ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಅಗಸ್ಟ 11 ರಿಂದ ಗದಗ ಜಿಲ್ಲೆಯಾದ್ಯಂತ ಆರಂಭವಾಗಿದೆ. ಸರ್ಕಾರದ ಆದೇಶಾನುಸಾರ ಈ ಬಾರಿಯ ಬೆಳೆ ಸಮೀಕ್ಷೆ ಕಾರ್ಯದಲ್ಲಿ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯ ವಿವರವನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.
ಗದಗ: ಜಿಲ್ಲೆಯ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರ ದಾಖಲಿಸಲು “ರೈತರ ಬೆಳೆ ಸಮೀಕ್ಷೆ” ಎಂಬ ಹೆಸರಿನ ಮೊಬೈಲ್ ಅನ್ನು ಗೂಗಲ್ ಪ್ಲೇ-ಸ್ಟೋರ್ ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ. ಮೊಬೈಲ್ ಆಪ್ ಬಳಕೆ ಮಾಡುವ ರೀತಿಯನ್ನು ರೈತರಿಗೆ ತಿಳಿಸಲು ಪ್ರತಿ ಗ್ರಾಮದಲ್ಲಿ ನುರಿತ ಖಾಸಗಿ ನಿವಾಸಿಗಳನ್ನು ನೇಮಿಸಲಾಗುತ್ತಿದೆ.
ರೈತರು ಬೆಳೆ ಸಮೀಕ್ಷೆ ಮೊಬೈಲ್ ಆಪ್ ಅನ್ನು ಬಳಸುವ ವಿಧಾನ
- ಗೂಗಲ್ ಪ್ಲೇ-ಸ್ಟೋರ್ ನಿಂದ “ರೈತರ ಬೆಳೆ ಸಮೀಕ್ಷೆ” ಮೊಬೈಲ್ ಆಪ್ ಅನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು.
- ರೈತರ ಹೆಸರು, ಮೊಬೈಲ್ ಸಂಖ್ಯೆ ಮತ್ತು ಓಟಿಪಿ ಸಂಖ್ಯೆಯನ್ನು ನಮೂದಿಸಿ ರೈತರು ತಮ್ಮ ವಿವರಗಳನ್ನು ನೋಂದಣಿ ಮಾಡಿಕೊಳ್ಳಬೇಕು.
- ಮೊಬೈಲ್ ಆಪ್‍ನಲ್ಲಿ ಮೊದಲು ಮಾಸ್ಟರ್ ವಿವರಗಳನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು.
- ನಂತರ ತಮ್ಮ ಜಮೀನಿನ ಸರ್ವೆ ನಂಬರ್ ಗಳನ್ನು ಆಪ್‍ಗೆ ಸೇರಿಸಿಕೊಳ್ಳಬೇಕು.
- ಮುಂದಿನ ಹಂತದಲ್ಲಿ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರವನ್ನು ದಾಖಲಿಸಬೇಕು.
- ಈ ಹಂತದಲ್ಲಿ ರೈತರು ತಮ್ಮ ಜಮೀನಿನಲ್ಲಿ ಪಾಳು ಬಿದ್ದಿರುವ ಪ್ರದೇಶ ಈಗಾಗಲೇ ಕಟಾವಾದ ಪ್ರದೇಶ, ಕೃಷಿಯೇತರ ಬಳಕೆಗೆ (ಕೊಟ್ಟಿಗೆ, ಕೃಷಿ ಹೊಂಡ, ಮನೆ ಇತರೆ) ಬಳಕೆಯಾದ ಪ್ರದೇಶದ ವಿವರವನ್ನು ಸಹ ದಾಖಲಿಸಬೇಕಾಗಿರುತ್ತದೆ.
- ರೈತರು ತಾವು ಬೆಳೆದ ಪ್ರತಿ ಬೆಳೆಯ ವಿಸ್ತೀರ್ಣದ ಜೊತೆಗೆ ಪ್ರತಿ ಬೆಳೆಯ 2 ಛಾಯಾಚಿತ್ರಗಳನ್ನು ತೆಗೆದು ಅಪ್ಲೋಡ್ ಮಾಡಬೇಕು.
ಹೀಗೆ ಅಪ್ಲೋಡ್ ಮಾಡಲಾದ ಮಾಹಿತಿಯನ್ನು ಪ್ರತಿ ಗ್ರಾಮಕ್ಕೆ ನೇಮಿಸಲಾದ ಸರ್ಕಾರಿ ಅಧಿಕಾರಿಗಳು (ಮೇಲ್ವಿಚಾರಕರು) ಪರಿಶೀಲಿಸಿ ಅನುಮೋದಿಸುತ್ತಾರೆ.
