ಬಳ್ಳಾರಿ: ಹಲವು ವರ್ಷಗಳಿಂದ ದೂರವಾಗಿದ್ದ ಅಣ್ಣ – ತಂಗಿಯನ್ನು ಮಹಾಮಾರಿ ಒಂದುಗೂಡಿಸಿರುವ ಘಟನೆ ನಡೆದಿದೆ.
ಮಹಾರಾಷ್ಟ್ರದ ಲಾಥುರ್ ನಿಂದ 2016ರಿಂದಲೂ ಕಾಣೆಯಾಗಿದ್ದ ಸುಪ್ರೀಯಾ ಇತ್ತೀಚಿಗೆ ಬಳ್ಳಾರಿಯಲ್ಲಿ ಪತ್ತೆಯಾಗಿದ್ದಾರೆ. ಸದ್ಯ ಅಣ್ಣ – ತಂಗಿ ಒಂದಾಗಿದ್ದು, ಸಹೋದರ ಪ್ರಸನ್ನ ಜೋಶಿಯ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.
ಕಾಣೆಯಾಗಿದ್ದ ತನ್ನ ತಂಗಿಯ ಫೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ ಮಹಾರಾಷ್ಟ್ರದ ಧಾರ್ಮಿಕ ಸ್ವಯಂ ಸೇವಾ ಸಂಸ್ಥೆಯೊಂದರ ನೌಕರನಾಗಿರುವ ಪ್ರಸನ್ನ ಜೋಶಿ, ಬಳ್ಳಾರಿಗೆ ಬಂದು, ತನ್ನ ಒಡಹುಟ್ಟಿದ ಸಹೋದರಿಯನ್ನು ಭೇಟಿ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ಮಾರ್ಚ್ ತಿಂಗಳಲ್ಲಿ ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತಪಾಸಣೆ ನಡೆಸುವಾಗ ಸುಪ್ರೀಯಾ ವಸತಿ ಹೀನಳಾಗಿದ್ದು, ಮಾನಸಿಕ ನೋವಿನಿಂದ ಬಳಲುತ್ತಿದ್ದಳು ಎಂದು ತಿಳಿದು ಬಂದಿತ್ತು. ನಂತರ ವಿಮ್ಸ್ ಆಸ್ಪತ್ರೆಗೆ ಆ ಮಹಿಳೆಯನ್ನು ಕರೆದೊಯ್ದು ಕೋವಿಡ್-19 ಪರೀಕ್ಷೆ ನಡೆಸಿದ ಬಳಿಕ ನೆಗೆಟಿವ್ ಬಂದಿತ್ತು. ತದನಂತರ ಶಾಂತಿ ಧಾಮ ಆರ್ಪೆಂಜ್ ಸೆಂಟರ್ ನಲ್ಲಿ ಚಿಕಿತ್ಸೆ ನೀಡಿ,ಆಕೆಯ ಕುಟುಂಬದ ಹಿನ್ನೆಲೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ಸುಪ್ರಿಯಾ ಜೊತೆಗೆ ಅಲ್ಲಿನ ಸಿಬ್ಬಂದಿ ಮಾತುಕತೆ ನಡೆಸಿದ್ದರು.
ಆಕೆ ಮಾನಸಿಕ ಅಸ್ವಸ್ಥೆಯಿಂದ ಪೂರ್ಣ ಪ್ರಮಾಣದ ಚೇತರಿಕೆ ಕಷ್ಟ ಸಾಧ್ಯ ಎಂದು ಅರಿತು ಸಾಮಾಜಿಕ ಜಾಲತಾಣದಲ್ಲಿ ಆಕೆಯ ಸಂಬಂಧಿಕರ ಪತ್ತೆಗಾಗಿ ಫೋಸ್ಟ್ ಹಾಕಲಾಗಿತ್ತು. ಜೂನ್ ಮೊದಲ ವಾರದಲ್ಲಿ ಸುಪ್ರೀಯಾ ಸಹೋದರ ಪ್ರಸನ್ನ ಜೋಶಿ, ಬಳ್ಳಾರಿಗೆ ಬಂದು ನಮ್ಮನ್ನು ಸಂಪರ್ಕಿಸಿದ್ದಾರೆ. ಕ್ವಾರಂಟೈನ್ ಮುಗಿದ ಬಳಿಕ ನೆಗೆಟಿವ್ ವರದಿ ಬಂದಿದ್ದರಿಂದ ಅವರ ತಂಗಿಯನ್ನು ಭೇಟಿ ಮಾಡಲು ಅವಕಾಶ ನೀಡಲಾಯಿತು. ಈ ಮೂಲಕ ಇಬ್ಬರನ್ನು ಮತ್ತೆ ಒಂದುಗೂಡಿಸಲಾಯಿತು ಎಂದು ಶಾಂತಿಧಾಮದ ಹಿರಿಯ ಸಮಾಲೋಚಕರೊಬ್ಬರು ತಿಳಿಸಿದ್ದಾರೆ.