ಗದಗ: ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಲಾಕ್ಡೌನ್‍ನಿಂದ ಕೆಲವು ಚಟುವಟಿಕೆಗಳಿಗೆ ವಿನಾಯ್ತಿ ನೀಡುವ ಬಗ್ಗೆ ರಾಜ್ಯ ಸರಕಾರ ನಿರ್ದೇಶನ ನೀಡಿದೆ. ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅಧಿಕಾರಿಗಳ ಸಭೆ ಜರುಗಿಸಿ ಸೂಚನೆ ನೀಡಿದ್ದಾರೆ. ಕೋವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿರುವ ಗದಗ ತಾಲೂಕು ಹೊರತುಪಡಿಸಿ ಜಿಲ್ಲೆಯ ರೋಣ, ಗಜೇಂದ್ರಗಡ, ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ ಮತ್ತು ನರಗುಂದ ತಾಲೂಕುಗಳಲ್ಲಿ ಕೈಗಾರಿಕೆ, ವ್ಯಾಪಾರ ಪ್ರಾರಂಭಿಸಲು ಷರತ್ತು ಬದ್ಧ ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ನಿರ್ಭಂಧಿತ ಚಟುವಟಿಕೆಗಳು

ಜಿಲ್ಲೆಯಲ್ಲಿ ಕ್ಷೌರಿಕ ಅಂಗಡಿಗಳು ಮತ್ತು ಬ್ಯೂಟಿ ಪಾರ್ಲರ್ ಗಳು, ಹೊಟೇಲ್ ಮತ್ತು ಡಾಬಾ (ಪಾರ್ಸಲ್ ಸೇವೆ ಹೊರತುಪಡಿಸಿ), ಸಿನಿಮಾ ಮಂದಿರಗಳು ಮತ್ತು ಮನರಂಜನಾ ಸ್ಥಳಗಳು, ಸಾರ್ವಜನಿಕರ ಅಂತರ್ ಜಿಲ್ಲೆ ಪ್ರಯಾಣ, ಬಸ್, ಆಟೋ, ಟ್ಯಾಕ್ಸಿ ಮತ್ತು ಕ್ಯಾಬ್ ಸೇವೆಗಳು, ಶೈಕ್ಷಣಿಕ ಸಂಸ್ಥೆಗಳು,  ತರಬೇತಿ, ಕೋಚಿಂಗ್ ಕೇಂದ್ರಗಳು, ವ್ಯಾಯಾಮ ಶಾಲೆಗಳು ಮತ್ತು ಜಿಮ್, ಕ್ಲಬ್‍ಗಳು ಮತ್ತು ರೆಸಾರ್ಟಗಳು, ಈಜು ಕೊಳಗಳು ಹಾಗೂ ಉದ್ಯಾನವನಗಳು, ಸಮುದಾಯ ಭವನಗಳು, ಆಡಿಟೋರಿಯಂ, ಸಂತೆ, ಜಾತ್ರೆ ಮತ್ತು ಧಾರ್ಮಿಕ ಚಟುವಟಿಕೆಗಳು, ಕ್ರೀಡಾ ಚಟುವಟಿಕೆಗಳು, ಗುಟಖಾ, ತಂಬಾಕು ಅಂಗಡಿಗಳು, ಲಾಡ್ಜಗಳು, ಬೀದಿ ಬದಿಯಲ್ಲಿರುವ ಚಾಟ್ಸ್ ಮತ್ತು ಟೀ ಅಂಗಡಿಗಳು, ದೇವಸ್ಥಾನ, ಮಸಿದಿ, ಚರ್ಚ್ ಮುಂತಾದ ಧಾರ್ಮಿಕ ಕೇಂದ್ರಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿರುವುದಿಲ್ಲ. ಬಟ್ಟೆ ಅಂಗಡಿಗಳು, ಮದ್ಯದಂಗಡಿಗಳು ಈ ಎಲ್ಲವುಗಳನ್ನು ಸಂಪ್ರರ್ಣವಾಗಿ ನಿರ್ಬಂಧಿಸಿದೆ.

