‘ಯಾವಾಗ ಹುಟ್ಟಬೇಕು, ಯಾವಾಗ ಸಾಯಬೇಕು ಎಂದು ನಿರ್ಧರಿಸುವುದು ನಮ್ ಕೈಲಿಲ್ಲ. ಆದರೆ, ಹೇಗೆ ಬದುಕಬೇಕು ಎಂದು ನಿರ್ಧರಿಸುವುದು ನಾವೇ’

ಸೋಮವಾರ ಬಿಡುಗಡೆಗೊಂಡ ‘ದಿಲ್ ಬೇಚಾರಾ’ ಟ್ರೈಲರ್ ನಲ್ಲಿ ನಾಯಕ ಈ ಮಾತು ಹೇಳುತ್ತಾನೆ. ಸಿನಿಮಾಗಳಲ್ಲಿ ಇದೊಂದು ಸಹಜ ಡೈಲಾಗ್. ಆದರೆ ದಿಲ್ ಬೇಚಾರಾದಲ್ಲಿ ಈ ಡೈಲಾಗ್ ಹಲವು ಅರ್ಥಗಳನ್ನು ಹೊಮ್ಮಿಸುತ್ತದೆ. ಜೂನ್ 14ರಂದು ಆತ್ಮಹತ್ಯೆ ಮಾಡಿಕೊಂಡ ಭರವಸೆಯ ಚಿಲುಮೆಯಂರಿದ್ದ ಸುಶಾಂತ್ ಸಿಂಗ್ ರಜಪೂತ ಈ ಸಿನಿಮಾದ ನಾಯಕ. ಇದು ಆತನ ಕೊನೆಯ ಸಿನಿಮಾ. ಛೇ,ಸುಶಾಂತ್ ಕೊನೆಯ ಸಿನಿಮಾದ ಮೇಲಿನ ಡೈಲಾಗ್ ಮತ್ತು ಬದುಕಿನಲ್ಲಿ ಎಂತಹ ವೈರುಧ್ಯ?

ಟ್ರೈಲರ್ ತುಂಬ ಚುಟುಪುಟು ಓಡಾಡುತ್ತ ಗೆಳತಿಯಲ್ಲಿ ಅದಮ್ಯ ಜೀವನೋತ್ಸಾಹ ತುಂಬುತ್ತಲೇ ಅದ್ಭುತ, ಚೇತೋಹಾರಿ ಅಭಿನಯ ನೀಡಿರುವ ಈ ಹುಡುಗನ ಸಾವು ಮತ್ತೆ ಮತ್ತೆ ಕಾಡುತ್ತಲೇ ಇರುತ್ತದೆ.

ದಿಲ್ ಬೇಚಾರ ಚಿತ್ರದ ಟ್ರೈಲರ್

ಟ್ರೈಲರ್ ಶುರುವಾತಿನಲ್ಲಿ ನಾಯಕಿ ಸಂಜನಾ ಸಂಘಿ ಕಾಣಿಸಿ ಲವಲವಿಕೆಯಿಂದ ಹೇಳುತ್ತಾಳೆ: ಸಣ್ಣೋಳಿದ್ದಾಗ ನಮ್ ನಾನಿ (ಅಜ್ಜಿ) ಪದೇ ಪದೇ ಒಂದ್ ಕತಿ ಹೇಳ್ತಿತ್ತು: ಏಕ್ ಥಾ ರಾಜಾ, ಏಕ್ ಥಿ ರಾಣಿ. ದೋನೋ ಮರ್ ಗಯೆ ಕಹಾನಿ ಖತಮ್ ಹುಯಿ’ ಎನ್ನುತ್ತಾಳೆ.

ಮುಂದಿನ ಆಕೆಯ ಡೈಲಾಗ್ ನಿರ್ಭಾವುಕತೆಯಿಂದ ತುಂಬಿದೆ: ನಾನು ಕ್ಯಾನ್ಸರ್ ರೋಗಿ…

ಮುಂದಿನ ಸೀನ್ನಲ್ಲಿ ಹೀರೊ ಸುಶಾಂತ್. ಒಂಥರಾ ಕೀಟಲೆಯ, ಸದಾ ಹ್ಯಾಪಿ ಆಗಿರುವ, ಆಧುನಿಕ ಬದುಕನ್ನು ಎಂಜಾಯ್ ಮಾಡುವ ಜೀವನಪ್ರೀತಿಯ ಯುವಕ. ಈತನಿಗೆ ಮೂಳೆ ಕ್ಯಾನ್ಸರ್!