ಈ ಸಂದರ್ಭದಲ್ಲಿ ರೈತರು ದಾಖಲಿಸಿದ ಬೆಳೆ ವಿವರಕ್ಕೂ, ಛಾಯಾಚಿತ್ರಕ್ಕೂ ತಾಳೆಯಾಗದ ಸಂದರ್ಭದಲ್ಲಿ ಮೇಲ್ವಿಚಾರಕರು ಅಂತಹ ಮಾಹಿತಿಯನ್ನು ತಿರಸ್ಕರಿಸಿ ಮರು-ಸಮೀಕ್ಷೆಗೆ ಖಾಸಗೀ ನಿವಾಸಿಗಳಿಗೆ ಕಳುಹಿಸುತ್ತಾರೆ. ಒಂದು ವೇಳೆ, ರೈತರು ತಮ್ಮ ಸ್ನೇಹಿತರು ಅಥವಾ ಸಂಭಂದಿಕರಿಗೆ ಸಹಾಯ ಮಾಡುವುದಾದರೆ ಅವರ ಸರ್ವೆ ನಂಬರ್‍ಗಳನ್ನು ತಮ್ಮ ಮೊಬೈಲ್ ಆಪ್‍ನಲ್ಲಿ ಸೇರಿಸಿಕೊಂಡು ಅವರ ಜಮೀನಿನ ವಿವರ ದಾಖಲಿಸಲೂ ಸಹ ಮೋಬೈಲ್ ಆಪ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ.
ರೈತರು ಸ್ವತಃ ತಮ್ಮ ಬೆಳೆ ವಿವರಗಳನ್ನು ದಾಖಲಿಸಲು ಅಗಸ್ಟ 24 ರವರೆಗೆ ಅವಕಾಶ ನೀಡಲಾಗಿದೆ. ಈ ಸಮಯದವರೆಗೆ ಬೆಳೆ ವಿವರ ದಾಖಲಿಸಲಾಗದ ರೈತರ ಜಮೀನಿನ ಬೆಳೆ ವಿವರವನ್ನು ಖಾಸಗೀ ನಿವಾಸಿಗಳು ದಾಖಲಿಸುತ್ತಾರೆ.
ಬೆಳೆ ಸಮೀಕ್ಷೆ ಮಾಹಿತಿಯನ್ನು ಈ ಕೆಳಕಂಡ ಸರ್ಕಾರದ ಯೋಜನೆಗಳಿಗೆ ಬಳಸಲಾಗುವುದು.
ಎನ್.ಡಿ.ಆರ್.ಎಫ್ / ಎಸ್.ಡಿ.ಆರ್.ಎಫ್. ಅಡಿಯಲ್ಲಿ ಪ್ರವಾಹ ಮತ್ತು ಬರಗಾಲ ಸಂದರ್ಭದಲ್ಲಿ ನೀಡುವ ನಷ್ಟ ಪರಿಹಾರ ವಿತರಿಸಲು, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲು, ಬೆಳೆ ವಿಮಾ ಯೋಜನೆಯಡಿ ಬೆಳೆ ವಿವರ ಪರಿಶೀಲಿಸಲು.
ಸಾಂಖ್ಯಿಕ ಇಲಾಖೆ, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಬೆಳೆ ವಿಸ್ತೀರ್ಣ ವರದಿ ಕಾರ್ಯದಲ್ಲಿ, ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು.
ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನಕ್ಕೆ.
ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು, ಬ್ಯಾಂಕ್ ಮತ್ತು ವ್ಯವಸಾಯ ಸೇವಾ ಸಹಕಾರಿ ಸಂಘಗಳ ಮುಖಾಂತರ ಬೆಳೆ ಸಾಲ ನೀಡುವ ಸಂದರ್ಭದಲ್ಲಿ ಬೆಳೆ ಪರಿಶೀಲನೆ ಮಾಡಲು ಬಳಸಲಾಗುವುದು.
ಜಿಲ್ಲೆಯ ರೈತರು ಅವಕಾಶದ ಸದುಪಯೋಗ ಪಡೆದುಕೊಂಡು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರವನ್ನು ತಾವೇ ಸರ್ಕಾರಕ್ಕೆ ನಿಗದಿತ ಸಮಯದೊಳಗೆ ವರದಿ ಮಾಡಲು ಪ್ರಕಟಣೆ ತಿಳಿಸಿದೆ.
1 comment
Super Paper Sir