ಬೆಂಗಳೂರು: ಕೈಗಾರಿಕಾ ಖಾತೆ ಸಚಿವ ಜಗದೀಶ್ ಶೆಟ್ಟರ್ ಮತ್ತು ಅರಣ್ಯ ಖಾತೆ ಸಚಿವ ಆನಂದ್ ಸಿಂಗ್ ನೇತೃತ್ವದಲ್ಲಿ ಇಂದು ಸಭೆ ನಡೆಯುತ್ತಿದ್ದು, ಕಪ್ಪತ್ತಗುಡ್ಡದ ಮೇಲೆ ಮತ್ತೆ ಕರಿನೆರಳು ಬೀಳಲಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಆರೋಪಿಸಿದ್ದಾರೆ.

2017ನೆ ಇಸವಿಯಲ್ಲಿ ಆಗ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕೆಲವು ಬಲಾಢ್ಯ ಗಣಿ ಕಂಪನಿಗಳ ಮಾಲೀಕರಿಗೆ ಲಾಭ ಮಾಡಿಕೊಡಬೇಕೆಂದು ಗದಗ ಜಿಲ್ಲೆಯ ಸುಮಾರು 80 ಸಾವಿರ ಎಕರೆ ವಿಸ್ತೀರ್ಣದ ಸಂಪದ್ಭರಿತ ಮತ್ತು ಹಸಿರುಕಾಡಿನ ಅಪರೂಪದ ಜೀವವೈವಿಧ್ಯದ ಕಪ್ಪತ್ತಗುಡ್ಡ ಪ್ರದೇಶವನ್ನು ಗಣಿಗಾರಿಕೆಗೆ ಮುಕ್ತವನ್ನಾಗಿ ಮಾಡಲು ಅನುಕೂಲವಾಗುವಂತಹ ಆದೇಶ ಹೊರಡಿಸಿತ್ತು. ಆ ಜನವಿರೋಧಿ ಮತ್ತು ಪರಿಸರಕ್ಕೆ ಹಾನಿಕಾರಕ ತೀರ್ಮಾನದ ವಿರುದ್ಧ ಗದಗಿನ ತೋಂಟದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳ ಮತ್ತು ಹಿರಿಯ ಹೋರಾಟಗಾರರಾದ ಎಸ್.ಆರ್.ಹಿರೇಮಠರ ನೇತೃತ್ವದಲ್ಲಿ ದೊಡ್ಡ ಹೋರಾಟ ನಡೆದಿತ್ತು. ಆ ಹೋರಾಟದ ಭಾಗವಾಗಿ “ಕಪ್ಪತ್ತಗುಡ್ಡ ಉಳಿಸಿ” ಎಂದು 2017ರ ಫೆಬ್ರವರಿ 13 ರಿಂದ 15ರ ತನಕ ಮೂರು ದಿನದ ಅಹೋರಾತ್ರಿ ಪ್ರತಿಭಟನೆ ನಡೆಯಿತು. ಆ ಹೋರಾಟಕ್ಕೆ ಮಣಿದು ಮತ್ತು ಗದಗಿನ ಶಾಸಕ ಮತ್ತು ಆಗ ಸಚಿವರಾಗಿದ್ದ ಎಚ್.ಕೆ.ಪಾಟೀಲರ ಮಧ್ಯಪ್ರವೇಶದ ಕಾರಣ ಅಂದು ಸರ್ಕಾರ ತನ್ನ ತೀರ್ಮಾನವನ್ನು ಹಿಂಪಡೆಯಿತು ಎಂದು ಅವರು ಹೇಳಿದ್ದಾರೆ.

ತದನಂತರ ರಾಜ್ಯ ಉಚ್ಛ ನ್ಯಾಯಾಲಯದಲ್ಲಿಯೂ ತೋಂಟದ ಸ್ವಾಮಿಗಳ ಮತ್ತು ಹಿರೇಮಠರ ಸತತ ಹೋರಾಟದ ಫಲವಾಗಿ ಕಪ್ಪತ್ತಗುಡ್ಡವು ಈಗ ಇರುವ ರೀತಿಯಲ್ಲಿಯೇ ಉಳಿಯುವಂತಾಯಿತು. ಅಂದು ಸರ್ಕಾರದ ಜನವಿರೋಧಿ ತೀರ್ಮಾನವನ್ನು ವಿರೋಧಿಸಿದ್ದ ಮತ್ತು ನಮ್ಮ ಹೋರಾಟವನ್ನು ಬೆಂಬಲಿಸಿದ್ದ ಬಿಜೆಪಿ ಪಕ್ಷ ಇಂದು ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ. ಕೈಗಾರಿಕಾ ಖಾತೆ ಸಚಿವ ಜಗದೀಶ್ ಶೆಟ್ಟರ್ ಮತ್ತು ಅರಣ್ಯ ಖಾತೆ ಸಚಿವ ಆನಂದ್ ಸಿಂಗ್ ನೇತೃತ್ವದಲ್ಲಿ ಇಂದು ವಿಧಾನಸೌಧದಲ್ಲಿ ಕಪ್ಪತ್ತಗುಡ್ಡ ವಿಚಾರವಾಗಿ ಸಭೆ ನಡೆಯುತ್ತಿದೆ ಎಂಬ ಮಾಹಿತಿ ಬಂದಿದೆ. ಮತ್ತೆ ಕಪ್ಪತ್ತಗುಡ್ಡದ ಮೇಲೆ ಕರಿನೆರಳು ಚಾಚುತ್ತಿದೆ. ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳು ಏನೆಲ್ಲಾ ಲಾಭ ಮಾಡಿಕೊಂಡು ರಾಜ್ಯವನ್ನು ಹರಾಜು ಹಾಕುತ್ತಾರೋ ಗೊತ್ತಿಲ್ಲ.

ಈ ಹಿನ್ನೆಲೆಯಲ್ಲಿ, ಯಾವುದೇ ಕಾರಣಕ್ಕೂ ಸಿಎಂ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ರಾಜ್ಯ ಸರ್ಕಾರವು ಕಪ್ಪತ್ತಗುಡ್ಡದ ವಿಚಾರದಲ್ಲಿ ಜನವಿರೋಧಿಯಾದ ತಪ್ಪು ನಿರ್ಧಾರ ತೆಗೆದುಕೊಳ್ಳಬಾರದು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಆಗ್ರಹಿಸುತ್ತದೆ. ಈ ಸರ್ಕಾರ ಏನಾದರೂ ಅಂತಹ ಜನವಿರೋಧಿಯಾದ, ಪರಿಸರಕ್ಕೆ ಹಾನಿಕಾರವಾದ ಮತ್ತು ಹಿಂದಿನ ಜನಹೋರಾಟಗಳನ್ನು ತುಚ್ಛೀಕರಿಸುವಂತಹ ತೀರ್ಮಾನಗಳನ್ನು ತೆಗೆದುಕೊಂಡರೆ ಅದರ ವಿರುದ್ಧ ಮತ್ತೊಮ್ಮೆ ಅನಿವಾರ್ಯವಾಗಿ ಹೋರಾಟ ರೂಪಿಸಲೇಬೇಕಾಗುತ್ತದೆ. ಆ ಎಚ್ಚರ ಈ ಸರ್ಕಾರಕ್ಕೆ ಇರಲಿ ಎಂದು ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆ : ನರೇಗಾದಲ್ಲಿ ಬಿಎಫ್‌ಟಿ ಹುದ್ದೆಗೆ ಅರ್ಜಿ

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 5 ಬಿ.ಎಫ್.ಟಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಗದಗನಲ್ಲಿ ಮತ್ತೆ ನಾಲ್ಕು ಕೊರೋನಾ ಪಾಸಿಟಿವ್

ಕೊರೋನಾ ಸೋಂಕು ಮುಕ್ತವಾಗಿದ್ದ ಗದಗ ಜಿಲ್ಲೆಯಲ್ಲಿ ಕಳೆದೆರಡು ದಿನಗಳ ಹಿಂದಷ್ಟೆ ಮೂರು ಕೊರೋನಾ ಪಾಸಿಟ್ ಕೇಸ್ ಪತ್ತೆಯಾಗಿದ್ದವು. ಇದರ ಬೆನ್ನಲ್ಲೆ ಇದೀಗ ಇಂದು ಮತ್ತೆ ನಾಲ್ಕು ಪಾಸಿಟಿವ್ ಕೇಸ್ ದೃಢಪಟ್ಟಿವೆ.

ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾಗೆ ಬಿಗ್ ರಿಲೀಫ್

ಮೆಸ​ರ್ಸ್ ಅಸೋಸಿಯೇಟೆಡ್ ಮೈನಿಂಗ್ ಕಂಪನಿ ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಪ್ರಕರಣದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮೀ ಅರುಣಾ ಅವರ ಹೆಸರು ಕೈಬಿಟ್ಟು ನಗರದ ಸಿಬಿಐ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಪುರಸ್ಕರಿಸಿದೆ.