ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡಿರುವ ವೈದ್ಯಾಧಿಕಾರಿ ಕುಟುಂಬಕ್ಕೆ ಸರ್ಕಾರ 50 ಲಕ್ಷ ರೂಪಾಯಿ ದುಡ್ಡು ನೀಡುವುದರಿಂದ ಅವರಿಗೆ ನ್ಯಾಯ ಸಿಗುವುದಿಲ್ಲ. ಆತ್ಮಹತ್ಯೆಗೆ ಕಾರಣರಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಒತ್ತಾಯಿಸಿದರು.

ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ವೈದ್ಯಾಧಿಕಾರಿಗಳ ಸಾವಿಗೆ ನೀವು 50 ಲಕ್ಷನಾದ್ರೂ ಕೊಡಿ, 1 ಕೋಟಿಯಾದ್ರೂ ಕೊಡಿ. ಅವರ ಕುಟುಂಬದವರು ನಿಮ್ಮ ದುಡ್ಡು ಕಾಯ್ತಾ ಕೂತಿಲ್ಲ. ವೈದ್ಯಾಧಿಕಾರಿ ಯಾಕೆ ಆತ್ಮಹತ್ಯೆ ಮಾಡಿಕೊಂಡರು? ಅದಕ್ಕೆ ಕಾರಣ ಯಾರು? ಅವರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ? ಎಂಬುದು ಮುಖ್ಯ ಎಂದರು.

ಅಲ್ಲದೇ, ವ್ಯಕ್ತಿ ಸತ್ತ ಮೇಲೆ ಇವರೇನು ಕೊಡುವುದು. ಆ ಹೆಣ್ಣುಮಗಳು ಇವರ ಬಳಿ ದುಡ್ಡುಕೊಡಿ ಅಂತಾ ಕೇಳಿದರಾ? ದುಡ್ಡು ಪರಿಹಾರವಲ್ಲ. ಅವರಿಗೆ ನ್ಯಾಯ ಒದಗಿಸಿಕೊಡಬೇಕು. ಅವರ ಈ ಸ್ಥಿತಿಗೆ ಕಾರಣವಾದರಿಗೆ ಶಿಕ್ಷೆ ಆಗಬೇಕು. ಮಾಧ್ಯಮಗಳು ಆಡಿಯೋ ಪ್ರಸಾರ ಮಾಡಿದ ಮೇಲೂ ಮುಖ್ಯಮಂತ್ರಿಗಳು ಯಾಕೆ ಯೋಚಿಸುತ್ತಿದ್ದಾರೆ? ಎಂದು ಅವರು ಪ್ರಶ್ನಿಸಿದರು.

ಕೊರೊನಾ ಸಮಯದಲ್ಲಿ ವೈದ್ಯರು ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಕೆಲಸ ಮಾಡುತ್ತಿದ್ದಾರೆ. ಅವರ ಸೇವೆಗೆ ಎಷ್ಟು ಗೌರವ ಕೊಟ್ಟರೂ ಸಾಲದು. ಪ್ರತಿ ಸಂದರ್ಭದಲ್ಲೂ ಅವರಿಗೆ ಧೈರ್ಯ ತುಂಬಬೇಕು ಅಂತಾ ಹೇಳುತ್ತಾ ಬಂದಿದ್ದೇನೆ ಎಂದರು.

ಜೊತೆಗೆ, ನಾನು ವಿಕ್ಟೋರಿಯಾ ಆಸ್ಪತ್ರೆಗೆ ಹೋದಾಗ, ಕೆಲವು ಬಿಜೆಪಿ ನಾಯಕರು ಲೇವಡಿ ಮಾಡಿದರು. ನಾನು ಮಂತ್ರಿಯಲ್ಲ, ಸರ್ಕಾರದಲ್ಲಿಲ್ಲ. ಒಂದು ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ನಮ್ಮ ವೈದ್ಯರು, ಆರೋಗ್ಯ ಸಿಬ್ಬಂದಿಗೆ ರಕ್ಷಣೆ ನೀಡಿ, ಅವರ ಧ್ವನಿಯಾಗಿ ಕೆಲಸ ಮಾಡಬೇಕು ಅಂತಾ ಹೋಗಿದ್ದೆ. ಆದರೆ ಆಡಳಿತ ಪಕ್ಷದವರು ಟೀಕೆ ಮಾಡುತ್ತಿದ್ದಾರೆ, ಮಾಡಲಿ ಎಂದರು.

