ಕೋವಿಡ್ ಬಾಧಿತ ಎಲ್ಲ ಮಕ್ಕಳಲ್ಲೂ ಇದು ಕಂಡು ಬಂದಿಲ್ಲವಾದರೂ, ಭಾರತ ಸೇರಿ ವಿಶ್ವಾದ್ಯಂತ ಹಲವಾರು ಪ್ರಕರಣಗಳು ವರದಿಯಾಗಿವೆ.
ಗದಗ: ಕೋವಿಡ್ ಬಾಧಿತ ಮಕ್ಕಳಲ್ಲಿ, ಸೋಂಕಿಗೆ ಒಳಗಾದ 2-3 ವಾರಕ್ಕೆ ಕವಾಸಾಕಿ ಕಾಯಿಲೆಯ ಲಕ್ಷಣಗಳು ಕಂಡು ಬರುತ್ತಿವೆ. ಅಮೆರಿಕ, ಯುರೋಪಿನಲ್ಲಿ ಏಪ್ರಿಲ್ ಮೊದಲ ವಾರದಲ್ಲೇ ಇಂತಹ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಭಾರತದ ದೆಹಲಿ ಮತ್ತು ಮುಂಬೈನಲ್ಲಿ ಇಂತಹ ಹಲವು ಪ್ರಕರಣ ವರದಿಯಾಗಿವೆ. ಕಳೆದ ತಿಂಗಳು ವಿಶ್ವ ಆರೋಗ್ಯ ಸಂಸ್ಥೆಯು, ಇದೊಂದು ಅನಾರೋಗ್ಯಕರ ಸ್ಥಿತಿಯಾಗಿದ್ದು, ಬಹು-ವ್ಯವಸ್ಥೀಯ ಉರಿಯೂತದ ಅಸ್ವಸ್ಥತೆ ( Multi-system inflammatory disorder) ಎಂದು ಕರೆದಿದೆ.
ಸಾಮಾನ್ಯ ದಿನಗಳಲ್ಲೂ ಮಕ್ಕಳಲ್ಲಿ ಈ ಅಸ್ವಸ್ಥತೆ ಕಾಣಿಸಿಕೊಳ್ಳುತ್ತದೆ. ಆದರೆ ಇದು ತುಂಬ ಅಪರೂಪಕ್ಕೆ ಕಾಣಸಿಕೊಳ್ಳುವ ಅಸ್ವಸ್ಥತೆ ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.
ಕವಾಸಾಕಿ ಲಕ್ಷಣಗಳು
14 ವರ್ಷದ ಮಕ್ಕಳಲ್ಲಿ ಅಪರೂಪಕ್ಕೆ ಕಾಣಿಸಿಕೊಳ್ಳುವ ಅಸ್ವಸ್ಥತೆ ಇದಾಗಿದೆ. ತೀವ್ರ ಜ್ವರ ಬರುತ್ತದೆ. ಕಣ್ಣುಗಳು ತೀವ್ರ ಕೆಂಪು ಬಣ್ಣಕ್ಕೆ ತಿರುಗುತ್ತವೆ. ನಾಲಿಗೆ ಬಾತುಕೊಂಡಂತೆ ದಪ್ಪಗಾಗಿ ತುಟಿಗಳು ಕೆಂಪು ಬಣ್ಣಕ್ಕೆ ತಿರುಗುತ್ತವೆ. ದೇಹದ ರಕ್ತನಾಳ ವ್ಯವಸ್ಥೆಯಲ್ಲಿ ಉರಿಯೂತ ಕಂಡು ಬರುತ್ತದೆ. ಇದು ಹೃದಯದ ಪರಿಧಮನಿ ನಾಳಗಳ ಮೇಲೂ ಪರಿಣಾಮ ಬೀರಬಹುದು.
1961ರಲ್ಲಿ ಮೊದಲ ಬಾರಿಗೆ 4 ವರ್ಷದ ಮಗುವಿನಲ್ಲಿ ಈ ರೋಗ ಲಕ್ಷಣ ಗುರುತಿಸಿದ್ದು ಜಪಾನಿನ ಮಕ್ಕಳ ವೈದ್ಯ ತಾಮಾಸಾಕು ಕವಾಸಾಕಿ. ಹೀಗಾಗಿ ಈ ಬಗೆಯ ಅಸ್ವಸ್ಥತೆಯನ್ನು ಆತನ ಹೆಸರಿನಿಂದ ಕವಾಸಾಕಿ ಕಾಯಿಲೆ ಎನ್ನುತ್ತಾರೆ.
ಏಕೆ ಬರುತ್ತದೆ?
ಅತಿ ವಿರಳ ಎನ್ನಬಹುದಾದ ಈ ಅಸ್ವಸ್ಥತೆಯು ರೋಗ ನಿರೋಧಕ ಶಕ್ತಿಯ ಮೇಲೆ ಪರಿಣಾಮ ಉಂಟಾದಾಗ ಕಾಣಿಸುತ್ತದೆ. ‘ಒಂದು ಸೋಂಕು ಅಥವಾ ವೈರಸ್ಸಿಗೆ ರೋಗ ನಿರೋಧಕತೆಯು ಪ್ರತಿಕ್ರಿಯಿಸುವ ಬಗೆ ಇದಾಗಿದೆ. ಒಂದು ನಿರ್ದಿಷ್ಠ ಸೋಂಕಿಗೆ ಮಗುವಿನ ದೇಹದ ರೋಗ ನಿರೋಧಕ ವ್ಯವಸ್ಥೆ ಪ್ರತಿಕ್ರಿಯೆ ನೀಡುವಾಗ, ಕವಾಸಾಕಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ’ ಎನ್ನುತ್ತಾರೆ ಮುಂಬೈ ಕೆಎಂಇ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಮುಖೇಶ್ ಅಗರವಾಲ್
ಕೋವಿಡ್ ಗೂ ಇದಕ್ಕೂ ಲಿಂಕ್ ಏನು?
ಕೋವಿಡ್ ಬಾಧಿತ ಮಕ್ಕಳಲ್ಲಿ ಹೆಚ್ಚಾಗಿ ಲಕ್ಷಣಗಳು ಕಂಡುಬರುವುದಿಲ್ಲ ಅಥವಾ ಸೌಮ್ಯ ಲಕ್ಷಣಗಳು ಕಂಡುಬರುತ್ತವೆ. ಇದು ಕೋವಿಡ್ ಬಾಧಿತ ಮಕ್ಕಳಲ್ಲಿ ಅಪರೂಪಕ್ಕೆ ಅಂದರೆ ಅತಿ ವಿರಳ ಸಂಧರ್ಭಗಳಲ್ಲಿ ಈ ಲಕ್ಷಣಗಳು ಕಂಡು ಬರುತ್ತಿವೆ. ಕೋವಿಡ್ ಬಂದ ನಂತರ 2-3 ವಾರಕ್ಕೆ ಕೆಲವೇ ಕೆಲವು ನಕ್ಕಳಲ್ಲಿ ಈ ಲಕ್ಷಣ ಕಾಣಿಸಿಕೊಂಡಿವೆ. ಈ ಅಸ್ವಸ್ಥತೆಗೂ ಪರಿಣಾಮಕಾರಿ ಚಿಕಿತ್ಸೆಯೂ ಲಭ್ಯವಿದೆ ಎನ್ನುತ್ವೆ ವೈದ್ಯಕೀಯ ಮೂಲಗಳು.