ಸುಶಾಂತ್ ಮತ್ತು ಸಂಜನಾ ನಡುವೆ ಸ್ನೇಹ ಹುಟ್ಟುವ ದೃಶ್ಯಗಳು ಮನಮೋಹಕ. ಹಿನ್ನೆಲೆಯಲ್ಲಿ ಎ. ಆರ್. ರೆಹಮಾನ್ ತೇಲಿಸುವ ತಂಪಾದ ಹಿತಗಾಳಿಯಂತಹ ಸಂಗೀತ. ಸ್ನೇಹಕ್ಕೆ, ಪ್ರೇಮಕ್ಕೆ ಇನ್ನೇನು ಬೇಕು?

ಸಂಜನಾ ಕ್ಯಾನ್ಸರ್ ಉಲ್ಬಣವಾಗುತ್ತದೆ. ಆಕೆ ಸುಶಾಂತ್ನಿಂದ ದೂರ ಇರಲು ಪ್ರಯತ್ನಿಸುತ್ತಾಳೆ. ಆಗ ಅವನು ಆಕೆಯಜ್ಜಿಯ ಕತೆ ವಿಸ್ತರಿಸಿ ಹೇಳುತ್ತಾನೆ: ಏಕ್ ಥಾ ರಾಜಾ, ಏಲ್ ಥಿ ರಾಣಿ. ದೋನೋ ಮರ್ ಗಯೆ ಕಹಾನಿ ಖತಮ್ ಹುಯಿ.. ಮಗರ್ ವೊ ಕಹಾನಿ ಆದೂರಿ ಹೈ. ನಯೀ ಕಹಾನಿ ಮೆ ಹಮ್ ದೋನೋ ಜೀತೆ ರಹತೆ ಹೈ’. (ಇದ್ದನೊಬ್ಬ ರಾಜಾ, ಇದ್ದಳೊಬ್ಳು ರಾಣಿ. ಇಬ್ಬರೂ ಸತ್ತರು, ಕತೆ ಖತಂ… ಆ ಕತೆ ಅಪೂರ್ಣ. ಹೊಸ ಕತೆಯಲ್ಲಿ ನಾವಿಬ್ಬರೂ ಜೀವಿಸುತ್ತೇವೆ,,,)

ಥಟ್ಟಂತ ಹೊಸ ಚೈತನ್ಯ ಪಡೆಯುವ ಸಂಜನಾ ಅವನನ್ನು ಅಪ್ಪುತ್ತಾಳೆ. ಅದು ಕೇವಲ ದೈಹಿಕ ಆಲಿಂಗನವಲ್ಲ, ಸಾವಿನತ್ತ ಮುಖ ಮಾಡಿರುವ ಎರಡು ಮನಸುಗಳು ಬದುಕಿಯೇ ಬಿಡೋಣ ಎಂದು ಆಲಂಗಿಸಿದ ಅಮೋಘ ಕ್ಷಣ.

ಅವರಿಬ್ಬರೂ ಪ್ಯಾರಿಸ್ ತೆರಳುತ್ತಾರೆ. ಮೂಳೆ ಕ್ಯಾನ್ಸರ್ ಗುಣಮುಖವಾಗುವ ಭರವಸೆಯಿದೆ, ಆದರೆ ಸಂಜನಾ ಕ್ಯಾನ್ಸರ್ ಹೆಗಲ ಮೇಲೆ ಸಾವನ್ನು ಹೊತ್ತು ಬಂದಿದೆ. ಪ್ಯಾರಿಸ್ ನಲ್ಲಿ ಪ್ಯಾರಿ ಪ್ಯಾರಿ ಮಾತು ಚೇಷ್ಟೆಗಳ ಮೂಲಕ ಮತ್ತೆ ಸಂಜನಾಳಲ್ಲಿ ಜೀವನೋತ್ಸಾಹ ತುಂಬತೊಡಗುತ್ತಾನೆ.

ಅಂತ್ಯದಲ್ಲಿ ಏನಾಗಬಹದು? ಸಂಜನಾ ಅಜ್ಜಿ ಹೇಳಿದ ಕತೆಯೋ ಅಥವಾ ಸುಶಾಂತ್ ವಿಸ್ತರಿಸಿದ ಕತೆಯೋ ಎಂಬ ಕುತೂಹಲವನ್ನು ಟ್ರೈಲರ್ ಬಿಟ್ಟು ಕೊಟ್ಟಿಲ್ಲ.

ಇದು ಸುಶಾಂತ್ ಕೊನೆ ಸಿನಿಮಾ. ಸಂಜನಾ ಮತ್ತು ನಿರ್ದೇಶಕ ಮುಖೇಶ್ ಛಾಬ್ರಾಗೆ ಮೊದಲ ಸಿನಿಮಾ.

ದಿಲ್ ಬೇಚಾರಾ ತುಂಬ ಸುಶಾಂತ್ ಲವಲವಿಕೆ ಜೊತೆಗೆ ಆತನ ಆತ್ಮಹತ್ಯೆಯೂ ಆವರಿಸಲಿದೆ.

ಲಾಕ್ ಡೌನ್ ಕಾರಣಕ್ಕೆ ಥಿಯೇಟರ್ ಪ್ರದರ್ಶನ ಇಲ್ಲದ್ದರಿಂದ ಸಿನಿಮಾವನ್ನು ಜುಲೈ 24ರಂದು ಡಿಸ್ನಿ-ಹಾಟ್ ಸ್ಟಾರ್ ವೆಬ್ ಮೂಲಕ ಬಿಡುಗಡೆ ಮಾಡಲಾಗುತ್ತಿದೆ.

Leave a Reply

Your email address will not be published.

You May Also Like

ಹೈಟೆಕ್ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ – ನಟಿಮಣಿಯರ ರಕ್ಷಣೆ!

ಮುಂಬಯಿ : ಹೈ ಟೆಕ್ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿದ್ದು, ಓರ್ವ ಸಿನಿಮಾ ನಟಿ ಸೇರಿದಂತೆ ಮೂವರು ಧಾರವಾಹಿ ನಟಿಯರನ್ನು ರಕ್ಷಿಸಲಾಗಿದೆ.

ಲಾಕ್ ಡೌನ್ ನಿಂದಾಗಿ ಮದುವೆ ಮುಂದಕ್ಕೆ – ಯುವಕ ಆತ್ಮಹತ್ಯೆ!

ರಾಂಚಿ: ಲಾಕ್ ಡೌನ್ ನಿಂದಾಗಿ ಮದುವೆ ಮುಂದೂಡಿದ್ದರಿಂದ ಮನನೊಂದ 30 ವರ್ಷದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ…

ಶನಿವಾರ ಒಂದೇ ದಿನ ದಾಖಲೆಯ ಸೋಂಕಿತರು ಪತ್ತೆ!!

ಶನಿವಾರ ಒಂದೇ ದಿನ ದಾಖಲೆಯ ಸೋಂಕಿತರು ಪತ್ತೆ!! ನವದೆಹಲಿ : ದೇಶದಲ್ಲಿ ಶನಿವಾರ ಒಂದೇ ದಿನ…

ಮದ್ಯ ಸೇವನೆಯಿಂದ ಮೃತಪಟ್ರೆ ವಿಮೆ ಪರಿಹಾರ ಇಲ್ಲ..!

ಮದ್ಯಪಾನ ಮಾಡಿ ಮೃತಪಟ್ಟವರಿಗೆ ವಿಮೆ ಪರಿಹಾರ ಸಿಗಲ್ಲ, ಅಪಘಾತದಲ್ಲಿ ಗಾಯಗೊಂಡವರಿಗೆ ಮಾತ್ರ ಪರಿಹಾರ ನೀಡಲು ವಿಮೆ ಕಂಪನಿ ಬದ್ಧವಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.