ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಸಚಿವ ಕೆ.ಎಸ್. ಈಶ್ವರಪ್ಪ ಮುಖಭಂಗ ಅನುಭವಿಸಿದ್ದಾರೆ. ಇಂದು ಪ್ರದೇಶ ಕುರುಬರ ಸಂಘಕ್ಕೆ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಬೆಂಬಲಿಗರು ಜಯ ಗಳಿಸಿದ್ದು, ಈಶ್ವರಪ್ಪ ಬೆಂಬಲಿಗರು ಸೋತಿದ್ದಾರೆ.
ಆಡಳಿತ ಪಕ್ಷದ ಕೆ.ಎಸ್. ಈಶ್ವರಪ್ಪ ಬಣ ಒಂದೇ ಒಂದು ಸ್ಥಾನ ಗೆಲ್ಲದೆ ಸೋಲು ಕಂಡಿದ್ದಾರೆ. ಇದರಿಂದಾಗಿ ಈಶ್ವರಪ್ಪ ಅವರ ಬಣಕ್ಕೆ ತೀವ್ರ ಹಿನ್ನಡೆಯಾಗಿದೆ. ಇಂದು ರಾಜ್ಯ ಕುರುಬರ ಸಂಘದ ಅಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ಹಲವು ಹುದ್ದೆಗಳಿಗೆ ಚುನಾವಣೆ ನಡೆದಿತ್ತು. ಸಿದ್ದರಾಮಯ್ಯ ಬೆಂಬಲಿತ ಅಭ್ಯರ್ಥಿ ಬಳ್ಳಾರಿ ಮೂಲದ ಕೃಷ್ಣ ಎಂಬುವವರು 83 ಮತಗಳಿಂದ ಜಯ ಸಾಧಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಇನ್ನುಳಿದಂತೆ ಪ್ರಧಾನ ಕಾರ್ಯದರ್ಶಿಯಾಗಿ ಮಾಜಿ ಮೇಯರ್ ವೆಂಕಟೇಶ ಮೂರ್ತಿ ಅವರು 81 ಮತಗಳನ್ನು ಗಳಿಸಿ ಜಯಗಳಿಸುವುದರೊಂದಿಗೆ ಆಯ್ಕೆಯಾಗಿದ್ದಾರೆ. ಕಾರ್ಯಾಧ್ಯಕ್ಷರಾಗಿ ಮೈಸೂರು ಸುಬ್ಬಣ್ಣ (84 ಮತಗಳು), ಖಜಾಂಚಿಯಾಗಿ ದೇವರಾಜು (84 ಮತಗಳು), ಹಿರಿಯ ಉಪಾಧ್ಯಕ್ಷರಾಗಿ ಈರಣ್ಣ ಝಳಕಿ (83 ಮತಗಳು), ಜಗದೀಶ (78ಮತಗಳು), ಬಸವರಾಜ್ ಬಸಲಗುಂದಿ (75 ಮತಗಳು), ರೇಖಾ ಹುಲಿಯಪ್ಪಗೌಡ (85 ಮತಗಳು) ಆಯ್ಕೆಯಾಗಿದ್ದಾರೆ.
ಅಲ್ಲದೇ, ಸಂಘದ ಉಪಾಧ್ಯಕರಾಗಿ ಕೃಷ್ಣ ಕುಮಾರ್ (78 ಮತಗಳು), ಪುಟ್ಟಬಸವಯ್ಯ (78 ಮತಗಳು), ಮಿರ್ಜಾಪುರ ಮಹಾದೇವಪ್ಪ (76 ಮತಗಳು), ಎಂ.ಸಿ.ರಾಜಣ್ಣ (81 ಮತಗಳು), ವೆಂಕಟರಮಣಪ್ಪ(75 ಮತಗಳು) ಹಾಗೂ ಶಂಕರ ವಿಠೋಬ ಹೆಗಡೆ (79 ಮತಗಳು) ಆಯ್ಕೆಯಾಗಿದ್ದಾರೆ.