ಇನ್ನು, ತನ್ನ ಪತಿಯನ್ನು ಕಳೆದುಕೊಂಡ ಹೆಣ್ಣುಮಗಳು ಹೇಳಿಕೆ ನೀಡಿದ್ದಾರೆ. ತಪ್ಪಿತಸ್ಥರನ್ನು ಬಂಧಿಸಲು ಸರ್ಕಾರಕ್ಕೆ ಇನ್ನೂ ಎಷ್ಟು ಸಮಯಬೇಕು? ಸಚಿವರು ಡ್ಯಾಮೇಜ್ ಕಂಟ್ರೋಲ್ ಮಾಡಲು ಬೆಳಗ್ಗೆಯಿಂದ ಸಂಜೆವರೆಗೂ ನಿಂತಿದ್ದಾರೆ. ನೀವು ಪ್ರಕರಣ ಮುಚ್ಚಿಹಾಕಲು ಯಾಕೆ ಪ್ರಯತ್ನಿಸುತ್ತಿದ್ದೀರಿ? ಆರೋಗ್ಯ ಇಲಾಖೆಯ ಸ್ಥಿತಿ ಬಗ್ಗೆ ಮಾಧ್ಯಮಗಳು ವಿಸ್ತಾರವಾಗಿ ವರದಿ ಮಾಡುತ್ತಿವೆ. ಆ ಮಾಧ್ಯಮಗಳು ನಮ್ಮ ಪಕ್ಷದವರಾ? ಅಲ್ಲ, ಜನರ ಧ್ವನಿ. ಅವರಿಗೆ ಸಿಕ್ಕ ವಾಸ್ತಾವಂಶವನ್ನು ಜನರಿಗೆ ತಿಳಿಸಿದ್ದಾರೆ ಎಂದು ಹೇಳಿದರು.

ಈ ಪ್ರಕರಣದಲ್ಲಿ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತೇನೆ. ಆ ವೈದ್ಯ ಆರು ತಿಂಗಳಿಂದ ಮನೆಯಿಂದ ಹೊರಗಿದ್ದು, ಕೆಲಸ ಮಾಡಿದ್ದರೂ ಅವರ ಮೇಲೆ ದೌರ್ಜನ್ಯ ನಡೆದಿದೆ. ಅವರಿಗೆ ಬೈದು, ಆತ್ಮಹತ್ಯೆ ಮಾಡಿಕೊಳ್ಳಲು ಕೆಲವರು ಕಾರಣರಾಗಿದ್ದರೂ, ನೀವು ಸುಮ್ಮನೆ ಇದ್ದೀರಿ ಎಂದರೆ ನಿಮ್ಮ ಸರ್ಕಾರ ಯಾವ ದಿಕ್ಕಿನಲ್ಲಿ ಕೆಲಸ ಮಾಡುತ್ತಿದೆ ಎಂದು ಗೊತ್ತಾಗುತ್ತದೆ ಎಂದು ಕಿಡಿಕಾರಿದರು.

ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ವೈದ್ಯರನ್ನು ಎಷ್ಟು ಕಠಿಣವಾಗಿ ನಡೆಸಿಕೊಳ್ಳುತ್ತಿದ್ದೀರಿ ಎಂಬುದಕ್ಕೆ ಇದೊಂದು ಸಣ್ಣ ಸಾಕ್ಷಿ. ಬೇರೆ ಪ್ರಕರಣಗಳಲ್ಲಿ ಸುಮೋಟೋ ಮೂಲಕ ತನಿಖೆ ನಡೆಸುವ ನೀವು, ಈ ವಿಚಾರದಲ್ಲಿ ಯಾಕೆ ಮೌನವಾಗಿದ್ದೀರಿ ಎಂದು ಪ್ರಶ್ನಿಸಿದರು.

ಸರ್ಕಾರ ಅಧಿವೇಶನ ಕರೆದಿದ್ದು, ಈ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೇನೆ ಎಂದಿದೆ. ಆದರೆ ಜನರನ್ನು ಉಳಿಸುವ ಕೆಲಸ ಮಾಡುತ್ತಿಲ್ಲ. ದೆಹಲಿ ಮಾದರಿ ಕ್ರಮ ಅಂತಿದ್ದರಲ್ಲಾ, ಇದೇನಾ? ಸರ್ಕಾರ ಈ ವಿಚಾರದಲ್ಲಿ ವಿಳಂಬ ಧೋರಣೆಗೆ ಶರಣಾಗಿದೆ. ಇವರಿಗೆ ಸರ್ಕಾರ ನಡೆಸಲು ಗೊತ್ತಿಲ್ಲ, ಅಧಿಕಾರಿಗಳನ್ನು ಬಳಸಿಕೊಳ್ಳಲೂ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.

