವಾ ಮೈಕವಚ. ಆದರೆ, ‘ಟ್ರಿನಿಚಿಡೈ’ ಎಂಬ ಪ್ರಭೇದಕ್ಕೆ ಸೇರಿದ ಈ ಆಮೆಯ ಚಿಪ್ಪು ಮುಟ್ಟಿದರೆ ಅದು ಪುಳುಪುಳು ಎನ್ನುವಷ್ಟರ ಮಟ್ಟಿಗೆ ಮೆತ್ತಗಿದೆ. ಇದನ್ನು ಅರಣ್ಯಾಧಿಕಾರಿಗಳು ಮರಳಿ ಡ್ಯಾಮಿಗೇ ಬಿಟ್ಟಿದ್ದಾರೆ.
ಇದು ಏಷ್ಯಾ, ಆಫ್ರಿಕಾ ಮತ್ತು ಉತ್ತರ ಅಮೆರಿಕದಲ್ಲಷ್ಟೇ ಕಂಡುಬರುತ್ತದೆ ಮತ್ತು ಇದು ಕೂಡ ತುಂಬ ವಿರಳ ಸಂಖ್ಯೆಯಲ್ಲಿದೆ ಎಂದು ವನ್ಯಜೀವಿ ತಜ್ಞರು ಹೇಳುತ್ತಾರೆ.