ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯದ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದೆ. ಕೊರೊನಾ ಏರುಗತಿಯಲ್ಲಿರುವ ಸಮಯದಲ್ಲಿ ಅವರು ನಡೆಸುತ್ತಿರುವ ಪ್ರತಿಭಟನೆಯಿಂದ ರಾಜ್ಯದಲ್ಲಿ ಕೆಲವು ಸಮಸ್ಯೆಗಳು ಎದುರಾಗಿವೆ.
ಆಶಾ ಕಾರ್ಯಕರ್ತೆಯರ ಪ್ರತಿಭಟನೆಯನ್ನು ಬೆಂಬಲಿಸಿ ಕೆಪಿಸಿಸಿ ಸರಣಿ ಟ್ವೀಟ್ ಮಾಡಿದೆ. “ಆಶಾ ಕಾರ್ಯಕರ್ತೆಯರಿಗೆ ಗೌರವ ಧನವನ್ನು ಹೆಚ್ಚಿಸಲಾರದ ರಾಜ್ಯ ಸರ್ಕಾರವು ಜನರ ಆರೋಗ್ಯ ಸಾಮಗ್ರಿಗಳ ಖರೀದಿಯಲ್ಲಿ ಭ್ರಷ್ಟಾಚಾರ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ” ಎಂದು #SpeakUpForAshaWorkers ಹ್ಯಾಷ್ ಟ್ಯಾಗ್ ಅಡಿ ಟ್ವೀಟ್ ಮಾಡಿದೆ.
ಆಶಾ ಕಾರ್ಯಕರ್ತೆಯರನ್ನು ಎಗ್ಗಿಲ್ಲದೇ ದುಡಿಸಿಕೊಳ್ಳುತ್ತಿರುವ ರಾಜ್ಯ ಸರ್ಕಾರ ಅವರ ದುಡಿಮೆಗೆ ತಕ್ಕಂತೆ ವೇತನ ನೀಡದೇ ಅವರ ಸೇವೆಯನ್ನು ಅವಮಾನಿಸುತ್ತಿದೆ ಎಂದು ಕೆಪಿಸಿಸಿ ಆರೋಪಿಸಿದೆ.
ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರ, ಹಗಲಿರುಳು ಕೊರೊನಾ ವಾರಿಯರ್ಸ್ ಗಳಾಗಿ ಕೆಲಸ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರನ್ನು ಕಡೆಗಣಿಸಿರುವುದು ಖಂಡನೀಯ. ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಆರಂಭಿಸಿ ಮೂರು ದಿನ ಕಳೆಯಿತು. ಅವರ ಸಮಸ್ಯೆ ಆಲಿಸಲು ರಾಜ್ಯ ಸರ್ಕಾರಕ್ಕೆ ಏನು ಸಮಸ್ಯೆ? ಎಂದು ಪ್ರಶ್ನಿಸಿದೆ.
ಅಲ್ಲದೆ, ಸರ್ಕಾರ ಘೋಷಿಸಿದ ₹1,600 ಕೋಟಿ ಪ್ಯಾಕೇಜ್ ನ ಹಣ 25% ರಷ್ಟು ಜನರಿಗೂ ತಲುಪಿಲ್ಲ. ಜನರು ಸತ್ತ ಮೇಲೆ ಅವರಿಗೆ ದುಡ್ಡು ಕೊಡುತ್ತೀರಾ? ಎಂದು ಖಾರವಾಗಿ ಪ್ರಶ್ನಿಸಿದೆ.