ನಾನು ಪೊಲೀಸರಿಗೆ ಮನವಿಯನ್ನೂ ಮಾಡಿದ್ದೇನೆ. ಅಧಿಕಾರಿಗಳ ಪ್ರಾಮಾಣಿಕತೆ ಬಗ್ಗೆ ನನಗೆ ಅರಿವಿದೆ. ಅವರು ಕ್ಲೀನ್ ರೆಕಾರ್ಡ್ ಹೊಂದಿದ್ದಾರೆ. ಮಂತ್ರಿಗಳು ಇಂತವರಿಗೆ ನೊಟೀಸ್ ಕೊಡು ಅಂತಾ ಹೇಳುತ್ತಿದ್ದಾರೆ. ಹಾಗೆ ಹೇಳಲು ಅವರಿಗೆ ಸಂವಿಧಾನದಲ್ಲಿ ಯಾವ ಅಧಿಕಾರವಿದೆ? ಇಂತಹ ಹೇಳಿಕೆಯಿಂದ ಅವರು ಪ್ರಭಾವ ಬೀರುತ್ತಿದ್ದಾರೆ. ತನಿಖೆ ಮಾಡಲಿ, ತಪ್ಪು ಮಾಡಿದ್ದರೆ ಅವರಿಗೆ ಯಾವ ಶಿಕ್ಷೆ ಬೇಕಾದರೂ ನೀಡಲಿ. ನಮ್ಮ ಅಭ್ಯಂತರವಿಲ್ಲ ಎಂದು ಹೇಳಿದರು.

ಮೊದಲ ದಿನದಿಂದ ಇವತ್ತಿನವರೆಗೂ ನಾವು ಗಲಭೆಯನ್ನು ಖಂಡಿಸುತ್ತಿದ್ದೇವೆ. ನಾವು ಯಾರಿಗೂ ಬೆದರಿಕೆ ಹಾಕುತ್ತಿಲ್ಲ. ಆದರೆ ಸರ್ಕಾರ ಅವರಿಗೆ ಬೆದರಿಕೆ ಹಾಕುತ್ತಿದೆ. ಕೊರೊನಾ ಸಮಯದಲ್ಲಿ ಮಂತ್ರಿಗಳು, ಬಿಜೆಪಿ ಶಾಸಕರು, ಸಂಸದರು ಕೋಮು ಗಲಭೆಗೆ ಪ್ರೇರಣೆ ನೀಡುವ ಹೇಳಿಕೆ ನೀಡಿದ್ದರು. ಅದನ್ನು ತಡೆಯಲು ಮುಖ್ಯಮಂತ್ರಿಗಳು ಯಾವುದಾದರೂ ಕ್ರಮ ಕೈಗೊಂಡಿದ್ದಾರಾ? ಈ ಗಲಭೆ ಬಗ್ಗೆ ಹೊರಗಿನ ಜನ ಗಮನಿಸುತ್ತಿದ್ದಾರೆ.

ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಆಹ್ವಾನ ನೀಡುತ್ತಿದ್ದೀರಿ. ಇದಕ್ಕೆ ಈ ಬೆಳವಣಿಗೆಗಳು ಅಡ್ಡಿಯಾಗುತ್ತವೆ. ಶಿವಮೊಗ್ಗದಲ್ಲಿ ಕೂತು ಒಬ್ಬ ಮಂತ್ರಿ ಮಾತನಾಡಿದರೆ, ಮತ್ತೊಬ್ಬರು ಚಿಕ್ಕಮಗಳೂರಿನಲ್ಲಿ, ಇನ್ನೊಬ್ಬರು ಬೆಂಗಳೂರಿನಲ್ಲಿ. ಹೀಗೆ ಒಂದೊಂದು ಕಡೆಯಿಂದಲೂ ಹೇಳಿಕೆ ಬರುತ್ತಿವೆ. ಇವರಿಗೆ ಲಂಗು ಲಗಾಮು ಇಲ್ವಾ? ಎಂದು ಪ್ರಶ್ನಿಸಿದರು.

ಸರ್ಕಾರ, ಪೊಲೀಸ್ ಇಲಾಖೆ ಹಾಗೂ ಗುಪ್ತಚರ ದಳದ ವೈಫಲ್ಯ ಮುಚ್ಚಿಕೊಳ್ಳಲು ಗಲಭೆಗೆ ಕಾಂಗ್ರೆಸ್ ಆಂತರಿಕ ಬಿಕ್ಕಟ್ಟು ಕಾರಣ ಎಂದು ದಾರಿ ತಪ್ಪಿಸಬೇಡಿ. ದೂರು ನೀಡುವಾಗ ಯಾರು, ಎಲ್ಲಿದ್ದರೂ ಎಲ್ಲವೂ ನನಗೆ ಗೊತ್ತಿದೆ. ತನಿಖೆ ಪಾಡಿಗೆ ತನಿಖೆ ನಡೆಯಲಿ. ಅದನ್ನು ಸೂಕ್ತ ಸಮಯದಲ್ಲಿ, ಸೂಕ್ತ ವೇದಿಕೆಯಲ್ಲಿ ಮಾತನಾಡುತ್ತೇನೆ. ಮಂತ್ರಿಗಳು ಪೊಲೀಸ್ ಅಧಿಕಾರಿಗಳಿಗೆ ಸ್ವತಂತ್ರವಾಗಿ ತನಿಖೆ ನಡೆಸಲು ಬಿಡಬೇಕು. ನೀವ್ಯಾಕೆ ದಾರಿ ತಪ್ಪಿಸುತ್ತೀರಿ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಮುಖ್ಯಮಂತ್ರಿಗಳು ತಾವು ಆಡಿದ ಮಾತಿಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರಾ? ಯಾವ ಸರ್ಕಾರವೂ ಶಾಶ್ವತ ಅಲ್ಲ. ಇವತ್ತು ಇವರಿದ್ದರೆ, ನಾಳೆ ಮತ್ತೊಬ್ಬರು ಬರುತ್ತಾರೆ. ಆದರೆ ಅಧಿಕಾರಿಗಳು ಶಾಶ್ವತ. ಅಧಿಕಾರಿಗಳು ಹರಕೆಯ ಕುರಿಯಾಗಬಾರದು. ನೊಟೀಸ್ ಕೊಟ್ಟು ಅವರನ್ನ ಕರೆಸಿ ಬೆದರಿಸಿದ್ದಾರೆ ಎಂದು ಅವರು ಆರೋಪಿಸಿದರು.

ಫೋನ್ ಟ್ಯಾಪ್ ಮಾಡಲಾಗುತ್ತಿದೆ ಎಂದು ಶಿವಕುಮಾರ್
ನಿನ್ನೆ, ಮೊನ್ನೆವರೆಗೂ ನನ್ನ ಫೋನ್ ಸರಿಯಾಗಿತ್ತು. ಈಗ ಕರೆ ಸರಿಯಾಗಿ ಬರ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡುತ್ತೇನೆ. ನನ್ನ ಫೋನ್ ಟ್ಯಾಪ್ ಆಗುತ್ತಿದೆ ಎನಿಸುತ್ತಿದೆ. ಸಾಕ್ಷ್ಯ ಇಲ್ಲದೆ ಆರೋಪ ಮಾಡುವುದಿಲ್ಲ. ನಮ್ಮ ಸುದರ್ಶನ್ ಕಾಲ್ ಮಾಡಿದ್ದಾರೆ, ಆದರೆ ಕರೆ ಬಡುತ್ತಿಲ್ಲ ಎಂದರು.

ಉತ್ತರ ಕರ್ನಾಟಕ ಪ್ರವಾಸ ಮಾಡುತ್ತೇನೆ ಎಂದ ಕೆಪಿಸಿಸಿ ಅಧ್ಯಕ್ಷ
ಉತ್ತರ ಪ್ರವಾಹ ಕರ್ನಾಟಕ ನೆರೆ ವಿಷಯ ಪ್ರಸ್ತಾಪಿಸಿದ ಡಿ.ಕೆ.ಶಿವಕುಮಾರ್, ಪ್ರವಾಹ ಪೀಡಿತ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿ ಪರಿಶೀಲಿಸಬೇಕಿದೆ. ಹೀಗಾಗಿ ಕಳೆದ ವರ್ಷ ಏನಾಗಿತ್ತು? ಸರ್ಕಾರ ಯಾವ ಭರವಸೆ ನೀಡಿತ್ತು? ಕೊಟ್ಟ ಭರವಸೆಯಲ್ಲಿ ಎಷ್ಟು ಈಡೇರಿಸಿದೆ ಎಂಬುದನ್ನು ನೋಡಬೇಕು. ಸರ್ಕಾರ ಪರಿಸ್ಥಿತಿ ನಿಭಾಯಿಸಲು ವಿಫಲವಾಗಿದೆ. ನಾಲ್ಕು ತಿಂಗಳಿಂದ ವೃದ್ಧರಿಗೆ ನೀಡುವ ಪಿಂಚಣಿಯನ್ನೇ ಕೊಟ್ಟಿಲ್ಲ ಎಂದು ಆರೋಪಿಸಿದರು.

ನೇಕಾರರು ರಾಜ್ಯದ ವಿವಿಧ ಭಾಗಗಳಿಂದ ದೂರು ನೀಡುತ್ತಿದ್ದಾರೆ. ನಮ್ಮ ಮಂತ್ರಿಗಳು ನಮ್ಮಲ್ಲಿ ತೀವ್ರ ನೆರೆ ಪರಿಸ್ಥಿತಿ ಇಲ್ಲ ಅಂತಿದ್ದಾರೆ. ಹಾಗಾದ್ರೆ ಮಾಧ್ಯಮಗಳು ತೋರಿಸಿದ್ದೇನು? ಎಂದು ಅವರು ಪ್ರಶ್ನಿಸಿದರು.
ಮಂತ್ರಿಗಳಾದವರು ಕಷ್ಟದ ಸಮಯದಲ್ಲಿ ಜನರನ್ನು ಭೇಟಿ ಮಾಡಿ ಅವರಿಗೆ ಧೈರ್ಯ ತುಂಬಬೇಕು. ಅಧಿಕಾರಿಗಳಿಗೆ ನಿರ್ದಿಷ್ಟ ಸೂಚನೆ ನೀಡಬೇಕು. ಅದನ್ನು ಬಿಟ್ಟು ಹಬ್ಬ ಇದ್ದಾಗ ಹೋಗುವುದಲ್ಲ ಎಂದು ಅವರು ಆಡಳಿತ ಪಕ್ಷದವರನ್ನು ಚುಚ್ಚಿದರು.

ರಾಜ್ಯದ ಜನತೆಗೆ ಗೌರಿ-ಗಣೇಶ ಹಬ್ಬದ ಶುಭಾಶಯ ಕೋರಿದ ಡಿಕೆಶಿ
ರಾಜ್ಯದ ಜನತೆಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಗೌರಿ ಹಾಗೂ ಗಣೇಶ ಹಬ್ಬದ ಶುಭಾಶಯಗಳನ್ನು ತಿಳಿಸಿದರು. ಜೊತೆಗೆ, ಈ ವರ್ಷ ಬಹಳ ಕಷ್ಟದ ದಿನಗಳನ್ನು ನಾವು ಎದುರಿಸಿದ್ದೇವೆ. ತಾಯಿ ಗೌರಿ ಹಾಗೂ ವಿಘ್ನ ನಿವಾರಕ ವಿಘ್ನೇಶ್ವರ ನಾಡಿನ ಜನತೆಗೆ ನೆಮ್ಮದಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಸರ್ಕಾರ ಏನೇ ಮಾನದಂಡ ಹಾಕಿದ್ದರೂ ಹಬ್ಬದ ಆಚರಣೆ ವೇಳೆ ಆಡಂಬರ ಬೇಡ. ಆದಷ್ಟು ಅಂತರ ಕಾಯ್ದುಕೊಳ್ಳಿ ಎಂದು ನಮ್ಮ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಮನವಿ ಮಾಡಿಕೊಂಡರು.

Leave a Reply

Your email address will not be published. Required fields are marked *

You May Also Like

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮುರುಡಿ ಗ್ರಾಮಕ್ಕೆ 93.33% ರಷ್ಟು ಫಲಿತಾಂಶ

ಉತ್ತರಪ್ರಭ ಮುಂಡರಗಿ: ತಾಲ್ಲೂಕಿನ ಮುರುಡಿಯ ಸರಕಾರಿ ಪ್ರೌಢ ಶಾಲೆಯ 2021-22ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ…

ಹರ್ಷ ಕೊಲೆ ಖಂಡಿಸಿ ನಿಡಗುಂದಿಯಲ್ಲಿ ಪ್ರತಿಭಟನೆ: ಮನವಿ ಅರ್ಪಣೆ

ನಿಡಗುಂದಿ (ವಿಜಯಪುರ ಜಿಲ್ಲೆ): ಶಿವಮೊಗ್ಗದಲ್ಲಿ ನಡೆದ ಹರ್ಷ ಝಿಂಗಾಡೆ ಕೊಲೆ ಖಂಡಿಸಿ ಭಾವಸಾರ ಕ್ಷತ್ರೀಯ ಸಮಾಜದ…

ಸ್ವಚ್ಛ ಪರಿಸರದ ಜಾಗೃತಿ ನಮ್ಮ ಆದ್ಯತೆಯಾಗಲಿ

ಉತ್ತರಪ್ರಭ ಇಂಡಿ: ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರವನ್ನು ನೀಡುವುದು ನಮ್ಮೆಲ್ಲರ ಜವಾಬ್ದಾರಿ ಇರುವುದರಿಂದ ಹೆಚ್ಚು ಹೆಚ್ಚು…