ಗದಗ: ಅರ್ಥವಾಗದ ಊರು, ತಿಳಿದ ಭಾಷೆಯ ಮದ್ಯೆ ಏಕಾಂಗಿಯಾದ ಅಜ್ಜಿ ತನ್ನವರಿಗಾಗಿ ಅಳುತ್ತಿದ್ದಳು. ಅಜ್ಜಿಯ ಆರ್ಥನಾದ ಅಲ್ಲಿರುವ ಯಾರ ಗಮನಕ್ಕೂ ಬರಲೇ ಇಲ್ಲ. ಕಣ್ಣೀರಿಡುತ್ತಿದ್ದ ಇಳಕಲ್ ಸೀರೆಯುಟ್ಟ ಹಿರಿಯ ಜೀವ ಕರುನಾಡಿನವಳುವೆಂದರಿತಯೋಧ ಅಜ್ಜಿಯ ಆರ್ಥನಾದಕ್ಕೆ ಧ್ವನಿಯಾಗಿದ್ದಾರೆ. ತನ್ನವರನ್ನು ಕಳೆದುಕೊಂಡ ಅಜ್ಜಿಗೆ ತನ್ನ ಬಂಧು ಬಳಗದೊಂದಿಗೆ ತಳುಕು ಹಾಕುವ ಮೂಲಕ ಜಿಲ್ಲೆಯ ಮುಂಡರಗಿ ಸೈನಿಕ ಜನರ ಮೆಚ್ಚುಗೆಯ ಜೊತೆಗೆ ಸೈ ಎನಿಸಿಕೊಂಡಿದ್ದಾರೆ.

ಗಡಿಯಲ್ಲಿದ್ದರೂ ಅಷ್ಟೆ.. ನಾಡಲ್ಲಿದ್ದರೂ ಅಷ್ಟೆ

ದೇಶ ಕಾಯೋ ಸೈನಿಕ ಗಡಿಯಲ್ಲಿದ್ರು ಅಷ್ಟೆ ನಾಡಲ್ಲಿದ್ರು ಅಷ್ಟೆ. ಸೇವೆಯೇ ಸೈನಿಕನ ಉಸಿರು ಅಂತಾರೆ. ಇದು ಅಕ್ಷರಶ: ಸತ್ಯವಾಗಿಸಿದ್ದು ಗದಗ ಜಿಲ್ಲೆಯ ಯೋಧ. ಮುಂಡರಗಿ ತಾಲೂಕಿನ ಕದಾಂಪೂರ ಗ್ರಾಮದ ಮುದಕಯ್ಯ ಹಿರೇಮಠ ರಜೆಗಾಗಿ ತಮ್ಮೂರಿಗೆ ಬರುತ್ತಿದ್ದರು. ಆದರೆ ದೆಹಲಿ ರೈಲು ನಿಲ್ದಾಣದಲ್ಲಿ ಇಳಕಲ್ ಸೀರೆ, ಕುಪ್ಪಸ ತೊಟ್ಟು ಕಣ್ಣೀರು ಹಾಕುತ್ತಾ ಕುಳತಿರುವ ಅಜ್ಜಿಯನ್ನು ನೋಡುತ್ತಾರೆ. ಅಜ್ಜಿಯ ಉಡುಗೆಯಿಂದಲೇ ಗುರುತಿಸಿ ಆಕೆಯ ಸನಿಹಕ್ಕೆ ಹೋಗಿ ಸಮಾಧಾನ ಪಡಿಸುತ್ತಾರೆ. ಯೋಧ ಮುದಕಯ್ಯ ಎಷ್ಟೆ ಮಾತನಾಡಿಸಿದರೂ ಅಜ್ಜಿಯ ಉತ್ತರ ಬರೀ ಕಣ್ಣೀರು. ಕೊನೆಗೆ ಕನ್ನಡ ಭಾಷೆಯನ್ನು ಮಾತನಾಡುವುದನ್ನು ಕಂಡ ಮೇಲೆ ಅಜ್ಜಿಯ ಸಂತಸಕ್ಕೆ ಪಾರವೇ ಇಲ್ಲದಂತಾಗಿತ್ತು. ಸವಿಗನ್ನಡದ ಸವಿ ನುಡಿ ದೆಹಲಿಯಲ್ಲಿ ಕೇಳಿದಾಕ್ಷಣ ಅಜ್ಜಿಗೆ ಮರಭೂಮಿಯಲ್ಲಿ ಓಯಾಸಿಸ್ ಸಿಕ್ಕಂಗಾಯಿತು. ಸ್ವಲ್ಪ ಸಮಾಧಾನಗೊಂಡು ಅಜ್ಜಿ, ತಾನು ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ದಾಸನಾಳ ಗ್ರಾಮದ ಶಿವಮ್ಮ ಪಾಟೀಲ್ ಅಂತಾ ಹೇಳುತ್ತಾಳೆ. ನಂತರ ಯೋಧ ಮುದಕಯ್ಯ ಹಿರೇಮಠ ಅವರ ಸ್ನೇಹಿತರ ಸಹಾಯದಿಂದ ಅಜ್ಜಿ ಮನೆಯ ವಿಳಾಸ ಪಡೆದು ಕರೆ ಮಾಡಿ ಮಾಹಿತಿ ನೀಡುತ್ತಾರೆ. ತನ್ನೊಂದಿಗೆ ರೈಲು ಮೂಲಕ ದೆಹಲಿಯಿಂದ ಬಾಗಲಕೋಟೆ ಜಿಲ್ಲೆಯ ರೈಲು ನಿಲ್ದಾಣಕ್ಕೆ ಕರೆದುಕೊಂಡು ಬಂದು, ಅವರ ಬಂಧುಗಳ ಹತ್ತಿರ ಅಜ್ಜಿಯನ್ನು ಒಪ್ಪಿಸಿ, ನಂತರ ಗದಗ ಜಿಲ್ಲೆಯ ಕಂದಪೂರ ಗ್ರಾಮಕ್ಕೆ ಬಂದಿದ್ದಾರೆ.