ಅನುಮತಿ ನೀಡಿದ ಚಟುವಟಿಕೆಗಳು

ಗದಗ ತಾಲೂಕು ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ಅನುಮತಿ ನೀಡಿದ ಚಟುವಟಿಕೆಗಳಪಡಿತರ ವಿತರಣಾ ಅಂಗಡಿಗಳು, ಆಹಾರ ಮಳಿಗೆಗಳು ಸೇರಿದಂತೆ ದಿನಸಿ ಅಂಗಡಿಗಳು, ಹಣ್ಣು ಮತ್ತು ತರಕಾರಿಗಳು, ಹಾಲು ಮತ್ತು ಡೈರಿ ಉತ್ಪನ್ನಗಳ ಮಾರಾಟ ಮಳಿಗೆಗಳು, ಮಾಂಸ ಮತ್ತು ಮೀನು ಅಂಗಡಿಗಳನ್ನು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ತೆರೆಯಲು ಅವಕಾಶ ನೀಡಲಾಗಿದೆ. ಬಿಸ್ಕತ್ ಮತ್ತು ಬೇಕರಿ, ಸಿಹಿ ತಿನಿಸುಗಳ ಮಿಠಾಯಿ ಅಂಗಡಿ ಹಾಗೂ ಹೊಟೇಲ್‍ಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪಾರ್ಸಲ್ ಮೂಲಕ ಆಹಾರ ಮತ್ತು ಉಪಾಹಾರಗಳನ್ನು ಒದಗಿಸುವಂತೆ ಸೂಚಿಸಿದೆ.ಈ ತಾಲೂಕುಗಳಲ್ಲಿ ಉಳಿದ ಅಂಗಡಿ-ಮುಂಗಟ್ಟುಗಳು, ತರಕಾರಿ ವ್ಯಾಪಾರಸ್ಥರು ಸಾಕಷ್ಟು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ರಾತ್ರಿ 9 ಗಂಟೆಯ ವರೆಗೆ ಮಾತ್ರ ವ್ಯಾಪಾರ ಮಾಡತಕ್ಕದ್ದು, ವಿಶೇಷವಾಗಿ ದಿನಸಿ ವ್ಯಾಪಾರ ಮಾಡುವಂತಹ ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗಳಲ್ಲಿ ಶೇ.50 ರಷ್ಟು ಕಾರ್ಮಿಕರು ಮಾತ್ರ ಕೆಲಸ ನಿರ್ವಹಿಸುವಂತೆ ಮತ್ತು ಸ್ಯಾನಿಟೈಜರ್, ಮಾಸ್ಕ್ ಗಳನ್ನು ಬಳಸಿಕೊಂಡು ವ್ಯಾಪಾರ ಮಾಡತಕ್ಕದ್ದು ಹಾಗೂ ಗ್ರಾಹಕರಿಗೆ ಸಾರ್ವಜನಿಕರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಬರುವಂತೆ ತಿಳಿಸುವುದು. ಎಲ್ಲ ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗಳ ಮುಂದೆ ಗ್ರಾಹಕರಿಗಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಕನಿಷ್ಠ 1 ಮೀಟರ್ ಅಂತರ ಇರುವಂತೆ ಗುರುತುಗಳನ್ನು ಮಾಡಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದನ್ನು ಖಾತ್ರಿಪಡಿಸಿಕೊಳ್ಳುವುದು, ಹಾಗೂ ಅಂಗಡಿಗಳ ಮುಂದೆ 5 ಕ್ಕಿಂತ ಹೆಚ್ಚು ಜನರು ಸೇರದಂತೆ ಕ್ರಮ ವಹಿಸುವುದು. ಸಾಧ್ಯವಾದಷ್ಟು ಮನೆ-ಮನೆಗೆ ದಿನಸಿ ಸಾಮಗ್ರಿಗಳನ್ನು ತಲುಪಿಸತಕ್ಕದ್ದು.

ರೈತರಿಗೆ ನೆರವು

ರೈತರಿಗೆ ಹಾಗೂ ಕೃಷಿ ಕಾರ್ಮಿಕರಿಗೆ ಲಾಕ್‍ಡೌನ್‍ನಿಂದ ಹೆಚ್ಚು ನಷ್ಟವಾಗುವ ಸಾಧ್ಯತೆ ಇರುವುದರಿಂದ ಹಾಗೂ ಮುಂಗಾರು ಆರಂಭವಾಗುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ, ರಸಗೊಬ್ಬರ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ನಿರ್ವಹಿಸಲ್ಪಡುವ ಕಾರ್ಯಗಳು, ತೋಟಗಾರಿಕಾ ಪರಿಕರಗಳ ಮಾರಾಟ, ಕೃಷಿ ಪರಿಕರ ಮಾರಾಟ, ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಮಾರಾಟ ಅಂಗಡಿಗಳು, ಕೃಷಿ ಯಂತ್ರೋಪಕರಣಗಳಿಗೆ ಸಂಬಂಧಿಸಿದಂತೆ ನಿರ್ವಹಿಸಲಾಗಿರುವ ಕಸ್ಟಮ್ಸ್ ನೇಮಕ ಕೇಂದ್ರಗಳು, ಯಂತ್ರೋಪಕರಣಗಳ ಸಹಾಯದಿಂದ ನಡೆಸಲಾಗುವ ಕೃಷಿ ಬೆಳೆಗಳ ಕೊಯ್ಲು ಮತ್ತು ಬಿತ್ತನೆ ಪದಾರ್ಥಗಳ ರಾಜ್ಯ ಮತ್ತು ಅಂತರ್ ರಾಜ್ಯ ಸಾಗಣೆ, ಶೈತ್ಯಗಾರಗಳು ಮತ್ತು ದಾಸ್ತಾನು ಮಳಿಗೆ ಸೇವೆಗಳನ್ನು ಪ್ರಾರಂಭಿಸಲು ಅನುಮತಿ ನೀಡಲಾಗಿದೆ.
ಗದಗ ಜಿಲ್ಲೆಯ ಗದಗ ತಾಲೂಕು ಹೊರತುಪಡಿಸಿ ಉಳಿದ ತಾಲೂಕಿನ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಕೈಗಾರಿಕೆಗಳನ್ನು ಶೇ.50 ರಷ್ಟು ಸಿಬ್ಬಂದಿಗಳನ್ನು ಮಾತ್ರ ಕೆಲಸ ನಿರ್ವಹಿಸುವಂತೆ ಮತ್ತು ಸ್ಯಾನಿಟೈಜರ್, ಮಾಸ್ಕ್ ಗಳನ್ನು ಬಳಸಿಕೊಂಡು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸರಕಾರದ ಆದೇಶದಂತೆ ಪುನಃ ಪ್ರಾರಂಭಿಸಬಹುದಾಗಿದೆ. ಈ ಘಟಕಗಳು ತಮ್ಮ ಕಟ್ಟಡಗಳ ಆವರಣ ಇಲ್ಲವೇ ನೆರೆಯ ಸ್ಥಳದಲ್ಲೇ ಕಾರ್ಮಿಕರು ನೆಲೆಸಲು ಅಗತ್ಯ ವಸತಿ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಕರ್ನಾಟಕ ಪರಿಷ್ಕೃತ ಸಮಗ್ರ ಮಾರ್ಗಸೂಚಿಗಳನ್ವಯ ಗುಣಮಟ್ಟ ಕಾರ್ಯನಿರ್ವಹಣಾ ಶಿಷ್ಠಾಚಾರ ಪಾಲಿಸಲು ಮತ್ತು ಕಾರ್ಮಿಕರಿಗೆ ಕೆಲಸದ ಸ್ಥಳ ತಲುಪಲು ಸಾರಿಗೆ ವ್ಯವಸ್ಥೆಯನ್ನು ಉದ್ಯೋಗದಾತರೇ ಮಾಡಬೇಕು. ವಿನಾಯ್ತಿ ಇರುವ ಸೇವೆಗಳು, ಕೈಗಾರಿಕಾ ಸಂಸ್ಥೆಗಳು ಮತ್ತು ಸರಕಾರದಿಂದ ವಿನಾಯ್ತಿ ಪಡೆದ ಇತರೆ ಸೇವೆಗಳಿಗೆ ಸಂಬಂಧಿಸಿದಂತೆ ಆಯಾ ಸಂಸ್ಥೆಗಳಿಂದ ಪಡೆದ ಗುರುತಿನ ಚೀಟಿಗಳನ್ನು ತೋರಿಸಿ ಸಂಚರಿಸಬಹುದಾಗಿದೆ. ಇಂತಹ ಸೇವೆಗಳಿಗೆ ಜಿಲ್ಲಾಧಿಕಾರಿಗಳ ಕಛೇರಿಯಿಂದ ಯಾವುದೇ ರೀತಿಯ ಪಾಸ್ ಪಡೆಯುವ ಅವಕಾಶ ಇರುವುದಿಲ್ಲ.
*ಸಾರ್ವಜನಿಕರು ಗಮನಿಸಬೇಕಾದ ಅಂಶಗಳು:* ಗರ್ಭಿಣಿಯರು, ಬಾಣಂತಿಯರು, 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಮತ್ತು 10 ವರ್ಷದ ಒಳಗಿನ ಮಕ್ಕಳು ವಿನಾ ಕಾರಣ ಮನೆಯಿಂದ ಹೊರಗಡೆ ಬರಕೂಡದು, ಜಿಲ್ಲೆಯ ಚೆಕ್-ಪೋಸ್ಟ್‍ಗಳಲ್ಲಿ ಅನುಮತಿ ಪತ್ರ (ಪಾಸ್) ಇಲ್ಲದೇ ಯಾವುದೇ ಸಾರ್ವಜನಿಕರ ಪ್ರಯಾಣ ಮಾಡುವುದನ್ನು ನಿಷೇಧಿಸಿದೆ, ಜಿಲ್ಲಾಡಳಿತದ ವತಿಯಿಂದ ಕೇವಲ ತುರ್ತು ವೈದ್ಯಕೀಯ ಸೇವೆಗಳನ್ನು ಮತ್ತು ಸಾವುಗಳು ಉಂಟಾದಲ್ಲಿ ಮಾತ್ರ ಅಂತರ್-ಜಿಲ್ಲಾ ಪಾಸ್‍ಗಳನ್ನು ನೀಡಲಾಗುತ್ತಿದೆ. ಇದನ್ನು ಹೊರತುಪಡಿಸಿ ಇತರೆ ಯಾವುದೇ ಉದ್ದೇಶಕ್ಕಾಗಿ ಪಾಸ್‍ಗಳನ್ನು ವಿತರಿಸುವ ಅವಕಾಶವಿರುವುದಿಲ್ಲ. ವಿನಾಯ್ತಿ ತಾಲೂಕುಗಳ ವ್ಯಾಪ್ತಿಯಲ್ಲಿ ಸಂಚರಿಸುವಾಗ ದ್ವಿ ಚಕ್ರ ವಾಹನದಲ್ಲಿ ಕೇವಲ ಒಬ್ಬರು ಮತ್ತು ನಾಲ್ಕು ಚಕ್ರ ವಾಹನಗಳಲ್ಲಿ ಚಾಲಕ ಮತ್ತು ವಾಹನದ ಹಿಂದಿನ ಸೀಟಿನಲ್ಲಿ ಒಬ್ಬ ಸಹ ಪ್ರಯಾಣಿಕರಿಗೆ ಅನುಮತಿಸಿದೆ, ಶವ ಸಂಸ್ಕಾರದ ಸಮಯದಲ್ಲಿ 20 ಕ್ಕಿಂತ ಹೆಚ್ಚು ಜನ ಸೇರತಕ್ಕದ್ದಲ್ಲ. ಸದರಿ ನಿರ್ದೇಶನಗಳು ಮುಂದಿನ ಆದೇಶದವರೆಗೆ ಚಾಲ್ತಿಯಲ್ಲಿರುತ್ತವೆ. ಅನಗತ್ಯವಾಗಿ ಜನ ಜಂಗುಳಿ ಉಂಟು ಮಾಡಿದರೆ ಮತ್ತು ಮೇಲಿನ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿದರೆ ಅಂತಹವರ ವಿರುದ್ಧ ಕೋವಿಡ್-19 ಸೋಂಕು ಹರಡಲು ಕಾರಣೀಕರ್ತರೆಂದು ಪರಿಗಣಿಸಿ ಅವರ ವಿರುದ್ಧ ವಿಪತ್ತು ನಿರ್ವಹಣಾಹಾಗೂ ಭಾರತೀಯ ದಂಡ ಸಂಹಿತೆ ಕಾಯ್ದೆಗಳ ಅನ್ವಯ ಕಾನೂನು ಕ್ರಮ ಜರುಗಿಸಲಾಗುವದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

