ಕೊರೋನಾ ವೈರಸ್ ಎಲ್ಲರಿಗೂ ಸರಿಸಮಾನವಾಗಿ ಬಿಡದೆ ಬೆನ್ನತ್ತಿದೆ. ಸರ್ಕಾರೇತರ ಶಿಕ್ಷಕರಿಗೆ ಅದರಲ್ಲೂ ಅಸಂಖ್ಯಾತ ಅನುದಾನರಹಿತ ಶಿಕ್ಷಕರಿಗೆ ಹಾಗೂ ಶಿಕ್ಷಕೇತರರಿಗೆ ಆರ್ಥಿಕವಾಗಿ ಇದು ಅತ್ಯಂತ ಸಂಕಷ್ಟದ ದಿನಗಳಾಗಿವೆ.
“ಈ ನಾಲ್ಕು ತಿಂಗಳುಗಳಷ್ಟೆ ಅಲ್ಲ ಮುಂದೆ ಅನಿಶ್ಚಿತ ಅವಧಿಯವರೆಗೂ ಅನುದಾನ ರಹಿತ ಶಿಕ್ಷಕರು ಮತ್ತು ಶಿಕ್ಷಕೇತರರು ಎದುರಿಸಬಹುದಾದ ಸಂಕಷ್ಟವನ್ನು ಯಾವ ಶಬ್ದಗಳಿಂದ ಹೇಳಬೇಕೊ ತಿಳಿಯುತ್ತಿಲ್ಲ.” ಸರ್ಕಾರ ಸಮಾಜದ ಎಲ್ಲ ಕೆಳ ವರ್ಗದವರ ಬಗ್ಗೆ ಕಾಳಜಿವಹಿಸಿ ಧಾರಾಳವಾಗಿ ಆರ್ಥಿಕ ಉದಾರತನ ತೋರಿದ ಬಗ್ಗೆ ನಮಗೆ ನಿಜಕ್ಕೂ ಮತ್ಸರ ಮತ್ತು ಅಸೂಯೆ ಇಲ್ಲ.
ಶಿಕ್ಷಕರ ದಿನಾಚರಣೆಯೆಂದು “ಗುರು ಬ್ರಹ್ಮ, ಗುರು ವಿಷ್ಣು” ಎಂದು ಇತ್ಯಾದಿಯಾಗಿ ದೊಡ್ಡ ದೊಡ್ಡ ಶಬ್ದಗಳಿಂದ ಹಾಡಿ ಹೊಗಳಿ ಹಾರ ಹಾಕುವ ಔದಾರ್ಯದ ಸರ್ಕಾರಕ್ಕೂ ಮತ್ತು ಸಮಾಜಕ್ಕೂ ಅನುದಾನತ ರಹಿತ ಶಿಕ್ಷಕರ ಬಗ್ಗೆ ಈ ಸಂದರ್ಭದಲ್ಲಿ ಕಾಳಜಿ ಇಲ್ಲದೇ ಇರುವುದು ದು:ಖಕರ ಸಂಗತಿಯೆನಿಸುತ್ತದೆ. ಶಾಲೆಗೆ ಬರುವ ಮಕ್ಕಳನ್ನು ತಮ್ಮ ಮಕ್ಕಳಂತೆ ಪ್ರೀತಿ ವಾತ್ಸಲ್ಯದಿಂದ ಕಂಡು ಅವರ ಸುಂದರ ಭವಿಷ್ಯಕ್ಕಾಗಿ ಅನುದಾನ ರಹಿತ ಶಿಕ್ಷಕರು ಶ್ರಮಿಸುತ್ತಿದ್ದೇವೆ. ನಮಗೂ ಕೂಡ ಮಕ್ಕಳಿದ್ದಾರೆ ಮತ್ತು ನಮಗೆ ಅವರನ್ನು ನೋಡಿಕೊಳ್ಳಲು ಸಾಧ್ಯವಾಗುವುದು ಕೇವಲ ನಮ್ಮ ಮಾಸಿಕ ವೇತನ ಬಂದರೇ ಮಾತ್ರ ಎಂದು ಹೇಳ ಬಯಸುತ್ತೇನೆ. “ಬಹುಶ: ಈ ವರ್ಷದ ಶಿಕ್ಷಕರ ದಿನಾಚರಣೆಯು ಅನುದಾನ ರಹಿತ ಶಿಕ್ಷಕರಿಗೆ ಕರಾಳ ದಿನವಾಗಬಹುದು”.
