263 ಕೋಟಿ ರೂ. ವೆಚ್ಚದಲ್ಲಿ ನದಿ ಮೇಲೆ ನಿರ್ಮಿಸಿದ್ದ ಈ ಸೇತುವೆ ಜೂನ್ 16ರಂದು ಉದ್ಘಾಟನೆಯಾಗಿತ್ತು. ಬುಧವಾರ ಧಡಾರನೆ ಕುಸಿದು ನದಿಯೊಳಕ್ಕೆ ಬಿದ್ದಿದೆ!
ಗೋಪಾಲ್ ಗಂಜ್(ಬಿಹಾರ್): ಬಿಹಾರಿನ ಗೋಪಾಲ್ ಗಂಜ್ ಜಿಲ್ಲೆಯಲ್ಲಿ ಗಾಂಧಕ್ ನದಿ ಮೇಲೆ ನಿರ್ಮಿಸಲಾಗಿದ್ದ ಸೇತುವೆ ಬುಧವಾರ ಕುಸಿದಿದೆ.
263 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಈ ಸೇತುವೆಯನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಜೂನ್ 16ರಂದು ಉದ್ಘಾಟನೆ ಮಾಡಿದ್ದರು. ಉದ್ಘಾಟನೆಯಾಗಿ 29 ದಿನಕ್ಕೇ ಕುಸಿದಿದ್ದು, ವಿರೋಧ ಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ.
ಸೇತುವೆ ನಿರ್ಮಿಸಿದ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿದ್ದು ಸರ್ಕಾರಿ ಅಧಿಕಾರಿಗಳು ಅವರಿಗೆ ಬೆಂಗಾವಲಾಗಿ ನಿಂತಿದ್ದಾರೆ ಎಂದು ಸ್ಥಳೀಯ ಜನತೆ ದೂರಿದ್ದಾರೆ.
ಬಿಹಾರಿನಲ್ಲಿ ಈಗ ಸತತವಾಗಿ ಮಳೆ ಸುರಿಯುತ್ತಿದ್ದು, ನದಿ ನೀರಿನ ಮಟ್ಟ ಏರಿ ಸೇತುವೆ ಮೇಲೆ ಬಂದಾಗ, ಅಷ್ಟೂ ಭಾರ ತಡೆದುಕೊಳ್ಳಲಾಗದ ಸೇತುವೆ ಕುಸಿದಿದೆ. ಈ ಸೇತುವೆ ಕುಸಿತದಿಂದ ಉತ್ತರ ಬಿಹಾರಿನ ನೂರಾರು ಪಟ್ಟಣ, ಗ್ರಾಮಗಳ ನಡುವಿನ ಸಂಪರ್ಕ ತಪ್ಪಿ ಹೋಗಿದೆ.
ಮಾಜಿ ಉಪ ಮುಖ್ಯಮಂತ್ರಿ, ಆರ್.ಎಲ್.ಡಿ ನಾಯಕ ತೇಜಸ್ವಿ ಯಾದವ್, ‘263 ಕೋಟಿ ರೂ. ಖರ್ಚು ಮಾಡಿ, 8 ವರ್ಷ ಕಾಲ ಕಾಮಗಾರಿ ನಡೆಸಿ ನಿರ್ಮಿಸಿದ ಸೇತುವೆ 29 ದಿನದಲ್ಲಿ ನದಿ ಪಾಲಾಗಿದೆ. ಭ್ರಷ್ಟಾಚಾರ್ ಭೀಷ್ಮ ಪಿತಾಮಹ ಸಿಎಂ ನಿತೀಶ್ ಕುಮಾರ್ ಈ ಬಗ್ಗೆ ಒಂದೂ ಮಾತು ಆಡುತ್ತಿಲ್ಲ. ಬಿಹಾರದಲ್ಲಿ ಲೂಟಿ ನಡೆಯುತ್ತಿದೆ’ ಎಂದು ಟೀಕಿಸಿದ್ದಾರೆ.