ಗದಗ: ಇಂದು ಪ್ರತಿಯೊಬ್ಬರ ಜೀವನದಲ್ಲಿ ತಾಂತ್ರಿಕತೆ ಪಾತ್ರ ಮಹತ್ವದ್ದಾಗಿದೆ. ಪ್ರತಿ ರಂಗದಲ್ಲಿ ತಾಂತ್ರಿಕತೆ ಅವಶ್ಯವಾಗಿದ್ದು ತಾಂತ್ರಿಕತೆ ನಮ್ಮಲ್ಲಿ ಕೌಶಲ್ಯ ಬೆಳೆಸುತ್ತದೆ ಎಂದು ಬೆಂಗಳೂರಿನ ಯುಎಸ್ಟಿ ಗ್ಲೋಬಲ್ ಸಲೂಶನ್ಸ್ ನ ಪ್ರಾಜೆಕ್ಟ್ ಮ್ಯಾನೇಜರ್ ಸಂತೋಷ ಬಿರಾದಾರ್ ಹೇಳಿದರು.
ಅವರು ನಗರದ ಜಗದ್ಗುರು ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಲ್ಲಿನ ಕಂಪ್ಯೂಟರ್ ಸೈನ್ಸ್ ವಿಭಾಗದಿಂದ ಏರ್ಪಡಿಸಿದ್ದ
ಎರಡು ದಿನಗಳ ರಾಷ್ಟ್ರಮಟ್ಟದ ಟಿಸಿಇ ಹ್ಯಾಕಥಾನ್ ಆನ್ ಲೈನ್ ಸ್ಪರ್ಧೆಯ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಪ್ರತಿ ಕ್ಷೇತ್ರದಲ್ಲಿ ಈಗ ಕಂಪ್ಯೂಟರೈಸ್ಡ್ ಅಪ್ಲಿಕೇಶನ್ಸ್ ಗಳು ತನ್ನದೇಯಾದ ಪ್ರಾಮುಖ್ಯತೆ ಹೊಂದಿವೆ. ಹೀಗಾಗಿ ಅವುಗಳ ತಯಾರಿಕೆಯನ್ನು ವಿದ್ಯಾರ್ಥಿ ದಿಸೆಯಿಂದಲೇ ರೂಢಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕೋಡಿಂಗ್ ಸ್ಪರ್ಧೆ ಅತ್ಯಂತ ಮಹತ್ವವಾಗಿದೆ. ಇಂಥ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ತಾಂತ್ರಿಕ ಕ್ಷೇತ್ರದಲ್ಲಿ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಂ.ಎಂ.ಅವಟಿ ಮಾತನಾಡಿ, ನಮ್ಮ ಮಹಾವಿದ್ಯಾಲಯದ
ಕಂಪ್ಯೂಟರ್ ಸೈನ್ಸ್ ವಿಭಾಗ ದಿಂದ ಟಿಸಿಇ ಹ್ಯಾಕಾಥಾನ್ ಏರ್ಪಡಿಸಿದ್ದು ಅದರಲ್ಲಿ ವಿವಿಧ 150 ಕ್ಕೂ ಹೆಚ್ಚು ತಂಡಗಳು ಭಾಗವಹಿದ್ದವು. ತನ್ನದೇ ಯಾದ ರೀತಿಯಲ್ಲಿ ಯೋಚನೆ ಮಾಡುವ ಜೊತೆಗೆ ಹಲವಾರು ಅಪ್ಲಿಕೇಶನ್ ತಯಾರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಅಣಿಗೊಳಿಸಲು ಈ ಸ್ಪರ್ಧೆ ಹೆಚ್ಚು ಉಪಯುಕ್ತವಾಗಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುವುದರೊಂದಿಗೆ ಮಾಹಿತಿ ಕ್ಷೇತ್ರದಲ್ಲಿ ವಿಶೇಷವಾಗಿ ಜನರ ಸಮಸ್ಯೆ ಬಗೆಹರಿಸುವ ಸಾಫ್ಟವೇರ್ ತಯಾರಿಸುವತ್ತ ಗಮನ ಹರಿಸಬೇಕು ಎಂದರು.
ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಪ್ರೊ.ವಿಜಯಕುಮಾರ್ ಎಸ್.ಮಾಲಗಿತ್ತಿ ಮಾತನಾಡಿ,
ಕೊರೊನಾ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಆನ್ ಲೈನ್ ಮುಖಾಂತರ ಕೋಡಿಂಗ್ ಸ್ಪರ್ಧೆ ಮಾಡುತ್ತಿರುವುದು ವಿಶೇಷವಾಗಿದೆ. ಈ ಸ್ಪರ್ಧೆಯಲ್ಲಿ ಸ್ಮಾರ್ಟ್ ಕಮ್ಯೂನಿಕೇಶನ್, ಕೋವಿಡ್19 ಪಾಲಿಸಿ ಪ್ರಪೋಜಲ್ಸ್, ಫುಡ್ ಪ್ರಾಸಸಿಂಗ್ ಹೀಗೆ ಹಲವಾರು ವಿಷಯಗಳನ್ನು ನಮ್ಮ ವಿಭಾಗದ ಅದ್ಯಾಪಕ ವೃಂದದೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳಿಗೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಗೆ ಸಾಕಷ್ಟು ವಿದ್ಯಾರ್ಥಿಗಳು ಆನ್ ಲೈನ್ ನೋಂದಣಿ ಮಾಡಿದ್ದರು. ಅದರಲ್ಲಿ ಪರಿಷ್ಕರಿಸಿ ಅಂತಿಮವಾಗಿ ಮೂರು ತಂಡಗಳಿಗೆ ಆಯ್ಕೆ ಮಾಡಲಾಗಿದೆ. ವಿದ್ಯಾರ್ಥಿಗಳು ಕೋಡಿಂಗ್ ಮಾಡುವುದರಿಂದ ತಮ್ಮ ಯೋಚನಾ ಶಕ್ತಿ ಹೆಚ್ಚಿಸುವುದರೊಂದಿಗೆ ಕ್ರೀಯಾಶೀಲತೆಯಿಂದ ವಿದ್ಯಾಭ್ಯಾಸ ಮಾಡಲು ಸಹಕಾರಿಯಾಗುತ್ತದೆ ಎಂದರು.
ಪ್ರಶಸ್ತಿ ಪುರಸ್ಕೃತ ತಂಡಗಳು ಪ್ರಥಮ: ಜೀತೇಂದ್ರ ದಾಹಿಯಾ, ಅಕ್ಷತಾ ಪಾಟೀಲ್, ವೈಷ್ಣವಿ ಪುನ್ನಾಜಿಚೆ(ಮರಾಠಾ ಮಂಡಳಿ ಇಂಜನೀಯರಿಂಗ್ ಕಾಲೇಜ್ ಬೆಳಗಾವಿ)
ದ್ವಿತಿಯ: ಗುರುಸಿದ್ದೇಶ್ವರ ಎಸ್.ಹಿರೇಮಠ, ಗಿರೀಶ್ ಎಸ್.ಹಿರೇಮಠ, ಆಕಾಶ್ ಎಮ್(ಅಗಡಿ ಇಂಜನೀಯರಿಂಗ್ ಕಾಲೇಜ್ ಲಕ್ಷ್ಮೇಶ್ವರ).
ಸಮಾಧಾನಕರ: ರವಿ ಕೆ.ಆರ್, ರಕ್ಷಿತ್ ರಾಯ್(ಆಳ್ವಾಸ್ ಇನ್ಸ್ಟಿಟ್ಯೂಟ್ ಆಪ್ ಇಂಜನೀಯರಿಂಗ್ & ಟೆಕ್ನಾಲಜಿ ಮೂಡಬಿದರೆ)
ಪ್ರೊ.ಮಂಜುನಾಥ್ ಕಮ್ಮಾರ, ಪ್ರೊ.ಚಂದ್ರಕಾಂತ ಹಟ್ಟಿ, ರೇಖಾ ಸಿದ್ನೆಕೊಪ್ಪ, ರಮೇಶ ಬಡಿಗೇರ, ಡಾ.ಅರುಣ್ ಕುಮಾರ್, ಸರಳಾ ಡಿ, ಹೇಮಾವತಿ ಪಿ, ಎನ್.ಟಿ.ಪೂಜಾರ್ ಸಂಯೋಜನೆ ಮಾಡಿದ್ದರು.
ತೋಂಟದಾರ್ಯ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಎಸ್.ಎಸ್.ಪಟ್ಟಣಶೆಟ್ಟಿ, ಐ.ಟಿ.ಇಂಡಸ್ಟ್ರಿ ಮ್ಯಾನೇಜರ್ ಅವಿನಾಶ್ ಬದ್ರಿ, ಟೆಕ್ ಫಾರ್ಚೂನ್ ಕಂಪನಿಯ ಮಲ್ಲಿಕಾರ್ಜುನ್ ಕುಲಕರ್ಣಿ, ಬೆಂಗಳೂರಿನ ಅಸೋಸಿಯೇಟ್ ಆರ್ಕಿಟೆಕ್ಟ್ ಸ್ಯಾಮಸಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ ನ ಸಂದೀಪ್ ಇನಾಮದಾರ್ ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ಪ್ರೊ.ವೆಂಕಟೇಶ್ ಬಾಂಡಗೆ ನಿರೂಪಿಸಿ, ಪ್ರೊ.ಮಂಜುನಾಥ್ ಖಂಡಕಿ ಸ್ವಾಗತಿಸಿ, ವಂದಿಸಿದರು.