ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಶಾಲೆಯ ಶಿಕ್ಷಕರು ತಮ್ಮ ಒಂದು ಅಥವಾ ಎರಡು ದಿನದ ಸಂಬಳವನ್ನು ತ್ಯಾಗ ಮಾಡುವ ಮೂಲಕ ಖಾಸಗಿ ಶಾಲಾ ಶಿಕ್ಷಕರ ನೆರವಿಗೆ ಬರಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಸುರೇಶಕುಮಾರ್ ಮನವಿ ಮಾಡಿದ್ದಾರೆ.
ಅವರು ಮಂಗಳವಾರ ಶಿಕ್ಷಕರ ಸಂಘದ ಪ್ರತಿನಿಧಿಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಖಾಸಗಿ ಶಾಲಾ ಶಿಕ್ಷಕರು ಸಂಬಂಳವಿಲ್ಲದೇ ತೊಂದರೆಯಲ್ಲಿ ಇದ್ದಾರೆ. ಅವರ ನೆರವಿಗೆ ಸರ್ಕಾರ ಎಲ್ಲ ಸಾಧ್ಯತೆ ಪರಿಶೀಲಿಸುತ್ತಿದೆ. ಸರ್ಕಾರಿ ಶಾಲಾ ಶಿಕ್ಷಕರೇ, ಎಂತಹ ಕಷ್ಟದ ಆರ್ಥಿಕ ಸ್ಥಿತಿಯಲ್ಲೂ ಸರ್ಕಾರ ನಿಮ್ಮ ಯಾವ ಭತ್ಯೆ, ಸೌಲಭ್ಯಕ್ಕೆ ಧಕ್ಕೆ ತಂದಿಲ್ಲ. ಈಗ ನೀವು ನಿಮ್ಮ ವೃತ್ತಿ ಬಾಂಧವರಿಗೆ ಸಹಾಯಹಸ್ತ ನೀಡಿ ಎಂದು ಮನವಿ ಮಾಡಿರುವ ಅವರು, ತಾವೂ ನೀಡುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಉತ್ತರಪ್ರಭಕ್ಕೆ ಪ್ರತಿಕ್ರಿಯಿಸಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಗಿ, ಸಚಿವರ ಮನವಿಗೆ ಸಂಬಂಧಿಸಿದಂತೆ ಎಲ್ಲ ಜಿಲ್ಲೆಯ ಶಿಕ್ಷಕರ ಸಂಘದ ಪದಾಧಿಕಾರಿಗಳಿಂದ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನಿಸುತ್ತೇವೆ. ಈಗಾಲೇ ಸಾಕಷ್ಟು ಸಮಸ್ಯೆಗಳಿಗೆ ಸರ್ಕಾರಿ ಶಿಕ್ಷಕರು ಸಹಾಯ ಮಾಡಿದ್ದಾರೆ. ಎಲ್ಲ ಶಿಕ್ಷಕರು ವೇತನವನ್ನೆ ನಂಬಿರುವುದರಿಂದ ಈ ಬಗ್ಗೆ ಎಲ್ಲರ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳುತ್ತೇವೆ.
ಇದಕ್ಕೆ ಪ್ರತಿಕ್ರಿಯಿಸಿರುವ ಖಾಸಗಿ ಶಾಲಾ ಶಿಕ್ಷಕರ ಸಂಘವು, ಸಚಿವರ ತೋರಿರುವ ಕಾಳಜಿ ಸ್ವಾಗತಾರ್ಹ, ಆದರೆ, ಶಿಕ್ಷಕರ ಕ್ಷೇಮಾಭಿವೃದ್ಧಿ ನಿಧಿಯಲ್ಲಿನ ನಮ್ಮ ಹಣ ಸರ್ಕಾರಿ ಶಾಲೆಯ ಶಿಕ್ಷಕರಿಗಾಗಿ ಉಪಯೋಗವಾಗುತ್ತ ಬಂದಿದೆ. ಅದರಲ್ಲಿರುವ ನಮ್ಮ ಹಣವನ್ನು ಈಗ ಒದಗಿಸುವತ್ತ ಸಚಿವರು ಗಮನ ಹರಿಸಲಿ ಎಂದಿದ್ದಾರೆ.