ಸಂತೋಷವಾಯಿತು

ದೆಹಲಿ ರೈಲು ನಿಲ್ದಾಣದಲ್ಲಿ ಅಜ್ಜಿಯನ್ನು ನೋಡಿದಾಕ್ಷಣ ನಮ್ಮೂರಿನ ಕಡೆಯವರೇ ಇರಬಹುದು ಎಂದು ಮಾತನಾಡಿಸಿದೆ. ಆದರೆ ಅಜ್ಜಿ ಗಾಬರಿಗೊಂಡಿದ್ದರು. ಯಾವಾಗ ನಾನು ಕನ್ನಡ ಮಾತನಾಡಿದೆನೋ ಅಜ್ಜಿ ಹಿರಿಹಿರಿ ಹಿಗ್ಗಿದರು. ಬಾಗಲಕೋಟೆಗೆ ಬಂದ ತಕ್ಷಣ ಕುಟುಂಬ ಸೇರಿದ ಅಜ್ಜಿಯ ಸಂತೋಷ ನನಗೆ ಬಹಳಷ್ಟು ಖುಷಿಯ ಜೊತೆಗೆ ತೃಪ್ತಿ ತಂದಿತು.  

-ಮುದಕಯ್ಯ, ಯೋಧ

ಎರಡು ದಿನ ದೆಹಲಿ ರೈಲು ನಿಲ್ದಾಣದಲ್ಲಿ ಕಳೆದ ಅಜ್ಜಿ..!

 73 ವರ್ಷದ ಶಿವಮ್ಮ ಪಾಟೀಲ್ ತನ್ನ ಮೊಮ್ಮಗನೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗಿದ್ದರಂತೆ. ತಿಮ್ಮಪ್ಪನ ದರ್ಶನಕ್ಕೆ ಹೋಗುವ ಮುಂಚೆಯೇ ಶಿವಮ್ಮ ಪಾಟೀಲ್ ತಪ್ಪಿಸಿಕೊಂಡಿದ್ದಾರೆ. ಒಂದು ದಿನ ತಿರುಪತಿಯಲ್ಲಿ ತಮ್ಮವರನ್ನು ಹುಡಕಿದ್ದಾರೆ. ಯಾರು ಸಿಗದಿದ್ದಾಗ ತಿರುಪತಿ ರೈಲು ನಿಲ್ದಾಣದಿಂದ ಕರ್ನಾಟಕದ ಟ್ರೇನ್ ಹತ್ತುವ ಬದಲಾಗಿ ದೆಹಲಿ ರೈಲನ್ನೇರಿ ದೆಹಲಿಗೆ ಬಂದಿದ್ದಾರೆ. ದೆಹಲಿಗೆ ಬಂದ ನಂತರ ಭಾಷೆ ಬಾರದೆ, ದಿಕ್ಕು ಕಾಣದೆ ಕಣ್ಣೀರು ಹಾಕುತ್ತಾ, ಎರಡು ದಿನ ಕಳೆದಿದ್ದಾರೆ. ಆದರೂ ಪಾಪ ಅಲ್ಲಿ ಅಜ್ಜಿಯ ಅಳಲು ಕೇಳುವವರು ಯಾರು ಇರಲಿಲ್ಲ. ಕೊನೆಗೂ ಅವಳ ಅದೃಷ್ಟ ಎನ್ನುವಂತೆ ಪಂಜಾಬ್ ದಿಂದ ರಜೆಗೆ ಬರುತ್ತಿದ್ದ ಯೋಧ ಮುದಕಯ್ಯ ಅವರ ಕಣ್ಣಿಗೆ ಬಿದ್ದಿದ್ದು ಅಜ್ಜಿಯನ್ನು ಮರಳಿ ಗೂಡಿಗೆ ಸೇರಲು ಕಾರಣವಾಯ್ತು.