You May Also Like

ನಿಡಗುಂದಿಯಲ್ಲಿ ಬಿ.ಇಡಿ.ಪ್ರಶಿಕ್ಷಣಾಥಿ೯ಗಳಿಗೆ ಸ್ವಾಗತ- ವಿದ್ಯಾರ್ಥಿ ಒಕ್ಕೂಟ ಉದ್ಘಾಟನೆ ಶಿಕ್ಷಣದಿಂದ ಉತ್ತಮ ವ್ಯಕ್ತಿತ್ವ ರೂಪ

ನಿಡಗುಂದಿ: ಶಿಕ್ಷಣದ ಉದ್ದೇಶ ಒಳ್ಳೇಯ ಸಂಸ್ಕಾರಯುತ ವ್ಯಕ್ತಿತ್ವ ರೂಪಿಸುವುದು. ತರಗತಿ ಪಠ್ಯಕ್ರಮವನ್ನು ಅಭ್ಯಸಿಸುವದರ ಜೊತೆಗೆ ಸಾಮಾಜಿಕ…

ಸೋಂಕಿನಿಂದ ಗುಣಮುಖರಾದವರಲ್ಲಿಯೂ ಕಂಡು ಬರುತ್ತಿದೆ ಮಹಾಮಾರಿ!

ಬೆಂಗಳೂರು : ಮಹಾಮಾರಿ ಸೋಂಕಿಗೆ ಬಲಿಯಾಗಿ ಗುಣಮುಖರಾದವರಲ್ಲಿ ಅನಾರೋಗ್ಯ ಕಂಡು ಬರುತ್ತಿದೆ. ಈ ರೀತಿಯ ಬಹುತೇಕ ಜನರಲ್ಲಿ ಕಂಡು ಬಂದಿರುವುದು ಬೆಳಕಿಗೆ ಬರುತ್ತಿದೆ. ಅಲ್ಲದೇ, ಸದ್ಯ ಇಂತಹ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದೆ.

ಸುರೇಶ ಬಳಗಾನೂರ್ ಗೆ ರಾಜ್ಯ ಪತ್ರಿಕೋದ್ಯಮ ರತ್ನಪ್ರಶಸ್ತಿ

ಉತ್ತರಪ್ರಭ ಸುದ್ದಿ ಮಸ್ಕಿ: ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದಿಂದ ಪತ್ರಿಕಾ ರಂಗದಲ್ಲಿ ಗಣನೀಯ ಸೇವೆ ಮಾಡಿದ…

ಕಾಂಗ್ರೆಸ್ ನಾಯಕ ಖರ್ಗೆ ಕುಟುಂಬಕ್ಕೆ ಜೀವಬೆದರಿಕೆ..!

ಬೆಂಗಳೂರು: ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಜೀವ ಬೆದರಿಕೆಯ ಕರೆ ಬಂದಿದೆ…