ಅನುದಾನ ರಹಿತ ಶಾಲಾ ಶಿಕ್ಷಕರು ಮಾಸಿಕ ವೇತನವಿಲ್ಲದೇ ಇನ್ನೇಷ್ಟು ಕಾಲ ಜೀವ ಹಿಡಿದುಕೊಂಡಾರು? “ಅನುದಾನ ರಹಿತ ಈ ಶಿಕ್ಷಕ ಹಾಗೂ ಶಿಕ್ಷಕೇತರ ಕುಟುಂಬಗಳ ಪಾಡು ಕೇಳಿದರೆ ಕಲ್ಲೂ ಸಹ ಕರಗುವಂತಾಗಿದೆ ಎಂದರೆ ತಪ್ಪಾಗಲಾರದು”. ಅದರ ಜೊತೆಗೆ “ಶಿಕ್ಷಕ” ಎಂಬ ಆತ್ಮ ಗೌರವ ಉಳಿಸಿಕೊಳ್ಳುವಲ್ಲಿ ಶಬ್ದಾತೀತವಾಗಿ ಚಡಪಡಿಸುತ್ತಿರುವ ಈ ಅನುದಾನ ರಹಿತ ಶಿಕ್ಷಕರ ಸಮೂಹದ ಸಂಕಟ ಅರ್ಥವಾಗದೇ ಇರುವುದು ನಿಜಕ್ಕೂ ಶಿಕ್ಷಕ ವೃತ್ತಿ ಮೇಲೆ ಅವಲಂಬಿತವಾದ ನಮ್ಮ “ದೌರ್ಭಾಗ್ಯವೇ” ಎಂದು ನಮ್ಮ ಕಣ್ಣೀರಿನಿಂದ ನಾವೇ ಕೈ ತೊಳೆದುಕೊಳ್ಳಬೇಕಾ..? ಎಂಬುದು ಪ್ರಶ್ನೆಯಾಗಿದೆ.
“ಬಹುಶಃ ಸರ್ಕಾರ ಹಾಗೂ ಸಮಾಜದ ದೃಷ್ಠಿಯಲ್ಲಿ ಅನುದಾನ ರಹಿತ ಶಿಕ್ಷಕರು ಶಾಪಗ್ರಸ್ಥರೇ?” ದಿನ ಬೆಳಗಾದರೇ ಜನಪರ ಎಂದು ಹೇಳುವ ಈ ಸರಕಾರ ಹಾಗೂ ಶಿಕ್ಷಕರು ರಾಷ್ಟ್ರ ನಿರ್ಮಾಪಕರು ಎಂದು ವೇದಿಕೆ ಮೇಲೆ ಬಾಯ್ತುಂಬ ಹೊಗಳುವ ಸಮಾಜದ ಗಣ್ಯರಿಗೆ ಹಾಗೂ ನಾಯಕರ ಕಣ್ಣಿಗೆ ಕಾಣದಷ್ಟೂ ನಾವು ನಿಕೃಷ್ಟರೇ? ಇನ್ನು ಸಹಿಸಲು ಸಾಧ್ಯವಾಗದ ತೀವ್ರ ಅಸಹಾಯಕ ಸ್ಥಿತಿಯಲ್ಲಿ ಮನನೊಂದು ಅನುದಾನ ರಹಿತ ಸಮಸ್ತ ಶಿಕ್ಷಕ ಹಾಗೂ ಶಿಕ್ಷಕೇತರ ವರ್ಗದ ಪರವಾಗಿ ಘನ ಸರ್ಕಾರದ ಮುಂದೆ ಹಾಗೂ ಸಮಾಜದ ಸಮಸ್ತರಿಗೆ ನಮ್ಮ ಈ ಅಸಹನೀಯ ಸಂಕಟ ಹಾಗೂ ವೇದನೆಯನ್ನು ಪ್ರಸ್ತಾಪಿಸುವುದು ಅನಿವಾರ್ಯವಾಗಿದೆ.
ಇದೇ ಪರಿಸ್ಥಿತಿ ಮುಂದುವರೆದರೆ ಶಾಲಾ ಶಿಕ್ಷಕರು ಆಂಧ್ರ ಪ್ರದೇಶ ಮತ್ತು ಬೇರೆ ರಾಜ್ಯಗಳಲ್ಲಿ ಮಾಡುತ್ತಿರುವಂತೆ ಇಡ್ಲಿ ಮಾರುವುದು, ಕಿರಾಣಿ ಸ್ಟೋರ್ ನಡೆಸುವುದು, ಕಾಯಿಪಲ್ಲೆ ಮಾರುವಂತಹ ಸಂಗತಿಗಳು ಇನ್ನು ದೂರ ಉಳಿದಿಲ್ಲ ಅಂತಾನೇ ಹೇಳಬಹುದು. ಇಲ್ಲವೆಂದರೆ ಕುಟುಂಬದವರನ್ನು ಕಾಳಜಿ ಮಾಡೋಕಾಗದೆ ಅವರ ದಿನಸಿ ಮನೆ ಖರ್ಚಿಗೆ ಹಣವಿಲ್ಲದೆ ವೇತನ ಬರದೇ ಹೋದ ಕಾರಣ “ಚಾಮರಾಜ ನಗರದ ಮಳುವಳ್ಳಿ ಗ್ರಾಮದಲ್ಲಿ ಇಬ್ಬರೂ ಅರೇಕಾಲಿಕ ಶಿಕ್ಷಕರು ನೇಣು ಬಿಗಿದುಕೊಂಡಿರುವುದು ನಿಮ್ಮ ಮುಂದೆ ನೈಜ ಘಟನೆಯೇ ಇದೆ”.
ಅನುದಾನ ರಹಿತ ಶಿಕ್ಷಕರಿಗೆ ಹಾಗೂ ಶಿಕ್ಷಕೇತರರಿಗೆ ಬರುವ ಮಾಸಿಕ ವೇತನ ಪಾಲಕರು ತುಂಬುವ ಭೋದನಾ ಶುಲ್ಕದಿಂದ ಮಾತ್ರ ಸಾಧ್ಯ. ಇಲ್ಲವಾದರೇ ನಮಗೆ ವೇತನವೇ ಇಲ್ಲ. ಆರ್ಥಿಕವಾಗಿ ತುಂಬಲು ಸಾಧ್ಯವಾಗದಿದ್ದವರಿಗೆ ನಾವು ಈಗಲೇ ಶುಲ್ಕ ತುಂಬಿ ಅನ್ನೊದಿಲ್ಲ. “ಆದರೇ ಆರ್ಥಿಕವಾಗಿ ಸದೃಢವಿರುವ ಮತ್ತು ಸರ್ಕಾರದಿಂದ ಪೂರ್ಣ ವೇತನ ತೆಗೆದುಕೊಳ್ಳುತ್ತಿರುವ ಅನುದಾನಿತ ಮತ್ತು ಸರ್ಕಾರಿ ನೌಕರದಾರರಿಗೆ ಕಡ್ಡಾಯವಾಗಿ ಭೋದನಾ ಶುಲ್ಕವನ್ನು ತುಂಬಲು ಆದೇಶ ಹೊರಡಿಸಿ. ಅವರ ಹತ್ತಿರ ಹಣವಿದ್ದರು ತುಂಬದೇ ಇರುವುದು ನ್ಯಾಯನಾ?” ಎಂಬುದೇ ನನ್ನ ಪ್ರಶ್ನೆ.

ಸರ್ಕಾರಿ ನೌಕರುದಾರರ ಹಾಗೆನೇ ಸರ್ಕಾರೇತರ ಅನುದಾನ ರಹಿತ ನೌಕರದಾರರಿಗೂ ಬದುಕಲು ಅವಕಾಶ ಮಾಡಿಕೊಡಿ.
1 comment
Yes we want help from government of Karnataka