ಪುಣ್ಯ ಬರ್ಲಿ

ರೈಲು ನಿಲ್ದಾಣದಾಗ ಊರು, ಮಾತು ಬರಲಾರ್ದ್ ಜಾಗಾದಾಗ ಹೋಗಿ ಭಾಳ್ ಹೆದರಿಕಿ ಆಗಿತ್ತು. ಇನ್ಮುಂದ ನಾನೆಲ್ಲಿ ನನ್ ಬಳಗ ಸೇರ್ತಿನೋ ಇಲ್ಲೋ ಅಂತ ಅಂದ್ಕೊAಡಿದ್ದೆ. ಆದರೆ ದೇವರಂಗ ಬಂದ ಮುದಕಯ್ಯ ನಂಗ ಊರ ಸೇರಿಸಿದ. ಈ ಪುಣ್ಯಾತ್ಮಗ ಪುಣ್ಯಾ ಬರ್ಲಿರಿ.  

-ಶಿವಮ್ಮ,ಅಜ್ಜಿ

ಸಹಾಯ ಮಾಡಲು ಮನಸ್ಸು ಬೇಕು

 ಸಹಾಯ ಮಾಡಲು ಮಾತೆ ಮುಖ್ಯವಲ್ಲ. ಭಾವನೆಯನ್ನರಿಯುವ ಮನಸ್ಸಿದ್ರೆ ಸಾಕು. ಪಾಪ ಅಜ್ಜಿ ದೆಹಲಿಯಲ್ಲೆ ಎರಡು ದಿನ ಕಳೆದರೂ ಯಾರೂ ನೆರವಿಗೆ ಬಂದಿರಲಿಲ್ಲ. ಆದರೆ ಸೈನಿಕ ಸಹಾಯಕ್ಕೆ ಬಾರದೇ ಹೋಗಿದ್ರೆ..? ಈ ಅಜ್ಜಿಯ ಸ್ಥಾನದಲ್ಲಿಯೇ ಅದೆಷ್ಟೋ ಜನರು ಸಹಾಯ ಹಸ್ತ ಚಾಚುವವರ ಕೊರತೆಯಿಂದ ಮನೆಮಂದಿಯಿAದ ದೂರಾಗಿದ್ದಾರೆ. ಕಣ್ಣೆದುರಿಗೆ ಕಂಡವರ ಅಂತರಾಳದ ನೋವು ಕಣ್ಣಿದ್ದವರು ಕಂಡು ಕೊಂಚ ಸಹಾಯ ಮಾಡಿದ್ರೆ ಅದೆಷ್ಟೋ ಜನ ಕುಟುಂಬ ಸೇರಬಹುದಲ್ಲವೇ??

Leave a Reply

Your email address will not be published. Required fields are marked *

You May Also Like

ಬಡ್ನಿ ಗ್ರಾಮದಲ್ಲಿ ಜೋಳದ ಬೆಳೆಗೆ ಬೆಂಕಿ

ಜೋಳದ ಬೆಳೆಗೆ ಬೆಂಕಿ ಬಿದ್ದು ಮೂರು ಎಕರೆ ಪ್ರದೇಶದಲ್ಲಿ ಬೆಳೆದ ಜೋಳದ ಬೆಳೆ ಹಾನಿಯಾಗೀಡಾಗಿದ ಘಟನೆ ತಾಲೂಕಿನ ಬಡ್ನಿ ಗ್ರಾಮದಲ್ಲಿ ನಡೆದಿದೆ.

ನೆಲೋಗಿ ಠಾಣೆ ಪೊಲೀಸರ ಭರ್ಜರಿ ಬೇಟೆ 41.8 ಕೆಜಿ ಗಾಂಜಾ ಜಪ್ತಿ

ಉತ್ತರಪ್ರಭ ನೆಲೋಗಿ: ರಾಷ್ಟೀಯ ಹೆದ್ದಾರಿ 50ರ ಕಲಬುರ್ಗಿಯಿಂದ ವಿಜಯಪುರಕ್ಕೆ ಮಾರ್ಗಮಧ್ಯದಲ್ಲಿ  ನೆಲೋಗಿ ಕಮಾನ್ ಬಸ್ ನಿಲ್ದಾಣದ…

ಗದಗ ಜಿಲ್ಲೆಯಲ್ಲಿಂದು 24 ಕೊರೊನಾ ಪಾಸಿಟಿವ್!

ಗದಗ ಜಿಲ್ಲೆಯಲ್ಲಿಂದು ಮತ್ತೆ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಜನರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ.